ಜಾತಿ ಗಣತಿ ಮೂಲ ವರದಿ ನಾಪತ್ತೆ ವಿವಾದ | ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದ್ದೇನು?

ಬೆಂಗಳೂರು: ಬಹುನಿರೀಕ್ಷಿತ ಜಾತಿ ಗಣತಿಯ ಮೂಲ ವರದಿ ನಾಪತ್ತೆಯಾಗಿರುವ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರು ಬುಧವಾರ ಸ್ಪಷ್ಟನೆ ನೀಡಿದ್ದು, ಜಾತಿ ಗಣತಿಯ ಮಾಹಿತಿಯು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ. “ವರ್ಕ್ ಶೀಟ್‌ಗಳು ಮಾತ್ರ ನಾಪತ್ತೆಯಾಗಿದೆ, ಅದೇನೂ ವಿಷಯವಲ್ಲ, ಸಮೀಕ್ಷೆಯ ಎಲ್ಲಾ ದತ್ತಾಂಶಗಳು ಇವೆ. ಜಾತಿ ಗಣತಿ ವರದಿ ಸಲ್ಲಿಸಲಾಗುವುದು” ಎಂದು ಹೇಳಿದ್ದಾರೆ.

ಜಾತಿ ಗಣತಿ ವರದಿಯ ಮೂಲ ಪ್ರತಿ ನಾಪತ್ತೆಯಾಗಿದೆ ಎಂಬ ಬಗ್ಗೆ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಪತ್ರ ಬರೆದಿದ್ದರು, ಇದು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದ್ದಾರೆ. “ದತ್ತಾಂಶಗಳು ನೂರು ಪ್ರತಿಶತ ಸುರಕ್ಷಿತವಾಗಿದೆ. ಕಾಂತರಾಜ್ ಆಯೋಗ ಸಿದ್ಧಪಡಿಸಿರುವ ಜಾತಿ ಗಣತಿಯ ವರ್ಕ್‌ಶೀಟ್‌ಗಳು ಮಾತ್ರ ಕಾಣೆಯಾಗಿವೆ” ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಪೊಲೀಸರ ವಾಹನವನ್ನೇ ಓಡಿಸಿಕೊಂಡು ಪರಾರಿಯಾದ ಆರೋಪಿ!

ವರದಿಯ ಹಾರ್ಡ್ ಕಾಪಿಯಲ್ಲಿ ಆಯೋಗದ ಮಾಜಿ ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಗಳ ಸಹಿಯ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಅವರು ಹೇಳಿದ್ದಾರೆ. “ವರ್ಕ್‌ಶೀಟ್‌ಗಳು ಲಭ್ಯವಿದ್ದರೆ, ನಮಗೆ ಕೆಲಸ ಸುಲಭವಾಗುತ್ತಿತ್ತು. ಡೇಟಾ ಸುರಕ್ಷಿತವಾಗಿದೆ. ನಮ್ಮ ಪತ್ರಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ಉತ್ತರ ಬಂದಿರಲಿಲ್ಲ ಮತ್ತು ಈಗಿನ ಸರ್ಕಾರ ಉತ್ತರಿಸಿ ಅಪ್‌ಲೋಡ್ ಮಾಡಿದ ದತ್ತಾಂಶವನ್ನು ಬಳಸಿಕೊಂಡು ವರದಿ ಸಲ್ಲಿಸಲು ಹೇಳಿದೆ”ಎಂದು ಅವರು ಹೇಳಿದ್ದಾರೆ. ಸುರಕ್ಷಿತವಾಗಿ ಸಂಗ್ರಹಿಸಿದ ಮಾಹಿತಿ ಆಧರಿಸಿ ಸರಕಾರಕ್ಕೆ ವರದಿ ನೀಡಬೇಕು ಎಂದು ಅವರು ಹೇಳಿದ್ದಾರೆ.

ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಯಪ್ರಕಾಶ್ ಹೆಗ್ಡೆ, ‘ಸದಸ್ಯರು, ಸದಸ್ಯ ಕಾರ್ಯದರ್ಶಿ ಸೇರಿದಂತೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಸಲ್ಲಿಸುವ ಸಮಯದಲ್ಲಿ, ನಾವು ನಮ್ಮ ಸಹಿಗಳನ್ನು ನೀಡುತ್ತೇವೆ ಮತ್ತು ವರದಿಯನ್ನು ಸಲ್ಲಿಸುತ್ತೇವೆ” ಎಂದು ತಿಳಿಸಿದ್ದಾರೆ.

