ನವದೆಹಲಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ದಿನ ದಿನೇ ರಂಗುಗೊಳ್ಳಿತ್ತಿದೆ. ಪಕ್ಷದಿಂದ ಪಕ್ಷಕ್ಕೆ ಪಕ್ಷಾಂತರ ಪರ್ವವೂ ಕೂಡ ಆರಂಭಗೊಂಡು ಮತ ಪ್ರಚಾರವೂ ಕೂಡ ಆರಂಭಗೊಂಡಿರುವ ಈ ಹೊತ್ತಿನಲ್ಲಿ ದೇಶದಾದ್ಯಂತ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವ ಕುರಿತು ಪರಿಶೀಲನಾ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರು, ಎಚ್ಚರದಿಂದ ಇರುವಂತೆ ಮತ್ತು ಸೋಂಕು ನಿರ್ವಹಣೆಗೆ ಸಜ್ಜಾಗಿರುವಂತೆ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.
ಪರೀಕ್ಷೆ, ಲಸಿಕೆ ವಿತರಣೆಯನ್ನು ಹೆಚ್ಚಿಸಿ :
ರಾಜ್ಯಗಳ ಆರೋಗ್ಯ ಸಚಿವರು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ವರ್ಚುವಲ್ ಆಗಿ ಸಭೆಯಲ್ಲಿ ಭಾಗಿಯಾದರು. ನೆಗಡಿ ಮೈ-ಕೈ ನೋವು ಮಾದರಿಯ ಅನಾರೋಗ್ಯ ಹಾಗೂ ಗಂಭೀರ ಉಸಿರಾಟದ ಸಮಸ್ಯೆ ಪ್ರಕರಣಗಳ ಮೇಲೆ ನಿಗಾ ಇರಿಸಿ ಎಮರ್ಜೆನ್ಸಿ ಹಾಟ್‌ಸ್ಪಾಟ್‌ಗಳನ್ನು ಗುರುತಿಸಬೇಕು. ಪರೀಕ್ಷೆ, ಲಸಿಕೆ ವಿತರಣೆಯನ್ನು ಹೆಚ್ಚಿಸಬೇಕು. ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಲಭ್ಯ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಗೆ ಈ ಹಿಂದೆ ಮಾಡಿದಂತೆಯೇ ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ : ಹೆಚ್ಚುತ್ತಿರುವ ಕೊರೊನಾ ಸೋಂಕು : ಐಪಿಎಲ್ ಮ್ಯಾಚ್ ವೀಕ್ಷಣೆಗೆ ನೂತನ ಮಾರ್ಗಸೂಚಿ ಹೊರಡಿಸಲು ನಿರ್ಧಾರ
ಏಪ್ರಿಲ್ 10 ಹಾಗೂ 11ರಂದು ಎಲ್ಲ ಆಸ್ಪತ್ರೆಗಳ ಮೂಲಸೌಕರ್ಯಗಳ ಅಣುಕು ಪ್ರದರ್ಶನ ನಡೆಸಿ :
ಮುಂದುವರಿದು, ರಾಜ್ಯಗಳ ಆರೋಗ್ಯ ಸಚಿವರುಗಳು, ಜಿಲ್ಲಾಡಳಿತ ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಏಪ್ರಿಲ್ 8 ಮತ್ತು 9 ರಂದು ಸಿದ್ಧತೆ ಪರಿಶೀಲನೆ ನಡೆಸಬೇಕು. ಏಪ್ರಿಲ್ 10 ಹಾಗೂ 11ರಂದು ಎಲ್ಲ ಆಸ್ಪತ್ರೆಗಳ ಮೂಲಸೌಕರ್ಯಗಳ ಅಣುಕು ಪ್ರದರ್ಶನ ನಡೆಸಬೇಕು ಎಂದೂ ಒತ್ತಾಯಿಸಿದ್ದಾರೆ.
ದೇಶದಲ್ಲಿ ಹೊಸದಾಗಿ ಕೋವಿಡ್ ದೃಢಪಟ್ಟು 6,050 ಹೊಸ ಪ್ರಕರಣಗಳು ಶುಕ್ರವಾರ ವರದಿಯಾಗಿವೆ. ಗುರುವಾರ 5,335 ಪ್ರಕರಣಗಳು ಪತ್ತೆಯಾಗಿದ್ದವು. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 28,303ಕ್ಕೆ ಏರಿಕೆಯಾಗಿದೆ.