ಬೆಂಗಳೂರು : ನಮ್ಮ ಸಾರಿಗೆ ನೌಕರರು ಮತ್ತು ಕುಟುಂಬದವರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯದಿಂದ ಕಾಣಬಾರದು. ಚಿಕಿತ್ಸೆ ನೀಡುವಲ್ಲಿ ಉದಾಸೀನ ಮಾಡಕೂಡದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಸಗಿ ಆಸ್ಪತ್ರೆಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿಗೆ ನಗದು ರಹಿತ ಆರೋಗ್ಯ ಸವಲತ್ತು ಯೋಜನೆಯನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಸಾರಿಗೆ ನೌಕರರು ತಮ್ಮ ದುಡಿಮೆಯ ಮೂಲಕ ಸಂಸ್ಥೆಯ ಮತ್ತು ನಿಗಮದ ಆದಾಯ ಹೆಚ್ಚಿಸುತ್ತಿದ್ದಾರೆ. ಇವರ ಆರೋಗ್ಯ ಸರ್ಕಾರದ ಮತ್ತು ಸಂಸ್ಥೆ ಹಾಗೂ ನಿಗಮದ ಜವಾಬ್ದಾರಿ ಆಗಿದೆ. ಈ ಕಾರಣಕ್ಕೇ ಖಾಸಗಿ ಆಸ್ಪತ್ರೆಗಳ ಜೊತೆಗೂ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ : ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರವೇ ಕಾರಣ: ಸಚಿವ ಸಂತೋಷ್ ಲಾಡ್ ಹೇಳಿಕೆ
275 ಖಾಸಗಿ ಆಸ್ಪತ್ರೆಗಳ ಜೊತೆಗೆ ಒಡಂಬಡಿಕೆ ಆಗಿದೆ. ಈ ಪ್ರಮಾಣ ಇನ್ನೂ ಹೆಚ್ಚಲಿದೆ. ಸಿಬ್ಬಂದಿ ಕರ್ತವ್ಯನಿರತ ಊರಿನಲ್ಲೇ ಚಿಕಿತ್ಸೆ ಪಡೆಯಬಹುದು. ನೌಕರರ ಕುಟುಂಬದವರು ನೆಲೆಸಿರುವ ಊರಿನಲ್ಲೇ ನಗದು ರಹಿತವಾಗಿ ಚಿಕಿತ್ಸೆ ಪಡೆಯಬಹುದಾದ ಅತ್ಯಂತ ಸುಲಲಿತ ಯೋಜನೆ ಇದಾಗಿದೆ. ನಮ್ಮ ನೌಕರರು ಮತ್ತು ಕುಟುಂಬದವರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಸಮಾಜದಲ್ಲಿ ಲಿಂಗ ತಾರತಮ್ಯ ಇರುವುದರಿಂದ ಮಹಿಳೆಯರ ಆರ್ಥಿಕ ಸಾಮರ್ಥ್ಯ ಹೆಚ್ಚಿಸಲು ಶಕ್ತಿ ಮತ್ತು ಇತರೆ ಯೋಜನೆಗಳ ಮೂಲಕ ಮಹಿಳೆಯರಿಗೆ ಅನುಕೂಲ ಮತ್ತು ಶಕ್ತಿ ಹೆಚ್ಚಿಸಿದ್ದೇವೆ ಎಂದರು.
ಶಕ್ತಿ ಯೋಜನೆ ಪರಿಣಾಮ ಧಾರ್ಮಿಕ ಸ್ಥಳಗಳು ಮತ್ತು ಪ್ರವಾಸೋದ್ಯಮ ಸಂಸ್ಥೆಗಳಿಗೆ ಭಕ್ತರ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿಗಳೂ ನನಗೂ ಪತ್ರ ಬರೆದಿದ್ದಾರೆ ಎಂದು ಉಲ್ಲೇಖಿಸಿದರು.
ಇದನ್ನೂ ನೋಡಿ : ಎಡ-ಪ್ರಜಾಸತ್ತಾತ್ಮಕ ಪರ್ಯಾಯ ರಾಜಕೀಯ ರಂಗವನ್ನು ರೂಪಿಸಲು ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಧಾರ Janashakthi Media