ನವದೆಹಲಿ: ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಸರಕಾರ ನೇಮಿಸಿರುವ ಸಮಿತಿಯು ದೇಶದಲ್ಲಿ ಕೋವಿಡ್–19 ಲಸಿಕೆಯ ಅಡ್ಡ ಪರಿಣಾಮದಿಂದ ಸಾವಿಗೀಡಾಗಿರುವ ಮೊದಲ ಪ್ರಕರಣ ವರದಿಯಾಗಿರುವ ಬಗ್ಗೆ ದೃಢಪಡಿಸಿದೆ.
ಲಸಿಕೆ ಪಡೆದ ನಂತರ ತೀವ್ರವಾದ ಅಲರ್ಜಿಯಿಂದ ಬಳಲುತ್ತಿದ್ದ 31 ಪ್ರಕರಣಗಳನ್ನು ‘ನ್ಯಾಷನಲ್ ಸೀರಿಯಸ್ ಅಡ್ವರ್ಸ್ ಈವೆಂಟ್ಸ್ ಫಾಲೋಯಿಂಗ್ ಇಮ್ಮುನೈಸೇಷನ್’ (ಎಇಎಫ್‌ಐ) ಸಮಿತಿ ಮೌಲ್ಯಮಾಪನ ಮಾಡಿತು.
ಇದನ್ನು ಓದಿ: ಕಾಣದಂತೆ ಮಾಯವಾದವೋ ಕೋವಿಡ್ ಲಸಿಕೆಗಳು!
ಸಮಿತಿ ನೀಡಿದ ವರದಿ ಪ್ರಕಾರ, 68 ವರ್ಷದ ಹಿರಿಯರೊಬ್ಬರು 2021ರ ಮಾರ್ಚ್ 8ರಂದು, ಲಸಿಕೆ ಹಾಕಿಸಿಕೊಂಡ ನಂತರ ತೀವ್ರ ಅಲರ್ಜಿಯಿಂದ ಸಾವಿಗೀಡಾಗಿದ್ದಾರೆ. ಇದನ್ನು ಲಸಿಕೆ ಪಡೆದ ನಂತರ ತೀವ್ರ ಅಲರ್ಜಿಯಿಂದ ಉಂಟಾದ ಮೊದಲ ಸಾವಾಗಿದೆ ಎಂದು ಸಮಿತಿ ಹೇಳಿದೆ.
‘ಕೋವಿಡ್ –19 ಲಸಿಕೆ ವಿಷಯಕ್ಕೆ ಸಂಬಂಧಿಸಿದಂತೆ, ತೀವ್ರ ಅಲರ್ಜಿಗೊಳಗಾಗಿ (ಅನಾಫಿಲಕ್ಸಿಸ್) ಸಾವಿಗೀಡಾಗಿರುವ ಮೊದಲ ಪ್ರಕರಣ ಇದಾಗಿದೆ. ಲಸಿಕೆಯನ್ನು ಪಡೆದುಕೊಂಡ ನಂತರ ಅವರು ಲಸಿಕಾ ಕೇಂದ್ರದಲ್ಲಿ 30 ನಿಮಿಷಗಳ ಕಾಲ ಕಾಯಬೇಕು. ಈ ಅವದಿಯಲ್ಲೇನಾದರೂ ಅಲರ್ಜಿ ಕಾಣಿಸಿಕೊಂಡ ಪಕ್ಷದಲ್ಲಿ, ಕೂಡಲೇ ಅವರನ್ನು ಚಿಕಿತ್ಸೆ ನೀಡಿದರೆ ಸಾವು ಸಂಭವಿಸುವುದನ್ನು ತಪ್ಪಿಸಬಹುದು‘ ಎಂದು ರಾಷ್ಟ್ರೀಯ ಎಇಎಫ್‌ಐ ಸಮಿತಿ ಅಧ್ಯಕ್ಷ ಡಾ. ಕೆ. ಅರೋರಾ ತಿಳಿಸಿದರು.
ಈ ಸಮಿತಿಯು ಫೆಬ್ರುವರಿ 5ರಂದು ಐದು ಪ್ರಕರಣಗಳು, ಮಾರ್ಚ್ 9 ರಂದು ಎಂಟು ಪ್ರಕರಣಗಳು ಮತ್ತು ಮಾರ್ಚ್ 31ರಂದು 18 ಪ್ರಕರಣಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿತು. ನಂತರದಲ್ಲಿ ಲಭ್ಯವಾದ ದತ್ತಾಂಶದ ಪ್ರಕಾರ, ಏಪ್ರಿಲ್ ಮೊದಲ ವಾರದಲ್ಲಿ ಲಸಿಕೆ ಪಡೆದು ತೀವ್ರ ಅಲರ್ಜಿಯಿಂದ ಸಾವಿಗೀಡಾದವರ ಪ್ರಮಾಣವು ಹತ್ತು ಲಕ್ಷಕ್ಕೆ ಇಬ್ಬರಂತೆ ಇದೆ.
ಇದನ್ನು ಓದಿ: ಖಾಸಗಿ ವೈದ್ಯಕೀಯ ಲಾಬಿ ಹಾಗೂ ತನಿಖಾ ಸಮಿತಿಗಳು
ಸಾಂದರ್ಭಿಕವಾಗಿ ಮೌಲ್ಯಮಾಪನ ಮಾಡಲಾದ 31 ಪ್ರಕರಣಗಳಲ್ಲಿ 18 ಸಾವುಗಳು ಲಸಿಕೆ ಪಡೆದ ನಂತರ, ಅಂದರೆ ಕಾಕತಾಳೀಯವಾಗಿ ಸಂಭವಿಸಿದೆ. ಇದಕ್ಕೂ ಲಸಿಕೆಗೂ ಸಂಬಂಧವಿಲ್ಲ. ಇನ್ನು ಏಳು ಸಾವುಗಳು ಎರಡೂ ಕಾರಣಗಳಿಗೆ ಸಂಭವಿಸಿದೆ. ಇನ್ನು ಮೂರು ಸಾವುಗಳು ಲಸಿಕೆಯಿಂದಾಗಿದೆ ಎಂದು ತಿಳಿದುಬಂದಿದ್ದು ಒಂದು ಸಾವು ಉದ್ವೇಗದಿಂದಾಗಿದ್ದರೆ ಮತ್ತೇರಡು ಪ್ರಕರಣಗಳನ್ನು ವರ್ಗಿಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಸಮಿತಿ ತಿಳಿಸಿದೆ.
ʻಗಂಭೀರ ಪ್ರತಿಕೂಲ ಘಟನೆಗಳೆಂದಿಂದಾದ ಸಾವುಗಳನ್ನು ಮತ್ತು ಆಸ್ಪತ್ರೆಗೆ ದಾಖಲಾಗುವ ಘಟನೆಗಳನ್ನೆಲ್ಲ ಲಸಿಕೆಯಿಂದಲೇ ಸಾವು ಸಂಭವಿಸಿವೆ ಎಂದು ಸೂಚಿಸುವುದಿಲ್ಲʼ ಎಂದು ಸಮಿತಿ ಹೇಳಿದೆ.
ಪ್ರಕರಣವನ್ನು ಸರಿಯಾಗಿ ಪರಿಶೀಲಿಸಿ, ಸರಿಯಾಗಿ ಮೌಲ್ಯಮಾಪನ ಮಾಡುವುದರಿಂದ ಲಸಿಕೆ ಮತ್ತು ಘಟನೆಯ ನಡುವೆ ಯಾವುದಾದರೂ ಸಂಬಂಧವಿದೆಯೇ ಎಂದು ಅರ್ಥ ಮಾಡಿಕೊಳ್ಳಲು ಸಹಾಯವಾಗಲಿದೆ ಎಂದು ಸಮಿತಿ ವರದಿ ಮಾಡಿದೆ.