ಕೃಷಿ ಕಾಯ್ದೆಗಳ ವಾಪಸ್ಸಾತಿಗೆ ನ.26 ಕಡೆ ದಿನ: ಕೇಂದ್ರ ಸರ್ಕಾರಕ್ಕೆ ರಾಕೇಶ್‌ ಟಿಕಾಯತ್‌ ಎಚ್ಚರಿಕೆ

ಗಾಜಿಯಾಬಾದ್: ಕೇಂದ್ರದ ಬಿಜೆಪಿ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು  ನವೆಂಬರ್ 26ರೊಳಗೆ ರದ್ದುಪಡಿಸಬೇಕು. ಇಲ್ಲವಾದರೆ ದೆಹಲಿಯ ಗಡಿ ಭಾಗದಲ್ಲಿ ರೈತರು ಹೋರಾಟವನ್ನು ತೀವ್ರಗೊಳಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್(ಎಸ್‌ಕೆಎಂ) ಮುಖ್ಯಸ್ಥ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

ವಿವಾದಿತ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಅಹೋರಾತ್ರಿ ಬಿಡುಬಿಟ್ಟು ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶಗಳ ರೈತರು ನಿಗದಿತ ಗಡವಿನಲ್ಲಿ ಕೇಂದ್ರ ಸರ್ಕಾರ ಕಾನೂನುಗಳನ್ನು ರದ್ದುಪಡಿಸಬೇಕು. ಇಲ್ಲವಾದರೆ ನವೆಂಬರ್ 27ರ ನಂತರ ಸಾವಿರಾಗು ರೈತರು ದೆಹಲಿ ಗಡಿ ತಲುಪಲಿದ್ದಾರೆ. ತಮ್ಮ ಟ್ಯಾಕ್ಟರ್‌ ಗಳಲ್ಲಿ ದೆಹಲಿಯ ಸುತ್ತ ಬಲವಾದ ಕೋಟೆ ನಿರ್ಮಿಸಲಿದ್ದಾರೆ. ದೆಹಲಿ ಪ್ರವೇಶದ ಮೂರು ಭಾಗದಲ್ಲೂ ಟೆಂಟ್‍ಗಳನ್ನು ನಿರ್ಮಿಸಲಾಗುತ್ತದೆ ಎಂದು ರಾಕೇಶ್ ಟಿಕಾಯತ್ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಕಳೆದ 2020ರ ನವೆಂಬರ್ 26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮುಂದುವರಿಸಿದ್ದಾರೆ.

ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ರಾಕೇಶ್ ಟಿಕಾಯತ್ ಕಳೆದ ಎರಡು ದಿನಗಳಲ್ಲಿ ಎರಡನೇ ಬಾರಿ ಎಚ್ಚರಿಕೆ ನೀಡಿದ್ದಾರೆ. ʻʻದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸುವುದಕ್ಕೆ ಪ್ರಯತ್ನಿಸಿದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ರೈತರನ್ನು ಗಡಿಯಿಂದ ಬಲವಂತವಾಗಿ ಹೊರಹಾಕುವ ಪ್ರಯತ್ನ ನಡೆದರೆ, ದೇಶಾದ್ಯಂತ ಇರುವ ಸರ್ಕಾರಿ ಕಚೇರಿಗಳನ್ನು ಗಲ್ಲಾ ಮಂಡಿ (ಧಾನ್ಯ ಮಾರುಕಟ್ಟೆ)ಯನ್ನಾಗಿ ಪರಿವರ್ತಿಸಲಾಗುತ್ತದೆʼʼ ಎಂದಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರು ಮತ್ತು ಸಾಮಾನ್ಯ ಜನರ ವಿರೋಧಿಯಾಗಿದೆ.

ಇವುಗಳನ್ನು ರದ್ದುಪಡಿಸಬೇಕೆಂದು ರೈತರು ನಿರಂತರವಾಗಿ ಹೋರಾಟ, ಪ್ರತಿಭಟನೆ, ಟ್ರ್ಯಾಕ್ಟರ್ ರ‍್ಯಾಲಿಗಳನ್ನು ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರತಿಭಟನಾ ನಿರತ ರೈತ ಸಂಘಟನೆಗಳ ಪ್ರತಿನಿಧಿಗಳ ನಡುವೆ ಈಗಾಗಲೇ 13ಕ್ಕೂ ಹೆಚ್ಚು ಸುತ್ತಿನ ಸಂಧಾನ ಮಾತುಕತೆಗಳನ್ನು ನಡೆಸಲಾಗಿದೆ. ಆದರೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂಬ ನಿಲುವಿನಲ್ಲಿದೆ. ಕೇಂದ್ರ ಸರ್ಕಾರದ ಮೊಂಡುತನದ ವಿರುದ್ಧ ರೈತರ ಹೋರಾಟವು ತೀವ್ರಗೊಳುತ್ತಿದೆ. ಇದೇ ನವೆಂಬರ್ 26ರಂದು ರೈತರ ಸುದೀರ್ಘ ಪ್ರತಿಭಟನೆ ಒಂದು ವರ್ಷ ಪೂರೈಸಲಿದೆ.

ಕೃಷಿ ಕಾಯ್ದೆಗಳ ರದ್ದತಿ ಬಗ್ಗೆ ಪ್ರತಿಭಟನೆಯನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಲಾಗಿದ್ದು, ರೈತರ ಹೋರಾಟಕ್ಕೆ ದೇಶಾದ್ಯಂತ ಎಲ್ಲೆಡೆ ಬೆಂಬಲ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ.

Donate Janashakthi Media

Leave a Reply

Your email address will not be published. Required fields are marked *