ಅಮರಾವತಿ: ಆಂಧ್ರಪ್ರದೇಶ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಹುತೇಕ ಚಿತ್ರಣ ಲಭಿಸಸಿದೆ. ಚುನಾವಣೋತ್ತರ ಸಮೀಕ್ಷೆಯಂತೆಯೇ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಭರ್ಜರಿ ಜಯ ದಾಖಲಿಸುವತ್ತ ದಾಪುಗಾಲು ಇಟ್ಟಿದೆ.
ಟಿಡಿಪಿ ಈಗಾಗಲೇ ಮ್ಯಾಜಿಕ್ ನಂಬರ್ 88 ಅನ್ನು ದಾಟಿದ್ದು, ಜೂನ್ 9ರಂದು ಅಮರಾವತಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.
ಈ ಮೂಲಕ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನಾಲ್ಕನೇ ಬಾರಿಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ. ಆಂಧ್ರ ಪ್ರದೇಶದಲ್ಲಿ ಟಿಡಿಪಿ ಈ ಬಾರಿ ಬಿಜೆಪಿ ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (JSP) ಜತೆಗೂಡಿ ಎನ್‌ಡಿಎ (NDA) ಬಣದ ಅಡಿಯಲ್ಲಿ ಸ್ಪರ್ಧಿಸಿತ್ತು. ಸದ್ಯ ಟಿಡಿಪಿ ಒಂದೇ 131 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಜಸಸೇನಾ ಪಕ್ಷ 20 ಮತ್ತು ಬಿಜೆಪಿ 7ರಲ್ಲಿ ಮುಂದಿದೆ. ಒಟ್ಟಾರೆಯಾಗಿ ಎನ್‌ಡಿಎ 158 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇತ್ತ ಮಕಾಡೆ ಮಲಗಿರುವ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (YSRCP) ಕೇವಲ 17 ಕ್ಷೇತ್ರಗಳಲ್ಲಿ ಮುಂದಿದೆ. ಈ ಬಾರಿ ಆಂಧ್ರ ಪ್ರದೇಶದಲ್ಲಿ ಜನಸೇನಾ ಪಾರ್ಟಿ, ಬಿಜೆಪಿ ಮತ್ತು ಟಿಡಿಪಿ ಒಪ್ಪಂದ ಮಾಡಿಕೊಂಡಿತ್ತು. ಅದರ ಪ್ರಕಾರ 175 ಸೀಟುಗಳ ವಿಧಾನ ಸಭೆಯಲ್ಲಿ ಟಿಡಿಪಿ 144, ಜನಸೇನಾ ಪಾರ್ಟಿ 21 ಮತ್ತು ಬಿಜೆಪಿ 10 ಕಡೆ ಸ್ಪರ್ಧಿಸಿತ್ತು.
ಇದನ್ನು ಓದಿ : ಅಯೋಧ್ಯೆಯಲ್ಲಿ ಹಿನ್ನಡೆ ಕಂಡ ಎನ್‌ಡಿಎ
2019ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ದಾಖಲೆ ಪ್ರಮಾಣದ ಮತದಾನ ನಡೆದಿತ್ತು. 2019ರಲ್ಲಿ ಶೇ. 79.68ರಷ್ಟು ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದರೆ, ಈ ಬಾರಿ ಶೇ. 81.86 ಮತದಾನ ದಾಖಲಾಗಿತ್ತು. ವಿದ್ಯುನ್ಮಾನ ಮತದಾನ ಯಂತ್ರಗಳ (ಇವಿಎಂ) ಮೂಲಕ ಶೇ. 80.66 ಮತ್ತು ಅಂಚೆ ಮತಪತ್ರಗಳ ಮೂಲಕ ಶೇ. 1.2 ಮತ ಚಲಾವಣೆಯಾಗಿತ್ತು. ಲೋಕಸಭಾ ಚುನಾವಣೆಯ ಮತದಾನದ ಜತೆಗೆ ವಿಧಾನಸಭಾ ಚುನಾವಣೆಯ ಮತದಾನ ಮೇ 13ರಂದು ನಡೆದಿತ್ತು.
ರಾಜಮಂಡ್ರಿ ರೈರಲ್ ಕ್ಷೇತ್ರದಲ್ಲಿ ಟಿಡಿಪಿಯ ಜಿ.ಬುಚ್ಚಯ್ಯ ಚೌಧರಿ ಸುಮಾರು 64 ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಅವರು ಒಟ್ಟು 1,29,060 ಮತ ಪಡೆದುಕೊಂಡಿದ್ದಾರೆ. ಜತೆಗೆ ಪವನ್ ಕಲ್ಯಾಣ್ ಕೂಡ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
2019ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 151 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆಗ ಆಡಳಿತದಲ್ಲಿದ್ದ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿತ್ತು. ಪವನ್ ಕಲ್ಯಾಣ್ ನೇತೃತ್ವದ ಜೆಎಸ್‌ಪಿ ಒಂದೇ ಒಂದು ಸ್ಥಾನವನ್ನು ಗೆದ್ದಿದ್ದರೆ, ಕಾಂಗ್ರೆಸ್ ಹಾಗೂ ಬಿಜೆಪಿಗೆ ಖಾತೆ ತೆರೆದಿರಲಿಲ್ಲ. ಈ ಬಾರಿ ಚಿತ್ರಣ ಸಂಪೂರ್ಣ ಬದಲಾಗಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ತೀವ್ರ ಹಿನ್ನಡೆಯಾಗಿದೆ.
ಇದನ್ನು ನೋಡಿ : ಮಹಾರಾಷ್ಟ್ರದಲ್ಲಿ ಬಿಜೆಪಿಯ ತಂತ್ರ ಬ್ಯೂಮರಾಂಗ್ ಆಗುತ್ತಾ? ಹೌದು ಎನ್ನುತ್ತಿವೆ ಲೆಕ್ಕಾಚಾರಗಳು!?