ಮೂಲ ಇಂಗ್ಲಿಷ್: ಸುಧೀಂದ್ರ ಕುಲಕರ್ಣಿ
(ಕೃಪೆ: scroll.in ಜೂನ್ 17, 2021)
ಇದೇ ಜುಲೈ 1ರಿಂದ ಚೈನಾ ಕಮ್ಯುನಿಸ್ಟ್ ಪಕ್ಷವು ಶತಮಾನೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಸುಧೀಂದ್ರ ಕುಲಕರ್ಣಿ ಅವರು scroll.in ನಲ್ಲಿ ದೀರ್ಘ ಲೇಖನ ಬರೆದಿದ್ದಾರೆ. ಅದರಲ್ಲಿ ಅವರು ವಿವರವಾಗಿ ಅದರ ಸಾಧನೆಗಳ ಕುರಿತು ಬರೆದಿದ್ದಾರೆ. “ಭಾರತದ ‘ಚೈನಾ ಬಹಿಷ್ಕರಿಸಿ’ ಬ್ರಿಗೇಡ್ ಕೂಡ ನಮ್ಮ ನೆರೆಹೊರೆಯ ದೇಶವು ಕಳೆದ ಕೆಲವು ದಶಕಗಳಲ್ಲಿ ಸಾಧಿಸಿದ ಅಸಾಧಾರಣ ಪ್ರಗತಿಯನ್ನು ಒಪ್ಪಲೇಬೇಕು.” ಎಂಬುದು ಅವರ ಒಟ್ಟು ಅಭಿಪ್ರಾಯ. ಇದನ್ನು ಸರಣಿ ಲೇಖನವಾಗಿ ಹಲವು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ಮೊದಲ ಎರಡು ಕಂತುಗಳಲ್ಲಿ, ಭಾರತದಲ್ಲಿ ಬರಿಯ ಘೋಷಣೆಗಳಾಗಿ ಉಳಿದಿರುವ, ಚೈನಾ ನಿಜವಾಗಿಯೂ ಸಾಧಿಸಿರುವ ‘ಆತ್ಮನಿರ್ಭರತೆ’ ಮತ್ತು ‘ಗರೀಬಿ ಹಟಾವೋ’ ಹಾಗೂ ವಿಜ್ಞಾನ-ತಂತ್ರಜ್ಞಾನ, ಪರಿಸರ-ಸ್ನೇಹಿ ಅಭಿವೃದ್ಧಿಯ ಸಾಧನೆ ಕುರಿತು ಬರೆದಿದ್ದಾರೆ. ಭಾರತದ ರಾಜಕೀಯ ಮುಖಂಡರು, ಕಾರ್ಯಕರ್ತರು ಚೈನಾ ಕಮ್ಯುನಿಸ್ಟ್ ಪಕ್ಷದಿಂದ ಏನನ್ನು ಕಲಿಯಬಹುದು ಎಂಬುದರ ಕುರಿತು ಬರೆದಿದ್ದಾರೆ. ಮೂರನೆಯ ಕಂತಿನಲ್ಲಿ ಎರಡು ಪಾಠಗಳ ಕುರಿತು ಬರೆದರೆ, ಕೊನೆಯ ಕಂತಾದ ಭಾಗ-4ರಲ್ಲಿ ಉಳಿದ 3 ಪಾಠಗಳ ಕುರಿತು ಓದಿ.
ಮೂರನೆಯದು: ಭಾರತದಲ್ಲಿನ ಸಾಮಾನ್ಯ ಗ್ರಹಿಕೆಗೆ ತದ್ವಿರುದ್ಧವಾಗಿ, ಸಿ.ಪಿ.ಸಿ. (ಚೀನಿ ಕಮ್ಯುನಿಸ್ಟ್ ಪಕ್ಷ)ವು ಹಠಮಾರಿತನದ ಹಾಗೂ ಕಟ್ಟುನಿಟ್ಟಿನ ಕೂಟವಲ್ಲ. ಚೈನಾದ ಪ್ರಾಚೀನ ದರ್ಶನದ ಅಧ್ಯಯನ ಹಾಗೂ ಆತ್ಮಸುಧಾರಣೆಗೆ ಅನುಸಾರವಾಗಿ, ಸಿಪಿಸಿಯು ತಾನು ಬದಲಾದ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಮಾರ್ಕ್ಸ್‌ವಾದಿ-ಲೆನಿನ್‌ವಾದಿ, ಮಾವೋವಾದಿ ಸೈದ್ಧಾಂತಿಕ ಶಾಸ್ತ್ರಾಂಧತೆಯನ್ನು ದೂರವಿಟ್ಟು, “ಚೈನಾದ ವಿಶಿಷ್ಟ ಗುಣಲಕ್ಷಣಗಳೊಂದಿಗೆ ಸಮಾಜವಾದ”ವನ್ನು ಬೆಳೆಸುವಲ್ಲಿನ ತಪ್ಪುಗಳನ್ನು ತಿದ್ದಿಕೊಳ್ಳಲು ಅದು ನಿರಂತರವಾಗಿ ಮಾರ್ಗಗಳನ್ನು ಪ್ರಯೋಗ ಮಾಡುತ್ತಿದೆ. ಈ ನಿಟ್ಟಿನಲ್ಲಿ, ಅದು ಹೆಚ್ಚೆಚ್ಚಾಗಿ ಪ್ರಾಚೀನ ಚೈನಾದ ಪೌರಾಣಿಕ ಹಾಗೂ ದಾರ್ಶನಿಕ-ಆಧ್ಯಾತ್ಮಿಕ ಪರಂಪರೆಗಳಿಂದ ಸ್ಪೂರ್ತಿ ಪಡೆಯುತ್ತಿದೆ.
1991ರಲ್ಲಿ ಸೋವಿಯತ್ ಯೂನಿಯನ್ನಿನಲ್ಲಿ ಕಮ್ಯುನಿಸ್ಟ್ ಆಡಳಿತದ ಕುಸಿತ ಹಾಗೂ ಒಂದು ದೇಶವಾಗಿ ಅದರ ವಿಘಟನೆಯಿಂದ ಕಲಿತು, ಒಂದು ಬಲಿಷ್ಠ ಆರ್ಥಿಕತೆ ಹಾಗೂ ಅದರ ಜನರ ಜೀವನೋಪಾಯದ ಮಟ್ಟವನ್ನು ಎತ್ತರಿಸುವ ಸಲುವಾಗಿ ಅದು ರಾಜಕೀಯ ಸುಧಾರಣೆಯ ಬದಲು ಸ್ಥಿರತೆ ಹಾಗೂ ಆರ್ಥಿಕ ಸುಧಾರಣೆಗಳತ್ತ ಹೆಚ್ಚು ಗಮನ ಹರಿಸಿತು. ಇದನ್ನು ಉಪೇಕ್ಷೆ ಮಾಡಿದ್ದರೆ, ಕಮ್ಯುನಿಸ್ಟ್ ವಿರೋಧಿ ಬಾಹ್ಯ ಶಕ್ತಿಗಳು ಬೀಜಿಂಗ್‌ನಲ್ಲಿ ಆಡಳಿತ ಬದಲಾವಣೆಗೆ ಪಿತೂರಿ ಮಾಡುತ್ತಿದ್ದರು. (ಟ್ರಂಪ್‌ನ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ನಂಥವರ ಇತ್ತೀಚಿನ ಉದ್ದಟತನದ ಮಾತನ್ನು ನೆನಪಿಸಿಕೊಳ್ಳಿ.) ಸ್ಥಿರತೆಯ ಬಗೆಗಿನ ಸಿಪಿಸಿಯ ಗೀಳಿನಂತಹ ಬೆನ್ನಟ್ಟಿ ಹೋಗುವ ಛಲದಿಂದಾಗಿ ನಾಗರಿಕರ ವೈಯಕ್ತಿಕ ಹಕ್ಕುಗಳು ಹಾಗೂ ಸ್ವಾತಂತ್ರ್ಯದ ಮೇಲಿನ ತೀವ್ರ ನಿರ್ಬಂಧಗಳಂತಹ ದುಬಾರಿ ಬೆಲೆಯನ್ನು ನಿಸ್ಸಂಶಯವಾಗಿಯೂ ತೆರಬೇಕಾಯಿತು. ಆದಾಗ್ಯೂ, ಸಾಮೂಹಿಕವಾಗಿ, ಚೈನಾದ ಸಮಾಜವು ಪ್ರಗತಿ ಸಾಧಿಸಿದೆ.
ದೇಶದೊಳಗಿನ ಸಮಸ್ಯೆಗಳಿಗೆ ಸಿಪಿಸಿ ಎಷ್ಟು ಸಂವೇದಿಯಾಗಿತ್ತು ಎನ್ನುವುದಕ್ಕೆ ಇಲ್ಲಿ ಮತ್ತೊಂದು ಉದಾಹರಣೆ ಇದೆ. ಬೇಗ ಶ್ರೀಮಂತರಾಗುವ ಹುಚ್ಚು ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾದಾಗ, ಈ ಪಿಡುಗನ್ನು ದೃಢವಾಗಿ ನಿವಾರಿಸದಿದ್ದರೆ ದೇಶದಲ್ಲಿ ಕಮ್ಯುನಿಸ್ಟ್ ಆಡಳಿತ ಅಂತ್ಯಗೊಳ್ಳುತ್ತದೆ ಎಂದು ಷಿ ಎಚ್ಚರಿಸಿದರು. ಅವರು ಕಟುವಾದ ಭ್ರಷ್ಟಾಚಾರ ವಿರೋಧಿ ಕ್ರಮ ಕೈಗೊಂಡರು, ಅದು ಸಾವಿರಾರು ಜನರ ಬಂಧನಕ್ಕೆ ಕಾರಣವಾಯಿತು – “ನೊಣಗಳು” (ಕೆಳ ಹಾಗೂ ಮಧ್ಯ ಹಂತದ ಸಿಬ್ಬಂದಿಗಳು) ಮಾತ್ರವಲ್ಲ, “ಹುಲಿಗಳು”(ಪಕ್ಷದ ಹಾಗೂ ಮಿಲಿಟರಿಯ ಉನ್ನತ ಅಧಿಕಾರಿಗಳು) ಕೂಡ. ಲಂಚ ಸಂಸ್ಕೃತಿ ಕೊನೆಯಾಗಲಿಲ್ಲ, ಆದರೆ ಹಿಡಿದು ಶಿಕ್ಷಿಸುತ್ತಾರೆ ಎಂಬ ಭಯ ಖಂಡಿತವಾಗಿಯೂ ಹೆಚ್ಚಿದೆ. ಭಾರತದಲ್ಲಿ, ಕಮ್ಯುನಿಸ್ಟ್ ಪಕ್ಷಗಳನ್ನು ಹೊರತುಪಡಿಸಿ(ಈಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ರೀತಿಯಲ್ಲಿ ಅಪ್ರಸ್ತುತರಾಗುತ್ತಿರುವ) ಬೇರೆ ಯಾವ ಪಕ್ಷಗಳೂ ತಮ್ಮ ಭ್ರಷ್ಟ ಮುಖಂಡರುಗಳನ್ನು ಹಾಗೂ ಕಾರ್ಯಕರ್ತರನ್ನು ಶಿಕ್ಷಿಸುವ ಪರಿಣಾಮಕಾರಿ ಆಂತರಿಕ ವಿಧಾನಗಳನ್ನು ಅಳವಡಿಸಿಕೊಂಡಿಲ್ಲ.
