ನವದೆಹಲಿ :ಹಲವು ವರ್ಷಗಳಿಂದ ಬಾಕಿ ಉಳಿದಿರುವ ಭಾರತದ ಜನಗಣತಿ ಪ್ರಕ್ರಿಯೆಯನ್ನು ಸೆಪ್ಟೆಂಬರ್‌ನಲ್ಲಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಈ ಕುರಿತು ರಾಯಿಟರ್ಸ್ ವರದಿ ಮಾಡಿದ್ದು, ಈ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಇಬ್ಬರು ಸರ್ಕಾರಿ ಅಧಿಕಾರಿಗಳು ಸಮಗ್ರ ಸಮೀಕ್ಷೆಯು ಪೂರ್ಣಗೊಳ್ಳಲು ಸುಮಾರು 18 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ದೃಢಪಡಿಸಿದರು, ಮಾರ್ಚ್ 2026 ರ ವೇಳೆಗೆ ಫಲಿತಾಂಶಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ಜನಗಣತಿಯ ವಿಳಂಬವು ಮುಂದುವರೆದಿರುವ ವಿಚಾರ ಅನೇಕ ಟೀಕೆಗೆ ಗುರಿಯಾಗಿದೆ. ಈ ವಿಳಂಬವು ಆರ್ಥಿಕ ದತ್ತಾಂಶ, ಹಣದುಬ್ಬರ ಮತ್ತು ಉದ್ಯೋಗದ ಅಂದಾಜುಗಳು ಸೇರಿದಂತೆ ವಿವಿಧ ಅಂಕಿಅಂಶಗಳ ಸಮೀಕ್ಷೆಗಳ ನಿಖರತೆ ಮತ್ತು ಪ್ರಸ್ತುತತೆಗೆ ಧಕ್ಕೆ ತಂದಿದೆ ಎಂದು ಅರ್ಥಶಾಸ್ತ್ರಜ್ಞರು ವಾದಿಸಿದ್ದಾರೆ.
ಕೇಂದ್ರ ಸರ್ಕಾರವು 2021 ರ ಜನಗಣತಿಗಾಗಿ ಈ ವರ್ಷದ ಬಜೆಟ್ ಅನ್ನು ಕಡಿಮೆ ಮಾಡಿದೆ. ಮೂಲತಃ, ಕೇಂದ್ರ ಸಚಿವ ಸಂಪುಟವು ಜನಗಣತಿಗಾಗಿ ₹ 8,754.23 ಕೋಟಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಅನ್ನು ನವೀಕರಿಸಲು ಹೆಚ್ಚುವರಿ ₹ 3,941.35 ಕೋಟಿ ಬಜೆಟ್‌ಗೆ ಅನುಮೋದನೆ ನೀಡಿತ್ತು. ಆದಾಗ್ಯೂ, 2024-25 ರ ಕೇಂದ್ರ ಬಜೆಟ್‌ನಲ್ಲಿ, ಹಂಚಿಕೆಯನ್ನು ₹ 1,309 ಕೋಟಿಗೆ ಕಡಿತಗೊಳಿಸಲಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು.
ಇನ್ನೂ ಇದೇ ವೇಳೆ ವರ್ಷಾಂತ್ಯಕ್ಕೆ ಐದು ರಾಜ್ಯಗಳ ವಿಧಾನಸಭೆ ಗಳಿಗೆ ಚುನಾವಣೆಗಳು ನಡೆಯಲಿವೆ. ಹೀಗಾಗಿ, ದೇಶದಾದ್ಯಂತ ಜನಗಣತಿಯನ್ನು ಹೇಗೆ ನಡೆಸಲಾಗುತ್ತದೆ ಎಂಬ ಬಗ್ಗೆ ಪ್ರಶ್ನೆಗಳೂ ಎದುರಾಗಿವೆ.