ರಾಯಚೂರು| ಕಲ್ಲು ಗಣಿಗಾರಿಕೆ ಪೀಡಿತ ಇಡೀ ಪ್ರದೇಶದ ಮೇಲೆ ಕೇಸ್ ದಾಖಲು

ರಾಯಚೂರು: ನಗರದ ಸಮೀಪದ ಮಿಟ್ಟಿ ಮಲ್ಕಾಪುರದ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಆಗಸ್ಟ್‌ 30ರಂದು ಭೇಟಿ ನೀಡಿದರು.

‘ಗಣಿಗಾರಿಕೆ ಪೀಡಿತ ಇಡೀ ಪ್ರದೇಶದ ಮೇಲೆ ಸ್ಥಳದಲ್ಲೇ ಕೇಸ್ ದಾಖಲಿಸಿದ್ದೇನೆ. ಕಾನೂನು ಬದ್ದವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರು ಎಂದು ಕಂಡುಬಂದರೆ ಗಣಿಗಾರಿಕೆಗೆ ಸಂಬಂಧಿಸಿದ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳ ಮೇಲೂ ಕೇಸ್ ದಾಖಲಿಸಲಾಗುವುದು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಮೊದಲಿಗೆ ವೆಂಕಟೇಶ್ವರ ಮಿನಿರಲ್ಸ್ ಸ್ಟೋನ್ ಕ್ರಷರ್ ಪ್ರದೇಶದಲ್ಲಿ ಸಂಚರಿಸಿ ಗಣಿಗಾರಿಕೆ ನಂತರ ಹಾಗೆಯೇ ಬಿಟ್ಟ ಕಂದಕದ ವೀಕ್ಷಣೆ ನಡೆಸಿ, ‘ಇದನ್ನು ಏಕೆ ಸಮತಟ್ಟು ಮಾಡಿಲ್ಲ?, ಗಿಡ ಏಕೆ ನೆಟ್ಟಿಲ್ಲ?, ಇದನ್ನು ನೀವು ನೋಡಿಲ್ವಾ?, ಲೀಸ್ ಪಡೆದ ಕಂಪನಿಯವರು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಗೊತ್ತಾದಾಗಲೂ ನೀವು ನಿದ್ದೆ ಮಾಡತ್ತಿದ್ದೀರಾ?’ ಎಂದು ಗಣಿ ಇಲಾಖೆಯ ಅಧಿಕಾರಿಗಳಿಗೆ ಅವರು ತರಾಟೆಗೆ ತೆಗೆದುಕೊಂಡರು. ರಾಯಚೂರು

ಇದನ್ನೂ ಓದಿ: ಉತ್ತರಾಖಾಂಡ | ‘ಭೂಕುಸಿತದ ಕಾರಣ ಸುರಂಗದಲ್ಲಿ ಸಿಲುಕಿದ್ದ 19 ಕಾರ್ಮಿಕರ ರಕ್ಷಣೆ

ಬಳಿಕ ಓಂ ಶಕ್ತಿ ಕಂಪನಿಯ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ತೆರಳಿ ಗಣಿಪೀಡಿತ ಪ್ರದೇಶದಲ್ಲಿ ಅಂದಾಜು 100 ಅಡಿ ಆಳವಾಗಿ ಕೊರೆದ ಕಂದಕದ ವೀಕ್ಷಣೆ ನಡೆಸಿದರು.

‘100 ಅಡಿಯಷ್ಟು ಒಳಗೆ ಕೊರೆದು ಗಣಿಗಾರಿಕೆ ನಡೆಸಲು ನಿಯಮದಲ್ಲಿ ಅವಕಾಶವಿದೆಯಾ?, ಸುರಕ್ಷತೆಗಾಗಿ ಸುತ್ತ ಜಾಗ ಬಿಡದೆ ಮನಬಂದಂತೆ ಗಣಿಗಾರಿಕೆ ನಡೆಸಿದ್ದನ್ನು ನೀವು ಗಮನಿಸಿದ್ದೀರಾ?, ಉಲ್ಲಂಘನೆ ಅಂತ ಗೊತ್ತಾದ ಮೇಲೆ ನೋಟೀಸ್ ನೀಡಿದ್ದೀರಾ?’ ಎಂದು ಉಪ ಲೋಕಾಯುಕ್ತರು ಪ್ರಶ್ನಿಸಿದರು.

