ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಿಡುಗಡೆ ಕೇಸ್ಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳಿಗೆ ಯುವತಿ ಪಿಜಿಯಲ್ಲಿ ₹ 9.20 ಲಕ್ಷ ಮೌಲ್ಯದ ಹಣ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ.
ಇದಲ್ಲದೇ ನರೇಶ್ ಮನೆಯಲ್ಲಿ ₹ 18.5 ಲಕ್ಷ ಚಿನ್ನ ಖರೀದಿ ಮಾಡಿರುವ ರಶೀದಿ ಪತ್ತೆಯಾಗಿದ್ದು, ಲ್ಯಾಪ್‌ಟಾಪ್, ಪೆನ್ಡ್ರೈವ್ ಸೇರಿ ಇತರ ದಾಖಲೆಗಳು ತನಿಖಾ ತಂಡಕ್ಕೆ ಲಭ್ಯವಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಿತ್, ಅರುಣ್, ಲಕ್ಷ್ಮೀಪತಿ, ಯುವತಿಯ ಬಾಯ್‌ಫ್ರೆಂಡ್ ಆಕಾಶ್, ಚೇತನ್ ಎಂಬ ಆರು ಜನರನ್ನು ವಶಕ್ಕೆ ಪಡೆದಿರುವ ವಿಶೇಷ ತನಿಖಾ ತಂಡ ವಿಚಾರಣೆಯನ್ನು ಚುರುಕುಗೊಳಿಸಿದೆ.
ನಾಲ್ವರು ಪತ್ರಕರ್ತರ ಕೈವಾಡ: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಇಳಿದಿರುವ ಎಸ್ಐಟಿ ಮೊದಲ ದಿನದಿಂದಲೇ ತನಿಖೆ ಚುರುಕುಗೊಳಿಸಿದೆ. ಈ ವೇಳೆ ಸಿಡಿ ಸಂಚಿನ ಹಿಂದೆ ನಾಲ್ವರು ಮಾಜಿ ಪತ್ರಕರ್ತರ ಹೆಸರು ಕೇಳಿಬರುತ್ತಿದೆ. ಈ ಸಂಬಂಧ ಎಸ್ಐಟಿ ಕೆಲವರಿಗೆ ನೋಟಿಸ್ ನೀಡಿದೆ.
ಪ್ರಕರಣದಲ್ಲಿ ತುಮಕೂರಿನ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿರುವ ಮಾಜಿ ಪತ್ರಕರ್ತ ನರೇಶ್ ಗೌಡ ಸಿಡಿ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ವರದಿಯಾಗುತ್ತಿದೆ.
ಇನ್ನುಳಿದಂತೆ ವಿಜಯಪುರ ದೇವನಹಳ್ಳಿಯ ಮೂಲದ ಶ್ರವಣ್, ಚಿಕ್ಕಮಗಳೂರಿನ ಆಲ್ದೂರಿನ ಮಾಜಿ ಪತ್ರಕರ್ತ ಭವಿತ್ ದೋಣಗುಡಿಗೆ, ಬೀದರ್ ಭಾಲ್ಕಿ ಮೂಲದ ಆಕಾಶ್ ತಳವಾಡೆ ಮತ್ತು ಬೀದರ್ ಔರಾದ್ ಮೂಲದ ಸಾಗರ್ ಶಿಂಧೆ ಹೆಸರು ಕೇಳಿಬರುತ್ತಿದೆ.
ನರೇಶ್ ಜೊತೆ ನಾಲ್ವರು ನಾಪತ್ತೆ ಆಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ನರೇಶ್, ಶ್ರವಣ್ ಹಾಗೂ ಯುವತಿಯ ಜೊತೆಗೆ ಓರ್ವ ಉದ್ಯಮಿಯೂ ನಾಪತ್ತೆಯಾಗಿರುವ ಸಂಗತಿ ಬಯಲಾಗಿದೆ. ಬೆಂಗಳೂರಿನ ಜೆ.ಪಿ.ನಗರದ ನಿವಾಸಿಯಾಗಿರುವ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದು, ಸಿಡಿ ಕೇಸ್ನಲ್ಲಿ ನರೇಶ್ಗೆ ನೆರವು ನೀಡಿದ್ದ ಎಂಬ ಆರೋಪ ಕೇಳಿಬಂದಿದೆ.
ಸಿಡಿ ಬಿಡುಗಡೆಗಾಗಿ ಸಭೆ : ಸಿಡಿ ಬಿಡುಗಡೆಗೂ ಮುನ್ನ ಐವರು ಸಭೆ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಸಿಡಿ ಬಿಡುಗಡೆ ಸೂತ್ರಧಾರರ ಸಂಪರ್ಕದಲ್ಲಿದ್ದವರ ಬೆನ್ನು ಬಿದ್ದಿರುವ ಎಸ್ಐಟಿ ಸುಮಾರು 30ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಸಿಡಿ ಕಿಂಗ್ಪಿನ್ಗಳಾದ ನರೇಶ್, ಶ್ರವಣ್, ಯುವತಿ, ಲಕ್ಷ್ಮೀಪತಿ ಮತ್ತು ಆಕಾಶ್ ಸಿಡಿ ಬಿಡುಗಡೆ ದಿನ ಆರ್ಟಿ ನಗರದಲ್ಲಿ ಸಭೆ ನಡೆಸಿದ್ದಾರೆ ಎನ್ನುವ ವಿಚಾರವೂ ಬೆಳಕಿಗೆ ಬಂದಿದೆ. ಈ ಐದು ಜನರ ಮೊಬೈಲ್ ಲೊಕೇಷನ್ ಸುಮಾರು 2 ಗಂಟೆಗಳ ಕಾಲ ಒಂದೇ ಟವರ್ನಲ್ಲಿತ್ತು ಎಂಬ ಸಂಗತಿ ಬಯಲಾಗಿರುವ ಕಾರಣ ಐವರ ನಿಕಟ ಸಂಪರ್ಕದಲ್ಲಿರುವವರನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿದೆ.
