ಆಗ ನೋಟುರದ್ದತಿ……. ಈಗ ನೋಟೀಕರಣದ ಪೈಪ್‍ಲೈನ್!!

ವೇದರಾಜ ಎನ್‌ ಕೆ

ಹಣಕಾಸು ಮಂತ್ರಿಗಳು ಆಗಸ್ಟ್ 23ರಂದು ‘ನ್ಯಾಷನಲ್ ಮೊನೆಟೈಸೇಷನ್ ಪೈಪ್‍ಲೈನ್’ (ಎನ್‍.ಎಂ.ಪಿ.), ಅಂದರೆ ‘ರಾಷ್ಟ್ರೀಯ ನಾಣ್ಯೀಕರಣ ಕ್ರಮಸರಣಿ’ ಎಂಬುದನ್ನು, ‘ನೀತಿ ಆಯೋಗ’ದ ಉಪಾಧ್ಯಕ್ಷರು ಹಾಗೂ ಸಿಇಒ ರವರ ಹಾಜರಿಯಲ್ಲಿ ಪ್ರಕಟಿಸಿದ್ದಾರೆ. ಈ ಭರ್ಜರಿ ನಾಮಧೇಯದ ಹಿಂದಿರುವ ನಿಜವಾದ ಅರ್ಥ ಭಾರತದ ಸಾರ್ವಜನಿಕ ಸಂಪತ್ತಿನ ಮಾರಾಟ ಎಂದೇ ಈಗ ಜನಜನಿತವಾಗಿದೆ-ವ್ಯಂಗ್ಯಚಿತ್ರಕಾರರ ನಡುವೆ ಮಾತ್ರವಲ್ಲ, ರಾಜಕೀಯ ವಿಶ್ಲೇಷಕರ ನಡುವೆಯೂ.

ಮುಂದಿನ ನಾಲ್ಕು ವರ್ಷಗಳ ವರೆಗೆ ಹರಡಿರುವ ಈ ‘ಪೈಪ್‍ಲೈನಿ’ನಲ್ಲಿ ಸಾರ್ವಜನಿಕ ವಲಯದ ಸೊತ್ತುಗಳನ್ನು ‘ನಾಣ್ಯೀಕರಿಸ’ಲಾಗುತ್ತದೆ, ಅಥವ ನೋಟುಗಳಾಗಿ ಪರಿವರ್ತಿಸಲಾಗುತ್ತದೆ, ಅಂದರೆ ಭಾರತ ಸರಕಾರಕ್ಕೆ 6 ಲಕ್ಷ ಕೋಟಿ ರೂ.ಗಳ ಮೊತ್ತವನ್ನು ಸಂಗ್ರಹಿಸಲಾಗುತ್ತದೆ ಅರ್ಥಾತ್, ಇಷ್ಟು ಮೊತ್ತದ ಸಾರ್ವಜನಿಕ ಸೊತ್ತುಗಳನ್ನು ಮಾರಲಾಗುತ್ತದೆ.

***

ಈ ವರ್ಷದ ಬಜೆಟಿನಲ್ಲಿಯೇ ಹಣಕಾಸು ಮಂತ್ರಿಗಳು ಇದರ ಸೂಚನೆ ನೀಡಿದ್ದರು. ಆಗಲೇ ವ್ಯಂಗ್ಯಚಿತ್ರಕಾರ ಅಲೋಕ್‍ ನಿರಂತರ್ ಈ ಕಾರ್ಟೂನಿನಲ್ಲಿ ಚಿತ್ರಿಸಿರುವಂತೆ, ಹಲವು ವ್ಯಂಗ್ಯಚಿತ್ರಕಾರರು. ಇದನ್ನು ಭಾರತದ ಸಾರ್ವಜನಿಕ ಸೊತ್ತುಗಳ ಮಾರಾಟ ಎಂದೇ ಚಿತ್ರಿಸಿದ್ದರು.