ಭಾರತ್ ಎಲೆಕ್ಟ್ರಾನಿಕ್ಸ್ ಇನ್‌ಸ್ಟಿಟ್ಯೂಟ್ ಸಿಬ್ಬಂದಿ ಡೇಟಾ ಮತ್ತು ಇತರ ದಾಖಲೆಗಳನ್ನು ಒಳಗೊಂಡ ಸಾಫ್ಟ್ ಕಾಪಿಯನ್ನು ಈಗಾಗಲೇ ಅಪ್‌ಲೋಡ್ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. “ಲಭ್ಯವಿರುವ ಅಂಕಿಅಂಶಗಳ ಆಧಾರದ ಮೇಲೆ ಆಯೋಗವು ವರದಿಯನ್ನು ಸಿದ್ಧಪಡಿಸುತ್ತದೆ. ಸರಕಾರಕ್ಕೆ ಸಲ್ಲಿಸುವ ವರದಿಯೇ ಮೂಲ ಪ್ರತಿಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ ಅಥವಾ ಜನವರಿಯೊಳಗೆ ಸಲ್ಲಿಸುವಂತೆ ಸೂಚಿಸಿದ್ದರು. ಅಷ್ಟರೊಳಗೆ ಪ್ರತಿಯನ್ನು ಸಲ್ಲಿಸಲಾಗುವುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಣಿಪುರ | ಲೂಟಿ ಮಾಡಿದ 4,000 ಶಸ್ತ್ರಾಸ್ತ್ರಗಳು ಇನ್ನೂ ಜನರ ಕೈಯ್ಯಲ್ಲಿ ಇವೆ: ಲೆಫ್ಟಿನೆಂಟ್ ಜನರಲ್ ಆರ್. ಪಿ. ಕಲಿತಾ

ಪ್ರಭಾವಿ ಸಮುದಾಯಗಳ ವಿರೋಧದ ಪ್ರಶ್ನೆಗೆ ಉತ್ತರಿಸಿದ ಹೆಗ್ಡೆ, ಆಯೋಗದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ಇತರ ವಿಷಯಗಳ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಮರು ಸಮೀಕ್ಷೆ ನಡೆಸುವಂತೆ ಧಾರ್ಮಿಕ ಮುಖಂಡರು ಹಾಗೂ ಪ್ರಮುಖರ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕಂದಾಯ ಇಲಾಖೆ ಶಿಕ್ಷಕರಿಗೆ ತರಬೇತಿ ನೀಡಿ ನಂತರ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. “ಯಾವುದೇ ವೈಯಕ್ತಿಕ ಹಿತಾಸಕ್ತಿ ಇರಲಿಲ್ಲ. 90%ಕ್ಕೂ ಹೆಚ್ಚು ಜನರ ಮಾಹಿತಿ ಸಂಗ್ರಹಿಸಲಾಗಿದೆ. ಯಾವುದೇ ಲೋಪ ಆಗುವುದಿಲ್ಲ,” ಎಂದು ಹೇಳಿದ್ದಾರೆ. ಜಾತಿ ಗಣತಿ ವರದಿಯನ್ನು ಸದನದ ಮುಂದೆ ಮಂಡಿಸುವಂತೆ ಬಿಜೆಪಿ ನಾಯಕರು ನನ್ನನ್ನೂ ಕೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಬರೆದಿರುವ ಪತ್ರವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಹಂಚಿಕೊಂಡಿದ್ದರು.

ಇದನ್ನೂ ಓದಿ: ಆರೋಪಿಯನ್ನು ಮದುವೆಯಾಗಲು ಒಪ್ಪಿದ ಸಂತ್ರಸ್ತೆ; ಪೋಕ್ಸೋ ಮತ್ತು ಅತ್ಯಚಾರ ಪ್ರಕರಣ ರದ್ದು ಮಾಡಿದ ಕರ್ನಾಟಕ ಹೈಕೋರ್ಟ್

“ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಜಾತಿ ಗಣತಿ ವರದಿಯಲ್ಲಿ ಮೂಲ ಪ್ರತಿ ಇಲ್ಲ, ಜವಾಬ್ದಾರಿ ಕೊರತೆ ಅಥವಾ ಪಿತೂರಿಯನ್ನು ತೋರಿಸುತ್ತದೆ. ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದ ಈ ದಾಖಲೆಯ ಸಿಂಧುತ್ವ ಪ್ರಶ್ನಾರ್ಹವಾಗಿದೆ” ಎಂದು ಯತ್ನಾಳ್ ಹೇಳಿದ್ದರಿ.

ಈಮಧ್ಯೆ, ಜಾತಿ ಗಣತಿಗೆ ವೈಜ್ಞಾನಿಕ ವಿಧಾನದ ವಿವಿಧ ಸಮುದಾಯಗಳ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ. ಇದೇ ವೇಳೆ ಜಾತಿ ಗಣತಿಯನ್ನು ಒಪ್ಪಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ.

ವಿಡಿಯೊ ನೋಡಿ: ರಾಜ್ಯದಲ್ಲಿ ಸರ್ಕಾರ ಬದಲಾಗಿದೆ, ನಿಲುವುಗಳಲ್ಲಿ ಬದಲಾವಣೆ ಇಲ್ಲ – ಬಿ.ಸುರೇಶ್‌ Janashakthi Media

Donate Janashakthi Media

Leave a Reply

Your email address will not be published. Required fields are marked *