‘ಚಂದ್ರಯಾನ-3’ ಸಕ್ಸಸ್, ಇತಿಹಾಸ ಬರೆದ ಭಾರತ!

ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಕಾಲಿಟ್ಟ ವಿಕ್ರಮ್‌ ಲ್ಯಾಂಡರ್‌

ಚಂದ್ರನ ಮೇಲೆ ಚಂದ್ರಯಾನ-3 ಗಗನ ನೌಕೆಯಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್‌ ಯಶಸ್ವಿಯಾಗಿ ಇಳಿದಿದೆ. ಇಸ್ರೋ ವಿಜ್ಞಾನಿಗಳು ಹಗಲಿರುಳು ಪಟ್ಟ ಶ್ರಮಕ್ಕೆ ತಕ್ಕ ಫಲ ಇಂದು ಸಿಕ್ಕಿದೆ. ಇದರಿಂದಾಗಿ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಇಸ್ರೋ ವಿಜ್ಞಾನಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ಮೂಲಕ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ 4 ಗಣ್ಯ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆ ಆಗಿದೆ. ಇಂದು ಸಂಜೆ ಸರಿಯಾಗಿ 6 ಗಂಟೆ 4 ನಿಮಿಷಕ್ಕೆ ಇಸ್ರೋ ಸಂಸ್ಥೆಯ ‘ಚಂದ್ರಯಾನ-3’ ಲ್ಯಾಂಡರ್ ವಿಕ್ರಮ್, ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿದೆ.

ಲ್ಯಾಂಡಿಂಗ್ ಮಾಡುವ ಪ್ರಕ್ರಿಯೆ ಭಾರಿ ಸವಾಲಿನಿಂದ ಕೂಡಿತ್ತು. ಆದ್ರೆ ಇಸ್ರೋ ಆಧುನಿಕ ತಂತ್ರಜ್ಞಾನ ಬಳಸಿ ‘ಚಂದ್ರಯಾನ-3’ ಯೋಜನೆಯಲ್ಲಿ ಯಶಸ್ವಿಯಾಗಿದೆ. ಭಾರತದ ಈ ಗೆಲುವು ಭಾರತೀಯರಿಗೆ ಮಾತ್ರವಲ್ಲ, ಇಡೀ ಮನಷ್ಯರ ಕುಲಕ್ಕೆ ಸೇರಿದ ಗೆಲುವು. ಭವಿಷ್ಯ ಮತ್ತಷ್ಟು ಉಜ್ವಲವಾಗಲು ಮನಷ್ಯರ ಬದುಕು ಮತ್ತಷ್ಟು ಸುಲಭವಾಗಲು ಚಂದ್ರಯಾನ-3 ಗೆಲುವು ಹೊಸ ದಾರಿ ತೋರಿಸಿದೆ. ಚಂದ್ರನಲ್ಲಿ ನೀರು ಮತ್ತು ಖನಿಜಗಳು ಸಿಕ್ಕರೆ ಭಾರತ ಮತ್ತಷ್ಟು ಶ್ರೀಮಂತ ರಾಷ್ಟ್ರವಾಗಲಿದೆ. ಹೀಗಾಗಿ ಚಂದ್ರನ ದಕ್ಷಿಣ ಧ್ರುವದ ಅಧ್ಯಯನವು ಭಾರತಕ್ಕೆ ದೊಡ್ಡ ಲಾಭ ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ.

ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಬಹುದೂರದಲ್ಲಿರುವ ಚಂದ್ರನ ತಲುಪಲು ನಾವು ಯಶಸ್ವಿಯಾಗಿದ್ದೇವೆ. ಇದರ ಯಶಸ್ಸು ಪ್ರತಿಯೊಬ್ಬ ಭಾರತೀಯನಿಗೂ ಸಲ್ಲುತ್ತೆ. ಚಂದ್ರಯಾನ-3 ಯಶಸ್ಸಿಗೆ ಶ್ರಮಿಸಿದ ಪ್ರತಿ ವಿಜ್ಞಾನಿಗೂ ಧನ್ಯವಾದ. ಭಾರತದ ಯಶಸ್ಸಿನಿಂದ ಉಳಿದ ದೇಶಗಳಿಗೂ ಅನುಕೂಲವಾಗುತ್ತೆ. ಚಂದ್ರನ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗುತ್ತೆ ಎಂದು ಪ್ರಧಾನಿ ಮೋದಿ ಹೇಳಿದರು.

ಉಡಾವಣೆಯಿಂದ ಲ್ಯಾಂಡಿಂಗ್‌ವರೆಗೆ ಚಂದ್ರಯಾನ-3 ಕಾರ್ಯಾಚರಣೆ ಹೇಗಿತ್ತು?

