ಸಿಡಿ ಪ್ರಕರಣ – ಹೈದ್ರಾಬಾದ್ನಲ್ಲಿ‌ ಯುವತಿ ಪತ್ತೆ?

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ.ಯಲ್ಲಿರುವ ಯುವತಿ ಹೈದರಾಬಾದ್‌ನಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರು ಹಾಗೂ ಇಬ್ಬರು ಯುವಕರನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸಿರುವ ಮಾಹಿತಿಯೂ ಇದೆ.

ಹೈದರಾಬಾದ್‌ಗೆ ಹೋಗಿದ್ದ ಎಸ್‌ಐಟಿ ತಂಡ, ಯುವತಿ ವಿಳಾಸ ಪತ್ತೆ ಮಾಡಿ ಅವರನ್ನು ಬೆಂಗಳೂರಿಗೆ ಕರೆತರುತ್ತಿದೆ ಎನ್ನಲಾಗಿದೆ. ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಇಬ್ಬರು ಯುವಕರು ಹೈದರಾಬಾದ್‌ನಲ್ಲಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, ಅವರನ್ನೂ ಬೆಂಗಳೂರಿಗೆ ಕರೆತರಲಾಗುತ್ತಿದೆ.

ಯುವತಿ ಹಾಗೂ ಯುವಕರನ್ನು ನಗರಕ್ಕೆ ಕರೆತರುತ್ತಿರುವುದರಿಂದ ಹೆಚ್ಚಿನ ಭದ್ರತೆಗೆ ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ವಿಚಾರಣೆಯಲ್ಲಿ ಸಿಕ್ಕ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿರುವ ತಂಡ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರರ ಪತ್ತೆಗೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾದಲ್ಲಿ ಶೋಧ ನಡೆಸುತ್ತಿದೆ.

ಶನಿವಾರವಷ್ಟೇ ವಿಡಿಯೊ ಹರಿಬಿಟ್ಟಿದ್ದ ಯುವತಿ, ಹೈದರಾಬಾದ್‌ನಲ್ಲಿರುವ ಮಾಹಿತಿ ಎಸ್‌ಐಟಿ ತಂಡಕ್ಕೆ ಸಿಕ್ಕಿತ್ತು. ಮಹಿಳಾ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡವೊಂದು ಹೈದರಾಬಾದ್‌ಗೆ ಹೋಗಿ ಯುವತಿಯನ್ನು ಪತ್ತೆ ಮಾಡಿರುವುದಾಗಿ ಗೊತ್ತಾಗಿದೆ.

ಇದೇ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಅಧಿವೇಶನದಲ್ಲಿ ಚರ್ಚೆಗೆ ಸಿದ್ದತೆಗಳನ್ನು ನಡೆಸಿವೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ರವರು ಸಿಡಿ ವಿಚಾರ ಪ್ರಸ್ತಾಪಿಸುವ ಸಾಧ್ಯತೆಗಳಿವೆ.

Donate Janashakthi Media

Leave a Reply

Your email address will not be published. Required fields are marked *