ಬಜೆಟ್ ಅಧಿವೇಶನದ ವೇಳೆಯಲ್ಲಿ ಎರಡು ದಿನಗಳ ಸಾರ್ವತ್ರಿಕ ಮುಷ್ಕರ
ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ರಾಷ್ಟ್ರೀಯ ಸೊತ್ತುಗಳ ಖಾಸಗೀಕರಣದ ಕೇಂದ್ರ ಸರಕಾರದ ಧಾವಂತದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಬೇಕಾಗಿದ್ದು, ಈ ಕುರಿತು ನವಂಬರ್ 11ರಂದು ರಾಷ್ಟ್ರೀಯ ಸಮಾವೇಶವನ್ನು ನಡೆಸಲು ನಿರ್ಧರಿಸಿದೆ. ಇದರಲ್ಲಿ ಬಜೆಟ್ ಅಧಿವೇಶನದ ವೇಳೆಯಲ್ಲಿ ಎರಡು ದಿನಗಳ ಸಾರ್ವತ್ರಿಕ ಮುಷ್ಕರವನ್ನು ನಡೆಸುವ ಬಗ್ಗೆ ಮತ್ತು ಇತರ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಅವು ಹೇಳಿವೆ.
ನವಂಬರ್ 1ರಂದು ದಿಲ್ಲಿಯಲ್ಲಿ ನಡೆದ ಈ ಸಭೆಯಲ್ಲಿ ಕಾರ್ಮಿಕ ಮುಖಂಡರು ಎಲ್ಲ ರಾಷ್ಟ್ರೀಯ ಸೊತ್ತುಗಳನ್ನು ಖಾಸಗೀಕರಿಸಿ ಅವನ್ನು ಕಾರ್ಪೊರೇಟ್ ವಲಯಕ್ಕೆ ವಹಿಸಿಕೊಡುವ ಕೇಂದ್ರ ಸರಕಾರದ ಧಾವಂತದಿಂದ ಉಂಟಾಗಿರುವ ಸನ್ನಿವೇಶವನ್ನು ಪರಿಶೀಲಿಸಿದರು. ಸರಕಾರದ ಈ ಧಾವಂತದಿಂದ ದೇಶದ ಮೂಲರಚನೆಗಳು ಮತ್ತು ಅರ್ಥವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮಗಳು ಮಾತ್ರವಲ್ಲ, ಇವು ಜನಗಳ ಮೇಲೆ ತಕ್ಷಣವೇ ದುಷ್ಪರಿಣಾಮ ಬೀರಲಿವೆ. ಇವು ತೀವ್ರ ಬೆಲೆಯೇರಿಕೆಗೆ ಮತ್ತು ಜನಗಳ ಮೇಲೆ ಇನ್ನಷ್ಟು ಬಳಕೆದಾರ ಶುಲ್ಕಗಳ ಹೇರಿಕೆಗೆ ದಾರಿ ಮಾಡಿ ಕೊಡುತ್ತವೆ ಎಂಬ ಅಭಿಪ್ರಾಯಕ್ಕೆ ಬಂದ ಸಭೆ ಈ ಹಿನ್ನೆಲೆಯಲ್ಲಿ ಸರಕಾರದ ಜನ-ವಿರೋಧಿ ನಿಲುವನ್ನು ಚರ್ಚಿಸಿತು ಎನ್ನಲಾಗಿದೆ. ಕೇಂದ್ರ ಸರಕಾರ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಎತ್ತುವ ಯಾವುದೇ ಬೇಡಿಕೆಯನ್ನು ಪರಿಶೀಲಿಸಲು ಕೂಡ ನಿರಾಕರಿಸುತ್ತಿದೆ, ಈ ಮೂಲಕ ಎಲ್ಲ ಪ್ರಜಾಪ್ರಭುತ್ವ ಆಚರಣೆಗಳನ್ನು ಬುಡಮೇಲು ಮಾಡುತ್ತಿದೆ ಎಂದು ಸಭೆ ಕಟುವಾಗಿ ಟೀಕಿಸಿತು.
ಈ ಧೋರಣೆಯ ಅಪಾಯಕಾರಿ ಪರಿಣಾಮಗಳ ಬಗ್ಗೆ ಜನಗಳಲ್ಲಿ ಜಾಗೃತಿ ಮೂಡಿಸಲು ಜನಗಳ ಬಳಿಗೆ ವ್ಯವಸ್ಥಿತ ರೀತಿಯಲ್ಲಿ ಹೋಗುವುದನ್ನು ಒಂದು ರಾಷ್ಟ್ರೀಯ ಸಮಾವೇಶದೊಂದಿಗೆ ಆರಂಭಿಸಲು ನಿರ್ಧರಿಸಲಾಯಿತು. ನವಂಬರ್ 11 ರಂದು ದಿಲ್ಲಿಯಲ್ಲಿ ಈ ಸಮಾವೇಶ ನಡೆಯಲಿದೆ. ಇದನ್ನು ಅನುಸರಿಸಿ ರಾಜ್ಯ ಮಟ್ಟದ ಸಮಾವೇಶಗಳು, ಜಾಥಾಗಳು, ಮತಪ್ರದರ್ಶನಗಳು , ಮಹಾಪಡಾವ್‌ಗಳು, ಮಿನಿ ಸಂಸತ್ತುಗಳು, ವ್ಯಾಪಕ ಸಹಿಸಂಗ್ರಹಣೆ ಮುಂತಾದ ಕಾರ್ಯಾಚರಣೆಗಳು ದೇಶಾದ್ಯಂತ ನಡೆಯುತ್ತವೆ, ನಂತರ 2022ರ ಬಜೆಟ್ ಅಧಿವೇಶನದ ವೇಳೆಯಲ್ಲಿ ಎರಡು ದಿನಗಳ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ನಡೆಸಲಾಗುವುದು ಎಂದು ವೇದಿಕೆ ತಿಳಿಸಿದೆ.
ಈ ಸಭೆ ನವಂಬರ್ 26ರಂದು ಕಾರ್ಮಿಕ ಸಂಘಗಳ ರಾಷ್ಟ್ರೀಯ ಸಾರ್ವತ್ರಿಕ ಮುಷ್ಕರ ಹಾಗೂ ಕಿಸಾನ್ ಮಾರ್ಚ್‌ನ ವಾರ್ಷಿಕಾಚರಣೆಯನ್ನು ರಾಷ್ಟ್ರವ್ಯಾಪಿ ಪ್ರತಿಭಟನಾ ದಿನವಾಗಿ ಆಚರಿಸಬೇಕು ಎಂದೂ ನಿರ್ಧರಿಸಿದೆ.
ಜಂಟಿ ವೇದಿಕೆಯ ಸಭೆಯ ನಂತರ ಈ ಕಾರ್ಮಿಕ ಮುಖಂಡರು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರನ್ನು ಭೇಟಿ ಮಾಡಿ ತಂತಮ್ಮ ಹೋರಾಟಗಳ ಯೋಜನೆಯ ಬಗ್ಗೆ ವಿಚಾರ ವಿನಿಮಯ ನಡೆಸಿದರು. ರೈತ-ಕಾರ್ಮಿಕ ಐಕ್ಯತೆಯ ಅಗತ್ಯತೆ ಮತ್ತು ಐಕ್ಯ ಹೋರಾಟಗಳ ಮೂಲಕ ಇದನ್ನು ಮತ್ತಷ್ಟು ಗಟ್ಟಿಗೊಳಿಸುವ ಬಗ್ಗೆ ರೈತ ಮತ್ತು ಕಾರ್ಮಿಕ ಸಂUಘಟನೆಗಳ ಮುಖಂಡರಲ್ಲಿ ಒಮ್ಮತ ವ್ಯಕ್ತವಾಯಿತು ಎಂದು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ತಿಳಿಸಿದೆ.
ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯುಎ, ಎಐಸಿಸಿಟಿಯು, ಎಲ್‌ಪಿಎಫ್ ಮತ್ತು ಯುಟಿಯುಸಿ ಹಾಗೂ ಸ್ವತಂತ್ರ ವಲಯವಾರು ಒಕ್ಕೂಟಗಳು ಮತ್ತು ಸಂಘಗಳ ಮುಖಂಡರು ಈ ಜಂಟಿ ಹೇಳಿಕೆಯನ್ನು ನೀಡಿದ್ದಾರೆ.