ಮುಖ್ಯಮಂತ್ರಿಗಳದ್ದು ಚಾಣಾಕ್ಷ ನಡೆ, ಅಷ್ಟೇ ಅಪಾಯಕಾರಿಯೂ ಹೌದು: ನಿರಂಜನಾರಾಧ್ಯ

ಬೆಂಗಳೂರು: ರಾಜ್ಯ ಸರ್ಕಾರ ಪಠ್ಯಪುಸ್ತಕ ಮರು ಪರೀಕ್ಷಣಾ ಸಮಿತಿ ವಿಸರ್ಜಿಸಿರುವ ಬಗ್ಗೆ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ಪ್ರತಿಕ್ರಿಯೆ ನೀಡಿದ್ದು, ತಮಗೆ ಬೇಕಾದುದೆಲ್ಲವನ್ನು ವ್ಯವಸ್ಥಿತವಾಗಿ ಮಾಡಿಕೊಂಡಿರುವ ಸರಕಾರ, ಅದನ್ನು ಹಾಗೆಯೆ ಉಳಿಸಿಕೊಂಡು ಸಮಿತಿಯನ್ನು ಸಮಿತಿಯನ್ನು ವಿಸರ್ಜಿಸಿರುವುದು, ಕೇವಲ ಕಣ್ಣೊರೆಸುವ ತಂತ್ರ ಎಂದಿದ್ದಾರೆ.

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಮರು ಪರಿಷ್ಕರಣಾ ಸಮಿತಿ ವಿಸರ್ಜಿಸಿರುವ ಬಗ್ಗೆ ರಾಜ್ಯ ಸರ್ಕಾರ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿರುವ ಟಿಪ್ಪಣಿಯಲ್ಲಿ ಎಲ್ಲಿಯೂ ಆಗಿರುವ ತಪ್ಪನ್ನು ಒಪ್ಪಿಕೊಳ್ಳುವುದಾಗಲಿ ಅಥವಾ ಸಂವಿಧಾನಕ್ಕೆ ವಿರುದ್ಧವಾಗಿ ವೈದೀಕರಣ ನೆಲೆಯಲ್ಲಿ ಸೇರಿಸಿ ತಿರುಚಿರುವ ಪಾಠಗಳನ್ನು ಕೈಬಿಡುವ  ಬಗ್ಗೆಯಾಗಲಿ ಪ್ರಸ್ತಾಪವಾಗಿಲ್ಲ. ಹಾಗಾಗಿ ಸರ್ಕಾರ ಸಮಿತಿ ಕೈಗೊಂಡ ತಪ್ಪುಗಳನ್ನು ಸರಿಪಡಿಸುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ರೋಹಿತ್​ ಚಕ್ರತೀರ್ಥ ಸಮಿತಿ ವಿಸರ್ಜನೆ; ಸರ್ಕಾರದ ನಡೆ-ಅನುಮಾನಕ್ಕೆ ಎಡೆ

ಯಾವುದೇ ಪ್ರಜಾಸತ್ತಾತ್ಮಕ ವಿಧಾನವಾಗಲಿ ಅಥವಾ ಪಠ್ಯ ಪುಸ್ತಕ ರಚನೆಗೆ/ ಪರಿಷ್ಕರಣೆಗೆ  ಅಗತ್ಯವಾದ ಒಂದು ಶಿಕ್ಷಣ ಶಾಸ್ತ್ರೀಯ ಕ್ರಮವನ್ನಾಗಲಿ ಅನುಸರಿಸದ ಪ್ರಕ್ರಿಯೆ ಮೂಲಕ ಪರಿಷ್ಕರಿಸಿದ ಪುಸ್ತಕಗಳನ್ನು ಆಧರಿಸಿ ಮಕ್ಕಳಿಗೆ ಕಲಿಸುವುದು ಪ್ರಜಾಪ್ರಭುತ್ವಕ್ಕೆ ಹಾಗು ಸಂವಿಧಾನಕ್ಕೆ ಅಪಚಾರಗಿದೆ ಎಂದು ಡಾ.ನಿರಂಜನಾರಾಧ್ಯ ವಿ.ಪಿ. ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಾರಣದಿಂದ  ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರಜ್ಞಾಪೂರ್ವಕವಾಗಿ ಮಾಡಿರುವ ತಿದ್ದುಪಡಿಗಳನ್ನು ಸಂವಿಧಾನ ಪರವಾದ ಈ  ಹೋರಾಟ ಮುಂದುವರಿಯಬೇಕು ಹಾಗೂ ಹಕ್ಕೊತ್ತಾಯ ಹೀಗಿರಬೇಕೆಂದು ತಿಳಿಸಿದ್ದಾರೆ;

೧. ಪರಿಷ್ಕರಣೆ ನಿಯಮ ಬಾಹಿರ ಹಾಗು ಸಂವಿಧಾನ ವಿರೋಧಿಯಾದ ಕಾರಣ, ಪರಿಷ್ಕರಣೆಯ ಹೆಸರಲ್ಲಿ  ಸೇರಿಸಿರುವ ಎಲ್ಲ ಕೋಮುವಾದಿ ಪಾಠಗಳು ಹಾಗು ದುರುದ್ದೇಶದಿಂದ ಬದಲಿಸಿರುವ ಶೀರ್ಷಿಕೆ, ಪದಪುಂಜ, ವಾಕ್ಯ, ಪ್ಯಾರಾ, ಇತ್ಯಾದಿಗಳು, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಿರುವುದರಿಂದ, ಸಂಪೂರ್ಣ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು.

ಇದನ್ನು ಓದಿ: ತೀರ್ಥ ಕುಡಿದವರಿಂದ ಯಥೇಚ್ಛ ಮಾತುಗಾರಿಕೆ

೨. ಪರಿಷ್ಕೃತ  ಪುಸ್ತಕಗಳ ವಿತರಣೆ ಸ್ಥಗಿತಗೊಳಿಸಿ ಎಲ್ಲವನ್ನು ಹಿಂಪಡೆಯಬೇಕು.

೩. ಈ ಹಿಂದೆ ಇದ್ದ ಪುಸ್ತಕಗಳನ್ನು ಯಥಾವತ್ತಾಗಿ ಮುಂದುವರಿಸಬೇಕು.

೪. ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನ ಈ ಪ್ರಹಸನದಲ್ಲಿ ಆಗಿರುವ ಲೋಪಗಳನ್ನು ಅಧ್ಯಯನ  ಮಾಡಿ   ವರದಿ ಸಲ್ಲಿಸಲು ಒಂದು ಸ್ವತಂತ್ರ ಶಿಕ್ಷಣ ಹಾಗು ವಿಷಯ ತಜ್ಞರ ಸಮಿತಿ ರಚಿಸಬೇಕು.

ಮೇಲಿನ ಅಂಶಗಳನ್ನು ಒಳಗೊಂಡು ಎಲ್ಲರೂ ಆಗ್ರಹಿಸಿಬೇಕೆಂದು ಕರೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *