ಸವಾಲುಗಳೇ ಸ್ಫೂರ್ತಿ

– ಹರೀಶ್ ಗಂಗಾಧರ

ಜೊಕೊವಿಕ್ ಟೆನಿಸ್ ರಾಕೆಟ್ ಹಿಡಿದದ್ದು ನಾಲ್ಕನೇ ವಯಸ್ಸಿಗೆ. ತಂದೆ ತಂದುಕೊಟ್ಟ ಆಟಿಕೆ ಅದಾಗಿತ್ತು. ಗಂಟೆಗಟ್ಟಲೆ ಬಾಲ್ ಅನ್ನು ಗೋಡೆಗೆ ಹೊಡೆಯುತ್ತಾ ಮನೆಗೆ ಬಾರದ ಪೋರನಾದ. ಅಷ್ಟರಲ್ಲಿ ಆಕಾಶವೇ ಕುಸಿದುಬೀಳುವುದರಲ್ಲಿತ್ತು. ನ್ಯಾಟೋ ಪಡೆ ಸೆರ್ಬಿಯಾ ಮೇಲೆ ದಾಳಿ ಮಾಡಿದ್ದವು. ಬೆಲ್ಗ್ರೇಡ್ ನಗರದ ಆಗಸದಿಂದ ಬಾಂಬುಗಳ ಸುರಿಮಳೆಯಾಗತೊಡಗಿತು. ಜೊಕೊವಿಕ್ ಕುಟುಂಬ ನೆಲಮಾಳಿಗೆಗಳಲ್ಲಿ ಜೀವನ ಕಳೆಯಬೇಕಾಯಿತು. ಜೊಕೊವಿಕ್ ಊರು ನಶಿಸಿ ಹೋದ ಭೂತನಗರಿಯಂತಾಗಿತ್ತು. ಸಾವಿರಾರು ಜನರು ಬಲಿಯಾಗಿದ್ದರು.

ಕ್ರೋಯೇಶಿಯದ ಗೊರಾನ್ ಇವನಿಸಿವಿಚ್ ತನ್ನ ಟೆನ್ನಿಸ್ ಜೀವನದಲ್ಲಿ ಗೆದ್ದದ್ದು ಏಕೈಕ ಗ್ರ್ಯಾಂಡ್ ಸ್ಲಾಮ್ ಮಾತ್ರ. 2001ರ ವಿಂಬಲ್ಡನ್ ಅದು. ವಿಶ್ವ ಅರ್ಹತಾ ಪಟ್ಟಿಯಲ್ಲಿ 125 ಕ್ರಮಾಂಕದಲ್ಲಿದ್ದ ಆತನಿಗೆ ಆ ವರುಷ ವಿಂಬಲ್ಡನ್ ವೈಲ್ಡ್ ಕಾರ್ಡ್ ಪ್ರವೇಶ ನೀಡಿತ್ತು. ಗೊರಾನ್ ಈಗ ಬಹುಶಃ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟು ನೊವಾಕ್ ಜೊಕೋವಿಕ್ನ ಗುರು ಮತ್ತು ತರಬೇತುದಾರ.

ಶಕ್ತಿಯುತ ಎಡಗೈ ಸರ್ವ್ ಮಾಡುತ್ತಿದ್ದ ಗೊರಾನ್, ಪೀಟ್ ಸಂಪ್ರಾಸ್, ಆಂಡ್ರೆ ಅಗಾಸಿ, ಸ್ಟೆಫಾನ್ ಎಡ್ಬರ್ಗ್, ಈವನ್ ಲಿಂಡೆಲ್ ಮತ್ತು ಬೋರಿಸ್ ಬೆಕರ್ ಕಾಲದಲ್ಲಿ ಆಡಿದವ. ಇಂತಹ ಬಲಿಷ್ಠ ನುರಿತ ಆಟಗಾರರ ನಡುವೆ ಪುಟ್ಟ ದೇಶದ ಗೊರಾನ್ ತನ್ನ ಅಸ್ತಿತ್ವ ಸ್ಥಾಪಿಸಿಕೊಳ್ಳಲು ಹೆಣಗಾಡಿದ. ಛಲ ಬಿಡದೆ ಕೊನೆಗೂ ವಿಂಬಲ್ಡನ್ ಗರಿ ಮುಡಿಗೇರಿಸಿಕೊಂಡ. ಸತತ ವಿಫಲತೆಯನ್ನ ಅರಗಿಸಿಕೊಂಡು ಬೂದಿಯಿಂದೆದ್ದ ಫೀನಿಕ್ಸ್ ಕತೆ ಗೊರಾನದ್ದು. ನಿಸ್ಸಂದೇಹವಾಗಿ ಗೊರಾನ್ ತನ್ನ ಛಲವನ್ನೆ ಜೊಕೊವಿಕ್ಕಿಗೆ ಧಾರೆಯರೆದಿದ್ದಾನೆ.

ಇಪ್ಪತ್ತರ ಹರೆಯದ ತರುಣ ಕಾರ್ಲೋಸ್ ಆಲ್ಕೆಜಾರ್ ಎದುರು ಈ ವರುಷ ಜೊಕೊವಿಕ್ ಪರಾಭವಗೂಂಡಾಗ, ಸಾಕಷ್ಟು ಮಾಧ್ಯಮದವರು ಮಾಜಿ ಆಟಗಾರರು ಜೋಕೊವಿಕ್ ಟೆನ್ನಿಸ್ ವೃತ್ತಿ ಜೀವನ ಬಹುಬೇಗ ಅಂತ್ಯವಾಗಲಿದೆ ಎಂಬ ಭವಿಷ್ಯ ನುಡಿದಿದ್ದರು. ಅಂದು ಯಾವುದೇ ಪ್ರತಿಕ್ರಿಯೆ ನೀಡದ ಜೊಕೊವಿಕ್ 24 ನೆ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಮೂಲಕ ಅವರೆಲ್ಲರ ಬಾಯಿ ಮುಚ್ಚಿಸಿದ್ದಾನೆ.

ಸೆಪ್ಟೆಂಬರ್ 8 1973. ಟೆನ್ನಿಸ್ ಅಭಿಮಾನಿಗಳು ನೆನಪಿನಲ್ಲಿಡುವ ದಿನ. ಅಂದು ಮಾರ್ಗರೆಟ್ ಕೋರ್ಟ್ ಯುಎಸ್ ಓಪನ್ ಗೆಲ್ಲುವ ಮೂಲಕ 24 ಗ್ರ್ಯಾಂಡ್ ಸ್ಲಾಮ್ ಗೆದ್ದ ಸಾಧನೆ ಮಾಡಿದರು. ಕಳೆದೈವತ್ತು ವರ್ಷಗಳಲ್ಲಿ ಈ ಮೇರು ಸಾಧನೆಯ ಆಸು ಪಾಸು ಸ್ಟೇಫಿ ಗ್ರಾಫ್, ಮಾರ್ಟಿನಾ ನವ್ರಾತಿಲೋವ, ಸೆರೆನಾ ವಿಲಿಯಮ್ಸ್, ಫೆಡರರ್, ನಡಾಲ್ ಸುಳಿದಾಡಿದರು, ದಾಖಲೆಯನ್ನು ಸರಿಗಟ್ಟಿದ್ದು ಜೊಕೊವಿಕ್ ಮಾತ್ರ.

ಪ್ರಶಸ್ತಿ ಸಮಾರಂಭದ ನಂತರದ ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತನೊಬ್ಬ ” 25ನೇ ಗ್ರ್ಯಾಂಡ್ ಸ್ಲಾಮ್ ಗೆದ್ದ ನಂತರ ಜೊಕೊವಿಕ್ ನಿವೃತ್ತಿ ಘೋಷಿಸುವರೇ?” ಎಂಬ ಪ್ರಶ್ನೆಗೆ ಗೊರಾನ್ ನೀಡಿದ ಉತ್ತರ ಹೀಗಿತ್ತು “2028ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಡೆಯುವ ಒಲಂಪಿಕ್ಸ್ ನಲ್ಲಾಡಲು ತಯಾರಿ ನಡೆಸುತ್ತಿದ್ದಾರೆ ಜೊಕೊವಿಕ್” ಎಂದು.

ಜೊಕೊವಿಕ್ ಈ ಅಪ್ರತಿಮ ಸಾಧನೆಗೆ ಕಾರಣಗಳೇನು, ಆತನ ವರ್ಕ್ ಎಥಿಕ್ಸ್ ಹೇಗಿದೆ ಎಂಬ ಕುತೂಹಲ ಹುಟ್ಟಿ ಆತನೇ ಬರೆದ ಪುಸ್ತಕ “ಸರ್ವ್ ಟು ವಿನ್- Serve to Win” ಓದಿದ್ದೆ. “ನಾನು ದಿನದಲ್ಲಿ ಹದಿನಾರು ಗಂಟೆ ಎಚ್ಚರವಿರುತ್ತೇನೆ. ಅದರಲ್ಲಿ ಹದಿನಾಲ್ಕು ಗಂಟೆ ಟೆನ್ನಿಸ್ ಆಡುವುದಕ್ಕೆ, ಟೆನ್ನಿಸ್ ಆಡಲು ತರಬೇತಿ ಪಡೆಯುವುದಕ್ಕೆ ಮತ್ತು ಟೆನ್ನಿಸ್ ಆಡಲು ಬೇಕಾದ ಉತ್ತಮ ಆಹಾರ ಸೇವಿಸುವುದಕ್ಕೆ ಬಳಸುತ್ತೇನೆ. ವರ್ಷದಲ್ಲಿ ಹನ್ನೊಂದು ತಿಂಗಳು ಈ ವೇಳಾಪಟ್ಟಿಯನ್ನೇ ನಾನು ಪಾಲಿಸುವುದು” ಎನ್ನುತ್ತಾನೆ ಜೊಕೊವಿಕ್! ತದೇಕಚಿತ್ತವೆಂದರೆ ಇದೆ ಇರಬೇಕು…

ಮನೋಮಗ್ನತೆ (mindfulness), ಹೊಸತನ್ನು ಅಪ್ಪಿಕೊಳ್ಳುವ, ಸದಾ ಅಮೂಲಾಗ್ರ ಬದಲಾವಣೆಗೆ ಅಳುಕದ ಮುಕ್ತ ಮನಸ್ಸಿರುವ (Open mindedness) , ಝೆನ್ ಫಿಲಾಸಫಿ ನಂಬುವ, ಕಠಿಣ ತರಬೇತಿಗೆ, ಸವಾಲುಗಳಿಗೆ ಸದಾ ಸಿದ್ದನಿರುವ, ನಿಖರವಾದ ಪೂರ್ವಸಿದ್ಧತೆ ತಪ್ಪಿಸದ, ಗುರಿ ಸಾಧನಗೆ ತಯಾರಾದ ದಿನಚರಿಗೆ ಅಂಟಿ ನಡೆಯುವ, ಟೊಂಕ ಕಟ್ಟಿ ನಿಂತ ನೆಚ್ಚಿನ ಗೆಳೆಯರ ಬೆಂಬಲದಲ್ಲಿ ಅರಳುವ, ಕೌಟುಂಬಿಕ ಜೀವನ, ಗುರು ಹಿರಿಯರಲ್ಲಿನ ಗೌರವ ಮತ್ತು ಅಪಾರ ಶಿಸ್ತನ್ನು ಮೈಗೂಡಿಸಿಕೊಂಡಿರುವ ಜೊಕೊವಿಕ್ ಸಾಧನೆಯ ಕನಸು ಕಾಣುವವರಿಗೆಲ್ಲಾ ಪರ್ಫೆಕ್ಟ್ ರೋಲ್ ಮಾಡೆಲ್.

ಜೊಕೊವಿಕ್ ಟೆನಿಸ್ ರಾಕೆಟ್ ಹಿಡಿದದ್ದು ನಾಲ್ಕನೇ ವಯಸ್ಸಿಗೆ. ತಂದೆ ತಂದುಕೊಟ್ಟ ಆಟಿಕೆ ಅದಾಗಿತ್ತು. ಗಂಟೆಗಟ್ಟಲೆ ಬಾಲ್ ಅನ್ನು ಗೋಡೆಗೆ ಹೊಡೆಯುತ್ತಾ ಮನೆಗೆ ಬಾರದ ಪೋರನಾದ. ಅಷ್ಟರಲ್ಲಿ ಆಕಾಶವೇ ಕುಸಿದುಬೀಳುವುದರಲ್ಲಿತ್ತು. ನ್ಯಾಟೋ ಪಡೆ ಸೆರ್ಬಿಯಾ ಮೇಲೆ ದಾಳಿ ಮಾಡಿದ್ದವು. ಬೆಲ್ಗ್ರೇಡ್ ನಗರದ ಆಗಸದಿಂದ ಬಾಂಬುಗಳ ಸುರಿಮಳೆಯಾಗತೊಡಗಿತು. ಜೊಕೊವಿಕ್ ಕುಟುಂಬ ನೆಲಮಾಳಿಗೆಗಳಲ್ಲಿ ಜೀವನ ಕಳೆಯಬೇಕಾಯಿತು. ಜೊಕೊವಿಕ್ ಊರು ನಶಿಸಿ ಹೋದ ಭೂತನಗರಿಯಂತಾಗಿತ್ತು. ಸಾವಿರಾರು ಜನರು ಬಲಿಯಾಗಿದ್ದರು. ಬಲಿಷ್ಠ ರಾಷ್ಟ್ರಗಳು ಹೇರಿದ ದಿಗ್ಬಂಧನದಿಂದ ಮೂರೂ ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಆ ದಿನಗಳಲ್ಲು ಟೆನಿಸ್ ತಾರೆಯಾಗುವ ಜೊಕೊವಿಕ್ ಕನಸುಗಳು ಕಮರದಂತೆ ಎಚ್ಚರವಹಿಸಿದವರು ತಂದೆ ತಾಯಿ. ಜೊಕೊವಿಕ್ ಕೂಡ ತನ್ನ ಕನಸುಗಳನ್ನ ಸಾಯಲು ಬಿಡಲಿಲ್ಲ. ಕೆಟ್ಟ ಟೆನಿಸ್ ಕೋರ್ಟ್‌ಗಳಲ್ಲಿ ಆಡಿದ, ಖಾಲಿ ಈಜುಕೊಳದಲ್ಲಾಡಿದ, ಎದುರಾಳಿ ಆಟಗಾರ ಇಲ್ಲವಾದಾಗ ಗೋಡೆಗಳಿಗೆ ಚಂಡು ಹೊಡೆದ! ಟೆನಿಸ್ ಅವನ ಉಸಿರಾಗಿತ್ತು.

ತಾಯಿಯನ್ನ ಜೊಕೊವಿಕ್ “ಸೂಪರ್ ವುಮನ್” ಅಂತಲೇ ಇಂದಿಗೂ ಕರೆಯೋದು. ಸಂಕಷ್ಟದ ಪರಿಸ್ಥಿತಿಯಲ್ಲಿ ಮನೆಯ ಜವಾಬ್ದಾರಿಯ ಜೊತೆಗೆ ಮಗನ ಕನಸುಗಳಿಗೆ ಹೆಗಲು ಕೊಟ್ಟು ನಿಂತವಳು ಅವಳೇ. ಜೊಕೊವಿಕ್ ಕಿರಿಯರ ಪಂದ್ಯಾವಳಿಗಳಲ್ಲಿ ಎಲ್ಲರ ಗಮನ ಸೆಳೆದ ದಿನಗಳಿಂದ ಪೋಷಕರಿಗೆ ನಾನಾ ಆಮಿಷವೊಡ್ಡಲಾಯಿತು. ಇಡೀ ಕುಟುಂಬಕ್ಕೆ ಬ್ರಿಟನ್ ಪೌರತ್ವ ನೀಡುತ್ತೇವೆ. ಕೇಳಿದಷ್ಟು ಹಣ ನೀಡುತ್ತೇವೆ. ಯುವ ಜೊಕೊವಿಕ್ ಬ್ರಿಟನ್ ದೇಶಕ್ಕಾಡಬೇಕು ಎಂದು ಏಜೆಂಟ್‌ಗಳು ಒತ್ತಡ ಹಾಕಿದರು.

ಯುದ್ಧದಿಂದ ನಲುಗಿ ಹೋಗಿದ್ದ ದೇಶ ಸೆರ್ಬಿಯಾ, ದುಸ್ತರ ಬದುಕು, ಊಟ, ಕಮಾಯಿಗೆಲ್ಲಾ ನಿರಂತರ ಹೋರಾಟ. ನಿರಾಕರಿಸಲಾಗದ ಆಫರ್ ಅದು. ಆದರೂ ಜೊಕೊವಿಕ್ ತಂದೆ ತಾಯಿ ತೆಗೆದುಕೊಂಡ ನಿರ್ಧಾರ ಅನುಕರಣೀಯ. “ನಮ್ಮ ದೇಶ ಸೆರ್ಬಿಯಾ, ನಮ್ಮ ಸಂಬಂಧಿಕರು, ಗೆಳೆಯರಿರುವುದಿಲ್ಲಿ, ನಮ್ಮ ಭಾಷೆ ಮಾತನಾಡುವುದಿಲ್ಲಿ, ನಮ್ಮ ಆದಿಯಿಲ್ಲಿ, ಅಂತ್ಯವಿಲ್ಲಿ… ಸೆರ್ಬಿಯಾದಲ್ಲಿ.” ಎಂದು ನಿರ್ಣಯ ಮಾಡಿಬಿಟ್ಟಿದ್ದರು. ಇಂತಹ ಹೋರಾಟ ಬದುಕಿನ ನಡುವೆ ಜೊಕೊವಿಕ್ ಅಸಾಧ್ಯವಾದದನ್ನೇ ಸಾಧಿಸಿದ್ದೇನೆ. ವಿಶ್ವದ ನಂಬರ್ ಒನ್ ಆಟಗಾರನಾಗಿದ್ದೇನೆ. “ಯಾರು ಕೂಡ ಏನನ್ನೂ ಅಸಾಧ್ಯವೆಂದು ಹೇಳುವ ಹಾಗಿಲ್ಲ ಎನ್ನುತ್ತಾನೆ ಜೊಕೊವಿಕ್” – nobody can ever tell me, “It’s Impossible.”

ಜೊಕೊವಿಕ್ ಹಿರಿಯರ ಟೆನಿಸ್ ಕ್ರೀಡೆಗೆ ಪಾದಾರ್ಪಣೆ ಮಾಡಿದಾಗ ಫೆಡೆರೇರ್ ಮತ್ತು ನಡಾಲ್ ಟೆನಿಸ್ ಒಡೆಯರಾಗಿದ್ದರು. ಅವರಿಬ್ಬರೂ ಅವರದೇ ಎಲೈಟ್ ಕ್ಲಾಸಿನಲ್ಲಿದ್ದರು. ಜೊಕೊವಿಕ್ ಅವರಿಬ್ಬರನ್ನು ಕೆಲ ಪಂದ್ಯಗಳಲ್ಲಿ ಸೋಲಿಸಿದ ಆಟಗಾರನಾದರೂ, ಟೆನಿಸ್ ಅಭಿಮಾನಿಗಳು ಜೊಕೊವಿಕ್ನನ್ನ ಎರಡನೇಯ ದರ್ಜೆ ಆಟಗಾರನೆಂದೇ ಪರಿಗಣಿಸಿದ್ದರು. ಪಂದ್ಯಗಳಲ್ಲಿ ಪ್ರೇಕ್ಷಕರ ಬೆಂಬಲ ಫೆಡರರ್ ಮತ್ತು ನಡಾಲ್ ಪರವಾಗಿಯೇ ಇರುತಿತ್ತು. ಜೊಕೊವಿಕ್ ಇಡಿಯ ಕ್ರೀಡಾಂಗಣವನ್ನೆ ಅಲಕ್ಷಿಸಿ ಆಡುವ ವಾತಾವರಣ ಸೃಷ್ಟಿಯಾಗಿತ್ತು. ಫೆಡರರ್ – ನಡಾಲ್ ಅಧಿಪತ್ಯಕ್ಕೆ ಸವಾಲೊಡ್ಡುವುದು ಸಣ್ಣ ವಿಚಾರವಾಗಿರಲಿಲ್ಲ.

2008ರಲ್ಲಿ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯನ್ನು ಗೆದ್ದರು ಜನ ಅವರನ್ನ ಸೀರಿಯಸ್ ಆಗಿ ಗಣನೆಗೆ ತೆಗೆದುಕೊಂಡಿರಲಿಲ್ಲ. ಅದೇ ವರುಷ ಜೊಕೊವಿಕ್‌ಗೆ ಪಂದ್ಯಗಳ ನಡುವೆ ಅತಿಯಾದ ಹೊಟ್ಟೆ ನೋವು ಕಾಣಿಸಿಕೊಳ್ಳ ತೊಡಗಿತ್ತು. ಉಸಿರಾಟ ಕಷ್ಟವಾಗುತಿತ್ತು. ಪಂದ್ಯದ ನಡುವೆ ಅನುಮತಿ ಕೇಳಿ ಶೌಚಾಲಯದಲ್ಲಿ ಹೊಟ್ಟೆ ಹಿಡಿದು ಅಳುತ್ತಿದ್ದ ಜೊಕೊವಿಕ್. ಅತೀವ ನೋವಿನಿಂದ ಬಳಲುತ್ತಿದ್ದ ಜೊಕೊವಿಕ್ ನೋಡಿ ಅವನ ಮೇಲೆ ಹುಲಿಯಂತೆ ಮುಗಿಬಿದ್ದು ಬೇಟೆಯಾಡುತ್ತಿದ್ದರು ಅವನ ಎದುರಾಳಿಗಳು. ಹೀಗೆ ಜೊಕೊವಿಕ್ ಕುಗ್ಗಿ ಹೋದ ಕ್ಷಣದ ಉಪಯೋಗ ಪಡೆದು ಎರಗಿದ ವಿಲ್ಫ್ರೆಡ್ ಸೊಂಗಾ ವಿರುದ್ಧದ ಪಂದ್ಯವನ್ನು ಜೊಕೊವಿಕ್ ಮರೆಯಲಾರ.

ಇದನ್ನೂ ಓದಿ:“ಸನಾತನ ಧರ್ಮ”ವೋ?”ಸನಾತನ ಮತ” ವೋ?

ವೃತ್ತಿ ಜೀವನ ತೆರೆಬಿತ್ತು ಎಂಬ ಅನುಮಾನ ಕಾಡಿದ ದಿನಗಳಲ್ಲಿ ಜೊಕೊವಿಕ್ ನೆರವಿಗೆ ಬಂದದ್ದು ಸೆರ್ಬಿಯಾದ ವೈದ್ಯ ಡಾ. ಐಗೋರ್ ಸಟೋಜೆವಿಚ್. ದೇಹ ತಪಾಸಣೆ ಮಾಡಿದ ವೈದ್ಯ ಜೊಕೊವಿಕ್ ಗ್ಲುಟೆನ್ ಮತ್ತು ಡೈರಿ ಪದಾರ್ಥಗಳಿಗೆ ಅಲರ್ಜಿಕ್ ಎಂದು ಪತ್ತೆ ಹಚ್ಚಿದ್ದ! ಅಂದಿನಿಂದ ಜೊಕೊವಿಕ್ ಆಹಾರ ಸೇವನೆಯಲ್ಲಿ ಮಾಡಿಕೊಂಡ ಬದಲಾವಣೆ ಇಂದಿಗೂ ಅವನನ್ನ ಅಷ್ಟು ಫಿಟ್ಟಾಗಿಟ್ಟಿದೆ.

2023ರ ಅಮೆರಿಕನ್ ಓಪನ್ ಗೆದ್ದು ಪ್ರಶಸ್ತಿ ತೆಗೆದುಕೊಳ್ಳುವಾಗ ಯಾರು ನಿರೀಕ್ಷಿಸದ ಗೌರವ ಸಮರ್ಪಣೆಯೊಂದನ್ನ ತನ್ನ ಗೆಳೆಯನಿಗೆ ಜೊಕೊವಿಕ್ ಅರ್ಪಿಸಿದ. ಕೋಬೆ ಬ್ರಯಾಂಟ್ ವಿಶ್ವ ಕಂಡ ಶ್ರೇಷ್ಠ ಕ್ರೀಡಾಪಟು. ಆತ ಬಾಸ್ಕೆಟ್ ಬಾಲ್ ಕ್ರೀಡೆಯ ಮೊಹಮ್ಮದ್ ಅಲಿ ಎಂದರೆ ತಪ್ಪಾಗಲಾರದು. ಜೊಕೊವಿಕ್ ಮಾನಸಿಕವಾಗಿ ಕುಗ್ಗಿದಾಗ ಸಲಹೆ ನೀಡಿ ಮೇಲಕೆತ್ತಿದ್ದ ಜೀವದ ಗೆಳೆಯ ಕೋಬೆ. ಕೋಬೆ ಬರೆದ ಮಾಂಬಾ ಮೆಂಟಾಲಿಟಿ (The Mamba Mentality) ಕ್ರೀಡಾಪಟುಗಳಿಗೆ ಬೈಬಲ್ ಎಂದರೆ ತಪ್ಪಾಗಲಾರದು. ಆಹಾರ, ಶಿಸ್ತು, ಶ್ರಮ, ತರಬೇತಿ, ಮೈಂಡ್ಸೆಟ್, ದೇಹಾರೈಕೆಯ ಕೈಪಿಡಿಯದು.