“ತಗೊಳ್ಳಿ ತಗೊಳ್ಳಿ, ಬ್ಯಾಂಕ್‍ ತಗೊಳ್ಳಿ, ಏರ್‌ಲೈನ್‍ ತಗೊಳ್ಳಿ, ಬಿಪಿಸಿಎಲ್ ತಗೊಳ್ಳಿ
ಶಿಪ್ಪಿಂಗ್ ಕಾರ್ಪೊರೇಷನ್ ತಗೊಳ್ಳಿ, ಸ್ವಲ್ಪ ಎಲ್‍ಐಸಿ ತಗೊಳ್ಳಿ ತಗೊಳ್ಳಿ”
(ಅಲೋಕ್‍ ನಿರಂತರ್, ಸಕಾಳ್‍ ಮಾಧ್ಯಮ ಗುಂಪು)

***

ಸರಕಾರಕ್ಕೆ ನಗದಾಗುವ/ನೋಟುಗಳಾಗುವ ಸೊತ್ತುಗಳ ಪಟ್ಟಿಯನ್ನೂ ಸಿದ್ಧಪಡಿಸಲಾಗಿದ್ದು ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ನಿಲ್ದಾಣಗಳು, ರೈಲು ಮಾರ್ಗಗಗಳು ಮತ್ತು ರೈಲುಗಳು ಕೂಡ, ಇಂಧನ/ವಿದ್ಯುತ್‍ ಉತ್ಪಾದನಾ ಘಟಕಗಳು, ಪ್ರಸರಣ ವ್ಯವಸ್ಥೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ದಾಸ್ತಾನು ವ್ಯವಸ್ಥೆ ಇತ್ಯಾದಿ, ಇತ್ಯಾದಿ ಈ ಪಟ್ಟಿಯಲ್ಲಿವೆ.

ಇದಕ್ಕೆ ನೋಟುಗಳನ್ನು ಕೊಡುವವರು, ಅಂದರೆ ಖರೀದಿಸುವವರು ಖಾಸಗಿ ಬಂಡವಾಳಗಾರರು ಎಂಬ ಬಗ್ಗೆ ಸ್ಥೂಲವಾಗಿ ಯಾರಿಗೂ ಸಂದೇಹವೇ ಇಲ್ಲ.

“ಈತ ಇನ್ನು ಮುಂದೆ ನಿಮ್ಮ ಪಾಲಕನಾಗಿರುತ್ತಾನೆ”
(ಸುಭಾನಿ, ಡೆಕ್ಕನ್‍ ಕ್ರಾನಿಕಲ್‍)

***

ಈ ರೀತಿ ಅರ್ಥವ್ಯವಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸಿದರೂ, ಹೀಗೆ ಖರೀದಿಸುವವರು ಅದನ್ನು ತಮಗೆ ಬೇಕಾದಂತೆ ಬಳಸುತ್ತಾರಾದರೂ, ಸರಕಾರದ ಒಡೆತನವೇ ಇರುತ್ತದೆ, ಕೆಲವು ಸಮಯದ ನಂತರ ಸರಕಾರಕ್ಕೆ ಅವು ವಾಪಾಸು ಬರುತ್ತವೆ ಎಂದೂ ಹಣಕಾಸು ಮಂತ್ರಿಗಳು ಹೇಳುತ್ತಾರೆ.

“ತಾ, ಇದನ್ನು ಆ ಅಂಕಲ್‍ಗಳಿಗೆ ಕೊಟ್ಟು ಬಿಡು, ನಂತರ ಅವರು ಇದನ್ನು ವಾಪಾಸ್ ಕೊಡುತ್ತಾರೆ”
(ಇರ್ಫಾನ್, ನ್ಯುಸ್‍ ಕ್ಲಿಕ್)
***

ಈ ಇನ್ನೊಂದು ಹೆಸರಿನ, ಭವ್ಯ ನಾಮಧೇಯದ ಖಾಸಗೀಕರಣವನ್ನು ಸುರೇಂದ್ರನ್ ಅವರು ಬೇರೊಂದು ರೀತಿಯಲ್ಲಿ ಹೀಗೆ ಚಿತ್ರಿಸುತ್ತಾರೆ.

