ಚೈನಾದ ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವ: ಭಾರತೀಯ ಮುಖಂಡರು ಅದರ ಯಶಸ್ಸಿನಿಂದ ಕಲಿಯಬೇಕಾದ್ದು ಬಹಳ ಇದೆ: ಭಾಗ-2 -ಸುಧೀಂದ್ರ ಕುಲಕರ್ಣಿ

ಮೂಲ ಇಂಗ್ಲಿಷ್: ಸುಧೀಂದ್ರ ಕುಲಕರ್ಣಿ (ಕೃಪೆ: scroll.in ಜೂನ್ 17, 2021)
ಅನುವಾದ: ಟಿ.ಸುರೇಂದ್ರ ರಾವ್

ಇದೇ ಜುಲೈ 1ರಿಂದ ಚೈನಾ ಕಮ್ಯುನಿಸ್ಟ್ ಪಕ್ಷವು ಶತಮಾನೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಸುಧೀಂದ್ರ ಕುಲಕರ್ಣಿ ಅವರು scroll.in ನಲ್ಲಿ ದೀರ್ಘ ಲೇಖನ ಬರೆದಿದ್ದಾರೆ. ಅದರಲ್ಲಿ ಅವರು ವಿವರವಾಗಿ ಅದರ ಸಾಧನೆಗಳ ಕುರಿತು ಬರೆದಿದ್ದಾರೆ. “ಭಾರತದ ‘ಚೈನಾ ಬಹಿಷ್ಕರಿಸಿ’ ಬ್ರಿಗೇಡ್ ಕೂಡ ನಮ್ಮ ನೆರೆಹೊರೆಯ ದೇಶವು ಕಳೆದ ಕೆಲವು ದಶಕಗಳಲ್ಲಿ ಸಾಧಿಸಿದ ಅಸಾಧಾರಣ ಪ್ರಗತಿಯನ್ನು ಒಪ್ಪಲೇಬೇಕು.” ಎಂಬುದು ಅವರ ಒಟ್ಟು ಅಭಿಪ್ರಾಯ. ಇದನ್ನು ಸರಣಿ ಲೇಖನವಾಗಿ ಹಲವು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ಮೊದಲನೆಯ ಕಂತಿನಲ್ಲಿ, ಭಾರತದಲ್ಲಿ ಬರಿಯ ಘೋಷಣೆಗಳಾಗಿ ಉಳಿದಿರುವ, ಚೈನಾ ನಿಜವಾಗಿಯೂ ಸಾಧಿಸಿರುವ ‘ಆತ್ಮನಿರ್ಭರತೆ’ ಮತ್ತು ‘ಗರೀಬಿ ಹಟಾವೋ’ ಕುರಿತು ಬರೆದಿದ್ದಾರೆ. ಈಗ ಭಾಗ-2ನ್ನು ಓದಿ.

ಎರಡನೇ ಉದಾಹರಣೆ: ಆರ್ಥಿಕ ಬೆಳವಣಿಗೆ, ರಾಷ್ಟ್ರೀಯ ಭದ್ರತೆ ಮತ್ತು ತಂತ್ರಜ್ಞಾನ ಪರಿಣತಿಯಲ್ಲಿ, ಚೈನಾವು ಭಾರತಕ್ಕಿಂತ ಬಹಳ ಹೆಚ್ಚು ಆತ್ಮನಿರ್ಭರ(ಸ್ವಾವಲಂಬಿ)ವಾಗಿದೆ. 1990ರಲ್ಲಿ ಚೈನಾವು ಮೊದಲ ಬಾರಿಗೆ “ಜಗತ್ತಿನ ಕಾರ್ಖಾನೆ” ಎಂದು ಹೊರಹೊಮ್ಮಿದಾಗ, ಭಾರತವನ್ನೂ ಒಳಗೊಂಡಂತೆ ಆಮದು ಮಾಡಿಕೊಳ್ಳುವ ದೇಶಗಳಲ್ಲಿನ ಸಾಮಾನ್ಯ ಟೀಕೆಗಳು “ಚೈನಾ ವಸ್ತುಗಳು, ಅಗ್ಗದ ವಸ್ತುಗಳು, ಕೆಟ್ಟ ವಸ್ತುಗಳು”(ಚೈನಾ ಮಾಲ್, ಸಸ್ತಾ ಮಾಲ್, ಖರಾಬ್ ಮಾಲ್) ಎಂದಿದ್ದವು. ಆದರೆ ಚೈನಾವು, ಕಳೆದ 10–15 ವರ್ಷಗಳಲ್ಲಿ, ಉತ್ಪಾದನಾ ಹಾಗೂ ಸೇವಾ ವಲಯದಲ್ಲಿ ಗುಣಮಟ್ಟದ ಏಣಿಯಲ್ಲಿ ಎಷ್ಟು ಬೇಗ ಮೇಲಕ್ಕೆ ಹೋಗಿದೆಯೆಂದರೆ, ಅದರ ರಫ್ತಿನ ಬಹು ಪಾಲು ಈಗ ಉನ್ನತ ತಂತ್ರಜ್ಞಾನ ಮತ್ತು ದುಡ್ಡಿಗೆ ಸಮನಾದ ಮೌಲ್ಯ ಹೊಂದಿವೆ. ಅದು ಈಗ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮತಿತ್ತರ ಭವಿಷ್ಯದ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ.

ಇದನ್ನು ಓದಿ: ಚೈನಾದ ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವ: ಭಾರತೀಯ ಮುಖಂಡರು ಅದರ ಯಶಸ್ಸಿನಿಂದ ಕಲಿಯಬೇಕಾದ್ದು ಬಹಳ ಇದೆ : ಸುಧೀಂದ್ರ ಕುಲಕರ್ಣಿ : ಭಾಗ-1

ಅಂತರಿಕ್ಷ ಸಂಶೋಧನೆಯಲ್ಲಿ ಚೈನಾವು ಭಾರತಕ್ಕಿಂತ ಬಹಳ ಮುಂದೆ ಸಾಗಿದೆ. ಮೇ ತಿಂಗಳಲ್ಲಿ, ಅದು ಮಂಗಳ ಗ್ರಹದ ಮೇಲೆ ಟಿಯನ್‌ವೆನ್-1ನ್ನು ರೋವರ್‌ನೊಂದಿಗೆ ಇಳಿಸಿ ಯಶಸ್ವಿಯಾಗಿ ಸಂಶೋಧನೆ ನಡೆಸಿದೆ. ಈ ತಿಂಗಳು ಅದು ಮೂವರು ಗಗನಯಾನಿಗಳನ್ನು ಮೂರು ತಿಂಗಳ ಸಂಶೋಧನೆಗಾಗಿ ಹೊಸ ಅಂತರಿಕ್ಷ ತಾಣಕ್ಕೆ ಕಳಿಸಲಿದೆ. ಅವರು ಅಲ್ಲಿ ಅಂತರಿಕ್ಷ ನಡಿಗೆಯನ್ನು ಕೈಗೊಳ್ಳಲಿದ್ದಾರೆ ಮತ್ತು ದುರಸ್ತಿ ಮತ್ತಿತರ ವೈಜ್ಞಾನಿಕ ಕಾರ್ಯಾಚರಣೆಯನ್ನು ನಡೆಸಲಿದ್ದಾರೆ. 2003 ರಿಂದ ಚೈನಾವು ಇಬ್ಬರು ಮಹಿಳೆಯರನ್ನೂ ಒಳಗೊಂಡಂತೆ 11 ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ಕಳಿಸಿದೆ. ಭಾರತವು ರಾಕೇಶ್ ಶರ್ಮಾರನ್ನು ಮಾತ್ರ, ಅದೂ ಸೋವಿಯೆತ್ ಅಂತರಿಕ್ಷ ನೌಕೆಯ ಮೇಲೆ 1984 ರಷ್ಟು ಹಿಂದೆ ಕಳಿಸಿದೆಯಷ್ಟೆ. ನಾಲ್ಕು ಭಾರತೀಯ ಗಗನಯಾನಿಗಳು ಪ್ರಸ್ತುತ ರಷ್ಯಾದಲ್ಲಿ ‘ಗಗನಯಾನ’ಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ. ಗಗನಯಾನ’ 2022 ಕ್ಕೆ ಮುಂಚೆ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಪ್ರಯುಕ್ತ ಅಂತರಿಕ್ಷಕ್ಕೆ ಹೋಗುವ ಗುರಿ ಹೊಂದಿದೆ.

