ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಅಶ್ಲೀಲ ವಿಡಿಯೊ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಗ್ಯಾಂಗ್ ಗೆ ಹಣ ಸಂದಾಯ ಮಾಡುರುವುದು ಮೂಲಗಳಿಂದ ತಿಳಿದು ಬಂದಿದೆ.
ಸಿ.ಡಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು, ರಮೇಶ ಅವರ ಹೇಳಿಕೆಯನ್ನು ಸೋಮವಾರ ರಾತ್ರಿ ದಾಖಲಿಸಿಕೊಂಡಿದ್ದಾರೆ. ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಆಧರಿಸಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಶಂಕಿತರ ಹೇಳಿಕೆಯನ್ನು ಪಡೆಯುತ್ತಿದ್ದಾರೆ. ದೂರುದಾರ ರಮೇಶ ಹೇಳಿಕೆಯನ್ನೂ ಸದಾಶಿವನಗರದಲ್ಲಿರುವ ಅವರ ಮನೆಯಲ್ಲಿ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
ರಮೇಶ ಹೇಳಿಕೆಯಲ್ಲಿ ಏನಿದೆ? : ‘ಯುವತಿ ಜತೆಗಿನ ನಕಲಿ ವಿಡಿಯೊ ಮುಂದಿಟ್ಟು ಬ್ಲ್ಯಾಕ್‌ಮೇಲ್ ಮಾಡಿದ್ದ ತಂಡ, ನನ್ನಿಂದ ಸ್ವಲ್ಪ ಹಣ ಸುಲಿಗೆ ಮಾಡಿತ್ತು. ನಾನು ಹೆದರಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದ ತಂಡ, ಮೊದಲು ₹5 ಕೋಟಿ ಕೇಳಿ, ಬಳಿಕ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿತ್ತು. ಕೇಳಿದಷ್ಟು ಹಣ ನೀಡಲಿಲ್ಲವೆಂದು ತಂಡದ ಸದಸ್ಯರು ಸಂಚು ರೂಪಿಸಿ ಸಿ.ಡಿ ಬಹಿರಂಗಪಡಿಸಿದ್ದಾರೆ’ ಎಂದು ರಮೇಶ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.
‘ನನ್ನ ಆಪ್ತರಲ್ಲಿ ಒಬ್ಬರಾದ ಮಾಜಿ ಶಾಸಕ ಎಂ.ವಿ.ನಾಗರಾಜ್ ಅವರನ್ನು ಸಂಪರ್ಕಿಸಿದ್ದ ತಂಡದ ಸದಸ್ಯರು, ‘ರಮೇಶ ಜಾರಕಿಹೊಳಿ ಅವರ ಸಿ.ಡಿ ನಮ್ಮ ಬಳಿ ಇದೆ. ಅದನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತೇವೆ. ಆ ರೀತಿ ಮಾಡಬಾರದೆಂದರೆ ಹಣ ಕೊಡಿಸಿ’ ಎಂದಿದ್ದರು. ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸುತ್ತಿರುವ ಹಾಗೂ ನಕಲಿ ವಿಡಿಯೊ ಸೃಷ್ಟಿಸಿ ತೇಜೋವಧೆ ಮಾಡಲು ಪ್ರಯತ್ನಿಸುತ್ತಿದ್ದ ತಂಡದ ಬಗ್ಗೆ ನಾಗರಾಜ್ ಗಮನಕ್ಕೆ ತಂದಿದ್ದರು. ಸುಮ್ಮನೇ ಏಕೆ ಮರ್ಯಾದೆ ಕಳೆದುಕೊಳ್ಳುವುದು ಎಂದು ಸ್ವಲ್ಪ ಹಣವನ್ನು ಆರೋಪಿಗಳಿಗೆ ಕೊಟ್ಟಿದ್ದೆ.’
‘ಹಣದ ರುಚಿ ಹತ್ತುತ್ತಿದ್ದಂತೆ ಆರೋಪಿಗಳು ಪುನಃ ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹಣ ಕೊಡಲು ನಿರಾಕರಿಸಿದ್ದೆ. ಅದೇ ಸಿ.ಡಿ ಇಟ್ಟುಕೊಂಡು ತಂಡದ ಸದಸ್ಯರು, ಎದುರಾಳಿಗಳ ಬಳಿ ಹೋಗಿರಬಹುದು. ಅವರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ಸಿ.ಡಿ ಬಿಡುಗಡೆ ಮಾಡಿರುವ ಅನುಮಾನವೂ ಇದೆ. ಇದರಲ್ಲಿ ಮಹಾನಾಯಕನ ಪಾತ್ರವೂ ಇರಬಹುದು. ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಿ’ ಎಂದು ಹೇಳಿಕೆಯಲ್ಲಿ ರಮೇಶ ತಿಳಿಸಿರುವುದಾಗಿ ಗೊತ್ತಾಗಿದೆ.
