ತನಿಖೆಗೆ ಆದೇಶಿಸಿದ ಮದ್ರಾಸ್ ಹೈ ಕೋರ್ಟ್
ಚೆನ್ನೈ: ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ವಶದಲ್ಲಿದ್ದ ಬರೊಬ್ಬರಿ 103 ಕೆಜಿ ಚಿನ್ನ ಕಳವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ತನಿಖೆಗೆ ಆದೇಶಿಸಿದೆ. ಕಳುವಾದ ಚಿನ್ನದ ಮೌಲ್ಯ ಅಂದಾಜು 45 ಕೋಟಿ ರೂ ಎಂದು ಹೇಳಲಾಗುತ್ತಿದೆ.
2012 ರಲ್ಲಿ ಚೆನ್ನೈನ ಸುರಾನ ಕಾರ್ಪೊರೇಷನ್ ಲಿಮಿಟೆಡ್ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಶೋಧ ಕಾರ್ಯದಲ್ಲಿ 400 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಆ 400 ಕೆ.ಜಿ ಪೈಕಿ 100 ಕೆ.ಜಿ ತೂಕದ ಚಿನ್ನದಗಟ್ಟಿ ಹಾಗೂ ಆಭರಣಗಳು ನಾಪತ್ತೆಯಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ಪಿಎನ್ ಪ್ರಕಾಶ್ ಅವರು, ಸಿಬಿ-ಸಿಐಡಿಗೆ ತನಿಖೆಯ ಜವಾಬ್ದಾರಿ ವಹಿಸಿದೆ. ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದ್ದು, ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿದೆ.
ಸಿಬಿಐ ವಶದಲ್ಲಿದ್ದ ಬಂಗಾರ ಕಳ್ಳತನವಾಗುವುದು ಎಂದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತಾಗಿದೆ. ವಶಪಡಿಸಿಕೊಂಡ ಬಂಗಾರವನ್ನು ಸಿಬಿಐ ತನ್ನ ಬಳಿ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಆ ವೇಳೆ ಅನೇಕರು ಹೇಳಿದ್ದರು. ಈಗ ಕಳ್ಳತನವಾಗಿದ್ದು, ಕಳ್ಳರು ಅಲ್ಲಿಯೇ ಇದ್ದಾರೆ ಎಂದು ಕೆಲವರು ಹೇಳಿದರೆ. ಕೆಲವರು ಇದು ದೊಡ್ಡ ಹಗರಣ ಇದರ ಹಿಂದೆ ಯಾರಿದ್ದಾರೆ ಎಂದು ಕೂಡಲೆ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.