ವಲಸೆ ಕಾರ್ಮಿಕರ ಭವಿಷ್ಯನಿಧಿ ಹಣದ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ: ಸಿಬಿಐ ತನಿಖೆ

ನವದೆಹಲಿ: ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಹಲವಾರು ಮಂದಿ ಉದ್ಯೋಗವನ್ನು ಕಳೆದುಕೊಂಡ ಹಿನ್ನೆಲೆ ಮಾರ್ಚ್ ಹಾಗೂ ಜೂನ್‌ ತಿಂಗಳಿನಲ್ಲಿ ಇಪಿಎಫ್‌ ಹಣವನ್ನು ಹಿಂಪಡೆಯುವ ನಿಯಮಗಳನ್ನು ಸಡಿಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸುಮಾರು 2.71 ಕೋಟಿ ರೂಪಾಯಿ ಹಣವನ್ನು ನೌಕರರ ಭವಿಷ್ಯ ನಿಧಿ(ಇಪಿಎಫ್‌ಓ) ಕಚೇರಿ ಸಿಬ್ಬಂದಿಗಳು ನೌಕರರ ಹಣವನ್ನು ವಂಚಿಸಿರುವ ಘಟನೆ ನಡೆದಿದೆ.

ಮಾರ್ಚ್ 2020 ರಲ್ಲಿ ಜೂನ್‌ 2021 ರವರೆಗೆ ಸುಮಾರು 2,71,45,513 ರೂಪಾಯಿ ವಂಚನೆ ಮಾಡಲಾಗಿದೆ ಎನ್ನಲಾಗಿದ್ದು, ಇಪಿಎಫ್‌ಒ ಸಿಬ್ಬಂದಿಗಳ ವಿರುದ್ದ ಭ್ರಷ್ಟಾಚಾರ ಹಾಗೂ ವಂಚನೆ ಆರೋಪ ಪ್ರಕರಣವನ್ನು ದಾಖಸಿಕೊಂಡ ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ತನಿಖೆಗೆ ಮುಂದಾಗಿದೆ.

ಇದನ್ನು ಓದಿ: ಕಾರ್ಮಿಕ ಹಕ್ಕುಗಳಿಂದ ವಂಚಿತ ಅಂತರ-ರಾಜ್ಯ ವಲಸೆ ಕಾರ್ಮಿಕರು

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಜಾಗರೂಕ ಇಲಾಖೆ ಸಲ್ಲಿಸಿದ ದೂರಿನ ಆಧಾರದಲ್ಲಿ ಪ್ರಕರಣದ ಮಾಹಿತಿ ಬಹಿರಂಗಗೊಂಡಿದೆ. ಕಂದಿವಾಳಿ ಸ್ಥಳೀಯ ಕಚೇರಿಯ ಹಿರಿಯ ಸಾಮಾಜಿಕ ಭದ್ರತಾ ಸಹಾಯಕ ಈ ಹಗರಣದ ಪ್ರಮುಖನು ಎಂದು ಹೇಳಲಾಗುತ್ತಿದೆ.

ಸಾಮಾಜಿಕ ಭದ್ರತಾ ಸಹಾಯಕ ಜಂದನ್‌ ಕುಮಾರ್‌ ಸಿನ್ಹಾ ಸೇರಿದಂತೆ ಇನ್ನಿಬ್ಬರ ವಿರುದ್ದ ದೂರು ದಾಖಲಾಗಿದೆ, ಉತ್ತಮ್‌ ತರಗಾಯ್‌ ಹಾಗೂ ವಿಜಯ್‌ ಜಾರ್‍ಪೆ ಇವರಿಬ್ಬರು ಕೊಯಮುತ್ತೂರು ಹಾಗೂ ಚೆನ್ನೈ ಸ್ಥಳೀಯ ಸಂಸ್ಥೆಯ ಸಹಾಯಕ ಭವಿಷ್ಯ ನಿಧಿ ಆಯುಕ್ತರು ಆಗಿದ್ದಾರೆ.

