ಚಾಮರಾಜನಗರ: ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಕಳೆದರೂ ಇನ್ನು ಸಹ ಜಾತಿ ಅಸ್ಪೃಶ್ಯತೆ, ಪಾಳೇಗಾರಿ ವ್ಯವಸ್ಥೆ, ಸಾಮಾಜಿಕ ಅಸಮಾನತೆ ಜಿವಂತವಾಗಿರುವುದು ನಾಗರಿಕ ಸಮಾಜಕ್ಕೆ ಕಳಂಕ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಆರೋಪಿಸಿದರು.
ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಗೋವಿಂದರಾಜ್ ಎಂಬ ಯುವಕ ದಲಿತ ಯುವತಿಯನ್ನ ಪ್ರೀತಿಸಿ ಮದುವೆಯಾದ ಎಂಬ ಕಾರಣಕ್ಕೆ ಆತನಿಗೆ ಸಾಮಜಿಕ ಬಹಿಷ್ಕಾರ ಹಾಕಿ ಆರು ಲಕ್ಷ ದಂಡ ವಿಧಿಸಲಾಗಿದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿರುವ ಘಟನೆ ಎಂದರು.
ಇದನ್ನು ಓದಿ: ಭಾರತದ ಆಳರಸರು ಧರ್ಮ-ಜಾತಿ-ಪಾಳೇಗಾರಿ-ಅಸ್ಪೃಶ್ಯತೆಯಡೆಗೆ ಕೊಂಡೊಯ್ಯುತ್ತಿದ್ದಾರೆ: ಎಚ್.ಟಿ. ಗುರುರಾಜು
ಚಾಮರಾಜನಗರ ಜಿಲ್ಲಾಧಿಕಾರಿ ಕಛೇರಿ ಮುಂದೆ ದಲಿತ ಹಕ್ಕುಗಳ ಸಮಿತಿ(ಡಿಎಚ್‌ಎಸ್), ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ), ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ(ಸಿಐಟಿಯು) ಹಮ್ಮಿಕೊಂಡಿದ್ದ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ದೇವಿ ಅವರು, ಜಾತಿ ದೌರ್ಜನ್ಯ, ಅಸ್ಪೃಶ್ಯತಾ ಆಚರಣೆ, ಸಾಮಾಜಿಕ ಬಹಿಷ್ಕಾರಗಳು ಮೋದಿ ಅಧಿಕಾರಕ್ಕೆ ಬಂದ ನಂತರ ಅದರಲ್ಲೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರಂಥ ಕೋಮುವಾದಿ ಕ್ರಿಮಿಗಳು ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಾಗಿವೆ. ಉತ್ತರ ಪ್ರದೇಶದ ದುಷ್ಟ ಮಾದರಿ ವ್ಯಾಪಕವಾಗಿ ಹರಡುತ್ತಿರುವುದು ಅಪಾಯದ ಬೆಳವಣಿಗೆಯಾಗಿದೆ ಎಂದರು.
ಇದನ್ನು ಓದಿ: ಸಾಮಾಜಿಕ ಅಸ್ಪೃಶ್ಯತೆಗಿಂತಲೂ ಧಾರ್ಮಿಕ ಅಸ್ಪೃಶ್ಯತೆ ಬಹುದೊಡ್ಡ ಅಪಾಯಕಾರಿ
ದೇಶದಲ್ಲಿ ಮನುವಾದಿ – ಕೋಮುವಾದಿ ಬಿಜೆಪಿ ಅಧಿಕಾರದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕುಣಗಳ್ಳಿ ಗ್ರಾಮದ ಉಪ್ಪಾರ ಶೆಟ್ಟಿ ಮೇಲ್ಜಾತಿ ಹುಡುಗ ಗೋವಿಂದರಾಜ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೂವಿನ ಕೊಪ್ಪಲು ಗ್ರಾಮದ ದಲಿತ ಕುಟುಂಬದ ಶ್ವೇತರವರನ್ನು 2018ರ ಸೆಪ್ಟೆಂಬರ್ 18ರಂದು ಮಳವಳ್ಳಿ ನೊಂದಣಿ ಕಛೇರಿಯಲ್ಲಿ ಅಂತರಜಾತಿ ವಿವಾಹ ಮಾಡಿಕೊಂಡಿದ್ದರು. ಇದರಿಂದ ಕುಪಿತರಾದ ಕುಣಗಳ್ಳಿ ಜನರು ನಮಗೆ ಅವಮಾನ ಮಾಡಿ ಜಾತಿ ಕುಲ ಕೆಡಿಸಿದ್ದೀರಿ ನೀವು ಗ್ರಾಮಕ್ಕೆ ಬರಬಾರದು ಎಂದು ತಡೆ ಒಡ್ಡಿದರು. ಕೆಲವು ಊರಿನ ಜನರ ಮಧ್ಯಸ್ತಿಕೆಯಿಂದ ಸಮಸ್ಯೆ ಬಗೆಹರಿಸುವ ಭರವಸೆ ಸಿಕ್ಕಿದ್ದರಿಂದ 5 ವರ್ಷದಿಂದ ಮಳವಳ್ಳಿಯಲ್ಲಿ ಜೀವನ ಸಾಗಿಸಿದರು. ದಂಪತಿಗೆ ಎರಡು ಮಕ್ಕಳಾದರು ಸಹ ಕುಣಗಳ್ಳಿ ಗ್ರಾಮಕ್ಕೆ ಮಾತ್ರ ಪ್ರವೇಶ ನಿರ್ಬಂಧಿಸಲಾಗಿದೆ.