ಜುಲೈ 14: ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಮಧ್ಯಾಹ್ನ 2:35 ರ ಹೊತ್ತಿಗೆ ಉಡಾವಣೆ. ಎಲ್‌ವಿಎಂ3 ಎಂ4 ಉಡ್ಡಯನ ವಾಹನವು ಚಂದ್ರಯಾನ-3 ಯೋಜನೆಯ ಉಪಕರಣಗಳನ್ನು ಹೊತ್ತು ನಿರ್ದಿಷ್ಟ ಕಕ್ಷೆಗೆ ಸೇರಿಸಿತು.

ಜುಲೈ 15: ಭೂಮಿ ಸುತ್ತಲಿನ ಮೊದಲ ಹಂತದ ಕಕ್ಷೆಗೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ. 41,762 ಕಿಮೀx226 ಕಿಮೀ ಕಕ್ಷೆಗೆ.

ಜುಲೈ 17: ಭೂಮಿ ಸುತ್ತಲಿನ ಎರಡನೇ ಹಂತದ ಕಕ್ಷೆಗೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ. 41,603 ಕಿಮೀx226 ಕಿಮೀ ಕಕ್ಷೆಗೆ.

ಜುಲೈ 22: ಭೂಮಿ ಸುತ್ತಲಿನ 4ನೇ ಹಂತದ ಕ್ಷಕ್ಷೆಗೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ. 71,351 ಕಿಮೀx223 ಕಿಮೀ ಕಕ್ಷೆಗೆ.

ಆಗಸ್ಟ್‌ 1: ಚಂದ್ರಯಾನ-3 ಚಂದ್ರನ ಸುತ್ತಲಿನ ಕಕ್ಷೆಗೆ ಯಶಸ್ವಿ ಸೇರ್ಪಡೆ.

ಆಗಸ್ಟ್‌ 6: ಚಂದ್ರನ ಸುತ್ತಲಿನ ಕಕ್ಷೆಯನ್ನು ಕುಗ್ಗಿಸುವಲ್ಲಿ ಯಶಸ್ವಿ. 170 ಕಿಮೀ x 4,313 ಕಿಮೀ.

ಆಗಸ್ಟ್‌ 9: ಚಂದ್ರನ ಸುತ್ತಲಿನ ಕಕ್ಷೆಯನ್ನು ಮತ್ತೊಂದು ಹಂತಕ್ಕೆ ಇಳಿಸುವಲ್ಲಿ ಯಶಸ್ವಿ. 174 ಕಿಮೀ x 1,437 ಕಿಮೀ.

ಆಗಸ್ಟ್‌ 14: ಚಂದ್ರನ ಸಮೀಪ ತಲುಪಲು ಕಕ್ಷೆಯ ಮತ್ತೊಂದು ಸುತ್ತು ಇಳಿದ ನೌಕೆ. 150 ಕಿಮೀ x 177 ಕಿಮೀ.

ಆಗಸ್ಟ್‌ 16: ಚಂದ್ರನ ಸುತ್ತ ಪರಿಭ್ರಮಣೆಯ ಕೊನೆಯ ಹಂತವನ್ನು ಯಶಸ್ವಿಯಾಗಿ ಪೂರೈಸಿದ ಇಸ್ರೋ. 163 ಕಿಮೀ x 153 ಕಿಮೀ.

ಆಗಸ್ಟ್‌ 17: ಚಂದ್ರಯಾನ-3 ನೌಕೆಯಿಂದ ಪ್ರತ್ಯೇಕಗೊಂಡ ಪ್ರಜ್ಞಾನ್‌ ರೋವರ್‌ ಹೊತ್ತ ವಿಕ್ರಮ್‌ ಲ್ಯಾಂಡರ್‌.

ಆಗಸ್ಟ್‌ 18: ಚಂದ್ರಯಾನ-3 ಯಶಸ್ವಿಯಾಗಿ ಡಿಬೂಸ್ಟಿಂಗ್‌ ಕಾರ್ಯಾಚರಣೆ ನಡೆಸಿ ಕಕ್ಷೆಯ ಅಂತರವನ್ನು 113 ಕಿಮೀ x 157 ಕಿಮೀಗೆ ಇಳಿಸಿದೆ.

ಆಗಸ್ಟ್‌ 20: ಕೊನೆಯ ಹಂತದ ಕಕ್ಷೆಯನ್ನು ಹೊಂದಿಸುವ ಪ್ರಕ್ರಿಯೆ ಪೂರ್ಣ.

ಆಗಸ್ಟ್‌ 23 : ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಕಾಲಿಟ್ಟ ವಿಕ್ರಮ್‌ ಲ್ಯಾಂಡರ್‌

 

ಚಂದ್ರಯಾನ -3 ನೇರ ಪ್ರಸಾರ – ಇಸ್ರೋ ಐತಿಹಾಸಿಕ ಕನಸು ನನಸಿಗೆ ಕ್ಷಣಗಣನೆ..!

 

Donate Janashakthi Media

Leave a Reply

Your email address will not be published. Required fields are marked *