“ವಿಮಾನ ಇನ್ನೂ ನಮ್ಮದೇ, ಅವರು ಪೈಲಟ್‍ ಗಳಷ್ಟೇ”
(ಸುರೇಂದ್ರನ್, @ಸುರೆಂದ್ರಕಾರ್ಟ್ ಟ್ವಿಟರ್ ನಲ್ಲಿ)

***

ಆದರೆ ಏರ್ ಇಂಡಿಯಾ ಮಾರಲು ಬಹಳಷ್ಟು ಸಮಯದಿಂದ ಮೌಲ್ಯ ಇಳಿಸುತ್ತಿದ್ದರೂ ಕಾಯಬೇಕಾಗಿ ಬಂದಿರುವ ಸರಕಾರಕ್ಕೆ ಈ ಪೈಪ್‍ಲೈನಿನಲ್ಲಿ ಅವರ ಖಾಸಗಿ ಗೆಳೆಯರಿಂದ ‘ಸಹಕಾರ’ ಸಿಗಬಹುದೇ?

“ಸರಕಾರ ನನ್ನ ರಕ್ಷಣೆ ಬರಬಹುದೆಂಬ ನಿರೀಕ್ಷೆಯಿದೆ” – ಖಾಸಗಿ ವಲಯ
“ಖಾಸಗಿಯವರು ನನ್ನ ರಕ್ಷಣೆಗೆ ಬರುತ್ತಾರೆಂಬ ನಿರೀಕ್ಷೆಯಿದೆ” – ಹಣಕಾಸು ಮಂತ್ರಿಗಳು
(ಅಲೋಕ್‍ ನಿರಂತರ್, ಫೇಸ್‍ ಬುಕ್)

***

ಅದೇನೇ ಇರಲಿ, ಸಾರ್ವಜನಿಕರಿಗೆ ಸರಕಾರದ ಸೇವೆಗಳನ್ನು ಉತ್ತಮಪಡಿಸಲು ಖಾಸಗಿ ವಲಯವನ್ನು ತರುವುದು ಬಹಳ ಮುಖ್ಯ ಎಂದು ಈ ಸಂದರ್ಭದಲ್ಲಿ ನೀತಿ ಆಯೋಗದ ಸಿಇಒ ಹೇಳಿರುವುದಾಗಿ ವರದಿಯಾಗಿದೆ. ಆದರೆ ವಾಪಾಸು ಕೊಡುವ ಈ ಖಾಸಗಿಯವರು ಈ ರಾಷ್ಟ್ರೀಯ ಸೊತ್ತುಗಳನ್ನು ಸುಮ್ಮನೇ ವಹಿಸಿಕೊಳ್ಳುತ್ತಾರೆಯೇ? ಕೀರ್ತಿಶ್ ರವರ ಈ ಕಾರ್ಟೂನ್ ಒಂದು ಹೊಳಹು ಕೊಡುತ್ತದೆ.

“ಟಿಕೆಟಿಗೆ ಎಷ್ಟಾಗುತ್ತದೆ?…ಇಡೀ ರೈಲಿಗಾದರೆ ಎಷ್ಟು?”
(ಕೀರ್ತಿಶ್, ಬಿಬಿಸಿ ನ್ಯೂಸ್‍ ಹಿಂದಿ)

ಹೆದ್ದಾರಿ ಟೋಲ್‍ಗಳು, ರೈಲು ಟಿಕೆಟ್‍ ದರಗಳು, ಇಂಧನ ಬೆಲೆಗಳು ಇತ್ಯಾದಿ ಸಾಧನಗಳು…..?

***

ಸ್ಯಾನಿಟರ್ ಪ‍್ಯಾನಲ್ಸ್ ನ ಈ ಕಾರ್ಟೂನ್ ಈ ಕಗ್ಗಂಟನ್ನು ಇನ್ನೊಂದು ರೀತಿಯಲ್ಲಿ ಬಿಡಿಸಿಟ್ಟಿದೆ.

”ಗ್ರೇಟ್‍ ಇಂಡಿಯನ್‍ ಸೇಲ್”

“ಖಾಸಗೀಕರಣ! ಬಿಜೆಪಿಗೆ ನಿಧಿಗಳನ್ನು ಕೊಡುವ ಕಾರ್ಪೊರೇಟ್‍ಗಳಿಗೆ ಭಾರತದ ಭವಿಷ್ಯದ ಮಾರಾಟ!”

(*ಲಂಚ ಸೇರಿರುವುದಿಲ್ಲ)

***

ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವವಾದಿಗಳಂತೆ ವ್ಯಂಗ್ಯಚಿತ್ರಕಾರರಿಗೂ ಈಗ ಆಳುತ್ತಿರುವವರ ಹಿಂದಿನ ಘೋಷಣೆಗಳು ನೆನಪಾಗದೆ ಇರಲು ಸಾಧ್ಯವಿಲ್ಲ.‘ಅಚ‍್ಚೇ ದಿನ್‍’ಗಳ ಪ್ರಚಾರದ ಸಮಯದಲ್ಲಿ ದೇಶವನ್ನು ಮಾರಲು ಬಿಡುವುದಿಲ್ಲ” ಎಂದು ಈ ದೇಶದ “ಮಣ್ಣಿನ ಮೇಲೆ ಆಣೆ” ಇಟ್ಟು ಘೋಷಿಸಿದುದನ್ನು ಶೇಖರ್ ಗುರೇರ ಹೀಗೆ ನೆನಪಿಸಿಕೊಂಡಿದ್ದಾರೆ.

“ಮಾರಾಟಕ್ಕಿರುವ ಸೊತ್ತುಗಳ ಪಟ್ಟಿ ಈಗ ಜಾರಿಯಾಗಿರಬಹುದು;
ಆದರೆ “ಮಣ್ಣಿನ ಆಣೆ” ಇಟ್ಟಾಗಲೇ ನನ್ನ ಎಡ ಕಣ್ಣು …….”
(ಶೇಖರ್ ಗುರೇರ, ಕಾರ್ಟೂನಿಸ್ಟ್ಸ್‌ ಕ್ಲಬ್‍ ಆಫ್‍ ಇಂಡಿಯಾ)
***

ದೇಶವನ್ನು ಮಾರಲು ಬಿಡುವುದಿಲ್ಲ ಎಂದು ಹೇಳಿದ್ದೇನೋ ನಿಜ, ಆದರೆ ಈಗ ಮಾರಾಟಕ್ಕಿಟ್ಟಿರುವುದು ‘ಅಚ್ಛೇದಿನ್’ ನೇಪಥ್ಯಕ್ಕೆ ಸರಿದು 2019ರಿಂದ ಮೂಡಿ ಬರಲಾರಂಭಿಸಿದ ಖಾಸಗೀಕರಣದತ್ತ ಭರದ ನಡೆಯ ’ನಯಾಭಾರತ್’ ನ್ನು ಎಂಬುದು ಈ ವ್ಯಂಗ್ಯಚಿತ್ರಕಾರರ ಸಮಜಾಯಿಷಿ.

“ನಿಮ್ಮ ಸ್ವಭಾವದಲ್ಲೇ ಒಂದು ಫಕೀರತ್ವ ಇದೆಯೇ?”