ನಾಲ್ಕನೆಯದು: ಸಿಪಿಸಿಯು ತನ್ನ ಬಹುದೊಡ್ಡ ಸಾಂಸ್ಥಿಕರಿಸಿದ ವ್ಯವಸ್ಥೆಯಾದ ಪಕ್ಷದ ಶಾಲೆಗಳ ಮೂಲಕ, ತನ್ನ ಕಾರ್ಯಕರ್ತರ ಅಧ್ಯಯನ ಹಾಗೂ ತರಬೇತಿಗೆ ಬೇರೆಲ್ಲಾ ದೇಶಗಳ ಪಕ್ಷಗಳಿಗಿಂತ ಹೆಚ್ಚಿನ ಮಹತ್ವ ನೀಡುತ್ತದೆ. ಪಕ್ಷದ ಕೇಂದ್ರ ಶಾಲೆಯ ಮುಖ್ಯಸ್ಥನಾಗಿ ಒಮ್ಮೆ ಇದ್ದ ಕ್ಸಿ ಪಿಂಗ್ “ಕಲಿಕೆಯು ನಾಗರೀಕತೆಯ ಬಳುವಳಿಯನ್ನು ಪಡೆಯುವ ದಾರಿ, ಬದುಕಿನ ಬೆಳವಣಿಗೆಯ ಏಣಿ, ಸಿಪಿಸಿಯ ಬಲವರ್ಧನೆಗೆ ಬುನಾದಿ, ಮತ್ತು ದೇಶದ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದು.” ಎಂದಿದ್ದರು. ನಿಜವಾಗಿ, ಸಿಪಿಸಿಯ ಉನ್ನತ ಹಂತದಲ್ಲಿ ಮತ್ತು ಬೀಜಿಂಗ್ ಹಾಗೂ ಪ್ರಾಂತಗಳಲ್ಲಿನ ಸರ್ಕಾರಗಳಲ್ಲಿ ಕೂಡ ನೀತಿ ನಿರ್ಧಾರ ಹಾಗೂ ಧೋರಣೆ ರೂಪಿಸುವುದು, ಭಾರತದಲ್ಲಿನ ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗಿಂತ ಹೆಚ್ಚು ಸಮಾಲೋಚನೆ ಹಾಗೂ ತಿಳುವಳಿಕೆಯ ಆಧಾರದಲ್ಲಿ ನಡೆಯುತ್ತದೆ. ಸಿಪಿಸಿ ಪೋಲಿಟ್ ಬ್ಯೂರೋವು ನಿರ್ದಿಷ್ಟ ವಿಷಯಗಳ ಬಗ್ಗೆ ಉನ್ನತ ಹಂತದ ವಿದ್ವಾಂಸಗಳನ್ನು ಆಹ್ವಾನಿಸಿ ನಿಯಮಿತವಾಗಿ “ಅಧ್ಯಯನ ಶಿಬಿರಗಳನ್ನು” ನಡೆಸುತ್ತದೆ. ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು, ಚಿಂತಕರ ಚಾವಡಿಗಳು ಹಾಗೂ ಪರಿಣಿತರಿಗೆ ಚೈನಾದ ಆಡಳಿತ ವ್ಯವಸ್ಥೆಯಲ್ಲಿ ನಮಗಿಂತ ಹೆಚ್ಚು ಮನ್ನಣೆ ನೀಡಲಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಹೊರಗಿನಿಂದ ವಿದ್ವತ್‌ಪೂರ್ಣ ಹಾಗೂ ವೃತ್ತಿಪರ ಸಲಹೆ ಪಡೆಯುವ ವಿಚಾರದಲ್ಲಿ ಭಾರತದಲ್ಲಿನ ರಾಜಕೀಯ ಪಕ್ಷಗಳು ಬಹುಮಟ್ಟಿಗೆ ಕಿವಿಗೊಡುವುದಿಲ್ಲ.
ಭಾರತೀಯ ಜನತಾ ಪಕ್ಷದ ಉನ್ನತ ಹಂತದವರ ಜತೆಗಿನ 16 ವರ್ಷಗಳ ನನ್ನ ದೀರ್ಘ ಹಾಗೂ ಹತ್ತಿರದ ಒಡನಾಟದಲ್ಲಿ, ನಾನು ಕಂಡುಕೊಂಡಿದ್ದು ಕಿಸಾನ್ ಮೋರ್ಚಾ, ಮಹಿಳಾ ಮೋರ್ಚಾ, ಎಸ್.ಸಿ. ಮತ್ತು ಎಸ್.ಟಿ ಮೋರ್ಚಾ, ಅಲ್ಪಸಂಖ್ಯಾತರ ಮೋರ್ಚಾ ಮತ್ತು ವೈದ್ಯರ, ವಕೀಲರ, ವ್ಯಾಪಾರಿಗಳ, ಸಣ್ಣ ಕೈಗಾರಿಕೋದ್ಯಮಿಗಳ ಮುಂತಾದ ಹಲವಾರು ಕೂಟಗಳು ಹಾಗೂ ವಿಭಾಗಗಳೆಲ್ಲಾ ಬಹುತೇಕ “ಹೆಸರಿಗಷ್ಟೆ”(ನಾಮ್ ಕೆ ವಾಸ್ತೆ) – ಸಂಘಟನೆಯಲ್ಲಿ ಪ್ರಮುಖ ಸ್ಥಾನಗಳಿಗಾಗಿ ಆಸೆಪಡುವ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲಷ್ಟೆ ಅವು. ಕೇಂದ್ರ ಅಥವಾ ರಾಜ್ಯಗಳಲ್ಲಿರುವ ಪಕ್ಷದ್ದೇ ಸರ್ಕಾರಗಳು ಅವುಗಳಿಂದ ಯಾವುದೇ ಉಪಯುಕ್ತ ನೀತಿ ಹಾಗೂ ಸಲಹೆಗಳನ್ನು ಕೇಳುವುದು ಅಥವಾ ಪಡೆಯುವುದು ವಿರಳವೇ ಸರಿ. ಈ ವಿಚಾರದಲ್ಲಿ ಕಾಂಗ್ರೆಸ್ಸಿನ ಕಾರ್ಯನಿರ್ವಹಣೆಯೇನು ಇದಕ್ಕಿಂತ ಉತ್ತಮವಿಲ್ಲ.
ಐದನೆಯದು: ಅದು ಸಮಾಜವಾದಿ ಹಾದಿಯಲ್ಲಿ ದೃಢವಾಗಿ ಸಾಗುತ್ತಿರುವುದರಿಂದಲೇ ಚೈನಾ ಈಗಿರುವ ಸ್ಥಿತಿಯನ್ನು ತಲುಪಲು ಸಾಧ್ಯವಾಗಿದೆ – ಆ ಸಮಾಜವಾದಿ ವ್ಯವಸ್ಥೆಯಲ್ಲಿ ಮೂಲಭೂತವಾಗಿ “ಜನರು ಮೊದಲು” ಎನ್ನುವುದನ್ನು ಪಾಲಿಸಲಾಗುತ್ತದೆ. 1978 ರ ನಂತರ ಡೆಂಗ್ ಅವರು ದೇಶದ ಆರ್ಥಿಕ ಬೆಳವಣಿಗೆಯ ಹಾದಿಯನ್ನು ಆಮೂಲಾಗ್ರವಾಗಿ ಬದಲಾಯಿಸಿದಾಗ, ವ್ಯಾವಹಾರಿಕ ದೃಷ್ಟಿಯಿಂದ ಅವರು ಕೆಲವು ಬಂಡವಾಳಶಾಹಿ(ಮಾರುಕಟ್ಟೆ ಪರ) ಸುಧಾರಣೆಗಳನ್ನು ಆಚರಣೆಗೆ ತಂದರು ಮತ್ತು ಆರ್ಥಿಕತೆಯನ್ನು ಪಾಶ್ಚಿಮಾತ್ಯ ಬಂಡವಾಳಶಾಹಿ ದೇಶಗಳೊಂದಿಗೆ ಸಹಕಾರಕ್ಕಾಗಿ ತೆರೆದಿಟ್ಟರು. ಆದರೆ ಇದನ್ನು “ಚೈನಾದ ಗುಣಲಕ್ಷಣಗಳ ಸಮಾಜವಾದ”ದ ಗುರಿ ಹಾಗೂ ಹಾದಿಯನ್ನು ಬಿಟ್ಟುಕೊಡದೆ ಜಾರಿಗೆ ತಂದರು. ಈ ಜನಪ್ರಿಯ ಪದಗುಚ್ಛವು ನ್ಯಾಯಬದ್ಧ ಹಾಗೂ ಸಮಾನತಾ ಸಿದ್ಧಾಂತದ ವಿಶಾಲ ಆದರ್ಶಗಳನ್ನು ಒಂದಾಗಿಸುತ್ತದೆ ಮತ್ತು ಚೈನಾ ಜನತೆಯ ರಾಷ್ಟ್ರೀಯ ಆತ್ಮಗೌರವದ ನೆಲದಲ್ಲಿ ಬೇರೂರುವಂತೆ ಮಾಡುತ್ತದೆ. ದೇಶವನ್ನು ಸದೃಢಗೊಳಿಸಲು ಮತ್ತು ನಿರಂತರವಾಗಿ ಸಾಮಾನ್ಯ ಜನರ ಜೀವನದ ಪರಿಸ್ಥಿತಿಯನ್ನು ಉತ್ತಮಪಡಿಸಲು ಸಿಪಿಸಿಯು ತನ್ನ ಆರ್ಥಿಕ ಸುಧಾರಣೆಗಳನ್ನು ಬಳಸಿತು. ಈ ಬದ್ಧತೆ ಹಾಗೂ ಯಶಸ್ಸು ಇಲ್ಲದೇ ಹೋಗಿದ್ದರೆ, ಅದು ದೇಶವನ್ನಾಳುವ ಔಚಿತ್ಯವನ್ನೇ ಎಂದೋ ಕಳೆದುಕೊಂಡುಬಿಡುತ್ತಿತ್ತು.
