ಜಾತಿ ಕುರಿತು ವಿವಿ ವಿದ್ಯಾರ್ಥಿಗಳಿಗೆ ಪ್ರಶ್ನೆ : ಭಾರಿ ಪ್ರತಿಭಟನೆ, ತನಿಖೆಗೆ ತಂಡ ರಚನೆ

ಚೆನ್ನೈ: ತಮಿಳುನಾಡಿನ ಸೇಲಂನ ಪೆರಿಯಾರ್​ ವಿಶ್ವವಿದ್ಯಾಲಯದ ಮೊದಲ ವರ್ಷದ ಇತಿಹಾಸ ವಿಷಯದ ಪರೀಕ್ಷಾ ಪ್ರಶ್ನೆಪತ್ರಿಕೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿರುವ ಜಾತಿ ಕುರಿತು ಪ್ರಶ್ನೆಯೊಂದು ವಿವಾದಕ್ಕೆ ಸಿಲುಕಿದೆ.

ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆಯಲ್ಲಿ ‘ತಮಿಳುನಾಡಿಗೆ ಸೇರಿದ ಅತಿ ಕೆಳಜಾತಿ ಯಾವುದು?’ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಮಹರ್ಸ್​, ನದರ್ಸ್​, ಎಹ್ವಾಸ್​, ಹರ್ಜನ್ಸ್​ ಎಂಬ ನಾಲ್ಕು ಆಯ್ಕೆಗಳನ್ನೂ ನೀಡಲಾಗಿದೆ. ಈ ಪ್ರಶ್ನೆಯೇ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ದಿ ಪ್ರಿಂಟ್‌ ವರದಿ ಮಾಡಿದೆ.

ಈ ಪ್ರಶ್ನೆ ಮಾತ್ರವಲ್ಲದೇ ನೀಡಲಾಗಿರುವ ಆಪ್ಷನ್​ಗಳು ಕೂಡ ಜಾತಿಗಳನ್ನು ಕೀಳಾಗಿ ಕಾಣುವಂತೆ ಮಾಡಿದೆ ಎಂದು ಈಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಇದು ಭಾರಿ ವಿವಾದ ಸೃಷ್ಟಿಸುತ್ತಲೇ ಸ್ಪಷ್ಟನೆ ನೀಡಿರುವ ಪೆರಿಯಾರ್​ ವಿವಿ ಕುಲಪತಿ ಆರ್​.ಜಗನ್ನಾಥ್​, ಇತರ ವಿಶ್ವವಿದ್ಯಾಲಯ ಮತ್ತು ಕಾಲೇಜು ಉಪನ್ಯಾಸಕರು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುತ್ತಾರೆ. ಈ ಪ್ರಶ್ನೆ ಪತ್ರಿಕೆ ನಮ್ಮ ವಿವಿಯಿಂದ ಸಿದ್ಧಪಡಿಸಲಾಗಿಲ್ಲ. ಆದ್ದರಿಂದ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಪ್ಪಿಸಲು ನಾವು ಪರೀಕ್ಷೆಯ ಮೊದಲು ಪ್ರಶ್ನೆಗಳನ್ನು ಪರಿಶೀಲಿಸುವುದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಮತ್ತು ಮರುಪರೀಕ್ಷೆ ನಡೆಸುವ ಬಗ್ಗೆ ಪರಿಗಣಿಸಲಾಗುವುದು’ ಎಂದಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಎಂ.ಇಳಂಗೋ ಹೆನ್ರಿ ದಾಸ್ ಅವರ ನೇತೃತ್ವದಲ್ಲಿ ವಿವಾದಾತ್ಮಕ ಪ್ರಶ್ನೆಯ ತನಿಖೆಗಾಗಿ ತಂಡವನ್ನು ರಚಿಸಲಾಗಿದೆ. ಈ ಪ್ರಶ್ನೆಯನ್ನು ಪತ್ರಿಕೆಯಲ್ಲಿ ಆಯ್ಕೆ ಮಾಡಿದವರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

 

Donate Janashakthi Media

Leave a Reply

Your email address will not be published. Required fields are marked *