ಸಿಡಿ ಬಿಡುಗಡೆಗೆ ಸಂಬಂಧಿಸಿದ ಪ್ರಮುಖ ಆರೋಪಗಳಿಗೆ ದೊಡ್ಡ ಮಟ್ಟದ ಹಣ ಸಂದಾಯವಾಗಿದೆ ಎನ್ನುವ ಅನುಮಾನ ಬಲವಾಗುತ್ತಿದ್ದು, ಆರೋಪಿ ಶ್ರವಣ್ ಅಣ್ಣ ಚೇತನ್ ಅಕೌಂಟ್ಗೆ ₹ 20 ಲಕ್ಷಕ್ಕೂ ಹೆಚ್ಚು ಹಣ ಸಂದಾಯವಾಗಿರುವುದು ಪತ್ತೆಯಾಗಿದೆ. ಈ ಕಾರಣದಿಂದ ಎಸ್ಐಟಿ ಅಧಿಕಾರಿಗಳು ಹಣ ಎಲ್ಲಿಂದ ಬಂತು? ಹಣವನ್ನ ಹಾಕಿರುವ ವ್ಯಕ್ತಿ ಯಾರು? ಎಲ್ಲಿಂದ ಹಣ ಹಾಕಿದ್ದಾರೆ? ಯಾವ ಕಾರಣಕ್ಕೆ ಹಾಕಲಾಗಿದೆ? ₹ 20 ಲಕ್ಷ ಹಣದ ಮೂಲ ಯಾವುದು? ಎಂದು ಹುಡುಕಾಟ ನಡೆಸುತ್ತಿದ್ದಾರೆ. ಕೆಲ ಮೂಲಗಳ ಪ್ರಕಾರ ಐದೈದು ಲಕ್ಷದಂತೆ ಒಟ್ಟು ನಾಲ್ಕು ಬಾರಿ ಶ್ರವಣ್ ಅಣ್ಣ ಚೇತನ್ ಖಾತೆಗೆ ಹಣ ಸಂದಾಯವಾಗಿದ್ದು, ಅಕೌಂಟ್ ಟು ಅಕೌಂಟ್ ವರ್ಗಾವಣೆ ಆಗಿರುವುದು ಗೊತ್ತಾಗಿದ್ದು, ಹಲವು ಬ್ಯಾಂಕ್ ಖಾತೆಗಳಿಂದ ಹಣ ಸಂದಾಯವಾಗಿರುವುದಕ್ಕೆ ದಾಖಲೆ ಲಭ್ಯವಾಗಿದೆ. ಹೀಗಾಗಿ ಎಸ್ಐಟಿಯಿಂದ ಐವರ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡುತ್ತಿದೆ.
ಲಕ್ಷಗಟ್ಟಲೆ ವ್ಯವಹಾರದ ಹಿಂದೆ ಯಾರಿದ್ದಾರೆ? ಏತನ್ಮಧ್ಯೆ ಆರೋಪಿ ನರೇಶ್ ಬ್ಯಾಂಕ್ ಖಾತೆಯ ಇಂಚಿಂಚೂ ಮಾಹಿತಿ ಕಲೆಹಾಕುತ್ತಿರುವ ಎಸ್ಐಟಿ ಹಣ ಡೆಪಾಸಿಟ್ ಮಾಡಿದವರಿಗಾಗಿ ಹುಡುಕಾಟ ನಡೆಸುತ್ತಿದ್ದು, ಅವರೇನಾದರೂ ಪತ್ತೆಯಾದರೆ ಪ್ರಕರಣಕ್ಕೆ ದೊಡ್ಡ ತಿರುವು ಲಭಿಸುವ ಸಾಧ್ಯತೆ ಇದೆ. ನರೇಶ್ ಗೌಡ ಜೀಪ್ ಬುಕ್ ಮಾಡಲು ಅಡ್ವಾನ್ಸ್ ಕೊಟ್ಟಿರುವ ಬಗ್ಗೆ, 2 ಬಾರಿ ಕಾರು ಬುಕ್ ಮಾಡಿ ಮತ್ತೆ ಕ್ಯಾನ್ಸಲ್ ಮಾಡಿರುವ ಬಗ್ಗೆ, ₹ 10 ಲಕ್ಷ ಮೌಲ್ಯದ ಚಿನ್ನದ ಚೈನ್ ಖರೀದಿಸಿರುವ ಬಗ್ಗೆ ಹಾಗೂ ಮೈಸೂರು, ಕೊಡಗು, ಸೋಮವಾರಪೇಟೆ ಭಾಗದಲ್ಲಿ ಜಮೀನು ಖರೀದಿಗೆ ಹುಡುಕಾಟ ನಡೆಸಿದ್ದ ಬಗ್ಗೆ ಮಾಹಿತಿ ಸಿಕ್ಕಿರುವುದರಿಂದ ಈತನ ಬೆನ್ನ ಹಿಂದೆ ಯಾರಿರಬಹುದು ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಒಟ್ಟಾರೆ ಸಿಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದ್ದು, ರಮೇಶ್ ಜಾರಕಿಹೊಳಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.