ಜಾತಿ ಸಮೀಕ್ಷೆಯನ್ನು ಸಾರ್ವಜನಿಕಗೊಳಿಸಿದ ಮೊದಲ ರಾಜ್ಯವಾಗಿ ಹೊರಹೊಮ್ಮಲಿರುವ ಬಿಹಾರ
ಪಾಟ್ನಾ: ನಡೆಯುತ್ತಿರುವ ಜಾತಿ ಸಮೀಕ್ಷೆಯ ಎಲ್ಲಾ ಮಾಹಿತಿಯನ್ನು ಬಿಹಾರದ ಮಹಾಘಟಬಂಧನ್ ಸರ್ಕಾರವು ಸಾರ್ವಜನಿಕಗೊಳಿಸಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ದೇಶವು ಕುತೂಹಕಲದಿಂದ ಗಮನಿಸುತ್ತಿದೆ. ಒಂದು ವೇಳೆ ರಾಜ್ಯ ಸರ್ಕಾರವು ಸಮೀಕ್ಷೆಯನ್ನು ಸಾರ್ವಜನಿಕಗೊಳಿಸಿದರೆ ದೇಶದಲ್ಲೇ ಈ ಕ್ರಮ ಕೈಗೊಂಡ ಮೊದಲ ರಾಜ್ಯವಾಗಿ ಬಿಹಾರ ಹೊರಹೊಮ್ಮಲಿದೆ.
“ಜಾತಿವಾರು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಎಲ್ಲಾ ಮಾಹಿತಿಯನ್ನು ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಾಗುತ್ತಿದೆ. ನಂತರ ಅಂತಿಮ ವರದಿಯನ್ನು ಸಿದ್ಧಪಡಿಸಲಾಗುವುದು. ಜಾತಿ ಗಣತಿಯ ಎಲ್ಲಾ ಡೇಟಾವನ್ನು ಸರ್ಕಾರವು ಸಾರ್ವಜನಿಕಗೊಳಿಸಲಿದೆ” ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂಓದಿ: ಜಾತಿ ಜನಗಣತಿಗೆ ಮೋದಿ ಸರಕಾರದ ನಿರಾಕರಣೆ – ಹಿಂದುತ್ವ ಕೋಮು ರಾಜಕೀಯದ ನಿಜರೂಪ ಬಯಲು
ಬಿಹಾರದ ಜಾತಿ ಸಮೀಕ್ಷೆಯು ದೇಶಕ್ಕೆ ಮಾದರಿಯಾಗಲಿದ್ದು, ದೇಶದ ಇತರ ರಾಜ್ಯಗಳು ಇದನ್ನು ಅನುಸರಿಸುತ್ತವೆ ಎಂದು ನಿತೀಶ್ ಕುಮಾರ್ ಪ್ರತಿಪಾದಿಸಿದ್ದಾರೆ. “ಹಿಂದೆ, ರಾಜಸ್ಥಾನ ಮತ್ತು ಕರ್ನಾಟಕ ಸರ್ಕಾರಗಳು ಜಾತಿ ಆಧಾರಿತ ಸಮೀಕ್ಷೆಗಳನ್ನು ನಡೆಸಿದ್ದವು. ಆದರೆ ಅವುಗಳ ಡೇಟಾವನ್ನು ಸಾರ್ವಜನಿಕಗೊಳಿಸಲಿಲ್ಲ” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
“ಜಾತಿ ಸಮೀಕ್ಷೆಯನ್ನು ಅಡ್ಡಿಪಡಿಸಲು ಕೆಲವರು ಯಾವ ಮಟ್ಟದಲ್ಲಿ ಪ್ರಯತ್ನಿಸಿದರು ಎಂಬುದು ಎಲ್ಲರಿಗೂ ತಿಳಿದಿದೆ” ಎಂದು ಬಿಜೆಪಿಯನ್ನು ನೇರವಾಗಿ ಹೆಸರಿಸದೆ ನಿತೀಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಆಡಳಿತಾರೂಢ ಮಹಾಘಟಬಂಧನ್ ಸರ್ಕಾರದ ಪ್ರಮುಖ ಪಕ್ಷವಾದ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಗೆ ಬಿಜೆಪಿಯ ಉನ್ನತ ನಾಯಕತ್ವವು ಬಹಿರಂಗವಾಗಿ ಅಡ್ಡಿಪಡಿಸುತ್ತಿದೆ ಎಂದು ಎರಡು ದಿನಗಳ ಹಿಂದೆಯಷ್ಟೆ ಟೀಕಿಸಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿರುವ ಹಸ್ತಕ್ಷೇಪವನ್ನು ಜಾತಿ ಸಮೀಕ್ಷೆಯನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಮಿತ್ರಪಕ್ಷವಾದ ರಾಷ್ಟ್ರೀಯ ಜನತಾ ದಳ ನಾಯಕರು ಕೂಡಾ ಆರೋಪಿಸಿದ್ದರು.
ಇದನ್ನೂಓದಿ: ದೇವದಾಸಿ ಮಹಿಳೆಯರ ಸಮೀಕ್ಷೆಗೆ ಸರ್ಕಾರದ ನಿರ್ಧಾರ: ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಸ್ವಾಗತ
ಬಿಹಾರದಲ್ಲಿ ಜಾತಿ ಸಮೀಕ್ಷೆಯನ್ನು ಮುಂದುವರಿಸುವಂತೆ ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯಲ್ಲಿ, ಕೇಂದ್ರ ಸರ್ಕಾರವು ಇತ್ತೀಚೆಗೆ ಮಧ್ಯಪ್ರವೇಶಿಸಿತ್ತು. ಹೀಗಾಗಿ ಆಡಳಿತಾರೂಢ ಪಕ್ಷಗಳು ಮತ್ತು ಬಿಜೆಪಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ಆಗಸ್ಟ್ 21 ರಂದು ಸುಪ್ರೀಂ ಕೋರ್ಟ್ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಮನ್ಸ್ ನೀಡಿತ್ತು.
ಜಾತಿ ಸಮೀಕ್ಷೆಯ ದೋಷಗಳನ್ನು ಮನವರಿಕೆ ಮಾಡದ ಹೊರತು ಹೈಕೋರ್ಟ್‌ನ ತೀರ್ಪಿಗೆ ತಡೆಯೊಡ್ಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದರೂ, ಪ್ರಕರಣವನ್ನು ಆಗಸ್ಟ್ 28 ರಂದು ಮುಂದಿನ ವಿಚಾರಣೆಗೆ ನಿಗದಿಪಡಿಸಿದೆ. ಈ ತಿಂಗಳ ಆರಂಭದಲ್ಲಿ, ಬಹುನಿರೀಕ್ಷಿತ ಜಾತಿ ಸಮೀಕ್ಷೆಯನ್ನು ಪೂರ್ಣಗೊಳಿಸಲು ಪಾಟ್ನಾ ಹೈಕೋರ್ಟ್ ಅನುಮತಿ ನೀಡಿತ್ತು. ಸಮೀಕ್ಷೆಯನ್ನು ತಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು (ಪಿಐಎಲ್) ಹೈಕೋರ್ಟ್ ವಜಾಗೊಳಿಸಿದೆ.
ಇದನ್ನೂಓದಿ: ಪಿತೃಪ್ರಧಾನತೆ-ಆಸ್ತಿ ಹಕ್ಕುಗಳು ಮತ್ತು ಗೋವಾದ ಏಕರೂಪ ನಾಗರಿಕ ಸಂಹಿತೆ
ಹೈಕೋರ್ಟ್ ತೀರ್ಪಿನ ನಂತರ, ಬಿಹಾರ ಸರ್ಕಾರವು ತಕ್ಷಣವೇ ಮೂರನೇ ಹಾಗೂ ಅಂತಿಮ ಹಂತದ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಹೆಚ್ಚಿನ ಕ್ಷೇತ್ರ ಕಾರ್ಯವನ್ನು ಆಗಸ್ಟ್ ಮಧ್ಯದ ವೇಳೆಗೆ ಮುಕ್ತಾಯಗೊಳಿಸಲಾಗಿದ್ದು, ಸಂಗ್ರಹಿಸಿದ ಡೇಟಾವನ್ನು ಅಪ್‌ಲೋಡ್ ಮಾಡುವ ದಿನಾಂಕವನ್ನು ಅಂತಿಮಗೊಳಿಸಲಾಗುತ್ತಿದೆ. ಕೊನೆಯ ಬಾರಿ ಜಾತಿ ಸಮೀಕ್ಷೆಯನ್ನು 1931 ರಲ್ಲಿ ನಡೆಸಲಾಯಿತು.
ಸಮಾಜದ ಪ್ರಭಾವಿ ವರ್ಗಗಳ ವಿರೋಧದ ನಡುವೆಯೂ ಎರಡನೇ ಹಂತದ ಜಾತಿ ಗಣತಿ ಏಪ್ರಿಲ್‌ನಲ್ಲಿ ಆರಂಭವಾಯಿತು. ಜನವರಿಯಲ್ಲಿ ಪ್ರಾರಂಭವಾದ ಮೊದಲ ಹಂತವು ಬಿಹಾರದಾದ್ಯಂತ ಮನೆಗಳ ಸಂಖ್ಯೆಯನ್ನು ಗುರುತಿಸುವ ಗುರಿಯನ್ನು ಹೊಂದಿತ್ತು. ನಂತರದ ಹಂತಗಳಲ್ಲಿ ಪ್ರತಿ ಮನೆಯಿಂದ ಜಾತಿ ಮತ್ತು ಸಾಮಾಜಿಕ – ಆರ್ಥಿಕ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು.
ಬಿಹಾರದ ಪ್ರಮುಖ ನಾಯಕರಾದ ನಿತೀಶ್ ಕುಮಾರ್ ಮತ್ತು RJD ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಮಂಡಲ್ ರಾಜಕೀಯದ ದೀರ್ಘ ಪ್ರತಿಪಾದಕರಾಗಿದ್ದು, 2015 ರಿಂದ ಜಾತಿ ಜನಗಣತಿಯನ್ನು ಪ್ರತಿಪಾದಿಸುತ್ತಿದ್ದಾರೆ. ಈ ಸಮೀಕ್ಷೆಯು ಉದ್ದೇಶಿತ ಅಭಿವೃದ್ಧಿ ಯೋಜನೆಗಳನ್ನು ತಿಳಿಸುವುದರ ಜೊತೆಗೆ ಐತಿಹಾಸಿಕವಾಗಿ ವಂಚಿತ ಸಮುದಾಯಗಳನ್ನು ಮೇಲಕ್ಕೆತ್ತುತ್ತದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಒತ್ತಿ ಹೇಳಿದ್ದಾರೆ.
ವಿಡಿಯೊ ನೋಡಿ: ಬುದ್ದಿ ಹೇಳಿದ ಉಪನ್ಯಾಸಕನಿಗೆ ಲಾಂಗ್ ತೋರಿಸಿದ ವಿದ್ಯಾರ್ಥಿ! Janashakthi Media