ಪ್ರಧಾನಿ ಮೋದಿ ಸಭೆ: ಭಾರತೀಯರ ರಕ್ಷಣೆಗೆ ಉಕ್ರೇನ್ ನೆರೆಯ ರಾಷ್ಟ್ರಕ್ಕೆ ನಾಲ್ವರು ಸಚಿವರ ಪ್ರಯಾಣ

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ಯುದ್ಧದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗಾಗಿ ನಾಲ್ವರು ಕೇಂದ್ರ ಸಚಿವರು ಉಕ್ರೇನ್‍ನ ನೆರೆಯ ದೇಶಗಳಿಗೆ ಪ್ರಯಾಣ ಬೆಳೆಸಿದಿದ್ದಾರೆ.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರದಿಂದ ಉನ್ನತ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಇಂದು ಮಹತ್ವದ ಸಭೆಯೊಂದನ್ನು ಆಯೋಜಿಸಿತು. ಅದರಂತೆ, ನಾಲ್ವರು ಕೇಂದ್ರ ಸಚಿವರ ನೇತೃತ್ವದ ತಂಡವು ಉಕ್ರೇನ್​ ಗಡಿ ರಾಷ್ಟ್ರಗಳಿಗೆ ಪ್ರಯಾಣಿಸಲಿದ್ದಾರೆ.

ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿ.ಕೆ. ಸಿಂಗ್ ಅವರು ಭಾರತದ ವಿಶೇಷ ರಾಯಭಾರಿಗಳಾಗಿ ಉಕ್ರೇನ್ ಸುತ್ತಮುತ್ತಲಿನ ದೇಶಗಳಿಗೆ ತೆರಳಿ ಭಾರತೀಯರು ಸ್ಥಳಾಂತರಗೊಳ್ಳಲು ಸಹಾಯ ಮಾಡಲಿದ್ದಾರೆ.

ಉಕ್ರೇನ್ ಗಡಿಯಲ್ಲಿ ಸಿಲುಕಿರುವ ನೂರಾರು ಭಾರತೀಯರ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸುಮಾರು 16,000 ವಿದ್ಯಾರ್ಥಿಗಳು ಉಕ್ರೇನ್‍ನ ಗಡಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಬಾಂಬ್, ಶೆಲ್ಟರ್‌ಗಳಿಂದ ತಪ್ಪಿಸಿಕೊಳ್ಳಲು ಇನ್ನೂ ಕೆಲವರು ಹಾಸ್ಟೆಲ್‍ನ ನೆಲಮಾಳಿಗೆಗಳಲ್ಲಿ ಅಡಗಿಕೊಂಡಿದ್ದಾರೆ ಎಂದು ಎನ್ನಲಾಗುತ್ತಿದೆ.

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ನೆರೆಯ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕ್ ರಿಪಬ್ಲಿಕ್ ಮತ್ತು ಪೋಲೆಂಡ್‌ನಿಂದ ಏರ್ ಇಂಡಿಯಾ ವಿಮಾನಗಳ ಮೂಲಕ ಕರೆ ತರುವ ಪ್ರಯತ್ನಕ್ಕೆ ಭಾರತ ಮುಂದಾಗಿದೆ. ಉಕ್ರೇನ್‌ನ ನೆರೆಯ ರಾಷ್ಟ್ರಗಳಿಗೆ ಬಸ್, ರೈಲು ಅಥವಾ ಇತರ ಮಾರ್ಗಗಳಲ್ಲಿ ಕರೆದೊಯ್ಯಲಾಗುತ್ತಿದೆ. ಅಲ್ಲಿಂದ ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರವುದಕ್ಕೆ ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ.

ಭಾನುವಾರದಂದು ಸಹ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಈ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿದ್ದರು ಮತ್ತು ಹಿಂಸಾಚಾರವನ್ನು ನಿಲ್ಲಿಸಿ ಮಾತುಕತೆ ಪ್ರಾರಂಭಿಸುವಂತೆ ಮನವಿ ಮಾಡಿದ್ದರು.

ಮತ್ತೊಂದೆಡೆ ವಿರೋಧ ಪಕ್ಷಗಳು, ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೂ ಭಾರತೀಯರನ್ನು ಸುಲಭವಾಗಿ ಮತ್ತು ಸುರಕ್ಷಿತ ಮಾರ್ಗಗಳಿಂದ ಭಾರತಕ್ಕೆ ಕರೆತರಲು ಸರ್ಕಾರ ಯಾವುದೇ ವ್ಯವಸ್ಥೆಗೊಳಿಸಿಲ್ಲ ಎಂದು ಆರೋಪಿಸಿದೆ.

Donate Janashakthi Media

Leave a Reply

Your email address will not be published. Required fields are marked *