ನವದೆಹಲಿ: ವಿವಾದಾತ್ಮಕ ಯೋಜನೆಯಾದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಸಲಹೆಗಳನ್ನು ನೀಡುವಂತೆ ಕೇಂದ್ರ ಸರ್ಕಾರ ಇತ್ತಿಚೆಗೆ ದೇಶದ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಜಾಹಿರಾತು ನೀಡುವ ಮೂಲಕ ಕೋರಿತ್ತು. ಸಲಹೆಗಳನ್ನು ಪೋಸ್ಟ್ ಮೂಲಕ ಅಥವಾ ಉನ್ನತ ಮಟ್ಟದ ಸಮಿತಿಯ ವೆಬ್‌ಸೈಟ್‌ನಲ್ಲಿ ಅಥವಾ ಈ-ಮೇಲ್ ಮೂಲಕ ನೀಡುವಂತೆ ಸರ್ಕಾರ ಕೇಳಿತ್ತು. ಆದರೆ ಈ ಜಾಹಿರಾತಿನಲ್ಲಿ ನೀಡಲಾದ ಇಮೇಲ್ ವಿಳಾಸ ತಪ್ಪಾಗಿದೆ ಎಂದು ನ್ಯೂಸ್ ಲಾಂಡ್ರಿ ವರದಿ ಮಾಡಿದೆ.
ಹಿಂದೂಸ್ತಾನ್ ಟೈಮ್ಸ್ ಮತ್ತು ದೈನಿಕ್ ಜಾಗರಣ್‌ನಂತಹ ಪ್ರಮುಖ ಪತ್ರಿಕೆಗಳಲ್ಲಿ ಜನವರಿ 5 ರಂದು ಸರ್ಕಾರ ಜಾಹೀರಾತು ನೀಡಿತ್ತು. ಅದರಲ್ಲಿ ಜನವರಿ 15 ರೊಳಗೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಸಾರ್ವಜನಿಕರು ಸಲಹೆಗಳನ್ನು ನೀಡಬೇಕು ಎಂದು ಕೋರಲಾಗಿತ್ತು. “ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಸೂಚನೆಯ ಮೇರೆಗೆ ದೇಶದಲ್ಲಿ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಪ್ರಸ್ತುತ ಇರುವ ಕಾನೂನಿನ ಆಡಳಿತಾತ್ಮಕ ಚೌಕಟ್ಟಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಸಲಹೆಗಳನ್ನು ಕೋರಲಾಗಿದೆ” ಎಂದು ಜಾಹಿರಾತಿನಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ: ಬಿಲ್ಕಿಸ್ ಬಾನು ಪ್ರಕರಣ; 11 ಅಪರಾಧಿಗಳ ಬಿಡುಗಡೆಗೆ ಗುಜರಾತ್ ಸರ್ಕಾರ ನೀಡಿದ್ದ ಅನುಮತಿ ರದ್ದುಗೊಳಿಸಿದ ‘ಸುಪ್ರೀಂ’
ಜಾಹಿರಾತಿನಲ್ಲಿ ನೀಡಲಾಗಿದ್ದ ಇಮೈಲ್([email protected])ಗೆ ಕಳುಹಿಸಿದ್ದ ಸಂದೇಶವು ತಲುಪದೆ, ಅಂತಹ ಯಾವುದೆ ಇಮೈಲ್ ವಿಳಾಸ ಇಲ್ಲ ಎಂದು ವಾಪಾಸ್ ಸಂದೇಶ ಬಂದಿದೆ ಎಂದು ನ್ಯೂಸ್ ಲಾಂಡ್ರಿ ಹೇಳಿದೆ. ಜೊತೆಗೆ ನ್ಯೂಸ್‌ಲಾಂಡ್ರಿ ಸರಿಯಾದ ಇಮೇಲ್ ವಿಳಾಸವನ್ನು, ಒನ್ ನೇಷನ್, ಒನ್ ಎಲೆಕ್ಷನ್ ವೆಬ್‌ಸೈಟ್‌ನ ಪುಟದ ಕೆಳಭಾಗದಲ್ಲಿರುವ ವೆಬ್‌ಸೈಟ್‌ನ ‘ನಮ್ಮನ್ನು ಸಂಪರ್ಕಿಸಿ’ ವಿಭಾಗದಲ್ಲಿ [email protected] ಎಂಬ ಇಮೈಲ್ ಇರುವುದು ಕಂಡುಬಂದಿದ್ದು, ಅದಕ್ಕೆ ಈ ಬಗ್ಗೆ ಮೈಲ್ ಮಾಡಿ ತಿಳಿಸಲಾಗಿದೆ ಎಂದು ನ್ಯೂಸ್ ಲಾಂಡ್ರಿ ವರದಿ ಹೇಳಿದೆ.
ಶಾಶ್ವತ ಆಧಾರದ ಮೇಲೆ ಏಕಕಾಲಕ್ಕೆ ಚುನಾವಣೆ ನಡೆಸಲು ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಚೌಕಟ್ಟನ್ನು ರಚಿಸಲು, ಸಂವಿಧಾನ ಮತ್ತು ಸಂಬಂಧಿತ ಚುನಾವಣಾ ಕಾನೂನುಗಳಿಗೆ ಅಗತ್ಯವಾದ ತಿದ್ದುಪಡಿಗಳನ್ನು ತರಲು, ಸಾಮಾನ್ಯ ಮತದಾರರ ಪಟ್ಟಿಗಳ ತಯಾರಿಕೆ, ಇವಿಎಂಗಳು, ವಿವಿಪ್ಯಾಟ್‌ಗಳಂತಹ ಲಾಜಿಸ್ಟಿಕ್ಸ್ ಇತ್ಯಾದಿ ವಿಚಾರದಲ್ಲಿ ಉನ್ನತ ಮಟ್ಟದ ಸಮಿತಿಯು ಶಿಫಾರಸುಗಳನ್ನು ಮಾಡಬೇಕಾಗಿದೆ ಎಂದು ಜಾಹಿರಾತು ಹೇಳಿತ್ತು.