ಚೈನಾವು ತನ್ನ ಬುಲೆಟ್ ರೈಲು, ಸುಂದರ ವಿಮಾನ ನಿಲ್ದಾಣಗಳು, ಗಗನಚುಂಬಿ ಕಟ್ಟಡಗಳು ಮತ್ತು ಚೈನಾ ನಿರ್ಮಿತ(ಮೇಡ್ ಇನ್ ಚೈನಾ) ರಫ್ತುಗಳಿಂದ ಮಾತ್ರ ಪ್ರಭಾವ ಬೀರುತ್ತಿಲ್ಲ. ಜಗದ್ವಿಖ್ಯಾತ ಅತ್ಯುತ್ತಮ ವಿಶ್ವವಿದ್ಯಾನಿಲಯಗಳು, ಮ್ಯೂಸಿಯಂಗಳು, ಕಲಾಗ್ಯಾಲರಿಗಳು, ಸಾರ್ವಜನಿಕ ಗ್ರಂಥಾಲಯಗಳು ಮತ್ತು ಕ್ರೀಡಾಂಗಣಗಳನ್ನು ಚೈನಾ ಹೊಂದಿದೆ. ಬಹಳ ಬೇಗ ಚೈನಾವು ತನ್ನ ವಿಶ್ವವಿದ್ಯಾನಿಲಯಗಳಲ್ಲಿ ಅಮೆರಿಕಾಕ್ಕಿಂತಲೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳನ್ನು ಹೊಂದಲಿದೆ. ಅದು ಸಂಸ್ಕೃತಿಯ ಮೇಲೆ ಭಾರತಕ್ಕಿಂತ ಬಹಳ ಹೆಚ್ಚು ವೆಚ್ಚ ಮಾಡುತ್ತಿದೆ. ನಮ್ಮ ಜಿಲ್ಲಾ ಕೇಂದ್ರಗಳಿಗೆ ಹೋಲಿಸಬಹುದಾದಂತಹ ಅದರ ಸಣ್ಣ ನಗರಗಳು ಕೂಡ ಸರಿಸಾಟಿಯಿಲ್ಲದ ಉತ್ತಮ ಗಾನಗೋಷ್ಠಿ ಮಂದಿರಗಳನ್ನು, ಉದ್ಯಾನಗಳನ್ನು, ಸಮುದಾಯ ಆರೈಕೆ ಕೇಂದ್ರಗಳನ್ನು ಮತ್ತು ಪ್ರವಾಸಿ ಆಕರ್ಷಣೆಗಳನ್ನು ಹೊಂದಿವೆ. 2019 ರಲ್ಲಿ (ಕೋವಿಡ್ ದಾಳಿ ಮಾಡುವ ಮುನ್ನ), ಭಾರತದ 1.8 ಕೋಟಿ ಮಿಲಿಯನ್‌ಗೆ ಹೋಲಿಸಿದರೆ, ಚೈನಾವು 6.6 ಕೋಟಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿದೆ ಎಂದರೆ ಅಚ್ಚರಿಪಡಬೇಕಿಲ್ಲ.