“ನಿಮ್ಮೆಲ್ಲರನ್ನು ಫಕೀರರನ್ನಾಗಿ ಮಾಡುವ ವ್ಯವಸ್ಥೆ ಮಾಡಲಾಗಿದೆ..”
(ದೇಖ್‍ ತಮಾಷಾ.. ಮೊಲಿಟಿಕ್ಸ್‍.ಇನ್)

***

70 ವರ್ಷಗಳಲ್ಲಿ ಈ ದೇಶದಲ್ಲಿ ಏನಾಗಿದೆ ಎಂದು ಬೊಬ್ಬೆ ಹೊಡಯುತ್ತಿದ್ದವರೇ ಈಗ ಕನಿಷ್ಟ 6ಲಕ್ಷ ಕೋಟಿ ಮೊತ್ತದ ಆಸ್ತಿಗಳಾದರೂ ಸೃಷ್ಟಿಯಾಗಿವೆ ಎಂದು ಒಪ್ಪಿಕೊಂಡಂತಾಗಿದೆ ಎಂದು ಈ ವ್ಯಂಗ್ಯಚಿತ್ರಕಾರರು ಸೂಚಿಸುತ್ತಿದ್ದಾರೆ.

(ಈಗ) 70 ವರ್ಷಗಳಲ್ಲಿ ದೇಶದಲ್ಲಿ ಅಗಿರುವುದಾದರೂ ಏನು?
(2024ರ ವೇಳೆಗೆ) ಈ ದೇಶದಲ್ಲಿ ಉಳಿದಿರುವುದಾದರೂ ಏನು?
(ರೆಮಿಕ್ಸ್ ಕಾಮಿಕ್ಸ್)

ಈ ನಡುವೆ ಸಂಘಪರಿವಾರಕ್ಕೆ ಸೇರಿದ ಬಿಎಂಎಸ್‍ ಕೂಡ ಇದು ದೈನಂದಿನ ಖರ್ಚಿಗಾಗಿ ಕುಟುಂಬದ ಸೊತ್ತುಗಳನ್ನು ಮಾರುವ ಕ್ರಮ, ಸರಕಾರಕ್ಕೆ ಹಣ ಬೇಕಾದರೆ ಪರ್ಯಾಯ ದಾರಿಯನ್ನು ಹುಡುಕಿಕೊಳ್ಳಬೇಕು ಎಂದಿದೆಯಂತೆ.

ಆದರೂ ಹಣಕಾಸು ಮಂತ್ರಿಗಳು ಇದು ದೇಶದ ಸೊತ್ತುಗಳ ಮಾರಾಟ ಅಲ್ಲ ಎಂದು ಒತ್ತಿ ಹೇಳುತ್ತಿದ್ದಾರೆ. ಆದರೆ ಇದಕ್ಕೆ ಅವರು ಕೊಟ್ಟಿರುವ ಸಮರ್ಥನೆ “ಕಾಂಗ್ರೆಸಿನವರೂ ಇದನ್ನು ಮಾಡಿಲ್ಲವೇ?” ಮುಂಬೈ-ಪುಣೆ ಕಾರಿಡಾರನ್ನು 8000 ಕೋಟಿ ರೂ.ಗಳಿಗೆ ನೋಟೀಕರಿಸಿದವರು ಯಾರು? ನ್ಯೂಡೆಲ್ಲಿ ರೈಲು ನಿಲ್ದಾಣದ ನೋಟೀಕರಣದ ಬಗ್ಗೆ ಪ್ರಸ್ತಾವ ಕೇಳಿದವರು ಯಾರು? 70 ವರ್ಷಗಳಲ್ಲಿ ಮಾಡಿದ್ದನ್ನೆಲ್ಲ ಮಾರಿದ್ದೇವೆ ಎನ್ನುವುದಾದರೆ ಕಾಮನ್‌ವೆಲ್ತ್ ಕ್ರೀಡೆಗಳ ವೇಳೆಯಲ್ಲಿ ಏನಾಯ್ತು (ದಿ ಹಿಂದೂ, ಆ.26) ಎಂದೆಲ್ಲ ಅವರ ಈ ಹಿಂದಿನ ಬಿಜೆಪಿ ವಕ್ತಾರೆಯ ‘ನೀವು ಮಾಡಿದ್ದೇನು’ ರಾಗದ ‘ಸಮರ್ಥನೆ’! ಇದು ಬಿಎಂಎಸ್‍ ಕೂಡ ಕೇಳುವ ಪರ್ಯಾಯ ದಾರಿಯಂತೂ ಅಲ್ಲ ಎಂಬುದು ಸ್ಪಷ್ಟ.