2020ರಲ್ಲಿ ಕೋಬೆ ಅನಿರೀಕ್ಷಿತವಾಗಿ ಸಾವಿಗೀಡಾದ. ಕೋಬೆ ಧರಿಸುತ್ತಿದ್ದ ಜೆರ್ಸಿ ಸಂಖ್ಯೆ 24. ಜೊಕೊವಿಕ್ ಗೆದ್ದ ಗ್ರಾಂಡ್ ಸ್ಲಾಮ್ ಸಂಖ್ಯೆ 24. ಕೋಬೆ ಚಿತ್ರವಿದ್ದ, ಮಾಂಬಾ ಮೆಂಟಾಲಿಟಿ ಎಂದು ಮುದ್ರಿಸಿದ್ದ ಟೀಶರ್ಟ್ ತೊಟ್ಟು ಜೊಕೊವಿಕ್ ಗೆಳೆಯನಿಗೆ ತೋರಿದ ಗೌರವ ಗ್ರೀಕ್ ಯೋಧ ಅಖಿಲೀಸ್ ಟ್ರಾಯ್ ಯುದ್ಧದಲ್ಲಿ ಪೆಟ್ರೋಕ್ಲೆಸನಿಗೆ ತೋರಿದ ಗೌರವದಂತಿತ್ತು! ಜೊಕೊವಿಕ್ ಗೆಳೆಯರ ಬಳಗದಲ್ಲಿ ಲಿಯೋನೆಲ್ ಮೆಸ್ಸಿ, ರೊನಾಲ್ಡೊ, ನಟ ಮ್ಯಾಥ್ಯೂ ಮೆಕ್ಕನೋಗಿಯಂತವರಿದ್ದಾರೆ! ಈ ಮಾನವ ಸಂಬಂಧಗಳೇ ಎಷ್ಟು ಚೆಂದವಲ್ಲವೇ? “I am because we are. ನಾನು ನಿಮ್ಮೆಲ್ಲರಿಂದ. ಮಾನವೀಯತೆಗಿಂತ ಮಿಗಿಲಾದುದಿಲ್ಲ ಎಂದು ಸಾರಲು ಇದಕ್ಕಿಂತ ಪ್ರಭಾವಿ ಮಾರ್ಗ ನನಗಂತೂ ಹೊಳೆದಿಲ್ಲ.

ಸೋ ವಾಟ್ ಡ್ರೈವ್ಸ್ ಜೊಕೊವಿಕ್? ಜೊಕೊವಿಕ್ ಕೊಟ್ಟ ಉತ್ತರ-

“ನನ್ನ ನಂತರ ಬರುವವರು, ನಾನು ಏನು ಸಾಧಿಸಿದ್ದೇನೆ, ಹೇಗೆ ಸಾಧಿಸಿದ್ದೇನೆಂಬುದನ್ನ ಒಮ್ಮೆ ನೋಡಲಿ. ನನ್ನ ಸಾಧನೆಗಳನ್ನ ಸ್ಪೂರ್ತಿಯಾಗಿ ತೆಗೆದುಕೊಂಡು, ಅವರೂ ಸಾಧಿಸಲಿ. ನಾನು ಇನ್ನು ಹೆಚ್ಚೆಚ್ಚು ಸಾಧಿಸಲು ಇಂದೊಂದೇ ಪ್ರೇರಣೆ ಸಾಕು.”

The hope that others coming after me can see what I’ve done, and how I’ve done it, and use my work to fuel their own achievements. That alone is huge motivation for me to remain positive and stay on my course….

ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಅಮೇರಿಕಾದ ಮೈಕೆಲ್ ಫೆಲ್ಪ್ಸ್ ಗೆದ್ದ 28 ಮೆಡಲ್‌ಗಳ ಸಾಧನೆಯನ್ನ ಭವಿಷ್ಯದಲ್ಲಿ ಯಾರು ಸರಿಗಟ್ಟಿ, ಮುರಿಯಲಾರರು. ಅಂತಹದೇ ಸಾಧನೆಯನ್ನ ಜೊಕೊವಿಕ್ ಮಾಡಲಿದ್ದಾನೆ ಎಂಬುದು ನನ್ನ ನಂಬಿಕೆ. ಫೆಡೆರೇರ್, ನಡಾಲ್ ಮತ್ತು ಜೊಕೊವಿಕ್ ಆಟದ ರಸದೌತಣ ಸವಿದ ನಾನೇ ಧನ್ಯ.

 

Donate Janashakthi Media

Leave a Reply

Your email address will not be published. Required fields are marked *