ಮೇ 30ರಂದು ಪ್ರಧಾನ ಮಂತ್ರಿಗಳು ತಮ್ಮ 77ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ನಡೆಸಿ ಕೊಟ್ಟರು. ಅದು ಅವರು ಪ್ರಧಾನಮಂತ್ರಿಯಾಗಿ, ಕೇಂದ್ರದಲ್ಲಿ ಅವರ ನೇತೃತ್ವದ ಬಿಜೆಪಿ ಸರಕಾರ ಬಂದು 7 ವರ್ಷಗಳು ಪೂರ್ಣಗೊಂಡ ದಿನವೂ ಕೂಡ.
ಕೋವಿಡ್-19ರ ಹಾಹಾಕಾರದ ಮೊದಲೇ ಜನ ಮರೆತೇ ಬಿಟ್ಟಿರುವ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತದಾರರ ತೀರ್ಪುಗಳ ನಂತರ ಮತ್ತೆ ಈ ಬಾರಿಯ ಮನದ ಮಾತಿನಲ್ಲಿ ಮತ್ತೆ ಕೇಳಬಂದಿದೆ (ಶೀರ್ಷಿಕೆಯ ವ್ಯಂಗ್ಯಚಿತ್ರ: ಉದಯಿಸುತ್ತಿರುವ ಭಾರತ;
ಕೃಪೆ:ಹಸನ್ ಜೈದಿ, ಕೃಪೆ: ಡೈಲಿಛತ್ತೀಸ್‍ಗಡ್.ಕಾಂ)
ಆದರೆ ಅಚ್ಛೇ ದಿನ್‍ಗಳ ಮಾತಿಲ್ಲ……..
“ಅಚ್ಛೇ ದಿನ್ ಆನೇವಾಲೆ ಹೈಂ”(ಒಳ್ಳೆಯ ದಿನಗಳು ಬರಲಿವೆ)
-7 ವರ್ಷಗಳ ಹಿಂದಿನ ಬಿಲ್‍ಬೋರ್ಡಿನ ಈಗಿನ ಗತಿ
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
***
ಈ ಏಳು ವರ್ಷಗಳಲ್ಲಿ, ಅದರಲ್ಲೂ ಕಳೆದ ಎರಡು ವರ್ಷಗಳಲ್ಲಿ ಪ್ರವಾಹಗಳು, ಚಂಡಮಾರುತಗಳು ಮತ್ತು ಶತಮಾನದ ಮಹಾಸೋಂಕು -ಇದರಲ್ಲಿ ತಮ್ಮ ಪ್ರಿಯಜನರನ್ನು ಕಳಕೊಂಡವರಿಗೆ ಪ್ರಧಾನಿಗಳು ಮತ್ತೆ ಕಂಬನಿ ಮಿಡಿದರು. ಬಹುಶಃ ಅದರಿಂದಾಗಿ ಈ ಬಾರಿಯ ಮನದ ಮಾತಿನಲ್ಲಿ ಮೋದಿ ಸರಕಾರ 1.0 ದ 7ನೇ ಅಥವ ಮೋದಿ ಸರಕಾರ 2.0 ದ 2ನೇ ವಾರ್ಷಿಕೋತ್ಸವದ ಕರೆ ಇಲ್ಲ.
ಹೌದು, ಮೋದಿ ಸರಕಾರ 1.0 ದ 7ನೇ ಮತ್ತು ಮೋದಿ ಸರಕಾರ 2.0ದ 2ನೇ ವಾರ್ಷಿಕೋತ್ಸವದ ‘ಸೆಲೆಬ್ರೇಷನ್ (ಆಚರಣೆಯ) ಪ್ರಶ್ನೆಯಿಲ್ಲ, ಆದರೆ ಈ ಏಳು ವರ್ಷಗಳ ‘ಸಾಧನೆ’ಗಳ ಮಾಹಿತಿಗಳನ್ನು ಪಡೆಯುವ ಸೆರೆಬ್ರೇಷನ್ (ತಿಣುಕಾಟ) ಬೇಕಾದೀತು-ಕೋವಿಡ್ ಪರಿಹಾರ ಪ್ಯಾಕೇಜಾಗಿ!
7 ವರ್ಷಗಳ ಅಧಿಕಾರ-ಕೋವಿಡ್ ಪರಿಹಾರ ಪ್ಯಾಕೇಜ್
(ಇ.ಪಿ.ಉನ್ನಿ, ಇಂಡಿಯನ್ ಎಕ್ಸ್‌ಪ್ರೆಸ್)
***
70ರ 80ರ ದಶಕದಲ್ಲಿ ‘ಬೆಲೆಯೇರಿಕೆ/ ಹಣದುಬ್ಬರ ಜಾಗತಿಕ ಸಮಸ್ಯೆ’ ಎಂಬ ನಮ್ಮ ಸರಕಾರದ ವಿಫಲತೆಯನ್ನು ಮರೆಮಾಚುವ ಮಾತು ಕೇಳಿದ್ದೆವು. ಈಗ ಅದಕ್ಕೆ ಸಂವಾದಿಯಾಗಿ ಕೋವಿಡ್ ಮಹಾಸೋಂಕು ಒಂದು ಜಾಗತಿಕ ಬಿಕ್ಕಟ್ಟು ಎಂಬ ಮಾತು ಕೇಳಬರುತ್ತಿದೆ. ಅಂದರೆ ಅದನ್ನು ಎದುರಿಸಲು ತಮ್ಮ ಸರಕಾರ ಏನು ಮಾಡಿತು ಎಂದು ಲೆಕ್ಕ ಕೊಡುವ ಅಗತ್ಯವಿಲ್ಲ !
***
ಆದರೂ ನಿರ್ದಿಷ್ಟವಾಗಿ ಪ್ರಾಣವಾಯು (ಆಕ್ಸಿಜನ್) ಪೂರೈಕೆಗೆ ಏನೆಲ್ಲ ಸಾಹಸ ಮಾಡಲಾಗಿದೆ ಎಂದು ಪ್ರಧಾನಿಗಳು ಹೇಳಿದರು. ಆದರೆ ಇದಕ್ಕೆ ಮೊದಲೇ, ಎಪ್ರಿಲ್ ಆರಂಭದಿಂದ ಮೇ 16ರ ನಡುವೆ ಕನಿಷ್ಟ 512 ಮಂದಿ ಪ್ರಾಣವಾಯು ಸಿಲಿಂಡರ್ ಗಳ ಕೊರತೆಯಿಂದಾಗಿ ಪ್ರಾಣ ಬಿಟ್ಟರು ಎಂದು ವರದಿಯಾಗಿದೆ (ಸಬ್‍ರಂಗ್ ವರದಿ, ಮೇ 29). ಈ ಪ್ರಾಣವಾಯು ಪೂರೈಕೆಯ ಸಾಹಸವನ್ನು ಮೊದಲೇ ಮಾಡಲು ಸಾಧ್ಯವಿರಲಿಲ್ಲವೇ…….. ಈ ಪ್ರಾಣಗಳನ್ನು ಉಳಿಸಬಹುದಿತ್ತೆ?
ಇದು ದೇಶದ ಜನತೆ ಏದುಸಿರು ಬಿಡುತ್ತ ಹೇಳುತ್ತಿರುವ ಮನದ ಮಾತು……
(ಪಿ.ಮಹಮ್ಮದ್, ಆಂದೋಲನ )
***
ವರ್ಷಕ್ಕೆ ಎರಡು ಕೋಟಿ ಉದ್ಯೋಗಾವಕಾಶ ನಿರ್ಮಾಣದ ಮಾತು 7 ವರ್ಷಗಳ ಹಿಂದೆ ಕೇಳ ಬಂದಿತ್ತು. ಈಗ ಕಳೆದ ಒಂದು ತಿಂಗಳಲ್ಲೇ 75 ಲಕ್ಷ ಮಂದಿ ಉದ್ಯೋಗ ಕಳಕೊಂಡಿರುವ ಸುದ್ದಿ ಬಂದಿದೆ. ನಗರಗಳಲ್ಲಿ ನಿರುದ್ಯೋಗ ದರ 17% ಆಗಿದೆ, ಗ್ರಾಮಾಂತರದಲ್ಲಿ 14%; 97% ಭಾರತೀಯರ ಆದಾಯ ಕೋವಿಡ್ ನಂತರ ಇಳಿದಿದೆ (ಬಿಸಿನೆಸ್ ಸ್ಟಾಂಡರ್ಡ್, ಮೇ 29).
