ಚೆಂಬೆಳಕಿನ ಖ್ಯಾತಿಯ ಕವಿ, ನಾಡೋಜ ಚನ್ನವೀರ ಕಣವಿ ನಿಧನ

  • ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ನಿಧನ
  • ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಖ್ಯಾತ ಕವಿ
  • ಬುಧವಾರ ಬೆಳಗ್ಗೆ 9 15ಕ್ಕೆ ಚನ್ನವೀರ ಕಣವಿ ನಿಧನ

ಧಾರವಾಡ: ಕನ್ನಡದ ಖ್ಯಾತ ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ಅವರು ನಿಧನರಾಗಿದ್ದು, ಅವರಿಗೆ 93 ವರ್ಷ ವಯಸ್ಸಾಗಿತ್ತು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕಣವಿ ಅವರನ್ನು ಧಾರವಾಡದ ಎಸ್ ಡಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಬುಧವಾರ ಬೆಳಗ್ಗೆ 9:15 ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಾಡಿನ ಅಪೂರ್ವ ಸಾಹಿತಿಗಳಲ್ಲಿ ಒಬ್ಬರಾದ ಚೆಂಬೆಳಕಿನ ಕವಿ ಡಾ. ಚೆನ್ನವೀರ ಕಣವಿ ಹೊಸಗನ್ನಡ ಕಾವ್ಯದ 2ನೇ ತಲೆಮಾರಿನ ಕವಿ. ಪ್ರಕೃತಿಲೀಲೆ, ಪ್ರಣಯ, ದಾಂಪತ್ಯ, ವಾತ್ಸಲ್ಯದಂತಹ ರಮ್ಯ ಪರಂಪರೆಯ ನವ್ಯ ವಿಷಯಗಳು ಅವರ ಕೃತಿಗಳಲ್ಲಿವೆ. ಕಣವಿ ಜನಸಾಮಾನ್ಯರಿಗೆ ಸರಳವಾಗಿ ಕಾವ್ಯದ ರುಚಿ ಉಣಬಡಿಸಿದ ಶ್ರೇಷ್ಟಕವಿ ಮಾತ್ರವಲ್ಲ ಒಬ್ಬ ವಿಮರ್ಶಕರೂ ಹೌದು.

ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928 ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿದ್ದರು.

1956ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ 1983 ರವರೆಗೆ ಸೇವೆ ಸಲ್ಲಿಸಿದರು. ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು.

ಚನ್ನವೀರ ಕಣವಿಯವರು ವಿಮರ್ಶೆಯನ್ನು ಬರೆದಿದ್ದರಾದರೂ ಪ್ರಧಾನವಾಗಿ ಅವರು ಕವಿಯಾಗಿದ್ದರು. ಚೆನ್ನವೀರ ಕಣವಿಯವರು ಕವಿಯಾಗಿ ಪ್ರಕಟವಾಗಿದ್ದು ನವೋದಯದ ‘ನಡುಹಗಲ’ ಕಾಲದಲ್ಲಿ. ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮೊದಲಾದವರ ಕಾವ್ಯ ಹೊಸದಾಗಿ ಕಾವ್ಯ ರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲ ಅದು.

ಕಣವಿ ಅವರ ಪ್ರಾರಂಭದ ರಚನೆಗಳಲ್ಲಿ ಇಂಥ ಪ್ರಭಾವಗಳ ನೆಲೆಯನ್ನು ಗುರುತಿಸಬಹುದಾಗಿದ್ದು, ಅವರ ಕಾವ್ಯದಲ್ಲಿ ರಮ್ಯ ಮನೋಧರ್ಮ, ಆದರ್ಶಪ್ರಿಯತೆ, ವ್ಯಕ್ತಿತ್ವ ನಿರ್ಮಾಣದ ಹಂಬಲಗಳು ವಿಶೇಷವಾಗಿ ಕಂಡು ಬರುತ್ತವೆ. 1949ರಲ್ಲಿ ಪ್ರಕಟವಾದ ‘ಕಾವ್ಯಾಕ್ಷಿ’, 1950ರಲ್ಲಿ ಪ್ರಕಟವಾದ ‘ಭಾವಜೀವಿ’ ಸಂಗ್ರಹಗಳಲ್ಲಿ ಈ ಎಲ್ಲ ಅಂಶಗಳನ್ನೂ ಗುರುತಿಸಬಹುದು.

1953ರಲ್ಲಿ ಕಣವಿಯವರ ಮೂರನೆಯ ಸಂಗ್ರಹ ‘ಆಕಾಶಬುಟ್ಟಿ’ ಪ್ರಕಟವಾಯಿತು. ಈ ಸಂಗ್ರಹದಲ್ಲಿ ಕಣವಿ ಅವರ ಆಸಕ್ತಿಗಳು ವಿಸ್ತಾರಗೊಳ್ಳುತ್ತಿರುವ ಸೂಚನೆಗಳಿವೆ. ಸಾಮಾಜಿಕತೆ ಈ ಸಂಗ್ರಹದಲ್ಲಿ ಗುರುತಿಸಲೆಬೇಕಾದ ಬಹುಮುಖ್ಯ ಅಂಶವಾಗಿದೆ. ಸಮಾಜದ ದೋಷಗಳನ್ನು ಕವಿ ಇಲ್ಲಿ ವ್ಯಗ್ರರಾಗಿ ಟೀಕೆಗೆ ಗುರಿ ಮಾಡುತ್ತಾರೆ. ವ್ಯಂಗ್ಯದ ಧಾಟಿ ಇಂಥ ಸಂದರ್ಭಗಳಲ್ಲಿ ಮುಖ್ಯವಾಗುತ್ತಿತ್ತು.

ಬಸವರಾಜ ಕಟ್ಟೀಮನಿ, ನಿರಂಜನ, ಎಕ್ಕುಂಡಿ ಮೊದಲಾದವರ ಸ್ನೇಹ ಸಂಪರ್ಕ ಮತ್ತು ಆಗ ಪ್ರಚಲಿತವಿದ್ದ ಪ್ರಗತಿಶೀಲ ಸಾಹಿತ್ಯ ಚಳವಳಿ ಅವರನ್ನು ಪ್ರಭಾವಿಸಿರಬಹುದು. ಆಕಾಶಬುಟ್ಟಿ ಸಂಗ್ರಹದಲ್ಲಿರುವ ಪ್ರಜಾಪ್ರಭುತ್ವ ಎಂಬ ಕವಿತೆ ಯನ್ನು ನಾವಿಲ್ಲಿ ವಿಶೇಷವಾಗಿ ನೆನೆಯಬೇಕು.

Donate Janashakthi Media

Leave a Reply

Your email address will not be published. Required fields are marked *