ಮಂಗಳೂರು : ಈದ್ ಮೀಲಾದ್ ಮೆರವಣಿಗೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಸಂಘಪರಿವಾರದ ಶರಣ್ ಪಂಪ್‌ವೆಲ್ ಮತ್ತು ಪುನೀತ್ ಅತ್ತಾವರ ಅವರ ವಿರುದ್ಧ ಸೆನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಕೋಮುಪ್ರಚೋದನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿರುವ ಅವರು ಸಾಮಾಜಿಕ ಜಾಲತಾಣಗಳ ಮೇಲೆಯೂ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಬಜರಂಗ ದಳದ ಪುನೀತ್ ಅತ್ತಾವರ ಎಂಬಾತನನ್ನು ಮಂಡ್ಯದಲ್ಲಿ ಪೊಲೀಸರು ವಶಕ್ಕೆ ಪಡೆದಿದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಹಿನೆಲೆ : ನಾಗಮಂಗಲ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವ ವೇಳೆ ಈದ್ ಮಿಲಾದ್ ಮೆರವಣಿಗೆ ಹೇಗೆ ಮಾಡ್ತೀರಿ ನೋಡೋಣ ಎಂದು ಹಿಂದೂಪರ ಮುಖಂಡ ಶರಣ್ ಪಂಪ್ವೆಲ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದನ್ನು ಸವಾಲಾಗಿ ತೆಗೆದುಕೊಂಡಿರುವ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್ ಧಮ್ ಇದ್ರೆ ಬಿಸಿ ರೋಡ್‌ಗೆ ಬಾ ಎಂದು ಓಪನ್ ಚಾಲೆಂಜ್ ಹಾಕಿದ್ದರು.
ಇನ್ನೂ ಎರಡೂ ಕೋಮಿನ ಮುಖಂಡರ ಈ ರೀತಿಯಾದ ಉದ್ಧಟತನದ ಹೇಳಿಕೆಯಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಂಟ್ವಾಳ ನಗರದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದ್ದು, ಆಡಿಯೋ ಸವಾಲು ಹಾಕಿರುವ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಷರಿಫ್ ನನ್ನು ವಶಕ್ಕೆ ಪಡೆಯಲಾಗಿದೆ.