ಆಂತರಿಕ ತನಿಖೆಗೆ ಮುಂದಾಗಿದ್ದ ಇಲಾಖೆ

ನೌಕರರ ಭವಿಷ್ಯ ನಿಧಿಯ ಜಾಗೃತ ಇಲಾಖೆಗೆ ಮೇ 18ರಂದು ಅನಾಮಧೇಯ ವ್ಯಕ್ತಿಯಿಂದ ಮಾಹಿತಿ ಲಭಿಸಿತ್ತು. ನಂತರ ಇಲಾಖೆಯು ಆಂತರಿಕ ಆಡಿಟ್‌ ನಡೆಸಿದಾಗ ಕೋಟ್ಯಾಂತರ ರೂಪಾಯಿ ಹಣ ಹಗರಣವಾಗಿದೆ ಎಂದು ತಿಳಿದು ಬಂದಿದೆ. ಸಿಬ್ಬಂದಿಗಳೇ ಮಾಹಿತಿಯನ್ನು ತಿರುಚಿ ಹಗರಣ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೌಕರರ ಭವಿಷ್ಯ ನಿಧಿಯ ಜಾಗೃತ ಇಲಾಖೆಯು ಸಿಬಿಐಗೆ ಆಗಸ್ಟ್‌ 24 ರಂದು ಪ್ರಕರಣ ದಾಖಲು ಮಾಡಿದೆ.

ಡೇಟಾ ಬಳಸಿ ವಂಚನೆ

ಆರೋಪಿಗಳಿಗೆ ಸೈಟ್‌ನಲ್ಲಿರುವ ವ್ಯವಸ್ಥೆ ಹಾಗೂ ಅದರ ಲೋಪದೋಷಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರು. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲು ವಲಸೆ ಕಾರ್ಮಿಕರ ಡೇಟಾವನ್ನು ಬಳಕೆ ಮಾಡಿದ್ದರು ಎಂದು ಹೇಳಲಾಗಿದೆ. ವಲಸೆ ಕಾರ್ಮಿಕರಿಂದ ಹಾಗೂ ಬಡ ಜನರಿಂದ ಸಂಗ್ರಹ ಮಾಡಿದ್ದ ಬ್ಯಾಂಕ್‌ ವಿವರ ಹಾಗೂ ಆಧಾರ್‌ ವಿವರದಲ್ಲಿ ಬೋಗಸ್‌ ಪಿಎಫ್‌ ಅಕೌಂಟ್‌ ಅನ್ನು ಈ ಸಿಬ್ಬಂದಿಗಳು ತೆರೆದಿದ್ದರು. ಇದಕ್ಕಾಗಿ ಸಣ್ಣ ಕಮಿಷನ್‌ ಅನ್ನು ಕೂಡಾ ಈ ಸಿಬ್ಬಂದಿಗಳು ನೀಡಿದ್ದಾರೆ. ಬಳಿಕ ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಮುಚ್ಚಲ್ಪಟ್ಟ ಸಂಸ್ಥೆಗಳ ಉದ್ಯೋಗಿಗಳು ಎಂಬಂತೆ ಈ ವಲಸೆ ಕಾರ್ಮಿಕರನ್ನು ಬಿಂಬಿಸಿದ್ದಾರೆ. ಬಳಿಕ ನಕಲಿ ಕ್ಲೇಮ್‌ ಮಾಡಿ ಹಣವನ್ನು ಪಡೆದುಕೊಂಡಿದ್ದಾರೆ,” ಎಂದು ಆರೋಪವಿದೆ.

ಸಾಮಾನ್ಯವಾಗಿ ಐದು ಲಕ್ಷಕ್ಕಿಂತ ಅಧಿಕ ಇಪಿಎಫ್ ಹಣ ಹಿಂಪಡೆಯಲು ಹಿರಿಯ ಅಧಿಕಾರಿಗಳಿಗೆ ದೃಢೀಕರಣಕ್ಕಾಗಿ ಕಳುಹಿಸಬೇಕಾಗುತ್ತದೆ. ಆದರೆ ಇಲ್ಲಿ ಚಾಲಾಕಿತನ ಪ್ರದರ್ಶಿಸಿದ ಆರೋಪಿಗಳು 2 ಅಥವಾ 3.5 ಲಕ್ಷ ಹಣವನ್ನು ಮಾತ್ರ ಕ್ಲೇಮ್‌ ಮಾಡಿಕೊಂಡಿದ್ದಾರೆ. ಈ ಮೂಲಕವಾಗಿ ಹಿರಿಯ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುವುದನ್ನು ತಪ್ಪಿಸಿಕೊಂಡಿದ್ದಾರೆ.

ಇದನ್ನು ಓದಿ: ಸತ್ತ ವಲಸೆ ಕಾರ್ಮಿಕರ ಲೆಕ್ಕ ಇಟ್ಟಿಲ್ಲ; ಪರಿಹಾರದ ಪ್ರಶ್ನೆಯೇ ಇಲ್ಲ: ಸದನದಲ್ಲಿ ಕೇಂದ್ರ ಸರ್ಕಾರ

ಸಿಬಿಐ ಎಫ್‌ಐಆರ್‌ ಪ್ರಕಾರ, “2009 ರಲ್ಲಿ ಮುಚ್ಚಲಾಗಿರುವ ಮುಂಬೈ ಮೂಲದ ವಿಜಯ್‌ ಕುಮಾರ್‌ ಜ್ಯುವೆಲ್ಲರಿಯ ಹೆಸರಲ್ಲಿ ಸುಮಾರು 91 ನಕಲಿ ಕ್ಲೇಮ್ ಮಾಡಲಾಗಿದೆ. ಹಾಗೆಯೇ ಇಪಿಎಫ್‌ ದಾಖಲೆಯಲ್ಲಿ ಈ ಸಂಸ್ಥೆಯು ಇಲ್ಲ.

ವಿಜಯ್‌ ಕುಮಾರ್‌ ಜ್ಯುವೆಲ್ಲರಿಯಲ್ಲಿ ಮಾತ್ರವಲ್ಲದೆ, ಹಲವಾರು ಸಂಸ್ಥೆಗಳ ಹೆಸರಿನಲ್ಲಿ ಸುಮಾರು 800 ಬೋಗಸ್‌ ಅಕೌಂಟ್‌ಗಳನ್ನು ತೆರೆದು ಮುಂಬೈ, ಗೋರಾಕ್‌ಪುರ. ನಾಸಿಕ್‌, ಪಾಟ್ನಾ, ಗಾಝಿಯಾಬಾದ್‌ ಹಾಗೂ ಮಥುರಾದಲ್ಲಿ ಹೀಗೆ ಹಲವಾರು ಪ್ರದೇಶವನ್ನು ಉಲ್ಲೇಖ ಮಾಡಿ ಕೋಟ್ಯಾಂತರ ರೂಪಾಯಿ ಹಣವನ್ನು ವಂಚನೆ ಮಾಡಲಾಗಿದೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಪಿಎಫ್‌ಒ ಹಲವಾರು ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ. ಹಾಗೆಯೇ ಸುಮಾರು 800 ಬ್ಯಾಂಕ್‌ ಖಾತೆಗಳ ಬ್ಲಾಕ್‌ ಮಾಡಲು ಸೂಚನೆ ನೀಡಿದೆ. ಈಗಾಗಲೇ ಈ ಬ್ಯಾಂಕ್‌ ಖಾತೆಗಳಿಂದ ಹಣವನ್ನು ಹಿಂಪಡೆದಿರುವುದು ಸಹ ನಡೆದಿದೆ.

Donate Janashakthi Media

Leave a Reply

Your email address will not be published. Required fields are marked *