ಸೋನಂ ವಾಂಗ್ಚುಕ್ ಉಪವಾಸ: ವಿದ್ಯಾರ್ಥಿಗಳ ಧ್ವನಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು – ಬಿ.ಕೆ. ಹರಿಪ್ರಸಾದ್

ಬೆಂಗಳೂರು: ನೀಟ್ ಪರೀಕ್ಷೆಯ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಧಿಕಾರದ ಅಹಂಕಾರಕ್ಕಿಂತ ಪ್ರಜಾಪ್ರಭುತ್ವದ ಧ್ವನಿಗೆ ಬೆಲೆ ನೀಡುವುದು ಸರ್ಕಾರದ ಕರ್ತವ್ಯವಾಗಬೇಕು ಎಂದು ಹೇಳಿದ್ದಾರೆ. ಸೋನಂ ವಾಂಗ್ಚುಕ್ ಅವರ ಅಚಲ ಬದ್ಧತೆ, ಪ್ರಜಾಸತ್ತಾತ್ಮಕ ಹೋರಾಟ ಮತ್ತು ಅಹಿಂಸಾತ್ಮಕ ಸತ್ಯಾಗ್ರಹದ ಮನೋಭಾವಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ನೀಟ್ ಪರೀಕ್ಷೆಯ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳ ಪರವಾಗಿ ನಡೆಯುತ್ತಿರುವ ಈ ಹೋರಾಟವು ದೇಶದ ಯುವಜನರ ಆತಂಕ ಮತ್ತು ಆಕ್ರೋಶದ ಪ್ರತೀಕವಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳ ಎದುರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೋರಿಸುತ್ತಿರುವ ಮೌನ ಮತ್ತು ನಿರ್ಲಕ್ಷ್ಯ ಖಂಡನೀಯ ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ಅಪಾಯಕಾರಿ ಗುಂಡಿಯನ್ನೇ ಮುಚ್ಚದ ಪುರಸಭೆ, ಊರಿನ ಸಮಸ್ಯೆ ಹೇಗೆ ಬಗೆಹರಿಸಲಿದೆ? – ಕರವೇ ಪ್ರಶ್ನೆ

ದೇಶದ ಯುವಜನರು ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಗಂಭೀರ ಪ್ರಕರಣಗಳಲ್ಲಿ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವ ಬದಲು ಸತ್ಯವನ್ನು ಮುಚ್ಚಿಹಾಕುವ ಪ್ರಯತ್ನಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತಿವೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಒಬ್ಬ ಪರಿಸರ ಹೋರಾಟಗಾರ ಉಪವಾಸ ಸತ್ಯಾಗ್ರಹ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದೇಶದ ಆಡಳಿತ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಿದೆ. ಅಧಿಕಾರದಲ್ಲಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಇದಾಗಿದ್ದು, ಪ್ರಜಾಪ್ರಭುತ್ವದಲ್ಲಿ ಭಿನ್ನಮತವನ್ನು ಆಲಿಸುವುದು ಸರ್ಕಾರದ ದೌರ್ಬಲ್ಯವಲ್ಲ, ಅದರ ನೈತಿಕ ಹೊಣೆಗಾರಿಕೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೂಡಲೇ ಸೋನಂ ವಾಂಗ್ಚುಕ್ ಅವರೊಂದಿಗೆ ಸಂವಾದ ಆರಂಭಿಸಿ, ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು, ಅವರ ಉಪವಾಸ ಸತ್ಯಾಗ್ರಹವನ್ನು ಗೌರವಯುತವಾಗಿ ಅಂತ್ಯಗೊಳಿಸುವ ವಾತಾವರಣ ನಿರ್ಮಿಸಬೇಕು ಎಂದು ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ: 40 ಬೇಡಿಕೆಗಳೊಂದಿಗೆ ಜುಲೈ 10ಕ್ಕೆ ಅಂಗನವಾಡಿ-ಬಿಸಿಯೂಟ ನೌಕರರ ರಾಜ್ಯವ್ಯಾಪಿ ಮುಷ್ಕರ

Donate Janashakthi Media

Leave a Reply

Your email address will not be published. Required fields are marked *