ಸಂತ್ರಸ್ತ ಯುವತಿಯಿಂದ ವಿಡಿಯೋ ಹೇಳಿಕೆ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಎಫ್ಐಆರ್ ದಾಖಲಾಗುತ್ತಿದ್ದಂತೆ ವಿಡಿಯೋದಲ್ಲಿದ್ದ ಯುವತಿ ಮೊದಲ ಬಾರಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿ ಅವರೇ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಬಿಗ್ ಟ್ವಿಸ್ಟ್ ನೀಡಿದ್ದಾರೆ.

ಸಿಡಿ ಬಿಡುಗಡೆಯಾದ 12 ದಿನಗಳ ನಂತರ ಪ್ರತ್ಯಕ್ಷವಾಗಿರುವ ಯುವತಿ, ರಮೇಶ್ ಜಾರಕಿಹೊಳಿ ಅವರು ನನಗೆ ಕೆಲಸಕೊಡಿಸುವುದಾಗಿ ಹೇಳಿ ನಂಬಿಸಿ ವಂಚಿಸಿದ್ದಾರೆ. ಆದರೆ ಈ ವಿಡಿಯೋದಿಂದಾಗಿ ನನ್ನ ಮಾನ ಹರಾಜಾಗಿದೆ. ನನಗೆ ಯಾವುದೇ ರಾಜಕೀಯ ನಾಯಕರ ಬೆಂಬಲ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಈ ವಿಡಿಯೋ ಹೇಗೆ ಮಾಡಿದರು ಅಂತ ನನಗೆ ಗೊತ್ತಿಲ್ಲ. ರಮೇಶ್ ಜಾರಿಕಿಹೊಳಿ ಅವರೇ ಸಿಡಿ ಬಿಡುಗಡೆ ಮಾಡಿದ್ದಾರೆ. ಇದರಿಂದ ನನ್ನ ತಂದೆ, ತಾಯಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನೂ ಕೂಡ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಕುಟುಂಬಕ್ಕೆ ರಕ್ಷಣೆ ಕೊಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಯುವತಿ ಮನವಿ ಮಾಡಿದ್ದಾರೆ. ಅಜ್ಞಾತ ಸ್ಥಳದಿಂದ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿ ಅವರ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಇನ್ನು ಯುವತಿ ವಿಡಿಯೋ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ಆ ಯುವತಿ ಸಂಚುಕೋರರ ಕೈಗೊಂಬೆಯಾಗಿದ್ದಾಳೆ. ಇದು ಸಹ ಷಡ್ಯಂತ್ರದ ಒಂದು ಭಾಗ ಎಂದಿದ್ದಾರೆ.

ಅಶ್ಲೀಲ ಸಿಡಿ ಪ್ರಕರಣದಲ್ಲಿ ತಮಗೆ ಬ್ಯ್ಯಾಕ್ ಮೇಲ್ ಮಾಡಲಾಗಿದೆ ಎಂದು ಆರೋಪಿಸಿ ರಮೇಶ್ ಜಾರಕಿಹೊಳಿ ಅವರು ಇಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

ಕಾನೂನು ತಜ್ಞರು, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ ನಂತರ ರಮೇಶ್ ಜಾರಕಿಹೊಳಿ ಅಧಿಕೃತವಾಗಿ ದೂರು ನೀಡಿದ್ದಾರೆ.

ಇತ್ತ ಯುವತಿ ರಮೇಶ್ ಜಾರಿಕಿಹೊಳಿಯವರೇ ವಿಡಿಯೊ ಬಿಡುಗಡೆ ಮಾಡಿದ್ದು, ಕೆಲಸ ಕೊಡುಸುವುದಾಗಿ ನನಗೆ ಮೋಸ ಮಾಡಿದ್ದಾರೆ ಎಂಬ ಆರೋಪವನ್ನು ಮಾಡಿದ್ದರೆ, ಇತ್ತ ರಮೇಶ್ ದೂರು ನೀಡಿದ್ದಾರೆ, ಇನ್ನೊಂದೆಡೆ ಮಹಿಳಾ ಆಯೋಗ ರಮೇಶ ಜಾರಕಿಹೊಳಿಯವರ ಮೇಲೆ ಸುಮೋಟೊ ಕೇಸ್ ದಾಖಲಿಸಿದೆ. ಎಸ್.ಐ.ಟಿ ಕೂಡಾ ತನಿಖೆಯನ್ನು ಚುರುಕುಗೊಳಿಸಿದ್ದು ಇನ್ನಷ್ಟು ಮಾಹಿತಿಗಳು ಹೊರ ಬರುವ ಸಾಧ್ಯತೆಗಳಿವೆ.

Donate Janashakthi Media

Leave a Reply

Your email address will not be published. Required fields are marked *