***

ಅದೇನೇ ಇರಲಿ, ಪ್ರಖ್ಯಾತ ವ್ಯಂಗ್ಯಚಿತ್ರಕಾರ ಇ.ಪಿ.ಉನ್ನಿ(ಇಂಡಿಯನ್‍ ಎಕ್ಸ್‌ಪ್ರೆಸ್‍)ಯವರು ಈ ಸಂದರ್ಭದಲ್ಲಿ ನೋಟು ರದ್ಧತಿಯನ್ನು ನೆನಪಿಸಿಕೊಂಡಿದ್ದಾರೆ.

ಯುಗಾಂತರಕಾರಿ ಡಿಮೊನೆಟೈಸೇಷನ್ (ನೋಟುರದ್ಧತಿ) ನಂತರ ಈ ನ್ಯಾಷನಲ್‍ ಮೊನೆಟೈಸೇಷನ್‍ (ರಾಷ್ಟ್ರೀಯ ನೋಟೀಕರಣ) ಪೈಪ್‍ಲೈನ್‍ ಎಂಬುದು ಎಷ್ಟೊಂದು ಅಪ್ಯಾಯಮಾನವಾಗಿ ಕೇಳಿಸುತ್ತಿದೆಯಲ್ಲ ಎಂದು ಅವರು ಹೇಳುತ್ತಾರೆ.

***

ಅಪ್ಯಾಯಮಾನ ಹೌದೋ ಅಲ್ಲವೋ, ಆ ನೋಟು ರದ್ಧತಿಗೂ ಈ ನೋಟೀಕರಣಕ್ಕೂ ಸಂಬಂಧವಂತೂ ಇರುವಂತೆ ಕಾಣುತ್ತದೆ. ನೋಟು ರದ್ಧತಿ, ಜನಪರ ಅರ್ಥಶಾಸ್ತ್ರಜ್ಞರು ಆರಂಭದಲ್ಲೇ ಎಚ್ಚರಿಸಿದಂತೆ ದೇಶದಲ್ಲಿ ಬಹುಪಾಲು ಜನಗಳಿಗೆ ಜೀವನೋಪಾಯ ಕಲ್ಪಿಸಿದ್ದ ಅನೌಪಚಾರಿಕ ವಲಯವನ್ನು ದ್ವಂಸ ಮಾಡಿದರೆ, ನಿರ್ದಿಷ್ಟವಾಗಿ ಬೀದಿ ಮಾರಾಟಗಾರರಂತವರಿಗೆ ಮಾರಕವಾದರೆ, ಈ ನೋಟೀಕರಣ ಈಗ ಸರಕಾರವೇ ಆ ಸ್ಥಾನವನ್ನು ತುಂಬುವಂತೆ ಮಾಡುತ್ತಿದ್ದೆಯೇ?

(ಪಿ.ಮಹಮ್ಮದ್, ವಾರ್ತಾಭಾರತಿ)

ಈ ನೋಟೀಕರಣ ಪೈಪ್‍ ಲೈನ್ ಪ್ರಕಟಣೆಯ ಹಿಂದಿನ ದಿನವೇ ಮಧ್ಯಪ್ರದೇಶದ ಸಾಂಸ್ಕೃತಿಕ ನಗರ ಇಂದೋರ್ ನಲ್ಲಿ ಒಬ್ಬ ಬಳೆಮಾರುವ ಬೀದಿ ವ್ಯಾಪಾರಿಯನ್ನು ಒಂದು ಜನಜಂಗುಳಿ ಮನಬಂದಂತೆ ಥಳಿಸಿದ ಘಟನೆ, ಅದಕ್ಕೆ ಯಾವ ಕಾರಣವನ್ನೇ ಕೊಡಲಿ, ಕೇವಲ ಕಾಕತಾಳಿಯವೇ?