ಇನ್ನೊಂದೆಡೆಯಲ್ಲಿ, ಇದೇ ಅವಧಿಯಲ್ಲಿ ಕಾರ್ಪೊರೇಟ್ ವಲಯದ ನಿವ್ವಳ ಲಾಭಾಂಶಗಳಲ್ಲಿ 57.6% ಏರಿಕೆಯಾಗಿದೆ, ಅದೀಗ 5.31 ಟ್ರಿಲಿಯನ್(5310 ಕೋಟಿ) ರೂ.ಗಳು(ಬಿಸಿನೆಸ್ ಸ್ಟಾಂಡರ್ಡ್, ಮೇ 31).
ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್!?
ಈ 5.31 ಟ್ರಿಲಿಯನ್ ಸುದ್ದಿ ಕೇಳಿದಾಗ 5 ಟ್ರಿಲಿಯನ್ ಅರ್ಥ ವ್ಯವಸ್ಥೆಯ ಹೊಸ ಘೋಷಣೆಯ ನೆನಪೂ ಆಗದಿರದು. ಅದೂ ಈ ಸರಕಾರ ಏಳು ವರ್ಷಗಳನ್ನು ಕಳೆದಿರುವ ಸಂದರ್ಭದಲ್ಲಿ.
‘ನಿರೀಕ್ಷೆಯ ಸೆರೆಯಾಳು’
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
***
ದೇಶದ ರೈತರು ಕೋವಿಡ್ ಬಿಕ್ಕಟ್ಟಿನ ಸಮಯದಲ್ಲೂ ದಾಖಲೆ ಬೆಳೆ ಬೆಳೆದಿದ್ದಾರೆ ಎಂಬ ಮೆಚ್ಚುಗೆ ಪಧಾನಿಗಳ ಇನ್ನೊಂದು ಮನದ ಮಾತು. ಆದರೂ ದೇಶದ ಕೃಷಿಯನ್ನು ಮತ್ತು ರೈತರನ್ನು ನಾಶಪಡಿಸುತ್ತಿರುವುದೇಕೆ ಎಂದು ಇಂತಹ ಕೊಡುಗೆ ನೀಡಿದವರು ಮೋದಿ 2.0 ಸರಕಾರದ ಕ್ರಮಗಳನ್ನು ಪ್ರಶ್ನಿಸಿರುವ ಬಗ್ಗೆ, ವಾರ್ಷಿಕೋತ್ಸವದ ಬದಲು ‘ಕರಾಳ ದಿನ’ ಆಚರಿಸಿರುವ ಬಗ್ಗೆ ಮೌನ ಮುಂದುವರೆದಿದೆ.
(ಪಿ.ಮಹಮ್ಮದ್, ವಾರ್ತಾಭಾರತಿ)
***
ಲಸಿಕೆಗಳು ಕೋವಿಡ್-19ರ ವಿರುದ್ಧ ನಮ್ಮ ವಿಜಯದ ದಾರಿ ಎಂದೇನೋ ಪ್ರಧಾನಿಗಳು ಹೇಳಿದರು, ಆದರೆ ಅವರ ‘ಟೀಕಾ ಉತ್ಸವ್’ ಕರೆಯ ನಂತರ ಲಸಿಕೆ ನೀಡಿಕೆಯ ಪ್ರಮಾಣ ಕುಸಿಯಿತೇಕೆ ಎಂಬುದು ಅವರ ಮನದ ಮಾತುಗಳಿಂದ ತಿಳಿಯಲಿಲ್ಲ.
ಆದರೆ ಜಗತ್ತಿನ ಹೆಚ್ಚಿನ ದೇಶಗಳು ಕಳೆದ ವರ್ಷ ಜುಲೈ ತಿಂಗಳಲ್ಲೆ ತಂತಮ್ಮ ದೇಶಗಳಿಗೆ ಎಷ್ಟು ಲಸಿಕೆಗಳು ಬೇಕಾದೀತು ಎಂದು ಲೆಕ್ಕ ಹಾಕಿ ಲಸಿಕೆಗಳಿಗೆ ಆರ್ಡರ್ ಬುಕ್ ಮಾಡಿ ಅದಕ್ಕೆ ಬೇಕಾದ ಅಡ್ವಾನ್ಸ್ ಗಳನ್ನು ಕೊಟ್ಟಿದ್ದರೆ, ಭಾರತ ಸರಕಾರ ಈ ಜನವರಿ ತಿಂಗಳಲ್ಲಷ್ಟೇ, ಅದೂ ಕನಿಷ್ಟ 160 ಕೋಟಿ ಡೋಸ್‍ಗಳ ಬೇಕಾಗಿದ್ದರೂ, ಕೇವಲ 1.65 ಕೋಟಿ ಡೋಸ್‍ಗಳಿಗಷ್ಟೆ ಆರ್ಡರ್ ಕೊಟ್ಟಿತು, ಆ ನಂತರವೂ ಆರ್ಡರ್ ಕೊಟ್ಟಿರುವುದು 15 ಕೋಟಿ ಡೋಸ್‍ಗಳಿಗಷ್ಟೇ( ದಿ ಟೆಲಿಗ್ರಾಫ್, ಎಪ್ರಿಲ್19).
ಲಸಿಕೆ ಅಭಿಯಾನ: “ಸಾರ್, ನಾವು ಇಂಧನ ಹಾಕುವುದನ್ನು ಮರೆತು ಬಿಟ್ಟಿದ್ದೇವೆ!”
(ಸತೀಶ್ ಆಚಾರ್ಯ, ಸಿಫಿ.ಕಾಂ)
***
ಆದರೆ ಇದರ ನಡುವೆಯೂ ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಏರಿಸಿ 100ರೂ. ಆಚೆಗೆ ಒಯ್ದು ದಾಖಲೆ ನಿರ್ಮಿಸುವುದನ್ನು ಮರೆಯಲಿಲ್ಲ! ಮೇ ತಿಂಗಳಲ್ಲಿ 16 ಬಾರಿ ಬೆಲೆಯೇರಿಸಿದ್ದರಿಂದ ಮುಂಬೈ, ಭೋಪಾಲ್ ಮತ್ತು ಜೈಪುರ, ಶ್ರೀಗಂಗಾನಗರ, ರೇವಾ, ಪರಬಾನಿ ನಗರಗಳಲ್ಲಿ ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ದಾಟಿ ಮುನ್ನುಗ್ಗಿದೆ.
“ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ, ಬೆಲೆಯೇರಿಕೆಗಳಿಂದ !”
(ಸುಭಾನಿ, ಡೆಕ್ಕನ್ ಕ್ರಾನಿಕಲ್)
***
ಈ ಮಾಸ್ಟರ್ ಸ್ಟ್ರೋಕ್‍ಗಳ ಏಳು ವರ್ಷಗಳ ಇನ್ನೊಂದು ಮಹಾಚಾತುರ್ಯವನ್ನು ಕೂಡ ಈ ವಾರ ವಿಶಿಷ್ಟ ರೀತಿಯಲ್ಲಿ ನೆನಪಿಸಿಕೊಳ್ಳಲಾಯಿತು. ಮೇ 23ರಂದು ಇ-ವಾಣಿಜ್ಯದ ವೆಬ್ ತಾಣ ಅಮೆಝಾನ್.ಇನ್ ನಲ್ಲಿ ಒಂದು ಹಾಸ್ಯ ಇ-ಪುಸ್ತಕದ ಪ್ರಕಟಣೆ ಬಂತು. ಇದರ ಶಿರೋನಾಮೆ “ಮಾಸ್ಟರ್ ಸ್ಟ್ರೋಕ್” ಅಂದರೆ ಮಹಾಚಾತುರ್ಯ, ಭಾರತದ ಉದ್ಯೋಗಾವಕಾಶ ಅಭಿವೃದ್ಧಿಯಲ್ಲಿ ಪ್ರಧಾನ ಮಂತ್ರಿಗಳಿಗೆ ನೆರವಾದ 420 ರಹಸ್ಯಗಳು ಎಂಬುದು ಉಪ ಶಿರೋನಾಮೆ, ಬರೆದವರು ಬೇರೋಜ್ಗಾರ್ ಭಕ್ತ್, ಅಂದರೆ ನಿರುದ್ಯೋಗಿ ಭಕ್ತ. ಪುಟಗಳು 56, ಆದರೆ ಒಂದು ಸಣ್ಣ ಪ್ರಸ್ತಾವನೆ ಬಿಟ್ಟರೆ ಉಳಿದ ಪುಟಗಳೆಲ್ಲ ಖಾಲಿ. ಇ-ಪುಸ್ತಕ ಪುಕ್ಕಟೆ, ಪ್ರಿಂಟ್ ಪುಸ್ತಕಕ್ಕೆ ರೂ.56
420, 56,0, ಖಾಲಿ ಪುಟಗಳು ಇವೆಲ್ಲ ಯಾವುದರ ಸಂಕೇತಗಳು ಎಂಬುದು ಸ್ವಯಂವೇದ್ಯ.
***
ನಿರೀಕ್ಷೆಯಂತೆ, ಮೇ 25ರಂದು ಈ ಪ್ರಕಟಣೆಯನ್ನು ಅಮೆಝಾನ್ ನಿಂದ ತೆಗೆಯಲಾಯಿತು.
ಇದಕ್ಕೆ ಮೊದಲು, ಅಮೆಝಾನ್ ಸದ್ಯದಲ್ಲೇ ಭಾರತದಲ್ಲಿ ಮುಚ್ಚುವಂತೆ ಕಾಣುತ್ತದೆ ಎಂದೊಬ್ಬರು ಟಿಪ್ಪಣಿ ಮಾಡಿದ್ದರಂತೆ.
ಈ ಟಿಪ್ಪಣಿಯನ್ನು ಬಿಜೆಪಿಯ ‘ರಾಷ್ಟ್ರೀಯ’ ವಕ್ತಾರರ ಟ್ವಿಟರ್ ಖಾತೆಗೆ “ಕೈಚಳಕದ ಮಾಧ್ಯಮ” ಎಂದು ಲೇಬಲ್ ಮಾಡಿದ ಮೇಲೆ ಈಗಾಗಲೇ ಇಂತಹ ಪ್ರಯತ್ನ ಆರಂಭವಾಗಿದೆ ಎಂಬ ಸಂಗತಿಯ ಹಿನ್ನೆಲೆಯಲ್ಲಿ ನೋಡಬಹುದು.
‘ಮಡಿಲ ಮಾಧ್ಯಮ’ಗಳ ಉಷ್ಟ್ರ ಪಕ್ಷಿ ಆಸನ: ನೀನೂ ಮಾಡು!
(ಅಲೋಕ್ ನಿರಂತರ್, ಫೇಸ್ ಬುಕ್)
***
ಆದರೆ ತನ್ನನ್ನು ಎಷ್ಟೊಂದು ಹಿಗ್ಗಿಸಿದ, ಬಿಲ್ಡ್ ಅಪ್ ಕೊಟ್ಟ ಈ ವೇದಿಕೆಗಳನ್ನು, ಟ್ವಿಟರ್, ವಾಟ್ಸ್ ಆಪ್‍ಗಳನ್ನು ಇವರು ನಿಜವಾಗಿಯೂ ನಿಷೇಧಿಸುತ್ತಾರೆಯೇ?
(ಸತೀಶ್ ಆಚಾರ್ಯ, ಫೇಸ್‍ಬುಕ್)