ಸಿಇಟಿ ವ್ಯಾಜ್ಯವನ್ನು ಕೂಡಲೇ ಬಗೆಹರಿಸಿ- ಸಮಸ್ಯೆ ನಿವಾರಣೆಗೆ ತಜ್ಞರ ಸಮಿತಿ ರಚಿಸಿ: ಎಐಡಿಎಸ್‌ಒ

ಬೆಂಗಳೂರು: ರಾಜ್ಯದಲ್ಲಿ ಸಿಇಟಿ ಕೌನ್ಸೆಲಿಂಗ್ ವಿಳಂಬವಾಗುತ್ತಿರುವ ಕಾರಣ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ. ಈಗಾಗಲೇ ಖಾಸಗಿ ವಿಶ್ವವಿದ್ಯಾಲಯಗಳು  ಶೇ. 60 ರಷ್ಟು ಸೀಟುಗಳನ್ನು ಭರ್ತಿ ಮಾಡಿಕೊಂಡು, ತಮ್ಮ ಲಾಭಗಳಿಸುವ ಹುನ್ನಾರ  ಮುಂದುವರೆಸಿಕೊಂಡು ಹೋಗುತ್ತಿದೆ. ಆದರೆ ಸಿಇಟಿ ವಿದ್ಯಾರ್ಥಿಗಳ ಕೌನ್ಸೆಲಿಂಗ್  ಪ್ರಾರಂಭವಾಗದೇ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಆತಂತ್ರದಲ್ಲಿದೆ‌ ಎಂದು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್‌ ಕಾಮತ್‌ ಆರೋಪಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ವಿಷಯದಲ್ಲಿ ಸರ್ಕಾರ ಎಡವಿತ್ತು. ಫಲಿತಾಂಶ ಪ್ರಕಟಿಸುವಾಗ ಆ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಫಲಿತಾಂಶವನ್ನು ಗಣನೆ ಮಾಡದೆಯೇ, ಕೇವಲ ಸಿಇಟಿ ಪರೀಕ್ಷೆಯ ಮೇಲೆ ರ‍್ಯಾಂಕ್ ಅನ್ನು ನೀಡಲಾಗಿತ್ತು. ಆ ಸಮಯದಲ್ಲಿ ತಾರತಮ್ಯಕ್ಕೆ ಒಳಗಾಗಿದ್ದ ವಿದ್ಯಾರ್ಥಿಗಳ ಹೋರಾಟ ಭುಗಿಲೆದ್ದಿತು. ನಂತರ ಉಚ್ಛ ನ್ಯಾಯಾಲಯ, ಪುನರಾವರ್ತಿತ ವಿದ್ಯಾರ್ಥಿಗಳ ಶೇ. 50 ರಷ್ಟು ದ್ವಿತೀಯ ಪಿಯುಸಿ ಫಲಿತಾಂಶವನ್ನು ಸೇರ್ಪಡೆ ಮಾಡಬೇಕೆಂದು ತೀರ್ಪು ನೀಡಿತು. ಈ ಸಂಬಂಧ ಮತ್ತೆ ನ್ಯಾಯಾಲಯದ ಮೊರೆ ಹೋಗುವುದಾಗಿ ಸರ್ಕಾರ ಹೇಳಿಕೆ ‌ನೀಡಿದೆ. ತ್ವರಿತಗತಿಯಲ್ಲಿ ಸಮಸ್ಯೆ ಪರಿಹರಿಸಿ ಕೌನ್ಸೆಲಿಂಗ್ ಅನ್ನು ಆರಂಭಿಸುವ ಬದಲು, ಸರ್ಕಾರವು ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುವ ಮುಂದಾಗಿರುವುದು ಖಂಡನೀಯ ಎಂದಿದ್ದಾರೆ.

ಕೂಡಲೇ ಸಿಇಟಿ ಕುರಿತಾದ ಸಮಸ್ಯೆ ಪರಿಹರಿಸಿ ಎಲ್ಲ ವಿದ್ಯಾರ್ಥಿಗಳಿಗೂ ಕೌನ್ಸೆಲಿಂಗ್  ಪ್ರಾರಂಭಿಸಿ, ತಕ್ಷಣ ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶ ಪಡೆಯುವಂತೆ ಸರ್ಕಾರ ಕ್ರಮ ವಹಿಸಬೇಕು. ಸಿಇಟಿ ಕೌನ್ಸೆಲಿಂಗ್ ನಲ್ಲಿ ಸೃಷ್ಟಿಯಾಗಿರುವ ವ್ಯಾಜ್ಯವನ್ನು ಬಗೆಹರಿಸಲು ಈ ಕೂಡಲೇ ತಜ್ಞರ ಸಮಿತಿಯನ್ನು ರಚಿಸಿ, ಅವರ ಮಾರ್ಗದರ್ಶನದ ಆಧಾರದ ಮೇಲೆ ಸರ್ಕಾರ ಮುನ್ನಡೆಯಬೇಕು, ಬದಲಾಗಿ ಸರ್ಕಾರದ ವಿಳಂಬನೀತಿಗೆ ವಿದ್ಯಾರ್ಥಿಗಳನ್ನು ಬಲಿಪಶು ಮಾಡಬಾರದು ಎಂದು ಎಐಡಿಎಸ್‌ಒ ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *