ಬೆಂಗಳೂರು: ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿ ವಾಸವಾಗಿದ್ದ ಪಿಜಿಯನ್ನು ಎಸ್‌ಐಟಿ ಅಧಿಕಾರಿಗಳು ಗುರುವಾರ ಮಹಜರು ನಡೆಸಿದರು.
ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದ ಯುವತಿ ಬೆಂಗಳೂರಿನ ಆರ್.ಟಿ ನಗರದಲ್ಲಿರುವ ಪಿಜಿಯಲ್ಲಿ ವಾಸವಾಗಿದ್ದರು. ಇಲ್ಲೇ ಇದ್ದು ರಮೇಶ್ ಜಾರಕಿಹೊಳಿ ಜೊತೆಗೆ ಫೋನ್ ಸಂಭಾಷಣೆಯನ್ನು ನಡೆಸಿದ್ದರು. ಸಂಭಾಷಣೆಯಲ್ಲಿ ತಾನು ಆರ್‌ಟಿ ನಗರದಲ್ಲಿರುವ ಪಿಜಿಯಲ್ಲಿ ವಾಸವಾಗಿರುವುದಾಗಿ ಯುವತಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಗುರುವಾರ ಯುವತಿಯೊಂದಿಗೆ ತೆರಳಿ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ.
ಅಷ್ಟೇ ಅಲ್ಲದೆ ಈ ಹಿಂದೆ ಪಿಜಿ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದ ಹಣ ದೊರಕಿತ್ತು. ಈ ಹಣ ಯಾರಿಗೆ ಸೇರಿದ್ದು ಎಂಬುವುದು ಇನ್ನೂ ಅಧಿಕೃತಗೊಂಡಿಲ್ಲ. ಯುವತಿ ಈ ಬಗ್ಗೆ ಏನು ಹೇಳಿಕೆಯನ್ನು ಇನ್ನೂ ನೀಡಿಲ್ಲ. ಈಗಾಗಲೇ ಯುವತಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಎಸ್‌ಐಟಿ ಅಧಿಕಾರಿಗಳು ಒಂದು ಹಂತದ ವಿಚಾರಣೆಯನ್ನು ನಡೆಸಿದ್ದಾರೆ. ಗುರುವಾರ ಕೂಡಾ ವಿಚಾರಣೆಯನ್ನು ಮುಂದುವರಿಸಲಿದ್ದಾರೆ.
ಇದನ್ನೂ ಓದಿ : ಸಂತ್ರಸ್ತ ಯುವತಿಯ ಮಾಹಿತಿಯನ್ನು ಎಸ್‌ಐಟಿ ಲೀಕ್ ಮಾಡುತ್ತಿದೆ – ವಕೀಲ ಜಗದೀಶ್ ಆರೋಪ
ಇನ್ನು ಸಂತ್ರಸ್ತೆ ಯುವತಿ ತನಗೆ ಜೀವ ಬೆದರಿಕೆ ಇದೆ ಎಂದು ಆರೋಪ ಮಾಡಿರುವುದರಿಂದ ಪೊಲೀಸರು ವಿಶೇಷ ಭದ್ರತೆಯನ್ನು ನೀಡಿದ್ದಾರೆ. ನಗರ ಪೊಲೀಸ್ ವಿಶೇಷ ತಂಡವನ್ನು ಯುವತಿಯ ಭದ್ರತೆಗಾಗಿ ನಿಯೋಜಿಸಲಾಗಿದೆ. ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.