ಯುವತಿ ಮನೆಗೆ ನುಗ್ಗಿದ 100 ಮಂದಿ-ದಾಂಧಲೆ ನಡೆಸಿ ಯುವತಿಯ ಅಪಹರಣ

ಹೈದರಾಬಾದ್‌: ಸರಿ ಸುಮಾರು 100 ಮಂದಿ ಶುಕ್ರವಾರ(ಡಿಸೆಂಬರ್‌ 09) ಯುವತಿಯೊಬ್ಬಳ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೆ, 24 ವರ್ಷದ ಯುವತಿಯನ್ನು ಅಪಹರಿಸಿರುವ ಪ್ರಕರಣವೊಂದು ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ನಡೆದಿದೆ.

ಸುಮಾರು 100 ಮಂದಿ ಯುವಕರು ಯುವತಿಯ ಮನೆಯತ್ತ ಧಾವಿಸಿ ಕಲ್ಲು ತೂರಾಟ ನಡೆಸಿ, ಮನೆಯ ಸಾಮಾಗ್ರಿಯನ್ನು ಪುಡಿಗಟ್ಟಿ, ಕಾರಿನ ಗಾಜನ್ನು ಹೊಡೆದು ಹಾಕಿ ದಂತ ವೈದ್ಯೆಯಾಗಿರುವ ವೈಶಾಲಿ ಎನ್ನುವ ಯುವತಿಯನ್ನು ಬಲವಂತವಾಗಿ ಪೋಷಕರ ಮುಂದೆಯೇ ಅಪಹರಿಸಿಕೊಂಡು ಹೋಗಿದ್ದಾರೆ.

ಮನೆಯಲ್ಲಿದ್ದ ಇತರೆ ಸದಸ್ಯರ ಮೇಲೆಯೂ ಯುವಕರು ಹಲ್ಲೆ ನಡೆಸಿದ್ದಾರೆ. ಯುವಕರ ದಾಂಧಲೆಯ ದೃಶ್ಯ ಸಾಮಾಜಿ ಜಾಲತಾಣಗಳಲ್ಲಿ ಹರಡಿ ಜಾಹೀರಾಗಿದೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿನ ಚಿತ್ರಣದಲ್ಲಿ ಪುರುಷರು ಆ ಯುವತಿಯ ಸಂಬಂಧಿಕರಿಗೆ ಥಳಿಸುವ ದೃಶ್ಯ ಕಂಡು ಬರುತ್ತಿದೆ. ಈ ಸಂಬಂಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದು ಪೂರ್ವ ನಿಯೋಜಿತ ಅಪಹರಣವಾಗಿದೆ. ಸಂತ್ರಸ್ತೆಯನ್ನು ರಕ್ಷಿಸಲಾಗಿದ್ದು, ಆಕೆ ಆಘಾತಕ್ಕೊಳಗಾಗಿದ್ದಾರೆ. ಆಕೆಗೆ ಏನನ್ನೂ ಮಾತನಾಡಲು ಸಾಧ್ಯವಾಗಿಲ್ಲ. ಇದು ಕೇವಲ ಅಪಹರಣ ಪ್ರಕರಣ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿ ತಕ್ಷಣವೇ 16 ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 6 ಗಂಟೆಯೊಳಗೆ ಯುವತಿಯನ್ನು ರಕ್ಷಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರರನ್ನು ಕೂಡ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಮತ್ತು ಅಪಹರಣ ಸೇರಿದಂತೆ ಇತರೆ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಆರೋಪಿಯಾಗಿರುವ 26 ವರ್ಷದ ನವೀನ್ ರೆಡ್ಡಿ ಪೊಲೀಸರ ವಿಚಾರಣೆಯಲ್ಲಿ, ಈಗಾಗಲೇ ತಾನು ವೈಶಾಲಿಯೊಂದಿಗೆ ಮದುವೆಯಾಗಿರುವುದಾಗಿ ತಿಳಿಸಿದ್ದಾನೆ. ನಾನು ನನ್ನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಲು ಸಾಕಷ್ಟು ಪ್ರಯತ್ನಿಸಿದೆ. ಆದರೆ, ಆಕೆ ದಂತ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ್ದು, ಇದರ ಬಳಿಕ ಆಕೆಯ ಅಪ್ಪ-ಅಮ್ಮ ಅವಳ ಮನಸನ್ನು ಬದಲಾಯಿಸಿ, ನನ್ನಿಂದ ದೂರ ಮಾಡಿದ್ದಾರೆ. ಹೀಗಾಗಿ, ಅವರ ಮನೆಗೆ ನುಗ್ಗಿ ಆಕೆಯನ್ನು ಎಳೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಸ್ಪಂದಿಸಿಲ್ಲ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಯುವತಿಯನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಬಲವಂತವಾಗಿ ಹೇಳಲಾಯಿತು. ಆಕೆಯ ಒಪ್ಪಿಗೆಯಿಲ್ಲದೆ, ಆಕೆಯನ್ನು ಎಳೆದುಕೊಂಡು ಕಾರಿನಲ್ಲಿ ಕೂರಿಸಿದರು. ಯುವಕರು ಆಕೆಯನ್ನು ಕರೆದೊಯ್ದರು. ಪೊಲೀಸರು ಏನೂ ಮಾಡಲಿಲ್ಲ. ನನ್ನ ಮಗಳಿಗೆ ಬಲವಂತ ಮಾಡಿದ್ದು ಅನ್ಯಾಯ. ಇದು ಪಾಪಿಗಳ ಕೃತ್ಯ. ಅವರು ನನ್ನ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. ನಮಗೆ ಸಂಪೂರ್ಣವಾಗಿ ಅನ್ಯಾಯವಾಗಿದೆ’ ಎಂದು ಮಹಿಳೆಯ ತಾಯಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *