ವೇದರಾಜ ಎನ್.ಕೆ
ಮೋದಿಯವರ ಸರಕಾರ 7ವರ್ಷಗಳನ್ನು ‘ಯಶಸ್ವಿ’ಯಾಗಿ ಪೂರೈಸುತ್ತಿರುವಂತೆಯೇ ಮೇ 31ರಂದು 2020-21ರ ಜಿಡಿಪಿ ಅಂಕಿ-ಅಂಶಗಳು ಪ್ರಕಟಗೊಂಡವು. ಜೂನ್ 2ರಂದು ಈ ಸರಕಾರದ ಲಸಿಕೆನೀತಿಯ ಸ್ವಯಂಪ್ರೇರಿತ ವಿಚಾರಣೆಯನ್ನು ಮತ್ತೆ ಎತ್ತಿಕೊಂಡಿರುವ ದೇಶದ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳಿತು. ಇವುಗಳ ಪರಿವೆಯೇ ಇಲ್ಲದಂತಿದ್ದ ಕೇಂದ್ರ ಗೃಹಮಂತ್ರಿಗಳು ತಮ್ಮ ಹೇಳಿಕೆಯಿಂದ ವಾರ ಕೊನೆಯಾಗುತ್ತಿದ್ದಂತೆ ದೇಶದ ಜನಗಳಿಗೆ ಮತ್ತು ವ್ಯಂಗ್ಯಚಿತ್ರಕಾರರಿಗೆ ಪುಷ್ಕಳ ಆಹಾರ ಒದಗಿಸಿದರು.
ಜಿಡಿಪಿ ಬೆಳವಣಿಗೆ ದರ (-) 7.3%
ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ಎನ್.ಎಸ್.ಒ.) ಪ್ರಕಟಿಸಿರುವ ಹಣಕಾಸು ವರ್ಷ 2020-21ರ ಆರ್ಥಿಕ ಬೆಳವಣಿಗೆಯ ಅಂಕಿ-ಅಂಶಗಳ ಪ್ರಕಾರ ಒಟ್ಟು ಆಂತರಿಕ ಉತ್ಪನ್ನ(ಜಿ.ಡಿ.ಪಿ.) ಬೆಳವಣಿಗೆ ದರ ಸೊನ್ನೆಗಿಂತಲೂ ಬಹಳ ಕೆಳಗಿಳಿದಿದೆ.
2016-17ರಲ್ಲಿ 8.26% ಇದ್ದ ಬೆಳವಣಿಗೆ ದರ ಸತತವಾಗಿ ಇಳಿಯುತ್ತ 2017-18ರಲ್ಲಿ 7.04%, 2018019ರಲ್ಲಿ 6.12% ಮತ್ತು 2019-20ರಲ್ಲಿ 4.2% ಕ್ಕೆ ಇಳಿದ ನಂತರ 2020-21ರಲ್ಲಿ ಕೊವಿಡ್-19 ಮತ್ತು ಲಾಕ್ಡೌನಿನ ಪರಿಣಾಮವೂ ಸೇರಿ (-)7.3% ದಾಖಲಿಸಿದೆ. ಇದು ಸ್ವತಂತ್ರ ಭಾರತದಲ್ಲಿ ಅತೀ ಕಡಿಮೆ ಬೆಳವಣಿಗೆ ದರ. ಸಹಜವಾಗಿಯೇ ಇದು ಪ್ರಧಾನ ಮಂತ್ರಿಗಳನ್ನಲ್ಲದಿದ್ದರೂ ಹಣಕಾಸು ಮಂತ್ರಿಗಳನ್ನು ಆತಂಕಕ್ಕೆ ಈಡುಮಾಡಿದೆ.
***
ನೆಗೆಟಿವ್ -ಪಾಸಿಟಿವ್ ಚರ್ಚೆಗಳು ನಡೆಯುತ್ತಿರುವಾಗ ಈ ಇನ್ನೊಂದು ನೆಗೆಟಿವ್ ನ ಸುದ್ದಿ ಅರ್ಥಶಾಸ್ತ್ರಜ್ಞರಿಗೂ ರಾಷ್ಟ್ರ-ವಿರೋಧಿಗಳ ಹಣೆಪಟ್ಟಿಯನ್ನು ಹಚ್ಚುತ್ತದೆಯೇ?
***
“ಇದನ್ನು ಪಾಸಿಟಿವ್ ಮಾಡಿ”
ನಿಜ, ‘ಗೋದಿ ಮೀಡಿಯಾ’(ಅಧಿಕಾರಸ್ಥರ ಬಂಟರ ಮಾಧ್ಯಮಗಳು) ಈ ನಿಟ್ಟಿನಲ್ಲಿ ತಿಣುಕಾಟ ನಡೆಸಲು ಹಿಂದೆ ಬಿದ್ದಿಲ್ಲ. (ಆದರೆ ಈ ತಿಣುಕಾಟದಲ್ಲಿ ಅಗ್ರಪಂಕ್ತಿಯಲ್ಲಿರಬೇಕಾದ ಒಬ್ಬರ ದನಿ ಕಳೆದ ಸುಮಾರು ಒಂದು ತಿಂಗಳಿಂದ ಕೇಳಬರುತ್ತಿಲ್ಲವಂತೆ-ಇದೊಂದು ಪಾಸಿಟಿವ್ ಬೆಳವಣಿಗೆಯೋ ಗೊತ್ತಾಗಿಲ್ಲ!)
***
ಆರೋಗ್ಯ – ವೈದ್ಯಕೀಯ ರಂಗದಲ್ಲಿ ನೆಗೆಟಿವ್ ಅಂದರೆ ಪಾಸಿಟಿವ್, ಅಂದರೆ ಸಂತೋಷದ ಸಂಗತಿ ತಾನೇ? ಅದು ಅರ್ಥವ್ಯವಸ್ಥೆಯ ಆರೋಗ್ಯಕ್ಕೂ ಅನ್ವಯಿಸುವುದಾದರೆ …..
“ಅಭಿನಂದನೆಗಳು, ನೀನು ನೆಗೆಟಿವ್!”
ಆದರೂ ಭಕ್ತಗಣಗಳಿಗೂ ನೆಗೆಟಿವ್ ಎಂದು ಕಾಣುವ ಈ ಅಂಕಿ-ಅಂಶಗಳ ನಡುವೆಯೂ ಅವರಿಗೆ ಮತ್ತು ‘ಗೋದಿ ಮೀಡಿಯ’ಗಳ ತಿಣುಕಾಟದಲ್ಲಿ ಒಂದು ಪಾಸಿಟಿವ್ ಸಂಗತಿ ಕಂಡಿದೆ. 2020-21ರ ನಾಲ್ಕನೆಯ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್ 2021) ಜಿ.ಡಿ.ಪಿ. ಸ್ವಲ್ಪ ಮೇಲೇರಿ (+) 1.6 ಆಗಿದೆ.
ಆದರೆ ಈ ನಾಲ್ಕನೇ ತ್ರೈಮಾಸಿಕ ಪ್ರಧಾನ ಮಂತ್ರಿಗಳು ಕೊರೊನಾ ವಿರುದ್ಧ ಭಾರತ ಸಮರ ಗೆದ್ದಿದೆ ಎಂದು ಜಗತ್ತಿನ ಮುಂದೆ ಬೆನ್ನುತಟ್ಟಿಕೊಂಡ ಸಮಯವಷ್ಟೇ ಅಲ್ಲ, ಅದರ ಬೆನ್ನ ಹಿಂದೆಯೇ ಎರಡನೇ ಕೊವಿಡ್ ಅಲೆ ಅಪ್ಪಳಿಸಿದ ಸಮಯ ಕೂಡ ಎಂದು ಪರಿಣಿತರು ಎಚ್ಚರಿಸುತ್ತಿದ್ದಾರೆ. ಒಂದು ತಿಂಗಳಲ್ಲೇ 75ಲಕ್ಷ ಮಂದಿ ಕೆಲಸ ಕಳಕೊಂಡ ಅವಧಿ!
ಇದನ್ನು ಈಗ ರಿಝರ್ವ್ ಬ್ಯಾಂಕ್ ಪ್ರಕಟಿಸಿರುವ ಸಂಗತಿಗಳು ಕೂಡ ಸಮರ್ಥಿಸುತ್ತಿವೆ. ಅದು 2021-22ರ ಮೊದಲ ತ್ರೈಮಾಸಿಕದಲ್ಲಿ (ಕಳೆದ ವರ್ಷಈ ಅವಧಿಯ ಬೆಳವಣಿಗೆ ದರ ತೀರಾ ಕೆಳಗಿದ್ದ ಕಾರಣದಿಂದ) 26.2% ಬೆಳವಣಿಗೆ ಅಗುತ್ತದೆ ಎಂದು ಈ ಹಿಂದೆ ಅಂದಾಜು ಮಾಡಿತ್ತು. ಆದರೆ ಈಗ ಎರಡನೇ ಅಲೆಯ ಹಿನ್ನೆಲೆಯಲ್ಲಿ ಅದನ್ನು ಪರಿಷ್ಕರಿಸಿ 18.5% ಕ್ಕೆ ಇಳಿಸಿದೆ, 2021-22ರ ಜಿಡಿಪಿ ಅಂದಾಜನ್ನು 10.5%ದಿಂದ 9.5%ಕ್ಕೆ ಇಳಿಸಿದೆ(ಲೈವ್ ಮಿಂಟ್, ಜೂನ್4).
***
ಲಸಿಕೆ ನೀತಿ : “ನಿರಂಕುಶ, ತರ್ಕಹೀನ”
ಹೌದು, ಈ ‘ಒಳ್ಳೆಯ ಸುದ್ದಿ’ ಯ ನಂತರ ದೇಶದ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರದ ಕೊವಿಡ್ ನಿರ್ವಹಣೆಯ ಬಗ್ಗೆ ತನ್ನ ಸ್ವಯಂಪ್ರೇರಣೆಯ ವಿಚಾರಣೆಯನ್ನು ಮುಂದುವರೆಸುತ್ತ, ಮೋದಿ ಸರಕಾರದ ‘ಉದಾರೀಕೃತ ಲಸಿಕೆ ನೀತಿ’ಯ ಬಗ್ಗೆ, ಮುಖ್ಯವಾಗಿ 18-44 ವಯೋಗುಂಪಿನವರಿಗೆ ಲಸಿಕೆ ಕೊಡುವ ಹೊಣೆಯನ್ನು ಲಸಿಕೆ ತಯಾರಿಕರಿಗೆ ಹೆಚ್ಚಿನ ಬೆಲೆ ತೆರಬೆಕಾಗಿರುವ ರಾಜ್ಯ ಸರಕಾರಗಳು ಮತ್ತು ಖಾಸಗಿಯವರಿಗೆ ದಾಟಿಸಿದಂತಿರುವ ನಿಲುವು ಮೇಲ್ನೋಟಕ್ಕೆ ನಿರಂಕುಶ ಮತ್ತು ತರ್ಕಹೀನವಾಗಿ ಕಾಣುತ್ತದೆ ಎಂದು ಟಿಪ್ಪಣಿ ಮಾಡಿದೆ.
ಸುಪ್ರಿಂ ಕೋರ್ಟ್ ತಾನಾಗಿಯೇ ಕೈಗೆತ್ತಿಕೊಂಡ ಈ ವಿಚಾರಣೆಯಲ್ಲಿ ಕಳೆದ ತಿಂಗಳು ಎತ್ತಿದ ಪ್ರಶ್ನೆಗಳನ್ನು ಕುರಿತಂತೆ ಕೇಂದ್ರ ಸರಕಾರ ತನ್ನ ಅಫಿಡವಿಟ್ ನಲ್ಲಿ ತನ್ನ ಲಸಿಕೆ ನೀತಿ ಸಂವಿಧಾನದ ಕಲಮು 14 ಮತ್ತು 21ಕ್ಕೆ ಅನುಗುಣವಾಗಿದೆ, ಆದ್ದರಿಂದ ಅದರಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಅನಗತ್ಯ, ಇಷ್ಟೊಂದು ಬೃಹತ್ ಪ್ರಮಾಣದ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಕಾರ್ಯಾಂಗಕ್ಕೆ ಮುಕ್ತವಾಗಿ ಕೆಲಸ ಮಾಡುವ ಅವಕಾಶವಿರಬೇಕು ಎಂದು ಹೇಳಿತ್ತು.