ಯುವಕ ಗೋವಿಂದರಾಜ್ ತಂದೆಗೆ ಅನಾರೋಗ್ಯ ಕಾರಣದಿಂದ ಊರಿಗೆ ಬರಲೇಬೇಕಾಯಿತು. ಆ ಸಂದರ್ಭದಲ್ಲಿ ಜಾತಿ ನಿಂದನೆ ಮಾಡಿ ಹೊಲತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದೀಯ ಎಂದು 3 ಲಕ್ಷ ದಂಡ ವಿಧಿಸಿ ಆ ಕುಟಂಬಕ್ಕೆ ಸಾಮಾಜಿಕ ಬಹಿಷ್ಠಾರ ಹಾಕಲಾಗಿದೆ. ಬೇರೆ ದಾರಿಕಾಣದ ನೊಂದ ಕುಟುಂಬ ಪೋಲಿಸ್ ಠಾಣೆಯಲ್ಲಿ ದೂರು ಕೊಡಲು ಮುಂದಾದರು, ಈ ವಿಷಯ ತಿಳಿದ ಕೂಡಲೇ ದಂಡವನ್ನ 6 ಲಕ್ಷಕ್ಕೇ ಏರಿಸಿರುವ ಘಟನೆ ನಡೆದಿದೆ. ಇಂತಹ ಅಮಾನವೀಯ ಘಟನೆಯನ್ನು ತೀವ್ರವಾಗಿ ಖಂಡಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಆರು ವರ್ಷಗಳ ಹಿಂದೆ ಬಾಳೆ ತೋಟದಲ್ಲಿ ಇಬ್ಬರು ದಲಿತ ಕುಟುಂಬಗಳ ಕತ್ತುಗಳ ಕತ್ತರಿಸಿದ ದೌರ್ಜನ್ಯಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಸಂತೇಮಾರಹಳ್ಳಿಯ ಜಾತ್ರೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಮತ್ತು ಸಾಮಾಜಿಕ ಬಹಿಷ್ಕಾರ ನಡೆದಿದೆ. ಹೀಗೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. ದಲಿತ ಶಾಸಕರು, ಸಂಸದರನ್ನು ಆಯ್ಕೆ ಮಾಡಲಾಗಿದ್ದರೂ ಸಹ ಅವರು ಸಹ ಇಂಥಹ ವಿಚಾರಗಳಲ್ಲಿ ಗಂಭೀರತೆ ವಹಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ: ಬುದ್ಧ ನೆನಪಾಗುವುದೇಕೆ ಶೋಷಿತರಿಗೆ ಬೇಕೆನಿಸುವುದೇಕೆ
ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಜಾತಿ ತಾರತಮ್ಯವೆಸಗಿ ಸಾಮಾಜಿಕ ಬಹಿಷ್ಠಾರ ಹಾಕಿದವರಿಗೆ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯಿದೆ ಪ್ರಕಾರ ಶಿಕ್ಷೆಗೆ ಗುರಿ ಪಡಿಸಬೇಕು. ಅಂತರಜಾತಿ ವಿವಾಹಿತರಾದವರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಬೇಕು. ನೊಂದ ಕುಟುಂಬಕ್ಕೆ ಪರಿಹಾರ ನೀಡವುದಲ್ಲದೆ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಮುಖಂಡ ಕೃಷ್ಣ, ಜನವಾದಿ ಮಹಿಳಾ ಸಂಘಟನೆಯ ಲತಾ, ಸುಶೀಲಾ, ಮಂಜುಳಾ, ಶೋಭ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಹಕಾರ್ಯದರ್ಶಿ ಎನ್ ಎಲ್ ಭರತ್ ರಾಜ್ ಲಿಂಗರಾಜಮೂರ್ತಿ, ಪ್ರಕಾಶ್, ಮಹಾದೇವು, ಸಿಪಿಐ(ಎಂ) ಮೈಸೂರು ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಗ್ರಾಮ ಪಂಚಾಯಿತಿ ನೌಕರರ ಸಂಘದ ಮುಖಂಡ ಬಸವರಾಜ್, ಸಿಪಿಐ(ಎಂ) ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಂತಾದವರು ಭಾಗವಹಸಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