‘ವಾರ್ಷಿಕ ಅಂದಾಜು ₹25 ಕೋಟಿ ವಹಿವಾಟು ನಡೆಸುವ ನಿಮಗೆ ನಿಮ್ಮ ಗಣಿಯಲ್ಲಿ ಕೆಲಸ ಮಾಡುವವರಿಗೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂಬುದು ತಿಳಿಯುವುದಿಲ್ಲವೇ’ ಎಂದು ಅವರು ಕಂಪನಿಯ ಮಾಲೀಕರಿಗೆ ಪ್ರಶ್ನಿಸಿದರು. ರಾಯಚೂರು

‘ಜಿಲ್ಲೆಯಲ್ಲಿನ ಎಲ್ಲ ಕ್ರಷರ್ ಮಾಲೀಕರಿಗೆ ಕೂಡಲೇ ಪತ್ರ ಕಳುಹಿಸಿ ಅಲ್ಲಿ ಕೆಲಸ ಮಾಡುವ ಎಲ್ಲರಿಗೂ ವಿಮೆ ಮಾಡಿಸಿದ ಬಗ್ಗೆ ವರದಿಯನ್ನು ಕೂಡಲೇ ಉಪ ಲೋಕಾಯುಕ್ತರ ಕಚೇರಿಗೆ ಕಳುಹಿಸಬೇಕು’ ಎಂದು ಗಣಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರಾಯಚೂರು

ಅನಧಿಕೃತ ಗಣಿಗಾರಿಕೆ ಬೇಡ: ಬಫರ್ ಝೋನ್ ಉಲ್ಲಂಘಿಸಿ ಗಣಿಗಾರಿಕೆ ನಡೆಸಿದ ಬಗ್ಗೆ ಕಂಪನಿಯವರಿಗೆ ನೊಟೀಸ್ ಜಾರಿ ಮಾಡಬೇಕು. ದಂಡ ವಿಧಿಸಬೇಕು ಎಂದು ಗಣಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಉಪ ಲೋಕಾಯುಕ್ತರು, ಜಿಲ್ಲೆಯಲ್ಲಿ ಎಷ್ಟು ಕ್ವಾರಿಗಳಿವೆ ಎಂದು ಕೇಳಿದರು. ಜಿಲ್ಲೆಯಲ್ಲಿ 133 ಕ್ವಾರಿಗಳಿವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

ಜಿಲ್ಲೆಯ ಯಾವುದೇ ಕಡೆಗಳಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಯಕೂಡದು ಎಂದು ಉಪ ಲೋಕಾಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾನೂನು ಬದ್ಧವಾಗಿ ಕೆಲಸ ಮಾಡಲಿ: ‘ಆಯಾ ಗಣಿಗಳ ಮಾಲೀಕರು ಕಾನೂನು ಬದ್ಧವಾಗಿ ಕೆಲಸ ಮಾಡಬೇಕು. ಲೀಸ್ ಪಡೆದ ಸ್ಥಳದಲ್ಲಿ ಗಡಿಗೆ ನಿಗದಿಪಡಿಸಿದ ಜಾಗ ಕಡ್ಡಾಯ ಬಿಡಬೇಕು. ಲೀಸ್ ಷರತ್ತಿನಲ್ಲಿನ ಎಲ್ಲ ನಿಯಮಗಳ ಪಾಲನೆ ಮಾಡಬೇಕು.‌ ಮಾಲೀಕರು ಮತ್ತು ಎಲ್ಲ ಕೆಲಸಗಾರರು ವಿಮೆ ಮಾಡಿಸಬೇಕು’ ಎಂದು ಉಪ ಲೋಕಾಯುಕ್ತರು ಸಲಹೆ ನೀಡಿದರು.

ಆರ್‌ಟಿಒಗೆ ಸೂಚನೆ: ‘ಗಣಿಗಾರಿಕೆಗೆ ಎಷ್ಟು ಗಾಡಿಗಳನ್ನು ಬಳಸಲಾಗುತ್ತದೆ. ಎಲ್ಲ ಗಾಡಿಗಳಿಗೆ ಜಿಪಿಎಸ್ ಪಿಕ್ಸ್ ಮಾಡಿದ್ದನ್ನು ನೋಡಿದ್ದೀರಾ? ಒಂದೇ ನಂಬರ್ ಪ್ಲೇಟ್ ನಲ್ಲಿ ಎಷ್ಟು ಗಾಡಿಗಳು ಓಡುತ್ತವೆ?’ ಎಂದು ಉಪ ಲೋಕಾಯುಕ್ತರು, ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಪ್ರಶ್ನಿಸಿ, ವಾಹನಗಳ‌ ಮೇಲ್ವಿಚಾರಣೆ ಸರಿಯಾಗಿ ನಡೆಯುವಂತಾಗಬೇಕು ಎಂದು ಸೂಚನೆ ನೀಡಿದರು.