ಉದ್ಯಾನಗಳ ಬಗ್ಗೆ ಹೇಳುವುದಾದರೆ, ಇತ್ತೀಚಿನ ದಿ ನ್ಯೂಯಾರ್ಕ್ ಟೈಮ್ಸ್ ವರದಿಯಿಂದ ಕೆಲವು ನಿಬ್ಬೆರಗಾಗಿಸುವ ವಾಸ್ತವಾಂಶಗಳು ಇಲ್ಲಿವೆ. ಹೊಸ ಸಾರ್ವಜನಿಕ ಉದ್ಯಾನಗಳನ್ನು ನಿರ್ಮಿಸಲು ಚೈನಾವು ಪ್ರತಿವರ್ಷ 15 ಶತಕೋಟಿ(ಬಿಲಿಯನ್) ಡಾಲರ್ ವೆಚ್ಚ ಮಾಡುತ್ತಿದೆ. 2001 ರಿಂದ ಅದು ಪಟ್ಟಣ ಹಸಿರು ತಾಣಗಳನ್ನು ಐದು ಪಟ್ಟು ಹೆಚ್ಚಿಸುವ ಸಾಧನೆ ಮಾಡಿದೆ. ಶಾಂಘಾಯ್ ಕಳೆದ ವರ್ಷ 55 ಹೊಸ ಉದ್ಯಾನಗಳನ್ನು ನಿರ್ಮಿಸುವ ಮೂಲಕ ಆ ನಗರದ ಒಟ್ಟು ಉದ್ಯಾನಗಳ ಸಂಖ್ಯೆಯನ್ನು 406ಕ್ಕೆ ಏರಿಸಿದೆ, ಮತ್ತು ಮುಂದಿನ ಐದು ವರ್ಷಗಳಲ್ಲಿ ಅದು ಇನ್ನೂ 600 ಉದ್ಯಾನಗಳನ್ನು ನಿರ್ಮಿಸುವ ಯೋಜನೆ ಹೊಂದಿದೆ. “ಚೈನಾದ ಸರಾಸರಿ ನಗರಗಳು ಈಗ ಸಾರ್ವಜನಿಕರು ಬಳಸಬಹುದಾದ ತಲಾ ಹಸಿರು ತಾಣವು ನ್ಯೂಯಾರ್ಕಿನ ಜತೆ ಪೈಪೋಟಿ ನಡೆಸಿದೆ. ದೈಹಿಕ ಸಾಮರ್ಥ್ಯ ಪ್ರೋತ್ಸಾಹಿಸುವ ಸಲುವಾಗಿ ದೇಶದ ಸುತಮುತ್ತ್ತ 1,000 ಬೃಹತ್ ಉದ್ಯಾನಗಳನ್ನು ನಿರ್ಮಿಸಲು ಇತ್ತೀಚಿನ 14ನೇ ಪಂಚವಾರ್ಷಿಕ ಯೋಜನೆಯು ಕರೆ ನೀಡಿದೆ.” ಉದ್ಯಾನಗಳ, ಹಸಿರು ತಾಣಗಳ ಮತ್ತು ಅರಣ್ಯಗಳ ಪ್ರಾಮುಖ್ಯತೆಯನ್ನು ನಾವು ಗೇಲಿ ಮಾಡದಿರೋಣ. ಅವು ಅನ್ನ ಬಟ್ಟೆ ವಸತಿಯಷ್ಟೇ ಮಾನವ ಆರೋಗ್ಯ ಮತ್ತು ನೆಮ್ಮದಿಗೆ ಅವಶ್ಯಕವಾದುದು.

ಇದನ್ನು ಓದಿ: ‘ಬಡತನದ ವಿರುದ್ಧ ಚೀನಾದ ಪೂರ್ಣ ವಿಜಯ’

