ಬೆಂಗಳೂರು : ರಾಜ್ಯಪಾಲರನ್ನು ಜಾತಿ ಆಧಾರದ ಮೇಲೆ ನೇಮಿಸುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆ ನೀಡಿರುವ ಪ್ರಕರಣದಲ್ಲಿ ರಾಜ್ಯಪಾಲರ ವಿರುದ್ಧ ಆರೋಪಗಳಿಗೆ ಜಾತಿ ರಾಜಕಾರಣ ಬೆರೆಸುವುದು ಸರಿಯಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಆಕ್ಷೇಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರನ್ನು ಜಾತಿ ಆಧಾರದ ಮೇಲೆ ನೇಮಕಾತಿ ಮಾಡಿಲ್ಲ. ಬಿಜೆಪಿಯವರು ಇಲ್ಲಿ ಜಾತಿ ವಿಚಾರವನ್ನು ತರುವ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಐವಾನ್ ಡಿಸೋಜ ಅವರ ಆಕ್ಷೇಪಾರ್ಹ ಹೇಳಿಕೆಗಳನ್ನು ತಾವು ಸಮರ್ಥನೆ ಮಾಡುವುದಿಲ್ಲ ಎಂದು ಪರಮೇಶ್ವರ್ ಇದೇ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯಪಾಲರು ಅನುಮೋದನೆ ನೀಡದೇ ಇದ್ದರೆ ಲೋಕಾಯುಕ್ತ ಸಂಸ್ಥೆಗೆ ನ್ಯಾಯಾಲಯದ ಮೊರೆ ಹೋಗುವುದೂ ಸೇರಿದಂತೆ ಹಲವು ಮಾರ್ಗಗಳಿವೆ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿರುವುದರಿಂದಾಗಿ ಅನುಮತಿ ನೀಡುವ ಜಿಜ್ಞಾಸೆ ಎದುರಾಗುವ ಅಗತ್ಯ ಇಲ್ಲ. ಕುಮಾರಸ್ವಾಮಿ ಇಲ್ಲಿಯವರು. ಘಟನೆ ನಡೆದಿದ್ದು ಇಲ್ಲಿ. ಕಂಪೆನಿ ನೊಂದಾವಣೆ ಆಗಿರುವುದು ಇಲ್ಲಿ. ಜಮೀನು ಕೊಟ್ಟಿರುವುದು ರಾಜ್ಯದಲ್ಲಿ. ಹೀಗಾಗಿ ಅದರ ವ್ಯಾಪ್ತಿ ಕೂಡ ಕರ್ನಾಟಕದಲ್ಲೇ ಇದೆ ಎಂದು ಹೇಳಿದರು.
ರಾಜ್ಯಪಾಲರು ಅನುಮತಿ ಕೊಟ್ಟ ಬಳಿಕ ನಡೆಯುವ ಪ್ರಕ್ರಿಯೆಗಳು ನೈತಿಕತೆ ಅಥವಾ ರಾಜಕೀಯ ಪ್ರಶ್ನೆಗಳಿಗೆ ಕಾರಣವಾಗಬಹುದು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ಮಾಡಲು 29 ರಂದು ಕಾಲಾವಕಾಶ ನೀಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ತನ್ನ ದೂರನ್ನು ದಾಖಲಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾಂಗ್ರೆಸ್ ಹೈಕಮಾಂಡ್ ಬೆಂಬಲ ವ್ಯಕ್ತಪಡಿಸಿದರು. ಇದರಲ್ಲಿ ಎರಡು ಮಾತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವಂತೆ ವೈಯಕ್ತಿಕವಾಗಿ ಮನವಿ ಸಲ್ಲಿಸಿದ್ದ ಟಿ.ಜೆ.ಅಬ್ರಹಾಂ ಅವರ ಅರ್ಜಿಯನ್ನು ರಾಜ್ಯಪಾಲರು ಪರಿಗಣಿಸುವುದಾದರೆ ಲೋಕಾಯುಕ್ತ ಸಂಸ್ಥೆ ಕೇಳುವ ಅಭಿಯೋಜನೆಗೆ ಏಕೆ ಅನುಮತಿ ನೀಡುವುದಿಲ್ಲ? ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಹೇಳಿದರು.
ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ 550 ಎಕರೆ ಜಮೀನನ್ನು ಮಂಜೂರು ಮಾಡಿದ್ದಾರೆ. ಇದರಲ್ಲಿ ಅಕ್ರಮಗಳಾಗಿವೆ. ತನಿಖೆ ನಡೆದಿದೆ. ದೋಷಾರೋಪಣ ಪಟ್ಟಿ ಸಲ್ಲಿಸಲು ಅನುಮತಿ ನೀಡಿ ಎಂದು 2023 ರಲ್ಲಿ ಅಭಿಯೋಜನೆಗೆ ಮನವಿ ಸಲ್ಲಿಸಲಾಗಿದೆ. ಅದೇ ರೀತಿ ಶಶಿಕಲ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನರೆಡ್ಡಿ ಅವರ ಪ್ರಕರಣದಲ್ಲೂ ಅಭಿಯೋಜನೆಗೆ ಮನವಿ ಸಲ್ಲಿಸಲಾಗಿತ್ತು. ಅದ್ಯಾವುದಕ್ಕೂ ಸಹಮತಿಸದ ರಾಜ್ಯಪಾಲರು ಏಕಾಏಕಿ ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ನಡೆದುಕೊಂಡ ರೀತಿ ಪ್ರಶ್ನಾರ್ಹವಾಗಿದೆ ಎಂದರು.
ಈ ಹಿಂದೆ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಾಜ್ಯಪಾಲರು ನಡೆದುಕೊಂಡಿರುವ ರೀತಿ ಚರ್ಚೆಗೆ ಗ್ರಾಸವಾಗಿದೆ. ಈಗ ಕರ್ನಾಟಕದಲ್ಲೂ ಶುರುವಾಗಿದೆ. ಬಿಜೆಪಿಯೇತರ ಸರ್ಕಾರಗಳನ್ನು ಅಸ್ತಿರಗೊಳಿಸಲು ದೇಶಾದ್ಯಂತ ಹುನ್ನಾರಗಳು ನಡೆದಿವೆ ಎಂದು ಟೀಕಿಸಿದರು.