ಇದನ್ನು ಪ್ರಸ್ತಾಪಿಸುತ್ತ “ನಮ್ಮ ಸಂವಿಧಾನ , ಕಾರ್ಯಾಂಗದ ಧೋರಣೆಗಳಿಂದಾಗಿ ನಾಗರಿಕರ ಸಂವಿಧಾನಿಕ ಹಕ್ಕುಗಳು ಭಂಗ ವಾಗುತ್ತಿರುವಾಗ ನ್ಯಾಯಾಲಯಗಳು ಮೂಕಪ್ರೇಕ್ಷಕರಾಗಿರಬೇಕೆಂದು ಕಂಡರಿಸಿಲ್ಲ. ಕಾರ್ಯಾಂಗ ರೂಪಿಸಿದ ಧೋರಣೆಗಳ ನ್ಯಾಯಾಂಗ ಪರಾಮರ್ಶೆ ಮತ್ತು ಅವುಗಳಿಗೆ ಸಂವಿಧಾನಿಕ ಸಮರ್ಥನೆಗಳನ್ನು ಕೋರುವುದು ನ್ಯಾಯಾಲಯಗಳಿಗೆ ವಿಧಿಸಿರುವ ಒಂದು ಆವಶ್ಯಕ ಕ್ರಿಯೆ” ಎಂದು ಜೂನ್ 2ರಂದು ಪ್ರಕಟವಾದ ಆದೇಶದಲ್ಲಿ ಈ ಸುಪ್ರಿಂ ಕೋರ್ಟ್ ಪೀಠ ಹೇಳಿದೆ ಎಂಬುದು ಗಮನಾರ್ಹ
ನೋಟುರದ್ಧತಿ, ಸಿಎಎ, ಕಲಮು 370, ಕೃಷಿ ಕಾಯ್ದೆಗಳು ಇತ್ಯಾದಿಗಳ ಮೇಲಿನ ಅರ್ಜಿಗಳನ್ನು ತಿಂಗಳಾನುಗಟ್ಟಲೆಯಿಂದ ವಿಚಾರಣೆಗೇ ಎತ್ತಿಕೊಳ್ಳದಿರುವಾಗ, ಸುಪ್ರಿಂ ಕೋರ್ಟಿನ ಈ ಪೀಠದ ಆದೇಶ “ನಿರಂಕುಶ, ತರ್ಕಹೀನ ಧೋರಣೆ ” ಎಂದು ಕೇಂದ್ರ ಸರಕಾರದ ಲಸಿಕೆ ಧೋರಣೆಯನ್ನು ತರಾಟೆಗೆ ತಗೊಂಡಿರುವುದರಿಂದ ಆಳುವ ಮಂದಿಗೆ ಆಶ್ಚರ್ಯ, ಮುಜುಗರ ಉಂಟಾಗಿದೆಯೇ? ಇರಬಹುದು.
