ಬೆಂಗಳೂರು : ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕರಾಗಿ ನಿವೃತ್ತ ಪ್ರಾಧ್ಯಾಪಕ, ಲೇಖಕ, ಚಿಂತಕ ಡಾ.ಚಂದ್ರ ಪೂಜಾರಿ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ.
ಈ ಹಿಂದೆ ಪ್ರೊ. ಎಸ್.ಎಂ. ಶಿವಪ್ರಸಾದ್ ಅವರು ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿರ್ದೇಶಕರ ಹುದ್ದೆಗೆ ಗುತ್ತಿಗೆ ಆಧಾರದ ನೇಮಕಾತಿಗೆ ಸಂಬಂಧಿಸಿದ ಷರತ್ತು ಮತ್ತು ನಿಬಂಧನೆಗಳನ್ನು ತದನಂತರದಲ್ಲಿ ನಿಯಮಾನುಸಾರ ಹೊರಡಿಸಲಾಗುವುದು. ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗುತ್ತಿಗೆ ಆಧಾರದ ಮೇಲೆ ಡಾ.ಎಂ. ಚಂದ್ರ ಪೂಜಾರಿ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಧಾರವಾಡದಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಉನ್ನತ ಶಿಕ್ಷಣ ಅಕಾಡೆಮಿ ರಾಜ್ಯದ ಉನ್ನತ ಶಿಕ್ಷಣದ ನೀತಿ ನಿರೂಪಣೆಯನ್ನು ಸಿದ್ಧಗೊಳಿಸುವಲ್ಲಿ ಸರಕಾರಕ್ಕೆ
ಸಲಹೆ, ಮಾರ್ಗಸೂಚಿಗಳನ್ನು ನೀಡುವ ಅತ್ಯುನ್ನತ ಸಂಸ್ಥೆಯಾಗಿದೆ.
ಡಾ.ಚಂದ್ರ ಪೂಜಾರಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ, ಹಾವೇರಿ ಜಾನಪದ ವಿಶ್ವವಿದ್ಯಾಲಯದ ಅನ್ವಯಿಕ ಜಾನಪದ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ.ಸಮಾಜ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಡಾ.ಚಂದ್ರ ಪೂಜಾರಿ ಅವರು ಪ್ರಥಮ ಬಾರಿಗೆ ರಾಜ್ಯದಲ್ಲಿ ದಲಿತ್ ಡೆವೆಲಪ್ಮೆಂಟ್ ಇಂಡೆಕ್ಸ್ ಸಿದ್ಧಗೊಳಿಸಿದ ತಜ್ಞರಾಗಿದ್ದಾರೆ.
ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ಕೋರ್ ಕಮಿಟಿ ಸದಸ್ಯರಾಗಿ, ಸ್ಟೇಟ್ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ ಕೋರ್ ಕಮಿಟಿ ಸದಸ್ಯರಾಗಿ, ರಾಜ್ಯ ಆಡಳಿತ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾಗಿ, ಮೈಸೂರಿನ ಅಬ್ದುಲ್ ನಝೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಮೂಲತಃ ಪುತ್ತೂರು ತಾಲೂಕಿನವರಾದ ಚಂದ್ರ ಪೂಜಾರಿ ಅವರು, ಸೈಂಟ್ ಫಿಲೋಮಿನಾ ಹೈಸ್ಕೂಲ್ ಹಾಗೂ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಕಾಂ ಪದವಿ ಪಡೆದಿದ್ದಾರೆ. ಇದೇ ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದರು. 22 ಕೃತಿಗಳನ್ನು ಬರೆದಿರುವ ಡಾ.ಚಂದ್ರ ಪೂಜಾರಿಯವರು ರಾಜ್ಯದ ಪ್ರಮುಖ ಪತ್ರಿಕೆಗಳಿಗೆ, ಡಿಜಿಟಲ್ ಮಾಧ್ಯಮಗಳಿಗೆ ಅಂಕಣಕಾರರಾಗಿ ತೊಡಗಿಸಿಕೊಂಡಿದ್ದಾರೆ.