– ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಎಡವಟ್ಟು..!
ಬಾಗಲಕೋಟೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲೆ ಈ ಹಿಂದೆಯೂ ದಾಳಿಯಾಗಿದೆ.ಇದು ಮುಂದುವರೆದ ಭಾಗದ ಪ್ರಹಸನವಷ್ಟೇ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿಕೆ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ನಂತರ ಸಿಬಿಐ ದಾಳಿ ಪ್ರಹಸನವಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವ್ಯವಸ್ಥೆಯನ್ನು ದುರುಪಯೋಗ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಕೈ ಹಾಕಿದೆ. ಕಾಂಗ್ರೆಸ್ ಬೈ ಎಲೆಕ್ಷನ್‌ನಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ನಡೆಸಿರೋ ಹುನ್ನಾರವಿರಬೇಕು. ಬೇರೇನು ಅಲ್ಲ ಎಂದು ಮಾತು ತಿದ್ದಿಕೊಂಡರು.
ಇವತ್ತು ಚುನಾವಣೆ ಬಂದಿದೆ ಎಂದು ದಾಳಿ ಮಾಡೋದು ಅಲ್ಲವೇ ಅಲ್ಲ ಎಂದ ಕಡಾಡಿ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷ ಸ್ವಾಯತ್ ಸಂಸ್ಥೆ ದುರುಪಯೋಗ ಮಾಡಿಕೊಳ್ಳುವಷ್ಟು ವೀಕ್ ಇಲ್ಲ. ನಮ್ಮ ಸಂಘಟನೆ ಬಹಳ ಪ್ರಬಲವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇಕಡಾ 51.70ರಷ್ಟು ಮತ ಪಡೆದಿದೆ ಎಂದು ಬೈ ಎಲೆಕ್ಷನ್‌ನ ಸಂದರ್ಭದಲ್ಲಿ ಸಿಬಿಐ ದಾಳಿ ಆರೋಪವನ್ನು ತಳ್ಳಿಹಾಕಿದರು.
ಇನ್ನು ಕೊರೊನಾ ನಿಯಂತ್ರಣಕ್ಕೆ ದುಬಾರಿ ದಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಜನರು ಸ್ವಯಂ ಪ್ರೇರಿತರಾಗಿ ತಮ್ಮ ಆರೋಗ್ಯ ಕಾಳಜಿ ಇರಬೇಕು. ಕೊರೊನಾ ಆರಂಭದಿಂದಲ್ಲೆ ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಯಿಂದ ಮನವರಿಕೆ ಮಾಡಿದ್ರು. ಕೊರೊನಾ ಹತೋಟಿ ತರಬೇಕಾದಲ್ಲಿ ಇಂತಹ ಸಣ್ಣಪುಟ್ಟ ಕಾನೂನಿರಬೇಕು. ಜನರ ಹಿತದೃಷ್ಟಿಯಿಂದ ಇಂತಹ ಕಾನೂನು ಇರಬೇಕೆಂದು ಪರೋಕ್ಷವಾಗಿ ದುಬಾರಿ ದಂಡವನ್ನು ಈರಣ್ಣ ಕಡಾಡಿ ಬೆಂಬಲಿಸಿದರು.
ಇದೇ ವೇಳೆ ಯಾರೋಬ್ರು ಮಾಸ್ಕ್ ಇಲ್ಲದೆ ಓಡಾಡಿದ್ರೆ ಅದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ದಂಡದ ಹೊರೆ ಹೆಚ್ಚಿದ್ದರೆ ಸರ್ಕಾರದ ಗಮನಕ್ಕೆ ತಂದು ಕಡಿಮೆ ಮಾಡುವ ಪ್ರಯತ್ನ ಮಾಡೋಣ ಎಂದು ಈರಣ್ಣ ಕಡಾಡಿ ಹೇಳಿದರು.