ನಾಗರಿಕ ಹಕ್ಕುಗಳೂ ಪ್ರಜಾತಂತ್ರ ಮೌಲ್ಯಗಳೂ – ಭಾರತದಲ್ಲಿ ಮಾನವ ಹಕ್ಕುಗಳ ಪ್ರಜ್ಞೆಗೆ ಜಾತಿ-ಪಿತೃಪ್ರಧಾನತೆಯೇ ಬಹುದೊಡ್ಡ ತೊಡಕಾಗಿದೆ

-ನಾ ದಿವಾಕರ

ಮಾನವ ಹಕ್ಕುಗಳ ದಿನವನ್ನು ವಿಶ್ವದಾದ್ಯಂತ ಪ್ರತಿ ವರ್ಷ ಡಿಸೆಂಬರ್ 10 ರಂದು ಆಚರಿಸಲಾಗುತ್ತದೆ – ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1948 ರಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿದ ದಿನವನ್ನು ನೆನಪು ಮಾಡಿಕೊಳ್ಳುವ ಒಂದು ಬೌದ್ಧಿಕ ಕ್ರಿಯೆಯಂತೆ ಇದು Ritualistic ಆಗಿ, ಅನೂಚಾನವಾಗಿ ನಡೆದುಕೊಂಡು ಬಂದಿದೆ. ಸರ್ಕಾರಗಳ ನಿರಂಕುಶಾಧಿಕಾರದ ವಿರುದ್ಧ, ಜನವಿರೋಧಿ ನೀತಿಗಳಿಗೆ ಪ್ರತಿರೋಧ ಒಡ್ಡುತ್ತಲೇ ತಳಸಮಾಜದಲ್ಲಿ ಜನಸಂಘಟನೆಯಲ್ಲಿ ತೊಡಗಿರುವ ಸಂಘಟನೆಗಳಿಗೆ ಈ ದಿನ ಪ್ರಶಸ್ತವಾಗಿ  ಕಾಣುತ್ತದೆ. ಏಕೆಂದರೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆಯು ಮಾನವ ಸಮಾಜವನ್ನು ಸಮಾನ ಹಕ್ಕು ಮತ್ತು ಅವಕಾಶಗಳ ನೆಲೆಯಲ್ಲಿ ಅಭಿವೃದ್ಧಿ ಪಥದಲ್ಲಿ ಕರೆದೊಯ್ಯುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ನಾಗರಿಕ

ಮಾನವ ಹಕ್ಕುಗಳ ಪರಿಕಲ್ಪನೆಗೆ ಶತಮಾನಗಳ ಇತಿಹಾಸವಿರುವುದು ಸತ್ಯ. ಸಂಪ್ರದಾಯವಾದಿ ಇತಿಹಾಸಕಾರರು ಈ ಉದಾತ್ತ ಪರಿಕಲ್ಪನೆಯನ್ನು ಪ್ರಾಚೀನ ಧಾರ್ಮಿಕ ಗ್ರಂಥಗಳಲ್ಲೂ ಗುರುತಿಸುತ್ತಾರೆ. ಆದರೆ 20ನೇ ಶತಮಾನಕ್ಕೂ ಮುಂಚಿನ ಸಮಾಜಗಳಲ್ಲಿ ಈ ಹಕ್ಕುಗಳು ಸಮಾಜದ ಮೇಲ್ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದನ್ನು ಉಲ್ಲೇಖಿಸುವುದೂ ಇಲ್ಲ. ನಾಗರಿಕ ಹಕ್ಕುಗಳ ಪ್ರಶ್ನೆಗೆ ಒಂದು ಪ್ರಜಾಸತ್ತಾತ್ಮಕ ಸ್ಪರ್ಶ ನೀಡಿದ್ದು ಕಳೆದ ಶತಮಾನದ ಕೊಡುಗೆ. ಎರಡು ಮಹಾಯುದ್ಧಗಳ ನಂತರ ವಿಶ್ವದ ನಾಗರಿಕರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಚಿಗುರೊಡೆಯಲಾರಂಭಿಸಿದ್ದರಿಂದಲೇ ವಸಾಹತು ಆಳ್ವಿಕೆಗಳೂ ಸಮಾಪ್ತಿಯಾಗುತ್ತಾ ಬಂದವು. ಭಾರತವನ್ನೂ ಸೇರಿದಂತೆ ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ದೇಶಗಳು ತಮ್ಮದೇ ಆದ ಸಾಂಸ್ಕೃತಿಕ ನೆಲೆಗಳಲ್ಲಿ ಪ್ರಜಾಸತ್ತಾತ್ಮಕ ಸರ್ಕಾರಗಳನ್ನು ಸ್ಥಾಪಿಸಿದ್ದವು.

