ಬೆಂಗಳೂರು ಫೆ 06 : ಕೇಂದ್ರ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರೈತರು ರಾಜ್ಯದ ಹಲವೆಡೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆ ಹಿಡಿದು ಪ್ರತಿಭಟನೆ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿ ಪೊಲೀಸರು ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಮಧ್ಯಾಹ್ನ 12 ರಿಂದ 3ರ ವರೆಗೆ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡುವ ಪ್ರತಿಭಟನಾ ನಿರತರಿಗೆ ಪೊಲೀಸರು ಷರತ್ತುಗಳನ್ನು ವಿಧಿಸಿದ್ದು, ಪ್ರತಿಭಟನೆ ವೇಳೆ ಪ್ರಚೋದನಕಾರಿ ಹೇಳಿಕೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ಎಚ್ಚರವಹಿಸಿ ಪ್ರತಿಭಟನೆ ಮಾಡಬೇಕು. ಧರಣಿ ವೇಳೆ ಸಾರ್ವಜನಿಕರಿಗೆ ತೊಂದರೆ ನೀಡುವಂತಿಲ್ಲ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತಿಲ್ಲ. ಕಡ್ಡಾಯವಾಗಿ ಪೊಲೀಸರ ಸಲಹೆ ಮತ್ತು ಸೂಚನೆಗಳನ್ನು ಪಾಲಿಸಬೇಕು ಎಂದು ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ಜೊತೆಗೆ ಒಂದು ವೇಳೆ ಸಾರ್ವಜನಿಕ ಆಸ್ತಿಗೆ ಹಾನಿಯಾದರೇ ಆಯಾ ಪ್ರತಿಭಟನೆಯ ಆಯೋಜಕರೇ ಅದಕ್ಕೆ ಹೊಣೆಯಾಗಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಪ್ರಚೋದನಾಕಾರಿ ಹೇಳಿಕೆ ನೀಡುವವರ ಮೇಲೆ ನಿಗಾ ವಹಿಸಲಿರುವ ಪೊಲೀಸರು, ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೇ ಕೂಡಲೇ ವಶಕ್ಕೆ ಪಡೆಯುತ್ತಾರೆ. ಅಲ್ಲದೇ ಪ್ರತಿಭಟನೆಯ ಇಂಚಿಂಚು ಸನ್ನಿವೇಶವನ್ನು ವಿಡಿಯೋ ರೆಕಾರ್ಡ್ ಮಾಡಲಿದ್ದಾರೆ. ರೈತರು ಶಾಂತಿಯುತವಾಗಿ ರಸ್ತೆ ತಡೆ ನಡೆಸಲು ತೀರ್ಮಾನಿಸಿದ್ದರೂ ಪೊಲೀಸರು ಈ ರೀತಿ ಮಾರ್ಗಸೂಚಿ ಹೊರಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.