ರಾಯ್‌ಪುರ: ಛತ್ತೀಸ್‌ಘಡ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ(ಸಿಪಿಐ)ವು ಈ ಬಾರಿ 16 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಅದಾಗ್ಯೂ ಪಕ್ಷದ ಏಳು ಅರ್ಭ್ಯರ್ಥಿಗಳಿಗೆ ಸಿಪಿಐ ಚಿಹ್ನೆಯಾದ ಕುಡುಗೋಲು ಮತ್ತು ತೆನೆ ಸಿಗದೆ ಬೇರೆ ಬೇರೆ ಚಿಹ್ನೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಿಪಿಐ ತನ್ನ ಅರ್ಜಿಯನ್ನು ಮೊದಲ ಹಂತದಲ್ಲಿ ವಿಳಂಬ ಮಾಡಿದ್ದೆ ಇದಕ್ಕೆ ಕಾರಣ ಎಂದು ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್ ಲಾಂಡ್ರಿ ವರದಿ ಹೇಳಿದೆ.
ರಾಷ್ಟ್ರೀಯ ಪಕ್ಷವಾಗಿ ತನ್ನ ಸ್ಥಾನಮಾನವನ್ನು ಕಳೆದುಕೊಂಡ ತಿಂಗಳುಗಳ ನಂತರ ಸಿಪಿಐ ಛತ್ತೀಸ್‌ಗಢ ಸೇರಿದಂತೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಛತ್ತೀಸ್‌ಘಡದಲ್ಲಿ ಬುಡಕಟ್ಟು ಮತದಾರರಲ್ಲಿ ಗಣನೀಯ ಬೆಂಬಲವನ್ನು ಈ ಹಿಂದೆ ಪಕ್ಷವೂ ಹೊಂದಿತ್ತು.
ಇದನ್ನೂ ಓದಿ: ಗಣಪತಿ ಪೂಜೆ ನಮ್ಮ ಸಂಸ್ಕೃತಿಯಲ್ಲ, ಮೌಢ್ಯದ ಆಚರಣೆ| ಸಾಣೇಹಳ್ಳಿ ಸ್ವಾಮೀಜಿ
ಸಿಪಿಐ ತನ್ನ ಅರ್ಜಿಯನ್ನು ಮೊದಲ ಹಂತದಲ್ಲಿ ವಿಳಂಬ ಮಾಡಿದ ಕಾರಣ ರಾಜ್ಯ ಚುನಾವಣಾ ಆಯೋಗವು ಪಕ್ಷವನ್ನು ಎರಡನೇ ಹಂತದಲ್ಲಿ ರಾಜ್ಯ ಪಕ್ಷವಾಗಿ ಅಂಗೀಕರಿಸಿದೆ. ಹೀಗಾಗಿ ಬಸ್ತಾರ್ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಸಿಪಿಐ ಚಿಹ್ನೆಯ ಮೇಲೆ ಸ್ಪರ್ಧಿಸಬೇಕಿದ್ದ ಏಳು ಅಭ್ಯರ್ಥಿಗಳು ಈಗ ವಿಭಿನ್ನ ಚಿಹ್ನೆಗಳೊಂದಿಗೆ ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.
ಆದಾಗ್ಯೂ ಎರಡನೇ ಹಂತದಲ್ಲಿ ಪಕ್ಷದ ಇತರೆ ಒಂಬತ್ತು ಅಭ್ಯರ್ಥಿಗಳು ಸಿಪಿಐ ಚಿಹ್ನೆಯ ಮೇಲೆ ಸ್ಪರ್ಧಿಸಲಿದ್ದಾರೆ ಎಂದು ನ್ಯೂಸ್ ಲಾಂಡ್ರಿ ವರದಿ ಹೇಳಿದೆ. ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಮೀಸಲು ಕ್ಷೇತ್ರವಾದ ದಾಂತೇವಾಡದಲ್ಲಿ ಸಿಪಿಐನ ಅವನತಿ ಎದ್ದು ಕಾಣುತ್ತಿದೆ ಎಂದು ವರದಿ ಉಲ್ಲೇಖಿಸಿದೆ. ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಹಿರಿಯ ನಾಯಕ ಭೀಮಸೇನ್ ಮಾಂಡವಿ ಅವರು ಸ್ಪರ್ಥಿಸುತ್ತಿದ್ದಾರೆ.
ಇದನ್ನೂ ಓದಿ: ಜಾತಿ ನಿಂದನೆ ಆರೋಪ| ಪುನೀತ್ ಕೆರೆಹಳ್ಳಿ ವಶಕ್ಕೆ ಪಡೆದ ಪೊಲೀಸರು
ಛತ್ತೀಸ್‌ಘಡ ಚುನಾವಣಾ ಆಯೋಗ ಮಾಂಡವಿ ಅವರ ಚುನಾವಣಾ ಚಿಹ್ನೆಯಾಗಿ ಗ್ಲಾಸ್ ಅನ್ನು ನೀಡಿದೆ. ಈ ಪ್ರದೇಶದಲ್ಲಿ ಪಕ್ಷವು ಈ ಹಿಂದೆ ಭಾರಿ ಪ್ರಭಾವವನ್ನು ಹೊಂದಿತ್ತು. 1980 ರಲ್ಲಿ ದಾಂತೇವಾಡದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹೇಂದ್ರ ಕರ್ಮ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದಿದ್ದರು. ನಂತರ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.
ನ್ಯೂಸ್ ಲಾಂಡ್ರಿಯೊಂದಿಗೆ ಮಾತನಾಡಿದ ಛತ್ತೀಸ್‌ಗಢದ ಸಿಪಿಐ ನಾಯಕ ಡಿಸಿಪಿ ರಾವ್, “ಚುನಾವಣಾ ರಾಜಕೀಯದಲ್ಲಿ ಹೆಚ್ಚುತ್ತಿರುವ ಅಧಿಕಾರ ಮತ್ತು ಹಣ ಬಲದ ಕಾರಣಕ್ಕೆ ಸಿಪಿಐ ಪ್ರಭಾವ ಕುಗ್ಗುತ್ತಿದೆ. ಎರಡು ವರ್ಷಗಳ ಹಿಂದೆ ದಾಂತೇವಾಡದಲ್ಲಿ ನಾವು 1,200 ಸದಸ್ಯರನ್ನು ಹೊಂದಿದ್ದೆವು. ಅದಕ್ಕಿಂತಲೂ ಮೊದಲು ಈ ಸಂಖ್ಯೆ ಇನ್ನೂ ಹೆಚ್ಚಿತ್ತು” ಎಂದು ಹೇಳಿದ್ದಾರೆ.
ಕೃಷಿ ಕಾರ್ಮಿಕರ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಹೋರಾಟಗಾರ ಸಂಜಯ್ ಪಂತ್ ಮಾತನಾಡಿ, “ಇಲ್ಲಿನ ಮತದಾರರು ತೆನೆ ಮತ್ತು ಕುಡುಗೋಲು (ಸಿಪಿಐ ಚುನಾವಣಾ ಚಿಹ್ನೆ)ಚಿಹ್ನೆಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಇವಿಎಂಗಳಲ್ಲಿ ಗ್ಲಾಸ್ ಮತ್ತು ಏರ್ ಕಂಡಿಷನರ್ ಚಿಹ್ನೆಗಳನ್ನು ಗುರುತಿಸಲು ಅವರಿಗೆ ಕಷ್ಟವಾಗುತ್ತದೆ. ಇದರಿಂದಾಗಿ ಪಕ್ಷವು ತನ್ನ ಮತಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ಬಾರಿಸು ಕನ್ನಡ ಡಿಂಡಿಮವ – ಕುವೆಂಪು – ಹಾಡಿದವರು : ಶ್ವೇತಾ ಮೂರ್ತಿ