ಚೆನ್ನೈ: ತಮಿಳು ಸೂಪರ್ ಹಿಟ್ ಸಿನಿಮಾ ಜೈ ಭೀಮ್‌ನಲ್ಲಿ ಕುರವರ್ ಸಮುದಾಯಕ್ಕೆ ಮಾನಹಾನಿ ಮಾಡಿರುವ ಆರೋಪದ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಜೈ ಭೀಮ್ ಚಿತ್ರದ ನಿರ್ಮಾಪಕ, ನಟ ಸೂರ್ಯ ಶಿವಕುಮಾರ್ ಮತ್ತು ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರಿಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.
ಕುರವನ್ ಪೀಪಲ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಕೆ. ಮುರುಗೇಶನ್ ಅವರು ತಮ್ಮ ಸಮುದಾಯವನ್ನು ಮಾನಹಾನಿ ಮಾಡಿದ ಸೂರ್ಯ ಮತ್ತು ಟಿ.ಜೆ. ಜ್ಞಾನವೇಲ್ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ಇದನ್ನೂ ಓದಿ: ದೇಶ ಸ್ವತಂತ್ರಗೊಂಡು 76 ವರ್ಷ; ರಾಜ್ಯದಲ್ಲಿದ್ದಾರೆ 7,449 ಮಲ ಹೊರುವರು!
ಈ ಪ್ರಕರಣವನ್ನು ನ್ಯಾಯಮೂರ್ತಿ ಆರ್. ಹೇಮಲತಾ ಅವರ ಮುಂದೆ ಪಟ್ಟಿ ಮಾಡಲಾಯಿತು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ, ಎರಡು ವಾರಗಳಲ್ಲಿ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ನಟ ಸೂರ್ಯ ಮತ್ತು ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರಿಗೆ ಸೂಚಿಸಿ ಪ್ರಕರಣವನ್ನು ಮುಂದೂಡಿದ್ದಾರೆ.
ಮುರುಗೇಶನ್ ಅವರು ಸೂರ್ಯ ಮತ್ತು ಜ್ಞಾನವೇಲ್ ವಿರುದ್ಧ ಕೇಂದ್ರ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಅವರ ದೂರಿನ ಆಧಾರದ ಮೇಲೆ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಎಗ್ಮೋರ್ ನ್ಯಾಯಾಲಯ ವಜಾಗೊಳಿಸಿದೆ.
ಇದನ್ನು ಪ್ರಶ್ನಿಸಿ ಮುರುಗೇಶನ್ ಅವರು ಮದ್ರಾಸ್ ಹೈಕೋರ್ಟ್‌ಗೆ ಕ್ರಮ ಕೈಗೊಳ್ಳುವಂತೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಅಂಗೀಕರಿಸಿದ್ದ ಹೈಕೋರ್ಟ್ ಸೂರ್ಯ ಮತ್ತು ಜ್ಞಾನವೇಲ್ ಅವರನ್ನು ಪ್ರಕರಣಕ್ಕೆ ಒಳಪಡಿಸಿದೆ.
ವಿಡಿಯೊ ನೋಡಿ: ಜೀವನ ವೆಚ್ಚದ ಬಿಕ್ಕಟ್ಟು : Bangalore People’s Convention| ಬೆಂಗಳೂರು ಜನತಾ ಸಮಾವೇಶ