***

ಈ ನೋಟೀಕರಣಕ್ಕೆ ಸಂಬಂಧಪಟ್ಟ ಇದೇ ಸರಕಾರದ ಇನ್ನೊಂದು ಕ್ರಮವೆಂದರೆ ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ಪ್ರಧಾನಿಗಳು ಪ್ರಕಟಿಸಿದ 100ಲಕ್ಷ ಕೋಟಿ ರೂ.ಗಳ “ಗತಿಶಕ್ತಿ” ಯೋಜನೆ. ಅದೂ ಮೂಲರಚನೆಗಳಿಗಾಗಿ, ಇದೂ ಮೂಲರಚನೆಗಳಿಗಾಗಿ.

ಆಗ, ಅದನ್ನು ಸತತ ಮೂರನೇ ಬಾರಿಗೆ ಪ್ರಕಟಿಸಲಾಗುತ್ತಿದೆ, ಈಗಲಾದರೂ ಇಷ್ಟೊಂದು ದೊಡ್ಡ ಮೊತ್ತ ಎಲ್ಲಿಂದ ಬರುತ್ತದೆ ಎಂದು ನಗೆಯಾಡಲಾಯಿತು. ಈ ವ್ಯಂಗ್ಯಚಿತ್ರ ಅದಕ್ಕೊಂದು ಉದಾಹರಣೆ”

“ಮೊದಲನೆಯದಾಗಿ, ನೂರು ಲಕ್ಷ ಕೋಟಿಗಳ ಈ ಚೆಕ್ ಪೋಸ್ಟ್-ಡೇಟೆಡ್ ಅಂದರೆ
ಮುಂದಿನ ದಿನಾಂಕದ್ದು. ಈಗಲೇ ಇದನ್ನು ನಗದೀಕರಿಸಲು ಸಾಧ್ಯವಿಲ್ಲ.
ಎರಡನೆಯದಾಗಿ, ನೀನೇ ನೋಡುತ್ತಿರುವಂತೆ, ಬ್ಯಾಂಕಿನಲ್ಲಿ ಹಣವಿಲ್ಲ”
(ರಾಜೇಂದ್ರ ಧೋಡಪ್‍ ಕರ್ , ಫೇಸ್‍ ಬುಕ್)

***

ಇದಕ್ಕೆ ಉತ್ತರವೆಂಬಂತೆ ಈ ಪ್ರಕಟಣೆ ಬಂದಿದೆಯೇ? ಆದರೆ ಅದು 100ಲಕ್ಷ ಕೋಟಿ, ಇದು 6ಲಕ್ಷ ಕೋಟಿ, ಉಳಿದದ್ದು ಎಲ್ಲಿಂದ ಬರಬೇಕು?

“ನಾನು ರೂ.100ಲಕ್ಷ ಕೋಟಿಯ ಮೂಲರಚನೆ ಕಟ್ಟುತ್ತೇನೆ”
“ವಾವ್!.. ನಾನು ರೂ.6ಲಕ್ಷ ಕೋಟಿ ತರುತ್ತೇನೆ”

“ಉಹ್.. ಮತ್ತು ಉಳಿದ 94ಲಕ್ಷ ಕೋಟಿ? (ಮಂಜುಲ್, ಫಸ್ಟ್ ಪೋಸ್ಟ್)

***

ಇದು ಆಗಲೇ ಸಾಗಿದೆ.ಇದರಲ್ಲಿ ಇತ್ತೀಚಿನದೆಂದರೆ ಅಡುಗೆ ಅನಿಲದ ಬೆಲೆಯಲ್ಲಿ 25ರೂ. ಹೆಚ್ಚಳ……. ಲಗೇ ರಹೋ!

“ಅಫಘಾನಿಸ್ತಾನ… ತಾಲಿಬಾನ್…”  “ಐಲಾ!!!”

“ಲಗೇ ರಹೋ-ಮುಂದುವರೆಯಲಿ” (ರೆಮಿಕ್ಸ್ ಕಾಮಿಕ್ಸ್)

Donate Janashakthi Media

Leave a Reply

Your email address will not be published. Required fields are marked *