ಗಾಂಜಾ, ಗುಟಕಾ ತಿನ್ನಬೇಡಿ: ‘ಆರೋಗ್ಯ ಉಳಿಸಿಕೊಳ್ಳಿ, ಗುಟಕಾ ತಿನ್ನಬೇಡಿ, ಸೀಗರೇಟು ಸೇದಬೇಡಿ. ಎಲ್ಲರೂ ಕಡ್ಡಾಯವಾಗಿ ವಿಮೆ ಮಾಡಿಸಿ’ ಎಂದು ಉಪ ಲೋಕಾಯುಕ್ತರು ಗಣಿಯಲ್ಲಿರುವ ಕೆಲಸಗಾರರಿಗೆ ಸಲಹೆ ನೀಡಿದರು.

ಬೆಂಗಳೂರಿನ ಉಪ ಲೋಕಾಯುಕ್ತ ಕಚೇರಿಯ ಅಪರ ನಿಬಂಧಕ ಹಾಗೂ ನ್ಯಾಯಾಧೀಶ ರಮಾಕಾಂತ ಚವ್ಹಾಣ್,‌ ಶಿವಾಜಿ ಅನಂತ ನಲವಾಡೆ, ಉಪ ನಿಬಂಧಕ ಆಗಿರುವ ನ್ಯಾಯಾಧೀಶ ಅರವಿಂದ, ರಾಯಚೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸತೀಶ ಬಿ.ಚಿಟುಗುಬ್ಬಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಭೂಮಾಪನ ಇಲಾಖೆ, ಪರಿಸರ ಇಲಾಖೆ, ಜೆಸ್ಕಾಂ, ಆರ್‌ಟಿಒ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಯಿ ಗರ್ಭ ಸೀಳಿದಂತಿದೆ!:

‘ಗಣಿಗಾಗಿ ತೆಗೆದ ಕಂದಕವು ಭಯಾನಕವಾಗಿದೆ. ತಾಯಿ ಗರ್ಭವನ್ನು ಸೀಳಿದಂತಿದೆ. ಹೀಗೆ ಭೂಮಿಯಲ್ಲಿನ ಫಲವತ್ತತೆ ಕಿತ್ತ ಮೇಲೆ ಅದನ್ನು ಸರಿ ಮಾಡದಿದ್ದರೆ ಭೂಮಿ ಸಮತೋಲನ ಕಳೆದುಕೊಳ್ಳುತ್ತದೆ. ಭೂಮಿಯನ್ನು ಬರೀ ತಿನ್ನೋದಾ? ಅಗೆಯೋದಾ? ಮರಳಿ ಹಾಕಲ್ವಾ? ಎಂದು ಪ್ರಶ್ನಿಸಿದ ಉಪ ಲೋಕಾಯುಕ್ತ ಬಿ.ವೀರಪ್ಪ ‘ಗಣಿ ಮಾಲೀಕರಿಗೆ ತೊಂದರೆ ಕೊಡಬೇಕು ಎಂಬುದು ನಮ್ಮ ಉದ್ದೇಶವಲ್ಲ; ಕ್ವಾರಿ ಕ್ಲೋಸರ್ ಪ್ಲಾನ್‌ನಲ್ಲಿ ಏನು ಇದೆ ಅದನ್ನು ಆಯಾ ಮಾಲೀಕರು ಪೂರ್ಣಗೊಳಿಸಬೇಕು. ಕಂದಕ ಮುಚ್ಚಬೇಕು‌ ಸಮತಟ್ಟು ಮಾಡಬೇಕು. ಗಿಡ ನೆಡಬೇಕು. ಭೂಮಿ ಕಾಪಾಡಬೇಕು ಎಂದು ತಿಳಿಸುತ್ತಿದ್ದೇವೆ’ ಎಂದರು.

ಇದನ್ನೂ ನೋಡಿ: ದೌರ್ಜನ್ಯ ಪ್ರಕರಣ : ನ್ಯಾಯಕ್ಕಾಗಿ ಹೊರಟ ಧರ್ಮಸ್ಥಳ, ವಿಜಪುರದ ಮಣ್ಣುJanashakthi Media

Donate Janashakthi Media

Leave a Reply

Your email address will not be published. Required fields are marked *