ಸಾಂವಿಧಾನಿಕ ಕನಸುಗಳು

ಭಾರತದ ಸಂವಿಧಾನವೂ ಇದೇ ಕಾಲಘಟ್ಟದಲ್ಲಿ ರಚನೆಯಾದ ಕಾರಣ, ಉದಾರವಾದಿ ಪ್ರಜಾಪ್ರಭುತ್ವದ ಚಿಂತನೆಗಳನ್ನು ಅನುಸರಿಸುತ್ತಿದ್ದ ಡಾ. ಬಿ. ಆರ್.‌ ಅಂಬೇಡ್ಕರ್‌ ಸಂವಿಧಾನದಲ್ಲಿ ಜನತೆಯ ಮೂಲಭೂತ ಹಕ್ಕುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಸ್ವಾತಂತ್ರ್ಯ ಪೂರ್ವ ಭಾರತದ ಬಹುತೇಕ ನಾಯಕರೂ ಸಹ ಈ ಸಾಂವಿಧಾನಿಕ ಆಶಯಗಳಿಗೆ ಬದ್ಧರಾಗಿದ್ದರು. ಆದರೆ 77 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರ ಭಾರತದಲ್ಲಿ ಮೂಲಭೂತ ಮಾನವ ಹಕ್ಕುಗಳು ಮತ್ತು ಅದರಿಂದಲೇ ಉಗಮಿಸುವ ನಾಗರಿಕ ಹಕ್ಕುಗಳು ಎಷ್ಟರ ಮಟ್ಟಿಗೆ ರಕ್ಷಿಸಲ್ಪಡುತ್ತಿದೆ ಎಂಬ ಪ್ರಶ್ನೆ ಉದ್ಭವಿಸಿರುವುದು, ಆಳ್ವಿಕೆಯ ವೈಫಲ್ಯ ಮತ್ತು ಅಸೂಕ್ಷ್ಮತೆಯನ್ನು ಬಿಂಬಿಸುತ್ತದೆ.

ಭಾರತ ಒಂದು ಸಮಾಜವಾದಿ-ಸೆಕ್ಯುಲರ್‌ ತತ್ವಗಳನ್ನಾಧರಿಸಿದ, ಸಮ ಸಮಾಜದ ಕನಸು ಹೊತ್ತ ಸಂವಿಧಾನವನ್ನು ತನ್ನದಾಗಿಸಿಕೊಂಡಿದೆ. ಈ ಸಂವಿಧಾನವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇರುವ ಘನತೆಯ ಬದುಕು, ಕನಿಷ್ಠ ಶಿಕ್ಷಣ, ಉತ್ತಮ ಆರೋಗ್ಯ ಹಾಗೂ ನಾಗರಿಕ ಸೌಲಭ್ಯಗಳನ್ನು ಭಾರತದ ಆಳ್ವಿಕೆಗಳು ಒದಗಿಸಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆ ಈ ದಿನದಂದು ನಮ್ಮನ್ನು ಕಾಡಬೇಕಿದೆ. ನವ ಉದಾರವಾದಿ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆ ಮತ್ತು ಬಲಪಂಥೀಯ ಬಹುಸಂಖ್ಯಾವಾದದ ಚಿಂತನಾ ಕ್ರಮಗಳು ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಆವರಣಗಳನ್ನು ಆಕ್ರಮಿಸಿಕೊಂಡಿರುವ ವರ್ತಮಾನ ಭಾರತದಲ್ಲಿ ಮಾನವ ಹಕ್ಕುಗಳನ್ನು ಎರಡು ನೆಲೆಗಳಲ್ಲಿ ನಿಷ್ಕರ್ಷೆಗೊಳಪಡಿಸಬೇಕಾಗಿದೆ.

ಇದನ್ನೂ ಓದಿ: ಚಳಿಗಾಲದ ಅಧಿವೇಶನ: ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಆಸನ ವ್ಯವಸ್ಥೆ- ಬೆಳಗಾವಿ ಜಿಲ್ಲಾಡಳಿತ ಎಡವಟ್ಟು

ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬಹುಸಂಖ್ಯಾತ ಜನತೆ ಎದುರಿಸುತ್ತಿರುವ ಮಾರುಕಟ್ಟೆಯ ದಾಳಿ ಮತ್ತು  ಬಹುಸಂಖ್ಯಾವಾದದ ರಾಜಕೀಯ ವ್ಯವಸ್ಥೆಯೊಳಗೆ, ಮತೀಯವಾದ-ಕೋಮುವಾದ-ಜಾತಿವಾದದ ಆಕ್ರಮಣಗಳನ್ನು ಗಮನಿಸಿದಾಗ, ಮೂಲ ಮಾನವ ಹಕ್ಕುಗಳಿಗೂ ಸ್ವತಂತ್ರ ಭಾರತದ ಸಾರ್ವಭೌಮ ಜನತೆಯ ನಾಗರಿಕ ಹಕ್ಕುಗಳಿಗೂ ಇರುವ ಸೂಕ್ಷ್ಮ ಅಂತರವನ್ನೂ ಗುರುತಿಸಲು ಸಾಧ್ಯ. ಸಾಂವಿಧಾನಿಕವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿಸ್ತರಿಸುವ ಮೂಲಭೂತ ಮಾನವ ಹಕ್ಕುಗಳು ಇಂದಿಗೂ ಭಾರತದ ಪ್ರತಿ ಪ್ರಜೆಗೂ ಲಭ್ಯವಿದೆ. ಆದರೆ ಆಡಳಿತಾತ್ಮಕವಾಗಿ ಅಧಿಕಾರ ರಾಜಕಾರಣವು ವಿಧಿಸುವ ನಿರ್ಬಂಧಗಳು ಸಮಾಜದ ಒಂದು ವರ್ಗದ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಲೇ ಇದೆ.

ಸಾಮಾಜಿಕ ನ್ಯಾಯದ ಹೋರಾಟಗಳು

ಸಂವಿಧಾನವು ಜನತೆಗೆ ಒದಗಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್‌ ಸ್ವಾತಂತ್ರ್ಯ ಮತ್ತು ಧಾರ್ಮಿಕ ಉಪಾಸನಾ ಸ್ವಾತಂತ್ರ್ಯಗಳು ಗ್ರಾಂಥಿಕವಾಗಿ ಸುರಕ್ಷಿತವಾಗಿದ್ದರೂ, ತಳಮಟ್ಟದಲ್ಲಿ ಜನಸಾಮಾನ್ಯರು ಈ ಹಕ್ಕು ಮತ್ತು ಸ್ವಾತಂತ್ರ್ಯದಿಂದ ವಂಚಿತರಾಗುತ್ತಲೇ ಇದ್ದಾರೆ. ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆಯು ಸೃಷ್ಟಿಸುತ್ತಿರುವ ಅಸಮಾನತೆಯ ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟ ಜನಸಮುದಾಯಗಳು ಇನ್ನೂ ಹೆಚ್ಚು ಅಂಚಿನೆಡೆಗೆ ಸಾಗುತ್ತಿರುವುದು, ಬಡಜನತೆಯ  ʼಘನತೆಯ ಬದುಕಿನʼ ಸಾಂವಿಧಾನಿಕ ಹಕ್ಕನ್ನೇ ಅಣಕಿಸುವಂತಿದೆ. ಬಡತನ, ಹಸಿವು ಮತ್ತು ನಿರುದ್ಯೋಗ ತಳಸಮಾಜದ ಕೆಳಸ್ತರದ ಸಮುದಾಯಗಳನ್ನು ಸಾಮಾಜಿಕವಾಗಿ ಅಸ್ಥಿರಗೊಳಿಸುತ್ತಿದ್ದರೆ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರದಂತಹ ಜಾತಿ ತಾರತಮ್ಯಗಳು ಈ ಜನರನ್ನು ಸಾಂಸ್ಕೃತಿಕವಾಗಿ ಅಭದ್ರತೆಯತ್ತ ನೂಕುತ್ತಿದೆ.

ಮಾನವ ಹಕ್ಕು ದಿನಾಚರಣೆಯಂದು ವರ್ತಮಾನದ ನೆಲೆಯಲ್ಲಿ ನಿಂತು ನಾವು ನೋಡಬೇಕಿರುವುದು, ಈ ನಾಗರಿಕ ಹಕ್ಕುಗಳಿಂದ ವಂಚಿತರಾದ ಜನತೆಯನ್ನು. ಸ್ವತಂತ್ರ ಭಾರತದಲ್ಲಿ ಜನಸಾಮಾನ್ಯರ ನಾಗರಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದು ಸಂವಿಧಾನಕ್ಕೆ ಅಪಚಾರ ಎಸಗಿದಂತೆ. ಆದರೆ ಸಂವಿಧಾನದ ಪರಿಧಿಯಲ್ಲೇ ಸರ್ಕಾರಗಳು ರೂಪಿಸಿರುವ ಕರಾಳ ಕಾಯ್ದೆಗಳು ಜನರ ಪ್ರತಿರೋಧದ ದನಿಗಳನ್ನು ಹತ್ತಿಕ್ಕುತ್ತಿರುವುದು ವಾಸ್ತವ. ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ಆಡಳಿತಾರೂಢ ಸರ್ಕಾರಗಳ ತಪ್ಪು ಹೆಜ್ಜೆಗಳನ್ನು, ಜನವಿರೋಧಿ ನೀತಿಗಳನ್ನು ಹಾಗೂ ವಿಶಾಲ ಸಮಾಜದ ಸೌಹಾರ್ದತೆ-ಸಮನ್ವಯತೆಯನ್ನು ಭಂಗಗೊಳಿಸುವ ಉಪಕ್ರಮಗಳನ್ನು ವಿರೋಧಿಸುವುದು, ಜನತೆಗೆ ಸಂವಿಧಾನ ನೀಡಿರುವ ನಾಗರಿಕ ಹಕ್ಕು. ಈ ಪ್ರತಿರೋಧವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ಅವಕಾಶಗಳನ್ನೇ ಸರ್ಕಾರಗಳು ಕಸಿದುಕೊಳ್ಳುತ್ತಿವೆ. ನಮ್ಮ ಪ್ರತಿಭಟನೆಗೆ ಜಾಗ ಕೊಡಿ ಎಂದು ಅಂಗಲಾಚಬೇಕಾದ ಸನ್ನಿವೇಶವನ್ನು ನೊಂದ ನಾಗರಿಕರನ್ನು ಪ್ರತಿನಿಧಿಸುವ ಸಂಘಟನೆಗಳು ಎದುರಿಸುತ್ತಿವೆ.

ಮತ್ತೊಂದು ಬದಿಯಲ್ಲಿ ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸುತ್ತಿರುವ ಅಸಮಾನತೆಗಳು ಕೆಳಸ್ತರದ ಸಮಾಜದ ಕೌಟುಂಬಿಕ ಚೌಕಟ್ಟುಗಳನ್ನೇ ಅಸ್ಥಿರಗೊಳಿಸುತ್ತಿದೆ. ಜಾಗತೀಕರಣ ಯುಗ ಆರಂಭವಾಗಿ ಡಿಜಿಟಲ್‌ ಯುಗವನ್ನು ತಲುಪಿರುವ ಹೊತ್ತಿನಲ್ಲಿ ಅತಿ ಹೆಚ್ಚು ಬಾಧೆಗೊಳಗಾಗಿರುವ ಒಂದು ಸಮಾಜ ಎಂದರೆ ವಲಸಿಗ ಸಮುದಾಯಗಳು. ಭೂರಹಿತರು, ಅಭಿವೃದ್ಧಿ ಪಥದಲ್ಲಿ ಇರುವ ಭೂಮಿಯನ್ನೂ ಕಳೆದುಕೊಂಡವರು, ಕಾರ್ಪೋರೇಟ್‌ ನೀತಿಗಳಿಂದ ಉದ್ಯೋಗ ಕಳೆದುಕೊಂಡವರು ನಿರಂತರವಾಗಿ ತಮ್ಮ ಭವಿಷ್ಯ ಬದುಕನ್ನು ರೂಪಿಸಿಕೊಳ್ಳುವ ಸವಾಲು ಎದುರಿಸುತ್ತಿದ್ದಾರೆ. ಆದರೆ ಕಳೆದ ಮೂರು  ದಶಕಗಳ ಯಾವ ಸರ್ಕಾರವೂ ವಲಸೆ ಕಾರ್ಮಿಕರಿಗಾಗಿ ಒಂದು ಆಡಳಿತ ನೀತಿಯನ್ನು ರೂಪಿಸಲು ಮುಂದಾಗಿಲ್ಲ. ಉದ್ಯೋಗ ಒಂದು ಮೂಲಭೂತ ಹಕ್ಕು ಆಗಿಲ್ಲದಿರುವುದರಿಂದ ನಿರುದ್ಯೋಗದಿಂದ ಬದುಕು ಕಳೆದುಕೊಳ್ಳುವ ಯುವ ಸಮೂಹ ಸಹಜವಾಗಿ ಮಾರುಕಟ್ಟೆಯ ಕೃಪೆಗೊಳಗಾಗಬೇಕಾಗಿದೆ.

ಒಂದು ಸಮಗ್ರ ವಲಸೆ ಕಾರ್ಮಿಕ ನೀತಿ ಇಲ್ಲದಿರುವುದರಿಂದ ಅನೌಪಚಾರಿಕ ವಲಯದಲ್ಲಿ ದುಡಿದು ತಮ್ಮ ಬದುಕು ಕಟ್ಟಿಕೊಳ್ಳುವ ಕೋಟ್ಯಂತರ ಜನರಿಗೆ, ಸುಸ್ಥಿರ ಬದುಕು ಕಲ್ಪಿಸುವ ಜೀವನೋಪಾಯ ಮಾರ್ಗಗಳು ಇಲ್ಲವಾಗಿವೆ. ದುರಂತ ಎಂದರೆ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಗೆ ಈ ಸಮಸ್ಯೆ ಚುನಾವಣೆಗಳ ಸಮಯದಲ್ಲೂ ಪ್ರಧಾನ ವಿಷಯವಾಗುವುದಿಲ್ಲ. ಇಲ್ಲಿ ಅವಕಾಶವಂಚಿತವಾಗುವ ಬಹುದೊಡ್ಡ ಸಮಾಜ ಎಂದರೆ ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ತಳಸಮುದಾಯಗಳು. ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುವವರು ಹಾಗೆಯೇ ಮರಳಿ ಹಳ್ಳಿಗಳಿಗೆ ಹಿಂದಿರುಗುವ ದುಡಿಯುವ ವರ್ಗಗಳು ತಮ್ಮ ಅನಿಶ್ಚಿತ ಬದುಕಿನ ನೆಲೆಯಲ್ಲೇ ಆರ್ಥಿಕ ಶೋಷಣೆ ಮತ್ತು ಸಾಮಾಜಿಕ ಅಸಮಾನತೆಗಳಿಗೆ ತುತ್ತಾಗುತ್ತವೆ. ಈ ಜನಸಮುದಾಯಗಳ ಆಕ್ರೋಶ ಮತ್ತು ಹತಾಶೆಗಳಿಗೆ ದನಿಗೂಡಿಸುವ ಸಂಘಟನೆಗಳು ಹೇರಳವಾಗಿದ್ದರೂ, ಈ ದನಿಗಳಿಗೆ ರಾಜಕೀಯ ಸ್ವರೂಪ ನೀಡುವುದರಲ್ಲಿ ವಿಫಲವಾಗಿರುವುದರಿಂದ ಇವರ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ.

ಸಾಂಘಿಕ ನೆಲೆಯಲ್ಲಿ ಪ್ರಜಾತಂತ್ರ

ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲ ಪಕ್ಷಗಳಿಗೂ ಈ ಸಮಸ್ಯೆಗಳ ತಿಳುವಳಿಕೆ ಇದೆ. ಆದರೆ ಆಡಳಿತದ ಸೂತ್ರ ನಿರ್ವಹಿಸುವ ಅಧಿಕಾರ ರಾಜಕಾರಣವು ಉದಾರವಾದದ ಸುಳಿಯಲ್ಲಿ ಸಿಲುಕಿರುವುದರಿಂದ, ಈ ಜನರ ನೋವಿನ ದನಿ ಕೇಳದಂತಾಗಿದೆ. ಈ ಹತಾಶ ಧ್ವನಿಗಳಿಗೆ ಒತ್ತಾಸೆಯಾಗಿ ನಿಲ್ಲುವ ರಾಜಕೀಯ ಪಕ್ಷಗಳು ತಮ್ಮ ತತ್ವ ಸಿದ್ದಾಂತಗಳನ್ನು ಎಷ್ಟೇ ಬಲವಾಗಿ ಪ್ರತಿಪಾದಿಸಿದರೂ, ಅಂತಿಮವಾಗಿ ಅಧಿಕಾರ ಮತ್ತು ಆಳ್ವಿಕೆಯ ಅನಿವಾರ್ಯತೆಗಳಿಗೆ ಬದ್ದವಾಗಿರುತ್ತವೆ. ತಾವು ಪ್ರತಿನಿಧಿಸುವ ಸಮಾಜದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಲು ಶ್ರಮಿಸುವ ರಾಜಕೀಯ ಪಕ್ಷಗಳು ಮತ್ತು ಜನಪರ ಸಂಘಟನೆಗಳು ಆಂತರಿಕವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಆಂತರಿಕ ಪ್ರಜಾಪ್ರಭುತ್ವ ಇಲ್ಲದ ಪಕ್ಷ-ಸಂಘಟನೆಗಳು ಅಂತಿಮವಾಗಿ ವಂಶಾಡಳಿತ ಅಥವಾ ನಿರಂಕುಶತ್ವಕ್ಕೆ ಬಲಿಯಾಗುತ್ತವೆ.

ಭಾರತದಲ್ಲಿ ನಾಗರಿಕ ಹಕ್ಕುಗಳ ಹೋರಾಟಗಳು ಪ್ರಬಲವಾಗಿದ್ದರೂ ಇನ್ನೂ ಪ್ರಬುದ್ಧತೆ ಪಡೆದುಕೊಳ್ಳದಿರಲು ಕಾರಣ ಸಾಂಘಿಕ-ಸಾಂಸ್ಥಿಕ ಆಂತರಿಕ ಪ್ರಜಾಪ್ರಭುತ್ವದ ಕೊರತೆ. ಈ ಸುಡು ವಾಸ್ತವವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ಕೊರತೆಯೇ ಅಧಿಕಾರ ರಾಜಕಾರಣದ ವಾರಸುದಾರರಿಗೆ ಲಾಭದಾಯಕವಾಗಿ ಪರಿಣಮಿಸುತ್ತದೆ. ಶೋಷಿತ, ಅವಕಾಶವಂಚಿತ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನಪರ ಸಂಘಟನೆಗಳನ್ನು, ಪ್ರಗತಿಪರ ಎಂದು ಕರೆಯಲಾಗುವ ಗುಂಪುಗಳನ್ನೂ ಸಹ ಆಡಳಿತಾರೂಢ ಪಕ್ಷಗಳು ನಿಷ್ಕ್ರಿಯಗೊಳಿಸಲು ಅಥವಾ Appropriate ಮಾಡಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿದಂತಾಗುತ್ತದೆ.  ಕರ್ನಾಟಕದಲ್ಲಿ 1980-90ರ ದಶಕದಲ್ಲಿ ಈ ವಿದ್ಯಮಾನವನ್ನು ಕಾಣಬಹುದಿತ್ತು. ಇಂದು ಪುನರಾವರ್ತನೆಯಾಗುತ್ತಿರುವುದನ್ನೂ ಕಾಣಬಹುದು. ಹಾಗಾಗಿಯೇ ಜನರ ಪ್ರತಿರೋಧಗಳು ನೈಜ ಅವಕಾಶವಂಚಿತರ ನೆಲೆಗಳಿಂದ ದೂರದಲ್ಲಿ ಧ್ವನಿಸುತ್ತವೆಯೇ ಹೊರತು, ಶೋಷಣೆಯ ಕೂಪಗಳಲ್ಲಿ ಸದ್ದೇ ಮಾಡುವುದಿಲ್ಲ.

ಇದಕ್ಕೆ ಕಾರಣ ನಾಗರಿಕ ಹಕ್ಕುಗಳ ಹೋರಾಟಗಳು ಕೇಂದ್ರೀಕರಣವಾಗುತ್ತಿವೆ. ಒಳಮೀಸಲಾತಿಯಂತಹ ಗಂಭೀರ ಸಮಸ್ಯೆಗಳ ಸುತ್ತಲಿನ ಸಂಕಥನಗಳಲ್ಲೂ, ಸಾಂವಿಧಾನಿಕ ಮೀಸಲಾತಿಯಿಂದ ನಿಜವಾಗಲೂ ವಂಚಿತರಾಗಿರುವ ಜನಸಮುದಾಯಗಳ ಧ್ವನಿಗೆ ಅವಕಾಶ ಕಲ್ಪಿಸಲಾಗುತ್ತಿಲ್ಲ. ಬದಲಾಗಿ ಈ ದನಿಗಳನ್ನು ಸಾಂಘಿಕ ನೆಲೆಯಲ್ಲಿ ಪ್ರತಿನಿಧಿಸಲಾಗುತ್ತಿದೆ. ಅಸ್ಪೃಶ್ಯತೆ, ಸಾಮಾಹಿಕ ಬಹಿಷ್ಕಾರ ಎದುರಿಸುತ್ತಿರುವ ಕೆಳಸ್ತರದ ಸಮಾಜವಾಗಲೀ, ನಿತ್ಯ ದೌರ್ಜನ್ಯ, ಅತ್ಯಾಚಾರ ಎದುರಿಸುತ್ತಿರುವ ತಳಸಮುದಾಯಗಳ ಮಹಿಳಾ ಸಂಕುಲವಾಗಲೀ ಹೋರಾಟಗಳ ಒಂದು ಭಾಗವಾಗುತ್ತಿಲ್ಲ. ಈ ನೊಂದ ಜನರ ಪರವಾಗಿ ಬದ್ಧತೆಯಿಂದ ಹೋರಾಡುವ ಸಂಘಟನೆಗಳು ಅವರ ನಡುವೆ ನಿಂತು ಮಾತನಾಡುತ್ತಿಲ್ಲ. ಈ ಪ್ರಾತಿನಿಧಿಕ ಸ್ವರೂಪವೇ ನಾಗರಿಕ ಸಮಾಜದ (Civil Society) ಹೋರಾಟಗಳ ವೈಫಲ್ಯಕ್ಕೂ ಕಾರಣ ಎನ್ನುವುದನ್ನು ಇನ್ನಾದರೂ ಗಮನಿಸಬೇಕಿದೆ.

ಸಮಸ್ಯೆಗಳ ಸುಳಿಯಲ್ಲಿ ಹಕ್ಕುಗಳು

ವಿಕಸಿತ ಭಾರತ ಎದುರಿಸುತ್ತಿರುವ ಹಸಿವು, ಬಡತನ, ನಿರುದ್ಯೋಗ, ಶೋಷಣೆ, ದೌರ್ಜನ್ಯ ಮತ್ತು ತಾರತಮ್ಯಗಳ ಮೂಲ ಇರುವುದು ನಮ್ಮ ಸಮಾಜವನ್ನು ನಿರ್ದೇಶಿಸುತ್ತಿರುವ ಜಾತಿ ವ್ಯವಸ್ಥೆಯ ಶ್ರೇಣೀಕರಣದಲ್ಲಿ, ಅದನ್ನು ಕಾಪಾಡುವ ಪಿತೃಪ್ರಧಾನ ಮೌಲ್ಯಗಳು ಮತ್ತು ಅಧಿಕಾರ ಕೇಂದ್ರಗಳನ್ನು ನಿಯಂತ್ರಿಸುವ ಊಳಿಗಮಾನ್ಯ ಧೋರಣೆಯಲ್ಲಿ. ಈ ಮೂರೂ ದಾಳಿಗಳು ಏಕ ಕಾಲಕ್ಕೆ ನಡೆಯುತ್ತಿರುವುದರಿಂದಲೇ ಚುನಾವಣಾ ರಾಜಕಾರಣದಲ್ಲೂ ಜನರ ಜೀವನೋಪಾಯದ ಮೂಲಭೂತ ಸಮಸ್ಯೆಗಳು ಮುನ್ನಲೆಗೆ ಬರುವುದಿಲ್ಲ.

ಅಧಿಕಾರ ರಾಜಕಾರಣಕ್ಕೆ ಹತ್ತಿರವಾಗುವ ಹಪಹಪಿ ನಾಗರಿಕ ಸಮಾಜದ ಹೋರಾಟಗಳಲ್ಲಿ ಹೆಚ್ಚಾದಷ್ಟೂ ಈ ಸಮಸ್ಯೆ ಜಟಿಲವಾಗುತ್ತಲೇ ಹೋಗುತ್ತದೆ. ಸ್ವಾಭಾವಿಕವಾಗಿ ರಾಜಕಾರಣವನ್ನು ನಿಯಂತ್ರಿಸುವ ಕಾರ್ಪೋರೇಟ್‌ ಮಾರುಕಟ್ಟೆ ಶಕ್ತಿಗಳೇ ಈ ಸಾಂಘಿಕ ನೆಲೆಗಳನ್ನೂ ನಿಯಂತ್ರಿಸುತ್ತವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರ್ಲಕ್ಷ್ಯಕ್ಕೊಳಗಾಗುವುದು ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಶೋಷಿತ ಸಮುದಾಯಗಳು.

