ಬೆಂಗಳೂರು: ಚಲನಚಿತ್ರ ಮತ್ತು ಕಿರುತೆರೆ ಕಲಾವಿದರಿಗಾಗಿ ರಾಜ್ಯ ಸರಕಾರವು ಘೋಷಣೆ ಮಾಡಿರುವ ಆರ್ಥಿಕ ನೆರವನ್ನು ಪಡೆದುಕೊಳ್ಳಲು ಸೇವಾ ಸಿಂಧುನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕೋವಿಡ್ ಎರಡನೇ ಅಲೆಯಿಂದಾಗಿ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ವಿವಿಧ ವರ್ಗದ ಜನರಿಗೆ ರಾಜ್ಯ ಸರಕಾರ ನೆರವನ್ನು ಘೋಷಿಸಿತು. ಅದೇ ರೀತಿಯಲ್ಲಿ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ಚಲನಚಿತ್ರ ಮಂದಿರದ ಕಾರ್ಮಿಕರಿಗೆ ರಾಜ್ಯ ಸರಕಾರವು ಘೋಷಿಸಿರುವ ರೂ. 3,000/- ಗಳ ನೆರವನ್ನು ಪಡೆಯಲು ಸೇವಾ ಸಿಂಧು ಅನ್‌ಲೈನ್ ಪೋರ್ಟಲ್ ಆರಂಭವಾಗಿದೆ.
ಇದನ್ನು ಓದಿ: ಕೋವಿಡ್ ಎರಡನೇ ಪ್ಯಾಕೇಜ್ ಘೋಷಣೆ : ಯಾರಿಗೆ ಎಷ್ಟೆಷ್ಟು ನೆರವು, ಇಲ್ಲಿದೆ ಸಂಪೂರ್ಣ ಮಾಹಿತಿ
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡುರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೆಲವು ಆನ್‌ಲೈನ್ ಸೇವೆ ಆರಂಭ ಆಗಿರುವ ಬಗ್ಗೆ ಮಾಹಿತಿ ನೀಡಿದೆ.
ರಾಜ್ಯ ಸರಕಾರವು ಜೂನ್ 3ರಂದು ಎರಡನೇ ಆರ್ಥಿಕ ನೆರವನ್ನು ಘೋಷಿಸುವ ಸಂದರ್ಭದಲ್ಲಿ ಇದರಲ್ಲಿ ಚಲನಚಿತ್ರೋದ್ಯಮ ಹಾಗೂ ಕಿರುತೆರೆ ಮಾಧ್ಯಮದಲ್ಲಿ ತೊಡಗಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ತಲಾ ಮೂರು ಸಾವಿರ ನೆರವನ್ನು ಘೋಷಿಸಿದ್ದರು. ಈ ನೆರವು 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ನೆರವಾಗಲಿದೆ.
ಒಬ್ಬರು ಒಂದು ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಆಧಾರ್ ಕಾರ್ಡ್ ಸಂಖ್ಯೆ ಜೋಡಣೆಗೊಂಡಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಸಂಬಂಧಿತ ಸಂಘಗಗಳಲ್ಲಿ ಸದಸ್ಯತ್ವವನ್ನು ಹೊಂದಿರಬೇಕು ಮತ್ತು ಕಡ್ಡಾಯವಾಗಿ ಶಿಫಾರಸ್ಸು ಪತ್ರ ಪಡೆದು ಅದನ್ನು ಸೇವಾಸಿಂಧು ಆನ್‌ಲೈನ್‌ನಲ್ಲಿ ಸಲ್ಲಿಸಬೇಕೆಂದು ತಿಳಿಸಲಾಗಿದೆ.
ಆನ್‌ಲೈನ್ ಅರ್ಜಿ ಸಲ್ಲಿಸಲು ಜುಲೈ 9 ಕೊನೆಯ ದಿನಾಂಕವಾಗಿದ್ದು, ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ತಾಂತ್ರಿಕ ಮಾರ್ಗದರ್ಶನಕ್ಕಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪಿಸಿರುವ ಸಹಾಯವಾಣಿ ಸಂಖ್ಯೆ 8904645529 ಗೆ ಕರೆ ಮಾಡಬೇಕು ಅಥವಾ [email protected] ಗೆ ಇಮೇಲ್ ಮೂಲಕ ಸಂಪರ್ಕಿಸಲು ಇಲಾಖೆಯು ತಿಳಿಸಿದೆ.