ಬೆಂಗಳೂರು: `ಆಟೋರಿಕ್ಷಾ ಮತ್ತು ಬಸ್ ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿ ಮೃತಪಟ್ಟರೆ ಸರಕಾರದಿಂದ ರೂ.5 ಲಕ್ಷ ಪರಿಹಾರ ನೀಡುವ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ’ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ವಿಷಯವನ್ನು ತಿಳಿಸಿದ ಸಚಿವರು `ಕಾರ್ಮಿಕ ಇಲಾಖೆಯಲ್ಲಿ ನಾನು ದೃಢ ಹೆಜ್ಜೆ ಇಡಬೇಕೆಂದು ಸಂಕಲ್ಪ ಮಾಡಿದ್ದೇನೆ. ಈ ಮಸೂದೆಯನ್ನು ಜಾರಿ ಮಾಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಈಗಾಗಲೇ ಇಲಾಖೆಯಲ್ಲಿ ರೂಪು-ರೇಷೆಗಳನ್ನು ಸಿದ್ಧಪಡಿಸಲಾಗಿದೆ. ಇದರಿಂದ ಕಾರ್ಮಿಕ ವರ್ಗಕ್ಕೆ ಬಹುದೊಡ್ಡ ಅನುಕೂಲವಾಗಲಿದೆ’ ಎಂದರು.
ಕಾರ್ಮಿಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನೀಡುವ ಸಹಾಯಧನವನ್ನು ದುಪ್ಪಟ್ಟು ಮಾಡಲಾಗಿದೆ. ಕಾರ್ಮಿಕರ ಹಿತವನ್ನು ಕಾಪಾಡುವುದು ನನ್ನ ಮೊದಲ ಆದ್ಯತೆ ಎಂದರು.
`ಕಾರ್ಮಿಕ ಇಲಾಖೆಗೆ ವತಿಯಿಂದ ಜಾಗೃತಿ ಜಾಥಾವನ್ನು ರಚಿಸಲಾಗುವುದು. ವಲಸೆ ಕಾರ್ಮಿಕರಿಗೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ವಸತಿ ಸಮುಚ್ಚಯ ಕಟ್ಟಲು ತೀರ್ಮಾನಿಸಲಾಗಿದೆ. ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟಂತೆ ನೀಡುತ್ತಿರುವ ವಿವಿಧ ಸಹಾಯಧನ ದುಪ್ಪಟ್ಟು ಮಾಡಲಾಗುವುದು. ಕಾರ್ಮಿಕ ಇಲಾಖೆಯ ವಿಜಲೆನ್ಸ್ ಸೆಲ್ ರಚನೆ ಮಾಡಲಾಗುತ್ತಿದೆ’ ಎಂದು ಅವರು ವಿವರಿಸಿದರು.