***
ಸುಪ್ರಿಂ ಕೋರ್ಟ್ ತನ್ನ ಆದೇಶದಲ್ಲಿ ಹಲವು ವಿಷಯಗಳನ್ನು ಕೇಂದ್ರ ಸರಕಾರದ ಮುಂದಿಟ್ಟಿದೆ. ಇವುಗಳಿಗೆ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ, ವಿವರಗಳನ್ನು 15 ದಿನಗಳಲ್ಲಿ ಕೊಡಬೇಕು ಎಂದು ಹೇಳಿದೆ. ಲಸಿಕೆ ಖರೀದಿಯ ಬಗ್ಗೆ ನಡೆದಿರುವ ಎಲ್ಲ ಮಾತುಕತೆಗಳ ಪೂರ್ಣ ವಿವರಗಳು, 18-44 ವಯೋಗುಂಪಿನವರಿಗೆ ಲಸಿಕೆ ಕುರಿತಂತೆ ತಾರತಮ್ಯಕ್ಕೆ ಕಾನೂನಾತ್ಮಕ ಸಮರ್ಥನೆಗಳು, , ರಾಜ್ಯಗಳಿಗೆ ಹೆಚ್ಚಿನ ಬೆಲೆಗಳು,ಹಾಗೂ ರಾಜ್ಯಗಳಿಗೆ ಮತ್ತು ಖಾಸಗಿಯವರಿಗೆ ಕೋಟಾಗಳು ಇವನ್ನು ಕೇಂದ್ರ ಸರಕಾರ ಹೇಗೆ ನಿರ್ಧರಿಸುತ್ತದೆ ಹಾಗೂ ನಿಭಾಯಿಸುತ್ತದೆ, ಲಸಿಕೆಗೆಂದು ಬಜೆಟಿನಲ್ಲಿ ತೆಗೆದಿಟ್ಟ ರೂ.35,000 ಕೋಟಿಯನ್ನು ಹೇಗೆ ಖರ್ಚು ಮಾಡಲಾಗುತ್ತದೆ , ಡಿಸೆಂಬರ್ 31ರೊಳಗೆ ಎಲ್ಲರಿಗೆ ಲಸಿಕೆ ಹಾಕುವುದನ್ನು ಖಾತ್ರಿಪಡಿಸಲು ರೂಪಿಸಿರುವ ಮಾರ್ಗಸೂಚಿಗಳು ಇವನ್ನೆಲ್ಲ ತಿಳಿಸಬೇಕೆಂದು ಆದೇಶದಲ್ಲಿ ಹೇಳಲಾಗಿದೆ.
ಈ ಎಲ್ಲದಕ್ಕೂ ಉತ್ತರಗಳನ್ನು ಕೊಡಬೇಕೇ? 10ನೇ ಮತ್ತು 12ನೇ ತರಗತಿಗಳ ಪರೀಕ್ಷೆಗಳನ್ನು ತಾವು ರದ್ದುಮಾಡಿರುವ ಹಾಗೆ ಸುಪ್ರಿಂ ಕೋರ್ಟ್ ಒಡ್ಡಿರುವ ಈ ಪರೀಕ್ಷೆಗಳನ್ನು ಯಾರಾದರೂ ರದ್ದು ಮಾಡಲು ಸಾಧ್ಯವಿಲ್ಲವೇ ಎಂದು ಹಲುಬುವಂತಾಗಿದೆಯೇ?
***
ಮೋದಿ ನೇತೃತ್ವದಲ್ಲಿ ಇನ್ನೊಂದು ‘ಜಯಭೇರಿ’!
ದೇಶದಲ್ಲಿ ಕಳೆದ ಹಲವು ದಿನಗಳಿಂದ ಹೀಗೆ ದೇಶದ ಸರ್ವೋಚ್ಚ ನ್ಯಾಯಾಲಯವೂ ಸ್ವಪ್ರೇರಣೆಯಿಂದ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕಾಗಿ ಬಂದಿರುವ ಆರೋಗ್ಯ ತುರ್ತು ಪರಿಸ್ಥಿತಿ ಏರ್ಪಟ್ಟಿದ್ದಾಗ ಅದನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದ ದೇಶದ ನಂ.2 ಮುಖಂಡರು ಮತ್ತು ಗೃಹ ಮತ್ತುಆಂತರಿಕ ವ್ಯವಹಾರಗಳ ಮಂತ್ರಿಗಳು ಕಾಣೆಯಾಗಿದ್ದಾರೆಯೇ ಎಂಬ ಸಂದೇಹಗಳು ಕೇಳ ಬರುತ್ತಿದ್ದವು. ಅವರೀಗ ಇದ್ದಕ್ಕಿದ್ದಂತೆ ಜೂನ್ 3ರಂದು ಇಡೀ ದೇಶದ ಗಮನ ಸೆಳೆದ ಹೇಳಿಕೆಯೊಂದಿಗೆ ಪ್ರತ್ಯಕ್ಷರಾಗಿದ್ದಾರೆ.
ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೊವಿಡ್-19ರ ವಿರುದ್ಧ ಹೋರಾಟವನ್ನು ಅಲ್ಪ ಸಮಯದಲ್ಲೇ ಯಶಸ್ವಿಯಾಗಿ ನಡೆಸಿದೆ ಮತ್ತು ರೋಗ ಸೋಂಕಿನ ರೇಖೆಯನ್ನು 135 ಕೋಟಿ ನಾಗರಿಕರ ನೆರವಿನಿಂದ ಬಗ್ಗಿಸುವುದು ಅದಕ್ಕೆ ಸಾಧ್ಯವಾಗಿದೆ ಎಂದು ಗೃಹಮಂತ್ರಿಗಳು ಅಹಮದಾಬಾದಿನಲ್ಲಿ ಹೇಳಿರುವುದಾಗಿ ವರದಿಯಾಗಿದೆ.
***
ಇದನ್ನು ಕೇಳಿ ಈ ಅಲೆಯಲ್ಲಿ ಬದುಕುಳಿದವರೂ ಸಾಯುವಷ್ಟು ಬಿದ್ದು ಬಿದ್ದು ನಗುವಂತಾಗಿದೆಯಂತೆ!
ಅತ್ಯಂತ ಮುಂದುವರೆದ ದೇಶಗಳೂ ಈ ಸಾಂಕ್ರಾಮಿಕವನ್ನು ನಿಭಾಯಿಸಲು ಕಷ್ಟಪಟ್ಟಿರುವಾಗ, ನಾವು ಸಮರವನ್ನು ತಾಳ್ಮೆಯಿಂದ, ಯೋಜನಾಬದ್ಧವಾಗಿ ಎದುರಿಸಿದ್ದೇವೆ ಎಂದು ಗೃಹಮಂತ್ರಿಗಳು ಹೇಳಿ, ಕೊರೊನಾದಿಂದ ಪ್ರಾಣ ಕಳಕೊಂಡ ಎಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸಿದರಂತೆ! ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಗಂಗಾತಟಗುಂಟ ಉಸುಕಿನಲ್ಲಿ ಹೂತುಹೋದ ಇಂತವರಿಗೆ ಹೊದಿಸಿದ ಬಟ್ಟೆಗಳಿಂದ ಅವರೆಲ್ಲ ಗಮನಕ್ಕೆ ಬರದಿರಲಿ ಎಂದು ಅವನ್ನು ತೆಗೆಯುವ ಕೆಲಸವನ್ನು ಮಾಡಬೇಕಾಗಿ ಬಂದವರಿಗೆ ಏನನಿಸಿರಬಹುದು?
“ನನಗೆ ಎಲ್ಲಿಂದಲೋ ನಗುತ್ತಿರುವ ದನಿ ಕೇಳಿಸಿತು. ನಿನಗೆ ಕೇಳಿಸಿತಾ?”
