ಬೆಂಗಳೂರು :ಕಾವೇರಿ ನದಿ ನೀರು ಹಂಚಿಕೆ ವಿವಾದ ಪ್ರಕರಣದ ವಿಚಾರಣೆ ನಡೆಸಲು ಪ್ರತ್ಯೇಕ ಪೀಠ ರಚಿಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿದೆ. ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದ ಬೆನ್ನಿಗೇ ಕರ್ನಾಟಕ ಕೂಡ ಅರ್ಜಿ ಸಲ್ಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ತಮಿಳುನಾಡು ರಾಜ್ಯಕ್ಕೆ ಕಾವೇರಿ ನದಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸುವಂತೆ ರಾಜ್ಯದ ಅಡ್ವಕೇಟ್ ಜನರಲ್ ಅವರಿಗೆ ಕರ್ನಾಟಕ ಸಚಿವ ಸಂಪುಟ ಶನಿವಾರ ಸೂಚಿಸಿತ್ತು. ಕಳೆದ ವಾರ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ರಾಜ್ಯದ ಬೆಳೆಗಳಿಗೆ ನೀರುಣಿಸಲು ಸಹಾಯವಾಗಲು ಪ್ರತಿ ದಿನ 24,000 ಕ್ಯೂಸೆಕ್ಸ್ ನೀರು ಬಿಡುಗಡೆಗೊಳಿಸುವಂತೆ ಕರ್ನಾಟಕಕ್ಕೆ ಸೂಚಿಸಬೇಕೆಂದು ಕೋರಿತ್ತು.
ರಾಜ್ಯದ ಅಗತ್ಯತೆಗಳನ್ನು, ಅಂದರೆ ಕುಡಿಯುವ ಉದ್ದೇಶಕ್ಕೆ ಮತ್ತು ಕಾವೇರಿ ಸುತ್ತಲಿನ ಪ್ರದೇಶದಲ್ಲಿನ ಬೆಳೆಗಳಿಗೆ ನೀರುಣಿಸುವ ಅಗತ್ಯತೆಗಳನ್ನು ಪರಿಗಣಿಸಿ ನಂತರ ತಮಿಳುನಾಡಿಗೆ ನೀರು ಪೂರೈಸುವುದಾಗಿ ಕರ್ನಾಟಕ ಹೇಳಿದೆಯಲ್ಲದೆ ರಾಜ್ಯದಲ್ಲಿ ಮಳೆ ಕೊರತೆಯನ್ನೂ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ವಿವಾದ ಸಂಬಂಧ ವಿಚಾರಣೆ ನಡೆಸಲು ಪೀಠ ರಚಿಸಲು ಸುಪ್ರೀಂ ಕೋರ್ಟ್ ಒಪ್ಪಿದೆ.
ಬಿಜೆಪಿ ಪ್ರತಿಭಟನೆ : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಬಿಜೆಪಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಂಜಯ್ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರವು ತಮಿಳುನಾಡಿನ ಸಿಎಂ ಸ್ಟಾಲಿನ್ ಜೊತೆ ಒಳ ಒಪ್ಪಂದ ಮಾಡಿಕೊಂಡು ನೀರು ಬಿಟ್ಟಿದೆ. ಇದಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಚಲುವರಾಯಸ್ವಾಮಿ ನೇರ ಹೊಣೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಆರೋಪಿಸಿದರು.
ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು, ಇಲ್ಲಿನ ರೈತರಿಂದ ಹುರುಳಿ ಕಾಳು ಬಿತ್ತನೆ ಮಾಡಿಸುತ್ತಿದೆ. ನೀರಾವರಿ ಬೆಳೆ ಬಿಟ್ಟು, ಅರೆ ಖುಷ್ಕಿ ಬೆಳೆ ಬೆಳೆಯುವಂತೆ ಸೂಚಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ರಸ್ತೆಯಲ್ಲಿ ಹುರುಳಿ ಕಾಳು ಚೆಲ್ಲಿ ಅಸಮಾಧಾನ ಹೊರಹಾಕಿದರು.