ಚಂಡೀಗಢದ ಮೇಯರ್ ಚುನಾವಣೆ | ಬಿಜೆಪಿ ಗೆಲ್ಲಲು ಸಹಾಯ ಮಾಡಿದ ಚುನಾವಣಾ ಅಧಿಕಾರಿ ತಪ್ಪಿತಸ್ಥ ಎಂದು ಸುಪ್ರೀಂಕೋರ್ಟ್

ನವದೆಹಲಿ: ಚಂಡೀಗಢದ ಮೇಯರ್ ಚುನಾವಣೆಯ ಮತಪತ್ರಗಳನ್ನು ಸುಪ್ರೀಂ ಕೋರ್ಟ್ ಪೀಠವು ಮಂಗಳವಾರ ಪರಿಶೀಲಿಸಿದ್ದು, ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ವಿಜೇತ ಎಂದು ಘೋಷಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಬಿಜೆಪಿಯ ಅಲ್ಪಸಂಖ್ಯಾತ ಸೆಲ್‌ನ ಸದಸ್ಯರಾಗಿರುವ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಲು ಉದ್ದೇಶಪೂರ್ವಕವಾಗಿ ಎಂಟು ಮತಪತ್ರಗಳನ್ನು ವಿರೂಪಗೊಳಿಸಿದ್ದಾರೆ ಎಂದು ಹೇಳಿದೆ.

ಅನರ್ಹಗೊಂಡ ಎಂಟು ಮತಗಳನ್ನು ಕಾನೂನುಬದ್ಧವೆಂದು ಪರಿಗಣಿಸಿ ಫಲಿತಾಂಶವನ್ನು ಘೋಷಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿದೆ. ಜನವರಿ 30 ರಂದು ನಡೆದ ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಮನೋಜ್ ಸೋಂಕರ್ 16 ಮತಗಳೊಂದಿಗೆ ವಿಜಯಶಾಲಿ ಎಂದು ಘೋಷಿಸಲಾಗಿತ್ತು. ಆದರೆ, ಕಾಂಗ್ರೆಸ್ ಮತ್ತು ಎಎಪಿ ಮೈತ್ರಿಗೆ ಬಹುಮತ ಇದ್ದರೂ ಬಿಜೆಪಿ ಮೇಯರ್ ಜಯಗಳಿಸಿದ್ದು ದೇಶದಾದ್ಯಂತ ತೀವ್ರ ಚರ್ಚೆಯ ವಿಷಯವಾಗಿತ್ತು.

ಇದನ್ನೂ ಓದಿ: ಶಾಸಕರು ಪಕ್ಷ ತೊರೆಯಲು ಮುಂದಾಗಿದ್ದಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿದ ದೇವೇಗೌಡ – ಸಿದ್ದರಾಮಯ್ಯ ಆರೋಪ

ಈ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಯಾಗಿದ್ದ ಕುಲದೀಪ್ ಕುಮಾರ್ 12 ಮತಗಳನ್ನು ಪಡೆದಿದ್ದರು. ಬಿಜೆಪಿ ಅಲ್ಪಸಂಖ್ಯಾತ ಸೆಲ್‌ನ ಸದಸ್ಯ, ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರು ಮತಪತ್ರಗಳ ಮೇಲೆ ಏನೋ ಗುರುತು ಹಾಕುತ್ತಿರುವುದು ವಿಡಿಯೊದಲ್ಲಿ ದಾಖಲಾಗಿತ್ತು. ಇದು ಮತಪತ್ರಗಳನ್ನು ತಿದ್ದುತ್ತಿರುವುದು ಎಂದು ಎಎಪಿ ಆರೋಪಿಸಿ ಸುಪ್ರೀಂಕೋರ್ಟ್ ಕದ ತಟ್ಟಿತ್ತು.

ಎಂಟು ಮತಪತ್ರಗಳ ಮೇಲೆ ಅನಿಲ್ ಮಸಿಹ್ ಅವರು ಒಂದು ಗೀಟುಗಳನ್ನು ಗೀಚಿದ್ದಾರೆ ಎಂದು ವೀಡಿಯೋವನ್ನು ಆಧರಿಸಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ಹೇಳಿದ್ದಾರೆ. ಚುನಾವಣಾಧಿಕಾರಿಯ ಮೇಲೆ ತೀವ್ರವಾಗಿ ಹರಿಹಾಯ್ದ ಚಂದ್ರಚೂಡ್, “ಮತಪತ್ರಗಳನ್ನು ವಿರೂಪಗೊಂಡಿದೆ ಎಂದು ನೀವು ಗೀಟುಗಳನ್ನು ಹಾಕಿದ್ದಾಗಿ ಹೇಳಿದ್ದೀರಿ. ಆದರೆ ಮತಪತ್ರ ಎಲ್ಲಿ ವಿರೂಪಗೊಂಡಿದೆ?” ಎಂದು ಕೇಳಿದ್ದಾರೆ.

ಅನಿಲ್ ಮಸಿಹ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಮತಪತ್ರಗಳು ಈಗಾಗಲೇ ವಿರೂಪಗೊಂಡಿದ್ದರಿಂದ ಚುನಾವಣಾಧಿಕಾರಿ ರೇಖೆಗಳನ್ನು ಎಳೆದಿದ್ದಾರೆ. ಅವುಗಳನ್ನು ಗುರುತಿಸಲು ಅವರು ಬಯಸಿದ್ದರು ಎಂದು ವಾದಿಸಿದ್ದಾರೆ.

ಇದನ್ನೂ ಓದಿ: ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ | ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ ಬಿಜೆಪಿ

ಆದರೆ, ಎಂಟು ಮತಪತ್ರಗಳಲ್ಲಿ ಯಾವುದೂ ವಿರೂಪಗೊಂಡಿಲ್ಲ ಮತ್ತು ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ಅವರನ್ನು ವಿಜಯಿ ಎಂದು ಘೋಷಿಸಲು ಚುನಾವಣಾಧಿಕಾರಿ ಉದ್ದೇಶಪೂರ್ವಕವಾಗಿ ಮತಪತ್ರಗಳನ್ನು ವಿರೂಪಗೊಳಿಸಲು ಪ್ರಯತ್ನಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

“ಚುನಾವಣಾಧಿಕಾರಿಯ ದುರ್ವರ್ತನೆಯಿಂದ ಚುನಾವಣಾ ಪ್ರಕ್ರಿಯೆಗೆ ಚ್ಯುತಿ ಉಂಟಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ. ಎಂಟು ಮತಗಳಲ್ಲಿ ಪ್ರತಿಯೊಂದರಲ್ಲೂ ಕುಲದೀಪ್ ಕುಮಾರ್ ಪರವಾಗಿ ಮತ ಚಲಾವಣೆಯಾಗಿದೆ ಎಂಬುದು ಸ್ಪಷ್ಟವಾಗಿದೆ. ಮತಪತ್ರವನ್ನು ಅಮಾನ್ಯವೆಂದು ಪರಿಗಣಿಸುವ ಉದ್ದೇಶಕ್ಕಾಗಿ ಚುನಾವನಾಧಿಕಾರಿ ತಾವೆ ಅದನ್ನು ವಿರೂಪಗೊಳಿಸಿದ್ದಾರೆ. ಅವರು ಶಾಸನಬದ್ಧ ನಿಯಮಗಳ ಮಿತಿಯನ್ನು ಮೀರಿ ವರ್ತಿಸಿದ್ದಾರೆ” ಎಂದು ತೀರ್ಪು ಹೇಳಿದೆ.

ಫೆಬ್ರವರಿ 5 ರಂದು ಸುಪ್ರೀಂ ಕೋರ್ಟ್ ಮಸಿಹ್ ಅವರ ಕ್ರಮಗಳನ್ನು “ಪ್ರಜಾಪ್ರಭುತ್ವದ ಅಪಹಾಸ್ಯ” ಎಂದು ಬಣ್ಣಿಸಿತ್ತು. ಫೆಬ್ರವರಿ 19 ರಂದು ಮುಖ್ಯ ನ್ಯಾಯಮೂರ್ತಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ರಿಟರ್ನಿಂಗ್ ಅಧಿಕಾರಿಯೊಬ್ಬರನ್ನು ಹೀಗೆ ವರ್ತಿಸಿದ್ದಾರೆ ಮತ್ತು ಸುಳ್ಳು ಹೇಳಿಕೆ ನೀಡಿದರೆ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದರು.

ವಿಡಿಯೊ ನೋಡಿ: ಸೆಕ್ಯೂಲರಿಸಂ ಹಾಗೂ ಸೊಶಿಯಲಿಸಂ ಬೆಸದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ – ಡಾ. ಪ್ರಕಾಶ್

Donate Janashakthi Media

Leave a Reply

Your email address will not be published. Required fields are marked *