ಆರಂಭದ ಹಲವು ತಿಂಗಳುಗಳಲ್ಲಿ ಮೋದಿಯವರ ಪ್ರಧಾನ ಮಂತ್ರಿತ್ವವನ್ನು ಹಾಡಿಹೊಗಳಿದ್ದ ಒಬ್ಬ ಪ್ರಮುಖ ಪತ್ರಕರ್ತರೂ ಕೇಂದ್ರ ಗೃಹಮಂತ್ರಿಗಳ ಹೇಳಿಕೆಯನ್ನು ಓದಿ, “ ಸಾಕಿನ್ನು ಸುಳ್ಳುಗಳು, ದಯವಿಟ್ಟು” ಎಂದು ಕೇಳಿಕೊಂಡಿದ್ದಾರೆ( ತವ್ಲೀನ್ ಸಿಂಗ್, ಇಂಡಿಯನ್ ಎಕ್ಸ್ ಪ್ರೆಸ್, ಜೂನ್ 6)
ಅತ್ಯಂತ ಮುಂದುವರೆದ ದೇಶಗಳು ತಮ್ಮ 88ರಿಂದ 96ಶೇ. ಜನಗಳಿಗೆ ಲಸಿಕೆಗಳನ್ನು ಹಾಕಿದ್ದರೆ, ಭಾರತದಲ್ಲಿ ಲಸಿಕೆ ಸಿಕ್ಕವರ ಪ್ರಮಾಣ 15ಶೇ. ಮಾತ್ರ ಎಂದು ಮಾನ್ಯ ಗೃಹಮಂತ್ರಿಗಳಿಗೆ ತಿಳಿದಿದೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
***
ಅತ್ಯಂತ ದುರಂತಮಯ ವ್ಯಂಗ್ಯವೆಂದರೆ ಭಾರತ ಸರಕಾರದ ಹಿರಿಯ ಮಂತ್ರಿಗಳು ಈಗ ತಮ್ಮ ಸುಳ್ಳುಗಳನ್ನು ತಾವೇ ನಂಬಲಾರಂಭಿಸಿದ್ದಾರೆ. ನಾಚಿಕೆಯಿಲ್ಲದ ಸುಳ್ಳುಗಳ ವಿಷಯ ಬಂದಾಗ , ಉತ್ತರಪ್ರದೇಶದ ಮುಖ್ಯಮಂತ್ರಿಗಳನ್ನು ಯಾರೂ ಮೀರಿಸಲಾರರು ಎನ್ನುತ್ತಾರೆ ಈ ಪತ್ರಕರ್ತೆ.
ಅವರು ತಮ್ಮ ಲೇಖನದಲ್ಲಿ ಹೇಳಿರುವಂತೆ ಗಂಗಾನದಿಗುಂಟ ಈಗಲೂ ಉಸುಕಿನಲ್ಲಿ ಹೂತ ಸಾವಿರಾರು ಹೆಣಗಳು ಕಾಣಬರುತ್ತಿದ್ದರೇನಂತೆ! ಉತ್ತರಪ್ರದೇಶದ ಹಳ್ಳಿಗಳಲ್ಲಿ ಕೊವಿಡ್ ತಪಾಸಣೆಯನ್ನೂ ಮಾಡದೆ ಜ್ವರ, ಉಸಿರಾಟದ ತೊಂದರೆಗಳಿಂದ ಜನಗಳು ಸಾಯುತ್ತಿದ್ದರೇನಂತೆ! ಅವರ ಅಧಿಕಾರಿಗಳು ಕೊವಿಡ್ ಸಾವುಗಳಿಗೆ ನ್ಯುಮೋನಿಯಾ, ಹೃದಯಾಘಾತದ ಸಾವುಗಳೆಂದು ಪ್ರಮಾಣ ಪತ್ರಗಳನ್ನು ಕೊಡುತ್ತಿದ್ದರೇನಂತೆ! ತನ್ನ ರಾಜ್ಯವನ್ನು ಅವರು “ಕೊವಿಡ್ ಸುರಕ್ಷಿತ ವಲಯ’ ಎಂದು ಘೋಷಿಸಿದ್ದಾರೆ ಎಂದು ಈ ಪತ್ರಕರ್ತೆ ಖೇದದಿಂದ ಕಮೆಂಟ್ ಮಾಡಿದ್ದಾರೆ.
ಆದರೇನಂತೆ, 2022ರ ವಿಧಾನಸಭಾ ಚುನಾವಣೆಗಳ ವೇಳೆಗೆ …….
“ಡೋಂಟ್ ವರಿ, ಮಂದಿರ ಅಲ್ಲೇ ನಿರ್ಮಾಣವಾಗುತ್ತಿದೆ!