ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳು ರದ್ದು

ನವದೆಹಲಿ: ಕೋವಿಡ್-19ರ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದಾಗಿ 2020-2021ನೇ ಸಾಲಿನ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿದೆ ಕೇಂದ್ರ ಸರಕಾರ.

ಕಳೆದ ವರ್ಷದಂತೆಯೇ ಸಿಬಿಎಸ್‌ಇಯ ಕೆಲವು ವಿದ್ಯಾರ್ಥಿಗಳು ಏನಾದರೂ ಪರೀಕ್ಷೆ ಬರೆಯಲು ಇಚ್ಚಿಸಿದ್ದಲ್ಲಿ ಅವರಿಗೆ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುವುದು. ಆದರೆ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಪರೀಕ್ಷೆ ನಡೆಸಲಾಗುವುದು ಎಂದು ಸರ್ಕಾರವು ಸ್ಪಷ್ಟಪಡಿಸಿದೆ.

ಪರೀಕ್ಷೆಗಳು ನಡೆಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ತಜ್ಞರು ಹಾಗೂ ಅಧಿಕಾರಗಳ ಸಭೆ ನಡೆಸಲಾಯಿತು. ಸಭೆಯ ಬಳಿಕ ಪರೀಕ್ಷೆ ರದ್ದು ಪಡಿಸುವ ನಿರ್ಧಾರವನ್ನು ಸರಕಾರವು ಪ್ರಕಟಿಸಿದೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟಿ ಮಾಡಿದ್ದು, ‘ಭಾರತ ಸರ್ಕಾರವು 12ನೇ ತರಗತಿ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳನ್ನು ರದ್ದು ಪಡಿಸಲು ನಿರ್ಧರಿಸಿದೆ. ಸಾಕಷ್ಟು ಸಲಹೆಗಳನ್ನು ಪಡೆದ ಬಳಿಕ ನಾವು ವಿದ್ಯಾರ್ಥಿ ಸ್ನೇಹಿ ತೀರ್ಮಾನವನ್ನು ಕೈಗೊಂಡಿದ್ದೇವೆ. ನಮ್ಮ ಯುವ ಸಮೂಹದ ಭವಿಷ್ಯ ಹಾಗೂ ಆರೋಗ್ಯವನ್ನು ಕಾಪಾಡುವಂತಹ ನಿರ್ಧಾರ ಇದಾಗಿದೆ’ ಎಂದಿದ್ದಾರೆ.

ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ವಿದ್ಯಾರ್ಥಿಗಳಿಗೆ ಈ ವರ್ಷದ 12 ನೇ ತರಗತಿ ಪರೀಕ್ಷೆಗಳು ರದ್ದುಪಡಿಸಿರುವ ಕುರಿತು ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಉನ್ನತ ಮಟ್ಟದ ಸಚಿವರ ನಡುವಿನ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ವಹಿಸಿದ್ದರು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು.

ಕೋವಿಡ್‌–19 ಅನಿಶ್ಚಿತ ಪರಿಸ್ಥಿತಿಯ ಕಾರಣಗಳಿಂದ ಈ ವರ್ಷ ಸಿಬಿಎಸ್‌ಇ 12ನೇ ತರಗತಿ ಬೋರ್ಡ್‌ ಪರೀಕ್ಷೆಗಳನ್ನು ನಡೆಸದಿರಲು ತೀರ್ಮಾನಿಸಲಾಗಿದೆ. ಶಾಲೆಗಳು, ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಪರೀಕ್ಷೆಯ ನಡೆಸುವುದರ ಬಗ್ಗೆ ಸಲಹೆಗಳನ್ನು ಕೇಳಲಾಗಿತ್ತು.

ಹಲವು ರಾಜ್ಯಗಳು ಹಾಗೂ ವಿದ್ಯಾರ್ಥಿಗಳ ಪಾಲಕರು ಪರೀಕ್ಷೆ ರದ್ದು ಪಡಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸಿಬಿಎಸ್‌ಇ ಏಪ್ರಿಲ್ 18 ರಂದು  10 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿತ್ತು ಹಾಗೂ 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿತ್ತು.

Donate Janashakthi Media

Leave a Reply

Your email address will not be published. Required fields are marked *