ಬೆಂಗಳೂರು:‘ರಾಜಕೀಯ ಪಕ್ಷದ ಚಿಹ್ನೆಯ ಪ್ರಚಾರಕ್ಕೆ ಸಾರ್ವಜನಿಕ ಹಣ ಮತ್ತು ಜಾಗ ಬಳಕೆ ಮಾಡುವುದು ಸರಿಯಲ್ಲ. ಈ ಹಿಂದಿನ ಪ್ರಕರಣಗಳಲ್ಲಿ ಹೈಕೋರ್ಟ್ ಹಾಗೂ ಚುನಾವಣಾ ಆಯೋಗ ಇದನ್ನು ವಿರೋಧಿಸಿವೆ. ಹೀಗಾಗಿ ಸರಕಾರ ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸವನ್ನು ಬದಲಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಸೋಮವಾರ ಬೆಂಗಳೂರಿನ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕರಾದ ಎನ್.ಎ. ಹ್ಯಾರಿಸ್ ಹಾಗೂ ಎಐಸಿಸಿ ವಕ್ತಾರರಾದ ಬ್ರಿಜೇಶ್ ಕಾಳಪ್ಪ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಇದನ್ನೂ ಓದಿ : ಫೋನ್ ಕದ್ದಾಲಿಕೆ ಪ್ರಕರಣ : ಚುರುಕುಗೊಂಡ ತನಿಖೆ
‘ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಇದರ ವಿನ್ಯಾಸ ಕಮಲದ ಆಕಾರದಲ್ಲಿದೆ. ಕಮಲ ಯಾವ ಪಕ್ಷದ ಚಿಹ್ನೆ ಎಂದು ಎಲ್ಲರಿಗೂ ಗೊತ್ತಿದೆ. ಪಕ್ಷದ ಚಿಹ್ನೆಗೆ ಪ್ರಚಾರ ನೀಡಲು ಸರಕಾರದ ಹಣ ಬಳಕೆ ಮಾಡುವುದು ಸರಿಯಲ್ಲ. ಈ ವಿಚಾರವಾಗಿ ನಮ್ಮ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಈ ವಿನ್ಯಾಸದ ನಿರ್ಮಾಣ ಕೂಡಲೇ ನಿಲ್ಲಿಸಬೇಕು ಹಾಗೂ ಇದನ್ನು ಬದಲಿಸಬೇಕು. ಸರಕಾರದ ಹಣದಲ್ಲಿ ನಿಮ್ಮ ಪಕ್ಷದ ಪ್ರಚಾರ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ’ ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.