ಹೈದರಾಬಾದ್: ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುತ್ತಿರುವ ಕೇಂದ್ರೀಯ ತನಿಖಾ ದಳ(ಸಿಬಿಐ) ನಡೆಸುತ್ತಿದ್ದು, ಮಂಗಳವಾರದಂದು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಬಿಆರ್‌ಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಅವರನ್ನು ಸಿಬಿಐ ಅಧಿಕಾರಿಗಳು ಇಂದು ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಜಾರ ಹಿಲ್ಸ್‌ನಲ್ಲಿರುವ ಕವಿತಾ ಅವರ ನಿವಾಸಕ್ಕೆ ಬೆಳಗ್ಗೆ 10 ಗಂಟೆ ಆಗಮಿಸಿದ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಸಿಬಿಐ ತಂಡ ಕವಿತಾ ಅವರ ನಿವಾಸಕ್ಕೆ ಆಗಮಿಸಿದ ಸ್ವಲ್ಪದರಲ್ಲೇ ನಿವಾಸದ ಸುತ್ತ ನೂರಾರು ಸಂಖ್ಯೆಯಲ್ಲಿ ಅವರ ಬೆಂಬಲಿಗರು ಈಗಾಗಲೇ ಜಮಾಯಿಸಿದ್ದಾರೆ. ನಿವಾಸದ ಹೊರಗೆ ಭದ್ರತೆ ಹೆಚ್ಚಿಸಲಾಗಿದ್ದು, ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಆವರಣದ ಬಳಿ ಯಾರಿಗೂ ಸಂಚಾರ ನಿರ್ಬಂಧಿಸಲಾಗಿದೆ. ಇನ್ನು, ಟಿಆರ್‌ಎಸ್ ತನ್ನ ನಾಯಕರು ಮತ್ತು ಪಕ್ಷದ ಸದಸ್ಯರಿಗೆ ವಿಚಾರಣೆ ವೇಳೆ ನಿವಾಸದ ಸುತ್ತ ಜಮಾಯಿಸದಂತೆ ಸೂಚನೆ ನೀಡಿದೆ.
ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿರುವ ಹಗರಣದ ಬಗ್ಗೆ ತನಿಖೆ ಕೈಗೊಂಡಿರುವ ಸಿಬಿಐ ಅಧಿಕಾರಿಗಳು ಡಿಸೆಂಬರ್ 06ರಂದು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಡಿಸೆಂಬರ್ 11ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಅಲ್ಲದೆ, ಹೈದಾರಾಬಾದ್‌ನಲ್ಲಿರುವ ಕವಿತಾ ಅವರ ಮನೆಯಲ್ಲೇ ವಿಚಾರಣೆ ನಡೆಸಲು ಸಿಬಿಐ ಒಪ್ಪಿಗೆ ನೀಡಿದೆ. ಇದಕ್ಕೂ ಮೊದಲು ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಡಿಸೆಂಬರ್ 2 ರಂದು ಕವಿತಾಗೆ ನೋಟಿಸ್ ನೀಡಲಾಗಿತ್ತು. ನಾನು ಕಾನೂನಿಗೆ ಬದ್ಧಳಾಗಿರುವ ನಾಗರಿಕಳಾಗಿದ್ದು, ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕವಿತಾ ಹೇಳಿದ್ದರು.
ಡಿಸೆಂಬರ್ 6 ರಂದು ವಿಚಾರಣೆಗಾಗಿ ತನ್ನ ಅನುಕೂಲಕ್ಕೆ ಅನುಗುಣವಾಗಿ ಒಂದು ಸ್ಥಳದಲ್ಲಿ ಭೇಟಿಯಾಗುವಂತೆ ಕೇಂದ್ರೀಯ ಸಂಸ್ಥೆ ಹೇಳಿದ್ದರೂ, ಕವಿತಾ ತನ್ನ ಪೂರ್ವನಿಯೋಜಿತ ವೇಳಾಪಟ್ಟಿಯಿಂದಾಗಿ ಡಿಸೆಂಬರ್ 11ರ ಮೊದಲು ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ಜಾಲ ತಾಣದಲ್ಲಿ ಲಭ್ಯವಿರುವ ದೂರಿನ ಜೊತೆಗೆ ಎಫ್‌ಐಆರ್ ಪ್ರತಿಯಲ್ಲಿನ ವಿಷಯಗಳನ್ನು ಪರಿಶೀಲಿಸಿದ್ದೇನೆ ಮತ್ತು ತನ್ನ ಹೆಸರು ಎಲ್ಲಿಯೂ ಕಾಣಿಸಿಕೊಂಡಿಲ್ಲ ಎಂದು ಕವಿತಾ ತನಿಖಾ ಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 6ರ ಬದಲಾಗಿ ಈ ತಿಂಗಳ 11, 12 ಅಥವಾ 14 ಅಥವಾ 15ರಂದು ನಿಮಗೆ ಅನುಕೂಲವಾದಾಗ ಹೈದರಾಬಾದ್‌ನಲ್ಲಿರುವ ನನ್ನ ನಿವಾಸದಲ್ಲಿ ನಿಮ್ಮನ್ನು ಭೇಟಿ ಮಾಡಲಿದ್ದೇನೆ. ಆದಷ್ಟು ಬೇಗ ದೃಢೀಕರಿಸಬಹುದು ಎಂದು ರಾಘವೇಂದ್ರ ವತ್ಸ, ಶಾಖೆಯ ಮುಖ್ಯಸ್ಥ/ ಡಿಐಜಿ, ಸಿಬಿಐ, ಎಸಿಬಿ ದೆಹಲಿಗೆ ಕವಿತಾ ಪತ್ರವನ್ನು ಬರೆದಿದ್ದರು.