ಮಾನವ ಹಕ್ಕುಗಳ ದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ, ಪ್ರಭುತ್ವ ಮತ್ತು ಸರ್ಕಾರಗಳಿಂದ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಗಮನಿಸುತ್ತಲೇ, ತಳಸಮಾಜದಲ್ಲಿ ಸಂಭವಿಸುತ್ತಿರುವ ಈ ಪಲ್ಲಟಗಳನ್ನೂ ಪರಾಮರ್ಶಿಸಬೇಕಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗ್ರಾಂಥಿಕವಾಗಿ ಎಷ್ಟೇ  ಬೋಧಿಸಿದರೂ ಅಂತಿಮವಾಗಿ, ಆಚರಣಾತ್ಮಕ ನೆಲೆಯಲ್ಲಿ ಸಾಂಘಿಕ ಸ್ವರೂಪ ಪಡೆಯದೆ ಹೋದಾಗ, ಸಮಾಜದಲ್ಲಿ ಪ್ರಜಾಪ್ರಭುತ್ವ-ನಾಗರಿಕ ಹಕ್ಕು-ಮಾನವ ಹಕ್ಕುಗಳ ಉದಾತ್ತ ಚಿಂತನೆಗಳು ಬೇರೂರುವುದಿಲ್ಲ. ಅಸಮಾನತೆಗೀಡಾಗಿರುವ ಅಸಂಖ್ಯಾತ ಜನತೆಗೆ ಬೇಕಾಗುವುದು, ಘನತೆಯ ಬದುಕು ಮತ್ತು ಸುಸ್ಥಿರ ಭವಿಷ್ಯ.

ಇದಕ್ಕೆ ಬೇಕಾದ ಅನ್ನ ವಸತಿ, ಶಿಕ್ಷಣ, ಆರೋಗ್ಯ, ನೈರ್ಮಲ್ಯ , ಘನತೆ ಮತ್ತು ಆರೋಗ್ಯಕರ ಸಮಾಜ ಇವೆಲ್ಲವನ್ನೂ ಒದಗಿಸಬೇಕಾದ ಜವಾಬ್ದಾರಿ ಆಳ್ವಿಕೆಯ ಮೇಲಿರುವಷ್ಟೇ ಸಮಾಜದ ಮೇಲೆಯೂ ಇದೆ.  ಜನಸಾಮಾನ್ಯರ ಈ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭದಲ್ಲೆಲ್ಲಾ ಸಮಾಜದ ಒಳಗಿನಿಂದಲೇ ಪ್ರತಿರೋಧದ ದನಿ ಹೊರಬರುತ್ತದೆ. ಈ ದನಿಗೆ ದನಿಗೂಡಿಸುವ ಹೊಣೆ ಪ್ರಜ್ಞಾವಂತ ಸಮಾಜದ್ದಾಗಿರುತ್ತದೆ. ಮಾನವ ಹಕ್ಕುಗಳ ದಿನವನ್ನು ಆಚರಿಸುವ ಸಂದರ್ಭದಲ್ಲಿ ಈ ನಾಗರಿಕ ಹೊಣೆಯನ್ನು ಅರಿತು ನಮ್ಮದಾಗಿಸಿಕೊಳ್ಳುವತ್ತ ಸಾಗೋಣ.

ಹಕ್ಕುಗಳಿಗಾಗಿ ಹೋರಾಡುವ ಎಲ್ಲರಿಗೂ ಮಾನವ ಹಕ್ಕುಗಳ ದಿನದ ಶುಭಾಶಯಗಳು

ಇದನ್ನೂ ನೋಡಿ: ಪಿಚ್ಚರ್ ಪಯಣ :153, ಚಿತ್ರ : ಆಲ್ ವಿ ಇಮ್ಯಾಜಿನ್ ಆಸ್ ಲೈಟ್ , ALL WE IMAGINE AS LIGHT

Donate Janashakthi Media

Leave a Reply

Your email address will not be published. Required fields are marked *