ಚೈನಾ ನಗರಗಳಲ್ಲಿ ಹೊಸದಾಗಿ ನಿರ್ಮಾಣವಾದ ಉದ್ಯಾನಗಳು ಹಳ್ಳ, ತೊರೆ ಹಾಗೂ ನದಿಗಳ ಬಳಿ ಇವೆ, ಮುಂಚೆ ಅವು ಅತ್ಯಂತ ಮಲಿನವಾಗಿದ್ದವು. ಅದಕ್ಕೆ ತದ್ವಿರುದ್ಧವಾಗಿ, ಶಾಂಘಾಯ್‌ನ ಸೋದರಿ ನಗರವಾದ ಮುಂಬಯಿನ ಮಿಥಿ ನದಿಯತ್ತ ನೋಡೋಣ. ಭಾರತದ ಆರ್ಥಿಕ ರಾಜಧಾನಿಯ ಹೃದಯ ಭಾಗದಲ್ಲಿರುವ ಅದು ತೆರೆದ ಚರಂಡಿಯಂತೆ ಹರಿಯುತ್ತಿದ್ದು ಅದರ ಇಕ್ಕೆಲಗಳಲ್ಲಿ ಕೊಳೆಗೇರಿಗಳು ರಾರಾಜಿಸುತ್ತಿವೆ. 2005ರಲ್ಲಿ ಅಲ್ಲಿ ಜಲಪ್ರವಾಹ ಉಂಟಾಗಿ 400 ಜನರನ್ನು ಬಲಿತೆಗೆದುಕೊಂಡಿದೆ. ಎಂಟು ವರ್ಷಗಳ ಹಿಂದೆ, ಮುಂಬಯಿನ ಅಬ್ಸರ್ವರ್ ರಿಸರ್ಚ್ ಫೌಂಡೇಷನ್‌ನ ನನ್ನ ಸಹೋದ್ಯೋಗಿಗಳು ಒಂದು ಸಮಗ್ರವಾದ ಅಧ್ಯಯನ ಮಾಡಿ ಹೇಗೆ ಮಿಥಿ ನದಿ ಹಾಗೂ ಅದರ ಸುತ್ತಮುತ್ತಲ ವಾತಾವರಣವನ್ನು ಪರಿವರ್ತನೆ ಮಾಡಬಹುದು ಎಂದು ತೋರಿಸಿದ್ದರು. ಅದರ ವರದಿಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು, ಸರ್ಕಾರ ಅದನ್ನು ಮೆಚ್ಚಿಕೊಂಡಿತ್ತು, ಆದರೆ ಮೇಲುಮೇಲಿನ ಆಲಂಕಾರಿಕ ಕ್ರಮಗಳ ಹೊರತಾಗಿ, ಅದರ ಅಸಹ್ಯಕರ ಕೊಳಕಿನ ವಾಸ್ತವಾಂಶವನ್ನು ಬದಲಾಯಿಸಲು ಏನನ್ನೂ ಮಾಡಲಿಲ್ಲ.

ತ್ವರಿತ ಆರ್ಥಿಕ ಬೆಳವಣಿಗೆಯ ಕಾರಣದಿಂದ ಉಂಟಾದ ತೀವ್ರತರದ ಕಲುಷಿತ ವಾತಾವರಣದ ನಂತರ, “ಕೈಗಾರಿಕಾ ನಾಗರೀಕತೆ”ಯಿಂದ “ಪರಿಸರ ನಾಗರೀಕತೆ”ಯತ್ತ ಪರಿವರ್ತನೆ ಎಂಬ ಷಿ ಅವರ ಕರೆಯ ಅನುಸಾರವಾಗಿ ತನ್ನ “ನೀಲಿ ಆಕಾಶ, ಹಸಿರು ಗುಡ್ಡಗಳು ಹಾಗು ನಿರ್ಮಲ ನದಿಗಳು” ವಾತಾವರಣವನ್ನು ಮರುಸೃಷ್ಟಿ ಮಾಡುವುದಕ್ಕೆ ಚೈನಾ ಆದ್ಯತೆ ನೀಡಿದೆ. ಈಗ ಆ ದೇಶವು ಒಪ್ಪಲಾಗದಂತಹ ಅತಿ ಹೆಚ್ಚು ಪ್ರಮಾಣದ ಕಲ್ಲಿದ್ದಲನ್ನು ಬಳಸುವ ಮೂಲಕ ಜಗತ್ತಿನ ಅತಿ ಹೆಚ್ಚು ವಾಯು ಮಾಲಿನ್ಯ ಉಂಟುಮಾಡುವ ದೇಶವಾಗಿ ಪರಿಣಮಿಸಿದೆ, ಆದರೆ ಈಗ ನವೀಕರಿಸಬಹುದಾದ ಇಂಧನವು ಒಟ್ಟು ಸ್ಥಾಪಿತ ಸಾಮರ್ಥ್ಯದ 40% ನಷ್ಟಾಗಿದೆ. (ಚೈನಾದ ನವೀಕರಿಸಬಹುದಾದ ಸಾಮರ್ಥ್ಯವು 850 ಗಿಗಾವಾಟ್; ಭಾರತದ್ದು 93 ಗಿಗಾವಾಟ್ ಇದೆ.) ಅದರ ತೀರ ಸನಿಹದ ಪೈಪೋಟಿ ಒಡ್ಡುವ ಅಮೆರಿಕದ ಉತ್ಪಾದನೆಯ ಎರಡರಷ್ಟನ್ನು ಉತ್ಪಾದಿಸುವ ಮೂಲಕ, ಅದೀಗ ಜಗತ್ತಿನ ಅತ್ಯಂತ ಹೆಚ್ಚು ನವೀಕರಸಿಬಹುದಾದ ಶಕ್ತಿಯನ್ನು ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿದೆ.