ಶೋಚನೀಯವೆಂದರೆ, ಭಾರತದಲ್ಲಿ ನಾವು ನಮ್ಮದೇ ಆದ “ಭಾರತೀಯ ಗುಣಲಕ್ಷಣಗಳೊಂದಿಗೆ ಸಮಾಜವಾದ” ಎಂಬ ಹಾದಿಯನ್ನು ನಿರೂಪಿಸುವಲ್ಲಿ ಸೋತಿದ್ದೇವೆ. ನಮ್ಮ ಭಾರತೀಯ ಸಂವಿಧಾನದ ಪೀಠಿಕೆಯಲ್ಲೇ ಸಮಾಜವಾದ ಎಂಬ ತತ್ವವನ್ನು ಅಳವಡಿಸಿಕೊಂಡಿದ್ದಷ್ಟೇ ಅಲ್ಲ, ಕಾಂಗ್ರೆಸ್, ಬಿಜೆಪಿ(ಹೌದು ಬಿಜೆಪಿ ಕೂಡ) ಮತ್ತಿತರ ಪಕ್ಷಗಳ ಸಂವಿಧಾನಗಳಲ್ಲಿ ಕೂಡ ಸಮಾಜವಾದ ಸ್ಥಾನ ಪಡೆದಿರುವಾಗಲೂ ಪರಿಸ್ಥಿತಿ ಹೀಗಿದೆ. ವಾಸ್ತವದಲ್ಲಿ, ಭಾರತದ ರಾಜಕೀಯ ಹಾಗೂ ಬೌದ್ಧಿಕ ವರ್ಗದವರು ಬಹಳ ಹಿಂದೆಯೇ ಸಮಾಜವಾದವನ್ನು ದೂರವಿಟ್ಟಿದ್ದಾರೆ – ಮತ್ತಾವುದೇ ಉತ್ತಮವಾದುದನ್ನು ಅದರ ಬದಲು ಸೂಚಿಸಿಲ್ಲ ಕೂಡ. ನಮ್ಮ ಅಭಿವೃದ್ಧಿ ಪಥವು, ಆದ್ದರಿಂದ, ಯಾವುದೇ ಸ್ಪೂರ್ತಿದಾಯಕ ಯೋಜನಾ ಗುರಿ ಹಾಗೂ ಅಲ್ಲಿ ತಲುಪುವ ಸ್ಪಷ್ಟ ದಾರಿಯಿಲ್ಲದೇ ಸಾಗುತ್ತಿದೆ.
ಅದಕ್ಕೂ ಹೆಚ್ಚಿನದಾಗಿ, ಇತ್ತೀಚಿನ ವರ್ಷಗಳಲ್ಲಿ ನಾವು ನೋಡುತ್ತಿರುವಂತೆ, ಒಂದು ದೇಶವಾಗಿ ನಮ್ಮ ಅಸ್ಮಿತೆಯ ಪ್ರಜ್ಞೆಗೇ ಧಕ್ಕೆ ಬರುವಂತಹ ಕೆಲಸವನ್ನು ಹಿಂದುತ್ವವಾದಿಗಳು ಮಾಡುತ್ತಿದ್ದಾರೆ. ಯಾವುದೇ ಪ್ರಮಾಣದ ಜನಕಲ್ಯಾಣ ಕೆಲಸಗಳಾಗುತ್ತಿದ್ದರೂ, ಅವೆಲ್ಲಾ ಕೇವಲ ನಮ್ಮ ರಾಜಕೀಯ ವ್ಯವಸ್ಥೆಯ ಅವ್ಯವಸ್ಥಿತ, ತಾತ್ಪೂರ್ತಿಕ, ಹೋಳಾಗಿರುವ ಹಾಗೂ ವಿಚ್ಛಿನ್ನ ಪ್ರಯತ್ನಗಳ ಉಪಉತ್ಪನ್ನಗಳಷ್ಟೆ. ಏಕೆಂದರೆ, ನಾವು ಭಾರತೀಯರು ಭಾರತದ ಅಗಾಧ ಅಂತಃಶಕ್ತಿ ಹಾಗೂ ಅದರ ಸಮಾಧಾನಕರವಲ್ಲದ ಸಾಧನೆಯ ನಡುವಣ ಅಂತರವನ್ನು ತ್ವರಿತಗತಿಯಲ್ಲಿ ತುಂಬಬಹುದಾಗಿತ್ತು, ಆದರೆ ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕುಂದಿಲ್ಲದೇ ಕಾಪಾಡಿಕೊಳ್ಳುತ್ತ ಮೂಲಭೂತ ಹಾಗೂ ಆತ್ಮವಿಶ್ವಾಸದ ರಾಜಕೀಯ ಮತ್ತು ಆಡಳಿತಾತ್ಮಕ ಸುಧಾರಣೆಗಳಿಗಾಗಿನ ಅವಶ್ಯಕತೆಯನ್ನು ಬಹಳ ಕಾಲ ಕಡೆಗಣಿಸಿದ್ದೇವೆ.
ಆದುದರಿಂದ, ಭಾರತೀಯ ರಾಜಕಾರಣಿಗಳು ಮತ್ತು ಜನರು ಸಿಪಿಸಿಯ ನೂರು ವರ್ಷಗಳ ಪಯಣವನ್ನು ಅಧ್ಯಯನ ಮಾಡಬೇಕಾಗಿರುವುದು ಅಗತ್ಯ ಹಾಗೂ ಉಪಯುಕ್ತ. ಚೈನಾದ ರಾಜಕೀಯ ವ್ಯವಸ್ಥೆ ಪರಿಪೂರ್ಣವಾದುದು ಅಂತಲ್ಲ – ಅದು ಭವಿಷ್ಯದಲ್ಲಿ ಅದರದ್ದೇ ಜನಗಳ ಪ್ರಜಾಸತ್ತಾತ್ಮಕ ಹಂಬಲಕ್ಕೆ ಪ್ರತಿಸ್ಪಂದಿಸಿ ಖಂಡಿತವಾಗಿಯೂ ಬದಲಾಗುತ್ತದೆ. ಭಾರತವು ಚೈನಾದ ರಾಜಕೀಯ ವ್ಯವಸ್ಥೆಯನ್ನು ಅನುಸರಿಸಬೇಕು ಅಥವಾ ಅನುಸರಿಸಬಹುದು ಅಂತಲೂ ಅಲ್ಲ. ಏಶಿಯಾದ ಈ ಎರಡು ಮಹಾನ್ ದೇಶಗಳ ಚಾರಿತ್ರಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಾಸ್ತವಗಳು ಭಿನ್ನವಾಗಿವೆ. ಅದಕ್ಕಿಂತ ಹೆಚ್ಚಾಗಿ, ಸಿಪಿಸಿಯ ಸಾಧನೆಗಳ ಹಾಗೂ ವೈಫಲ್ಯಗಳ ಅಧ್ಯಯನವು ಭಾರತದ ಅಂತಃಶಕ್ತಿ ಎಲ್ಲಿದೆ ಮತ್ತು, ಅದಕ್ಕೂ ಮುಖ್ಯವಾಗಿ, ಚೈನಾದ “ಬೆಟ್ಟ ಕದಲಿಸುವ” ಮತ್ತು “ಆಕಾಶವನ್ನು ದುರಸ್ತಿಮಾಡುವ” ಅಂತಹ ಸಾಧನೆಯ ಮೂಲಕ ನಾವು ಏನು ಪಾಠಗಳನ್ನು ಕಲಿಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯವಾಗಬಹುದು.
ಅನುಕ್ರಮವಾಗಿ, ಸಿಪಿಸಿ ಕೂಡ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಹಾಗೂ ಅಭಿವೃದ್ಧಿ ಪಥದ ಹಲವಾರು ಶಕ್ತಿ ಸಾಮರ್ಥ್ಯಗಳನ್ನು ಅಧ್ಯಯನ ಮಾಡಬೇಕು ಮತ್ತು ಅಳವಡಿಸಿಕೊಳ್ಳಬೇಕು. ಅದು ಚೈನಾದಲ್ಲಿ ಭಾರತದಲ್ಲಿಯಂತೆ ಉಗ್ರ-ರಾಷ್ಟ್ರೀಯವಾದ ಮೇಲೆದ್ದು ಬರದಂತೆ ತಡೆಹಿಡಿಯಬೇಕು, ಅದು ಆಂತರಿಕವಾಗಿ ಬಿರುಕುಗಳನ್ನು ಸೃಷ್ಟಿಮಾಡುತ್ತದೆ ಹಾಗೂ ನರೆಹೊರೆಯ ದೇಶಗಳಲ್ಲಿ ಗಂಭೀರ ಆತಂಕಗಳನ್ನೂ ಸೃಷ್ಟಿಮಾಡುತ್ತದೆ. ಜಗತ್ತಿನಲ್ಲಿರುವ ನಮ್ಮ ಈ ಎರಡು ದೇಶಗಳು ಮಾತ್ರ ಪ್ರತಿಯೊಂದೂ ಒಂದು ಶತಕೋಟಿ(ಬಿಲಿಯನ್)ಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಗಹನವಾದ ನಾಗರೀಕತೆಯ ಲೋಕಜ್ಞಾನವನ್ನು ವರವಾಗಿ ಪಡೆದಿವೆ. ಆದ್ದರಿಂದ, ಪರಸ್ಪರ ಕಲಿಕೆ ಹಾಗೂ ಪರಸ್ಪರ ಸಹಕಾರದೊಂದಿಗೆ, ನಾವಿಬ್ಬರೂ ಉತ್ತಮಪಡಿಸಿಕೊಳ್ಳಬಹುದು ಮತ್ತು ಜತೆಜತೆಯಾಗಿ ಎಲ್ಲರಿಗಾಗಿ ಉತ್ತಮ ಜಗತ್ತೊಂದನ್ನು ಸೃಷ್ಟಿಸುವ ಸಮಾನ ಹೊಣೆಗಾರಿಕೆಯನ್ನು ನಿರ್ವಹಿಸಲು ಶ್ರಮಿಸಬಹುದು.
ಸುಧೀಂದ್ರ ಕುಲಕರ್ಣಿಯವರು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ನವ ದಕ್ಷಿಣ ಏಶಿಯಾಕ್ಕಾಗಿ ವೇದಿಕೆಯ ಸ್ಥಾಪಕರು. ಭಾರತ-ಪಾಕಿಸ್ತಾನ-ಚೈನಾ ಸಹಕಾರಕ್ಕಾಗಿ ಶ್ರಮಿಸುತ್ತಿರುವ ವೇದಿಕೆಯದು. ಅವರ ಇಮೇಲ್ ವಿಳಾಸ: [email protected] ಮತ್ತು ಟ್ವಿಟರ್ ಹ್ಯಾಂಡಲ್ @SudheenKulkarni ಅವುಗಳನ್ನು ಬಳಸಿ ಈ ಮೇಲಿನ ಅವರ ಪ್ರಬಂಧ ಕುರಿತ ವ್ಯಾಖ್ಯಾನಗಳನ್ನು ಅವರು ಸ್ವಾಗತಿಸುತ್ತಾರೆ.
ಅನುವಾದ : ಟಿ.ಸುರೇಂದ್ರ ರಾವ್