ಈ ಮಧ್ಯೆ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಸೋಮವಾರ ಉನ್ನತ ಮಟ್ಟದ ಸಮಿತಿಗೆ ಪತ್ರ ಬರೆದು, ಒಂದು ರಾಷ್ಟ್ರ, ಒಂದು ಚುನಾವಣಾ ಯೋಜನೆಯನ್ನು “ಅಂತರ್ಗತವಾಗಿ ಪ್ರಜಾಪ್ರಭುತ್ವ ವಿರೋಧಿ”ಯಾಗಿದ್ದು, ಇದು ಫೆಡರಲಿಸಂನ ಮೂಲಭೂತ ತತ್ವಗಳನ್ನು “ನಿರಾಕರಿಸುತ್ತದೆ” ಎಂದು ಹೇಳಿದ್ದಾರೆ. ಸಮಿತಿಯ “ಕಾರ್ಯಸೂಚಿ ಮತ್ತು ಉದ್ದೇಶ” “ಪೂರ್ವನಿರ್ಧರಿತ ಮತ್ತು ದುರುದ್ಧೇಶಪೂರಿತ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಯ್ಯಪ್ಪ ವ್ರತಧಾರಿಗಳಿಗೆ ಮಸೀದಿಯಲ್ಲಿ ಆಸರೆ, ಪೂಜೆ ಮಾಡಲು ಅವಕಾಶ
2014ರಿಂದ ಒಂದು ರಾಷ್ಟ್ರ, ಒಂದು ಚುನಾವಣೆ ಎಂಬುದು ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾಗಿದೆ. ಸೆಪ್ಟೆಂಬರ್ 2, 2022 ರಂದು ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದಾಗಿನಿಂದ, ಅದು ಎರಡು ಸಭೆಗಳನ್ನು ನಡೆಸಿದ್ದು, ರಾಜಕೀಯ ಪಕ್ಷಗಳಿಂದ ಸಲಹೆಗಳನ್ನು ಆಹ್ವಾನಿಸಿದೆ. ಉನ್ನತ ಮಟ್ಟದ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಸಿ ಕಶ್ಯಪ್, ಹರೀಶ್ ಸಾಳ್ವೆ, 15 ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್ ಕೆ ಸಿಂಗ್ ಮತ್ತು ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಕೂಡ ಇದ್ದಾರೆ.
ಕಾಂಗ್ರೆಸ್ ಲೋಕಸಭಾ ಸಂಸದ ಅಧೀರ್ ರಂಜನ್ ಚೌಧರಿ ಅವರನ್ನು ಸಮಿತಿಯಲ್ಲಿ ಸೇರಿಸಲಾಯಿತಾದರೂ ರಚನೆಯಾದ ಕೂಡಲೇ ಅವರು ರಾಜೀನಾಮೆ ನೀಡಿದ್ದರು. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಭೆಗಳಿಗೆ ಹಾಜರಾಗಬಹುದಾದ ವಿಶೇಷ ಆಹ್ವಾನಿತರಾಗಿದ್ದು, ಕಾನೂನು ಕಾರ್ಯದರ್ಶಿ ನಿತಿನ್ ಚಂದ್ರ ಅವರು ಸಮಿತಿಯ ಕಾರ್ಯದರ್ಶಿಯಾಗಲಿದ್ದಾರೆ.
ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ಅಸೆಂಬ್ಲಿಗಳಿಗೆ 1951 ಮತ್ತು 1967 ರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲಾಯಿತು. ರಾಜ್ಯಗಳ ಮರುಸಂಘಟನೆಯ ನಂತರ, ಹೊಸ ರಾಜ್ಯಗಳ ರಚನೆಯಾದ ನಂತರ ಮತ್ತು ಶಾಸಕಾಂಗ ಸಭೆಗಳನ್ನು ವಿಸರ್ಜಿಸಿದ ನಂತರ ಈ ಪ್ರಕ್ರಿಯೆಯನ್ನು ನಿಲ್ಲಿಸಲಾಯಿತು. ಅದಾಗ್ಯೂ, 1983 ರಲ್ಲಿ ಚುನಾವಣಾ ಆಯೋಗದ ವಾರ್ಷಿಕ ವರದಿಯು ಏಕಕಾಲದ ಚುನಾವಣೆ ನಡೆಸುವಂತೆ ಸಲಹೆ ನೀಡಲಾಗಿತ್ತು. 1999ರಲ್ಲಿ ಕಾನೂನು ಆಯೋಗದ ವರದಿ ಕೂಡಾ ಇದನ್ನೆ ಉಲ್ಲೇಖಿಸಿದೆ.
ವಿಡಿಯೊ ನೋಡಿ: ಕಲಾಸಕ್ತರ ಕಣ್ಮನ ತಣಿಸಿದ ಚಿತ್ರಸಂತೆ : ಹರಿದು ಬಂದ ಕಲಾ ಪ್ರೇಮಿಗಳ ಸಾಗರ Janashakthi Media