ಪ್ರಧಾನವಾಗಿ ಭಾರತದಲ್ಲಿ ವ್ಯಾಪಕವಾಗಿರುವ ಚೈನಾ-ವಿರೋಧಿ ಭಾವನೆಗಳ ಕಾರಣ, ಭಾರತೀಯ ರಾಜಕಾರಣಿಗಳು ಹಾಗೂ ನೀತಿನಿರೂಪಕರನ್ನೂ ಒಳಗೊಂಡಂತೆ ಬಹುತೇಕ ಭಾರತೀಯರು ಚೈನಾದಲ್ಲಿನ ವಿವಿಧ ರಂಗಗಳಲ್ಲಿನ ಪ್ರಗತಿಯ ಬಗ್ಗೆ ಸಾಕಷ್ಟು ಗಮನ ನೀಡುತ್ತಿಲ್ಲ. ನಾಲ್ಕು ದಶಕಗಳ ಹಿಂದಷ್ಟೆ ಚೈನಾವು ಎಷ್ಟು ಬಡ ಹಾಗೂ ಹಿಂದುಳಿದ ದೇಶವಾಗಿತ್ತು ಎಂಬ ಸ್ವಲ್ಪ ಮಟ್ಟಿನ ಚಾರಿತ್ರಿಕ ಅರಿವು ಉಳ್ಳ ಯಾವುದೇ ಪ್ರವಾಸಿಯು ಈಗ ಒಬ್ಬ ಸಾಮಾನ್ಯ ಚೈನೀಯರು ಉತ್ತಮ ಆಹಾರ ಸೇವಿಸುತ್ತಾರೆ, ಉತ್ತಮ ವಸತಿಯಲ್ಲಿ ಬದುಕುತ್ತಿದ್ದಾರೆ, ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ, ಮತ್ತು ಹಿಂದಿನ ತಲೆಮಾರಿನವರಿಗಿಂತ ದೀರ್ಘ ಕಾಲ ಜೀವಿಸುತ್ತಿದ್ದಾರೆ ಎನ್ನುವುದನ್ನು ನೋಡಬಹುದು. ಅವರು ಅವರದೇ ಆದ ಸಾಮಾಜಿಕ ಸಮಸ್ಯೆಗಳನ್ನು ಹೊಂದಿದ್ದಾರೆ ನಿಜ, ಆದರೆ ಅವರು ‘ಚೈನಾದ ಕನಸಿನಲ್ಲಿ’ ಭರವಸೆ ಇಟ್ಟಿದ್ದಾರೆ ಮತ್ತು ತಮ್ಮ ಮುಂದಿನ ಪೀಳಿಗೆಯ ಜನರ ಬದುಕು ಇನ್ನೂ ಉತ್ತಮವಾಗಿರುತ್ತದೆ ಎಂಬ ವಿಶ್ವಾಸ ಹೊಂದಿದ್ದಾರೆ. ಚೈನಾದ “ರಾಷ್ಟ್ರೀಯ ಪುನಶ್ಚೇತನ” ಕೇವಲ ಒಂದು ಪೊಳ್ಳು ಬಡಾಯಿಯಲ್ಲ. ಅದು ಘಟಿಸುತ್ತಿದೆ.

ಹೊಸ ಸಾರ್ವಜನಿಕ ಉದ್ಯಾನಗಳನ್ನು ನಿರ್ಮಿಸಲು ಚೈನಾವು ಪ್ರತಿವರ್ಷ 15 ಬಿಲಿಯನ್ ಡಾಲರ್ ವೆಚ್ಚಮಾಡುತ್ತಿದೆ. 2001 ರಿಂದ ಅದು ಪಟ್ಟಣ ಹಸಿರು ತಾಣಗಳನ್ನು ಐದು ಪಟ್ಟು ಹೆಚ್ಚಿಸುವ ಸಾಧನೆ ಮಾಡಿದೆ. Credit: Hector Retamal/AFP.

Donate Janashakthi Media

Leave a Reply

Your email address will not be published. Required fields are marked *