ಬೆಂಗಳೂರು:ಮಂಗಳವಾರ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಚಲೋ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಪ್ರಾಂತೀಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘ ಜಂಟಿಯಾಗಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಸಾವಿರಾರು ರೈತರು ಪಾಲ್ಗೊಂಡರು. ಬೇಡಿಕೆ
ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೃಷಿ ಭೂಮಿ ಸ್ವಾಧೀನ ನಿಲ್ಲಿಸುವುದು, ಕೃಷಿಕರನ್ನು ಮದುವೆಯಾಗುವ ಮಹಿಳೆಯರಿಗೆ ಮೀಸಲಾತಿ, ಭೂಮಿಯನ್ನು ಬಿಟ್ಟುಕೊಡುವ ರೈತರನ್ನು ಪಾಲುದಾರರಲ್ಲಿ ಒಬ್ಬರನ್ನಾಗಿ ಮಾಡುವುದು, ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ತಲಾ 25,000 ರೂ. ಪರಿಹಾರ ನೀಡಬೇಕು ಎಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು.
ಇದನ್ನು ಓದಿ : ಗುಜರಾತ್ | ಬಿಜೆಪಿ ಶಾಸಕನ ಶೈಕ್ಷಣಿಕ ಅರ್ಹತೆ ಪ್ರಶ್ನಿಸಿದ ಪತ್ರಕರ್ತೆ ವಿರುದ್ಧ ಎಫ್‌ಐಆರ್
ಪ್ರತಿಭಟನೆ ಕುರಿತು ಎಎಎನ್ ಎಸ್ ಜೊತೆಗೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಸರ್ಕಾರ ಕೃಷಿಗೆ 13,000 ಕೋಟಿ ರೂ.ಗಳಷ್ಟು ಹಂಚಿಕೆಯನ್ನು ಕಡಿಮೆ ಮಾಡಿದೆ. ಬಜೆಟ್‌ನಲ್ಲಿ ಈ ಕ್ಷೇತ್ರಕ್ಕೆ ಹಣ ಹಂಚಿಕೆಯನ್ನು ಹೆಚ್ಚಿಸಬೇಕು ಮತ್ತು ಹೆಚ್ಚುವರಿ ಹಣವನ್ನು ಸಹ ನೀಡಬೇಕು ಎಂದು ಒತ್ತಾಯಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯದಲ್ಲೇ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ರೈತರ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ರೈತರು ಬರಗಾಲ ಎದುರಿಸುತ್ತಿದ್ದು, ಜೀವನೋಪಾಯ ಅರಸಿ ವಲಸೆ ಹೋಗುತ್ತಿದ್ದಾರೆ. ಅನೇಕರು ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ’ ಎಂದು ಶಾಂತಕುಮಾರ್ ಹೇಳಿದರು.