ಹಣ ಸಂದಾಯ : ಸಿಡಿ ಪ್ರಕರಣದ ಸಂಬಂಧ ರಮೇಶ್ ಜಾರಕಿಹೊಳಿಯವರು ೫ ಕೋಟಿ ರೂ. ಸಂದಾಯ ಮಾಡಿದ್ದಾರೆ ಎನ್ನಲಾಗಿದ್ದು ಮಾಜಿ ಸಚಿವರು ೫ ಕೋಟಿ ರೂಪಾಯಿ ಹಣ ಸಂದಾಯ ಮಾಡಿದ್ದಾರೆ.
ಮಾಜಿ ಶಾಸಕರ ಮೂಲಕ ರಮೇಶ್ ಜಾರಕಿಹೊಳಿಯವರು ಹಂತ-ಹಂತವಾಗಿ ಹಣ ಸಂದಾಯ ಮಾಡಿದ್ದಾರೆ. ಆದರೆ ಸಿಡಿಕೋರರು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇನ್ನಷ್ಟು ಹಣ ನೀಡಲು ಮಾಜಿ ಸಚಿವರು ಹಿಂದೇಟು ಹಾಕಿದ್ದರಿಂದ ಗ್ಯಾಂಗ್ ಸಿಡಿ ಬಿಡುಗಡೆಗೆ ನಿರ್ಧರಿಸಿತ್ತು ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ಸಂತ್ರಸ್ತೆ ಪೋಷಕರಿಂದ ದೂರು : ರಮೇಶ್ ಜಾರಕಿಹೊಳಿ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು ರಾಜಕೀಯ ವಲಯದಲ್ಲಿ ಇನ್ನಿಲ್ಲದ ಬೆಳವಣಿಗೆಳಿಗೆ ನಾಂದಿ ಹಾಡುತ್ತಿದೆ.
ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ಸಿ.ಡಿ ಎನ್ನಲಾದ ಸಿಡಿ ನಂಟು ಈಗ ಕುಂದಾನಗರಿ ಬೆಳಗಾವಿಗೆ ಕೂಡಾ ಅಂಟಿದೆ. ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಸಂತ್ರಸ್ತ ಯುವತಿಯ ಪಾಲಕರು ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸಿ.ಡಿಯಲ್ಲಿರುವ ಸಂತ್ರಸ್ತೆ ಎಂದು ಹೇಳಲಾಗುತ್ತಿರುವ ಯುವತಿಯನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ಇಂದು(ಮಾ.-16 ಮಂಗಳವಾರ) ಯುವತಿಯ ತಂದೆ,ತಾಯಿ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನ ಹಾಸ್ಟೆಲ್‌ನಲ್ಲಿದ್ದಾಗ ಆಕೆಯನ್ನು ಅಪಹರಣ ಮಾಡಿದ್ದಾರೆ. ಅಕೆಯನ್ನು ಹೆದರಿಸಿ ಅಶ್ಲೀಲ ಸಿ.ಡಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯುವತಿಯ ತಂದೆ ಪ್ರಕಾಶ್ ಎಂಬುವವರು ದೂರು ದಾಖಲಿಸಿದ್ದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 363, 368, 343, 346, 354,506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
“ಹೆದರಿ ಹಣ ನೀಡಿದೆ” ಎಂಬ ಹೇಳಿಕೆ ಹಲವು ಅನುಮಾನಗಳನ್ನು ಸೃಷ್ಟಿಸುತ್ತಿದೆ. ಆ ವಿಡಿಯೊ ನಕಲಿ ಎಂದ ಮೇಲೆ ರಮೇಶ್ ಜಾರಕಿಹೊಳಿ ಯಾಕೆ ಹಣ ನೀಡಿದರು? ಆ ಅಪರಾಧಿ ಕೃತ್ಯದಲ್ಲಿ ರಮೇಶ್ ಭಾಗಿಯಾಗಿದ್ದರ ಬಗ್ಗೆ ಅವರಿಗೆ ಗೊಂದಲವಿತ್ತೆ? ಸಾಹುಕಾರ ಮನೆತನ, ರಾಜಮನೆತನ ಮನೆ ಮರ್ಯಾದೆ ಎಂದು ಮಾಧ್ಯಮದ ಮುಂದೆ ಹೇಳುತ್ತಿರುವ ರಮೇಶ್ ರವರಿಗೆ ಆ ಪ್ರಜ್ಞೆ ಇರಲಿಲ್ಲವೆ? ಆ ಗ್ಯಾಂಗ್ ಕುರಿತು ಯಾಕೆ ದೂರು ದಾಖಲಸಲಿಲ್ಲ? ಒಬ್ಬ ಸಚಿವರು ಈ ರೀತೀಯ ಗ್ಯಾಂಗ್ ನ ಬ್ಲ್ಯಾಕ್ ಮೇಲ್ ಗೆ ಬಲಿಯಾಗುತ್ತಾರೆ ಎಂದಾದರೆ ಅವರ ನೈತಿಕತೆ ಏನು? ಎಂಬ ಪ್ರಶ್ನೆಗಳು ಈಗ ಸೃಷ್ಟಿಯಾಗಿವೆ.