ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಸೋಮವಾರ (ಮಾರ್ಚ್ 29) ಇದೇ ಮೊದಲ ಬಾರಿಗೆ ನ್ಯಾಯಾಧೀಶರ ಮುಂದೆ ಹಾಜರಾಗಿ ಸ್ವಯಂ ಪ್ರೇರಿತ ಹೇಳಿಕೆ ನೀಡುವ ಸಾಧ್ಯತೆಯಿದೆ.
ಇದನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿರುವ ಯುವತಿ ಪರ ವಕೀಲ ಜಗದೀಶ್, ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ನಿಯಮ 164ರ ಅಡಿ ಹೇಳಿಕೆ ನೀಡಲಿದ್ದಾರೆ.ಇದು ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಲಿದೆ ಎಂದಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಕಿಹೊಳಿ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡುವಂತೆ ಯುವತಿಗೆ ಎರಡನೇ ನೋಟಿಸ್ ಜಾರಿಯಾಗಿದೆ.
ಅತ್ಯಾಚಾರ ಪ್ರಕರಣದಲ್ಲಿ ದೂರುದಾರರು ಸಂತ್ರಸ್ಥೆಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಪ್ರಕರಣದ ಗೌಪ್ಯ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಯುವತಿಯ ಹೇಳಿಕೆಗಳು ದಾಖಲಾಗಲಿವೆ. ಆರೋಪಿ ಮತ್ತು ಸಂತ್ರಸ್ತೆ ಆರೋಗ್ಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ’ ಎಂದು ಜಗದೀಶ್ ಅವರೊಂದಿಗೆ ಫೇಸ್‌ಬುಕ್ ಸಂವಾದದಲ್ಲಿದ್ದ ಮಂಜುನಾಥ್ ಎಂಬುವವರು ತಿಳಿಸಿದ್ದಾರೆ.
ಯುವತಿ ಕೈಬರಹದಲ್ಲಿ ನೀಡಿದ್ದ ದೂರಿನ ಪ್ರತಿಯನ್ನು ಆಕೆಯ ಪರ ವಕೀಲರಾಗಿರುವ ಕೆ.ಎನ್.ಜಗದೀಶ್ ಶುಕ್ರವಾರ ಪೊಲೀಸ್ ಆಯುಕ್ತರಿಗೆ ತಲುಪಿಸಿ, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು.
ಐಪಿಸಿ ಸೆಕ್ಷನ್ 376 ಸಿ (ಪ್ರಭಾವಿ ಹುದ್ದೆಯಲ್ಲಿದ್ದು, ಅತ್ಯಾಚಾರ), 354 ಎ(ಕೆಲಸ ನೀಡುವುದಾಗಿ ನಂಬಿಸಿ ದೈಹಿಕ ಸಂಪರ್ಕ) 506 (ಜೀವ ಬೆದರಿಕೆ), 417(ವಂಚನೆ) ಅಡಿ ಪ್ರಕರಣ ದಾಖಲಾಗಿದೆ. ಜತೆಗೆ, ವೀಡಿಯೊ ಹರಿಬಿಟ್ಟಿರುವ ಆರೋಪದ ಮೇಲೂ ರಮೇಶ್ ಜಾರಕಿಹೊಳಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಾಗಿದೆ.
ದೂರು ನೀಡಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿದೆ.